ಕುರಾನ್ ತಾನು ನೀಡಿದ ಸಂದೇಶಗಳ ಬಗ್ಗೆ ತನ್ನ ಅನುಯಾಯಿಗಳು ನಿಸ್ಸಂದಿಗ್ಧವಾದ ವಿಶ್ವಾಸವನ್ನು ವ್ಯಕ್ತಪಡಿಸಬೇಕೆಂದು ಬಯಸುತ್ತದೆ. ಇದನ್ನು ಕುರಾನ್ ತನ್ನ 2ನೇ ಅಧ್ಯಾಯದ 2–4ನೇ ವಾಕ್ಯಗಳಲ್ಲಿ ವ್ಯಕ್ತಪಡಿಸುತ್ತದೆ.
‘ದೇವರು ನೀಡಿದ ಭಾಗ್ಯಕ್ಕಾಗಿ ಇನ್ನಾರಿಗೋ ಕೃತಜ್ಞತೆಯನ್ನು ವ್ಯಕ್ತಪಡಿಸುವ ಮೂಲಕ ಅವನ ಕ್ರೋಧಕ್ಕೆ ತುತ್ತಾಗದಿರಿ. ದೇವರ ಧಾರಾಳತನ ದಯೆಗೆ ಪ್ರತಿಯಾಗಿ ಇನ್ನಾರಿಗೋ ಧನ್ಯವಾದವನ್ನು ಹೇಳದಿರಿ. ದೇವರು ನಿಮಗೆ ನೀಡುವುದನ್ನು ತಡೆಹಿಡಿದಿರುವುದಕ್ಕೆ ಇನ್ನಾರಲ್ಲೂ ತಪ್ಪನ್ನು ಹುಡುಕಿ ಹೊಣೆಗಾರರನ್ನಾಗಿಸದಿರಿ. ದೇವರ ಸಂರಕ್ಷಣಾತ್ಮಕ ಪ್ರತಿಫಲವು ಲೋಭಿಯ ದುರಾಶೆಗೆ ಅನುಗುಣವಾಗಿ ನೀಡಲಾಗುವುದಿಲ್ಲ, ವೈರಿಯೊಬ್ಬನ ದ್ವೇಷದ ಫಲವಾಗಿ ಅದನ್ನು ತಡೆಹಿಡಿಯುವುದೂ ಇಲ್ಲ.
ಸಮಾನವಾದ ನ್ಯಾಯ ತೀರ್ಮಾನದನ ಮೂಲ ಸರ್ವಶಕ್ತನಾದ ಅವನು ಪ್ರಶಾಂತತೆ, ಪ್ರಫುಲ್ಲತೆಯನ್ನು ಸಂತೃಪ್ತಿ ಮತ್ತು ವಿಶ್ವಾಸದ ಖಚಿತತೆಯಲ್ಲಿ ಇರಿಸಿದ್ದಾನೆ. ಬೇಗುದಿ ಮತ್ತು ಯಾತನೆಯನ್ನು ಅನುಮಾನ ಹಾಗೂ ಕೋಪದಲ್ಲಿ ತುಂಬಿದ್ದಾನೆ’ ಎಂದು ಪ್ರವಾದಿಯವರು ಹೇಳಿದ್ದರೆಂದು ಅಬ್ದುಲ್ಲಾ ಇಬ್ನ್ ಮಸ್ಊದ್ ದಾಖಲಿಸಿದ್ದಾರೆ.
ಮನುಷ್ಯ ತನ್ನ ನಡೆನುಡಿಯಲ್ಲಿ ಸಂದರ್ಭಕ್ಕೆ ಸರಿಯಾಗಿ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುವ(ಅಲ್ ಹಮ್ದುಲಿಲ್ಲಾಹಿ ಶುಕ್ರ್) ದೇವರು ದಯೆ ತೋರಿದರೆ(ಇನ್ಶಾ ಅಲ್ಲಾಹ್, ಮಾಶಾ ಅಲ್ಲಾಹ್) ಎಂಬ ಉದ್ಗಾರಗಳನ್ನು ಈ ಕಾರಣಕ್ಕಾಗಿ ಮಾಡುತ್ತಿರುತ್ತಾನೆ. ‘ಖಚಿತತೆಯ ಅತ್ಯಂತ ಸಣ್ಣ ಪ್ರತಿಫಲವೆಂದರೆ, ಅದು ಹೃದಯವನ್ನು ಪ್ರವೇಶಿಸಿ, ತನ್ನ ಬೆಳಕನ್ನು ನೀಡಿ ಅಲ್ಲಿರುವ ಅನುಮಾನ ಅವಿಶ್ವಾಸಗಳನ್ನು ಮಾಯವಾಗಿಸಿ, ದೇವರ ಮೇಲಿನ ಭಯ, ವಿಶ್ವಾಸವನ್ನು ತುಂಬುತ್ತದೆ’ ಎಂದು ಅಬೂ ಅಬ್ದುಲ್ಲಾಹ್ ಅಲ್ ಅಂತಕಿ ಎಂಬ ಸೂಫಿ ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ.
ಹದಿನಾರು ದಿನಗಳಿಂದ ಮರುಭೂಮಿಯ ಹಾದಿಯ ಪ್ರಯಾಣದಲ್ಲಿದ್ದು ಹಸಿವು, ಬಾಯಾರಿಕೆಯಿಂದ ನೊಂದಿದ್ದ ಜಾಫರ್ ಅಲ್ ಹದ್ದಾದ್ ಎಂಬ ಸಂತ ನೀರಿನ ಪುಟ್ಟ ಒರತೆಯ ಮುಂದೆ ಕೂತಿದ್ದುದನ್ನು ಆ ಹಾದಿಯಲ್ಲಿ ಬಂದ ಅಬೂ ತುರಬ್ ಅನ್ನಖ್ಶಾಬಿಯವರು ಹೀಗೇಕೆ ಕೂತಿದ್ದೀರಿ? ಎಂದು ಕೇಳಿದರು. ಅದಕ್ಕೆ ಸಂತ ಜಾಫರ್ ಅಲ್ ಹದ್ದಾದ್ ‘ನೀರನ್ನು ಕಂಡಾಗ ನಾನೊಂದು ಸಂದಿಗ್ಧಕ್ಕೆ ಸಿಲುಕಿ ಯೋಚನೆ ಮಾಡುತ್ತಿದ್ದೇನೆ- ಜ್ಞಾನ ಮತ್ತು ವಿಶ್ವಾಸದ ಖಚಿತತೆ ಇವೆರಡರಲ್ಲಿ ಯಾವುದು ಗೆಲ್ಲುತ್ತದೆ ಎಂಬುದನ್ನು ಕಾಯುತ್ತಿದ್ದೇನೆ. ಅದರ ಪ್ರಕಾರ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ. ಜ್ಞಾನ ನನ್ನ ಮೇಲೆ ಜಯಗಳಿಸಿದರೆ ನೀರನ್ನು ಕುಡಿಯುತ್ತೇನೆ. ವಿಶ್ವಾಸದ ಖಚಿತತೆಗೆ ಜಯಗಳಿಸಿದರೆ ಹಾಗೆಯೇ ಮುಂದೆ ಪ್ರಯಾಣ ಬೆಳೆಸುತ್ತೇನೆ’ ಎಂದು ಉತ್ತರಿಸಿದರು!
ಅಬು ಉಸ್ಮಾನ್ ಅಲ್ ಹಿರಿ ಈ ಬಗ್ಗೆ ವ್ಯಾಖ್ಯಾನಿಸುತ್ತ ‘ನಾಳೆಯ ಬಗೆಗಿನ ಯೋಚನೆಯನ್ನು ವಿಶ್ವಾಸದ ಖಚಿತತೆ ದೂರವಿರಿಸುತ್ತದೆ’ ಎಂದಿದ್ದರು. ಅನಾಮಧೇಯ ಸೂಫಿಯೊಬ್ಬ ಈ ಬಗ್ಗೆ ಹೀಗೆ ಹೇಳುತ್ತಾನೆ, ‘ಮೊದಲನೆಯ ಸೋಪಾನ ಜ್ಞಾನ, ಎರಡನೆಯದು ವಿಶ್ವಾಸದ ಖಚಿತತೆ, ಮೂರನೆಯದು ದೇವರ ಸತ್ಯದ ದೃಢೀಕರಣ, ನಾಲ್ಕನೆಯದು ವಿಶ್ವಾಸದ ಪ್ರಮಾಣೀಕರಣ, ಐದನೆಯದು ಸಾಕ್ಷಿತ್ವ, ಆರನೆಯದು ವಿಧೇಯತೆ. ಇವೆಲ್ಲ ಸೋಪಾನಗಳನ್ನು ಏರಿದಾಗ ನಂಬಿಕೆಯ ಖಚಿತತೆ ರೂಪುಗೊಳ್ಳುತ್ತದೆ’.
-ಫಕೀರ್ ಮುಹಮ್ಮದ್ ಕಟ್ಪಾಡಿ.
No comments:
Post a Comment