Friday, July 15, 2016

ಪ್ರತ್ಯೇಕತೆ

ಏಕಾಂತದಲ್ಲಿದ್ದ ದರವೇಶಿ ಸೂಫಿಯೊಬ್ಬನನ್ನು ಕಂಡ ಒಬ್ಬಾತ ‘ನೀನೊಬ್ಬ ವಿರಕ್ತ ಸನ್ಯಾಸಿಯಲ್ಲವೇ?’ ಎಂದು ಕೇಳುತ್ತಾನೆ. ‘ಇಲ್ಲ ನಾನೊಬ್ಬ ನಾಯಿಯ ಕಾವಲುಗಾರ. ನಾನು ಮನುಷ್ಯರನ್ನು ಕಚ್ಚುವ ನಾಯಿ! ಉಳಿದವರು ಸುರಕ್ಷಿತ ಮತ್ತು ಸೌಖ್ಯವಾಗಿರಲು ನನ್ನಲ್ಲಿರುವ ನಾಯಿಯನ್ನು ಕಿತ್ತು ತೆಗೆದು ಹೊರತಂದು ಅದರ ಕಾವಲು ಕಾಯುತ್ತಿದ್ದೇನೆ’ ಎಂದು ಅವನು ಉತ್ತರಿಸುತ್ತಾನೆ!

ಸೂಫಿ ಸಂತ ಬಾ ಯಜೀದ್ ಬಸ್ತಾಮಿ (ಅಬೂ ಯಜೀದ್ ಬಸ್ತಾಮಿ) ಹೇಳುತ್ತಾರೆ, ‘ನಾನೊಮ್ಮೆ ಕನಸಲ್ಲಿ ಅಲ್ಲಾಹನ ಬಳಿಯಿದ್ದೆ. `ನಿನ್ನನ್ನು ಹುಡುಕುವುದು ಹೇಗೆ?’ ಎಂದು ಕೇಳಿದೆ. `‘‘ನಿನ್ನನ್ನು ನಿನ್ನಿಂದ ಕಳಚಿಟ್ಟು ಬಾ’’ಎಂದು ಅವನು ಉತ್ತರಿಸಿದ.’

ಒಮ್ಮೆ ಪೀರ್ (ಗುರು) ತನ್ನ ಮುರೀದನ ಬಟ್ಟೆಯ ಜೊತೆ ತನ್ನ ಬಟ್ಟೆಗಳು ಇರುವುದನ್ನು ಕಂಡು, ತನ್ನ ನಿಲುವಂಗಿ ಬಟ್ಟೆಗಳನ್ನು ಪ್ರತ್ಯೇಕಿಸಿದ. ‘ಅದ್ಯಾಕೆ ನನ್ನ ಬಟ್ಟೆಯಿಂದ ನಿಮ್ಮ ಬಟ್ಟೆಯನ್ನು ಪ್ರತ್ಯೇಕಿಸಿದಿರಿ? ನನ್ನ ಬಟ್ಟೆಯೇನೂ ಕೊಳಕಾಗಿರಲಿಲ್ಲ’ ಎಂದು ಆತ ಹೇಳಿದ.

‘ನೀನು ನನ್ನನ್ನು ತಪ್ಪಾಗಿ ತಿಳಿದಿದ್ದಿಯಾ. ನನ್ನ ಬಟ್ಟೆಗಳನ್ನು ನಿನ್ನ ಬಟ್ಟೆಗಳಿಂದ ಪ್ರತ್ಯೇಕಿಸಿದ್ದು ಯಾಕೆಂದರೆ ನನ್ನ ಬಟ್ಟೆಗಳು ಅಶುದ್ಧವಾಗಿದ್ದವು. ನನ್ನ ಬಟ್ಟೆಗಳಿಂದಾಗಿ ನಿನ್ನವು ಕೊಳಕಾದಾವು ಎಂಬ ಮುಂಜಾಗ್ರತೆಯಿಂದ ನನ್ನ ಬಟ್ಟೆಗಳನ್ನು ಹಿಂತೆಗೆದೆ. ನನ್ನ ಬಟ್ಟೆಗಳು ಕೊಳೆಯಾಗುತ್ತವೆನ್ನುವ ಕಾರಣಕ್ಕಾಗಿ ಅಲ್ಲ’.

ಓರ್ವ ತನ್ನನ್ನು ಸಂಪೂರ್ಣವಾಗಿ ಪ್ರತ್ಯೇಕಿಸುವುದರ ಉದ್ದೇಶ, ಮನುಷ್ಯ ದೇವರ ಒಂಟಿತನದ ಅಸ್ತಿತ್ವದ ಬಗ್ಗೆ ದೃಢವಿಶ್ವಾಸ ಹೊಂದಲಿಕ್ಕಾಗಿ. ಇದರ ಇನ್ನೊಂದು ಉದ್ದೇಶ ಸೈತಾನ ಪಿಸುಗುಟ್ಟುವ ಮೂಲಕ ಮಾಡುವ ಪ್ರಲೋಭನೆಯನ್ನು ತಡೆಯುವುದು. ಸತ್ಯದ ಪ್ರತ್ಯೇಕತೆ ಎಂದರೆ ನಿಂದನೀಯ ಗುಣಗಳಿಂದ ಪ್ರತ್ಯೇಕಿಸಲ್ಪಡುವುದು. ಇದರ ಪರಿಣಾಮವೆಂದರೆ ವಿಶಿಷ್ಠವೆನಿಸಲ್ಪಟ್ಟ ಗುಣಗಳನ್ನು ಬದಲಾಯಿಸುವುದು.

ಈ ಕಾರಣಕ್ಕಾಗಿಯೇ ‘ಅಧ್ಯಾತ್ಮ ಜ್ಞಾನ ಉಳ್ಳವನು ಯಾರು?’ ಎಂಬ ಪ್ರಶ್ನೆಗೆ `‘ಅವನೇ, ಹತ್ತಿರ ಮತ್ತು ದೂರವಾಗಿ ಏಕಕಾಲದಲ್ಲಿ ಇರುವವನು’ ಎಂಬ¨ ಉತ್ತರ ಸಿಗುತ್ತದೆ. ಅಂದರೆ ಬಾಹ್ಯವಾಗಿ ಹತ್ತಿರದಲ್ಲಿದ್ದವನಂತೆ ಜನರಿಗೆ ವ್ಯಕ್ತವಾಗುವವನು ಅಂತರ್ಯದಲ್ಲಿ ಅವರಿಂದ ದೂರವಾಗಿರುವವನು. ಈ ಕಾರಣಕ್ಕಾಗಿಯೇ ಸೂಫಿ ಸಂತ ಅಬೂ ಅಲಿ ಅದ್ದಖಾಖ್ ತನ್ನ ಶಿಷ್ಯಂದಿರಿಗೆ ಬೋಧಿಸುತ್ತಾರೆ, ‘ಜನರು ತೊಡುವ ಬಟ್ಟೆಯಂತೆ ನೀವೂ ತೊಟ್ಟುಕೊಂಡಿರಿ. ಜನರು ತಿನ್ನುವಂತಹ ಆಹಾರವನ್ನು ನೀವೂ ತಿನ್ನಿರಿ. ಅಂತರ್ಯದಲ್ಲಿ ಮಾತ್ರ ಪ್ರತ್ಯೇಕತೆಯನ್ನು ಕಾಪಾಡಿ’.

ಇನ್ನೊಂದು ಸಂದರ್ಭದಲ್ಲಿ ಅವರು ಹೇಳುತ್ತಾರೆ, ‘ಒಬ್ಬಾತ ನನ್ನ ಬಳಿ ಬಂದು ಹೇಳುತ್ತಾನೆ, ನಿಮ್ಮ `ಮುರೀದ್ ಶಿಷ್ಯತ್ವ ಸ್ವೀಕರಿಸಲು ಬಹಳ ದೂರದ ಊರಿನಿಂದ ಬಂದಿದ್ದೇನೆ’. ಆಗ ನಾನು ಹೇಳಿದೆ, ‘ಈ ಸೂಫಿ ಪಂಥದ ಜ್ಞಾನಾರ್ಜನೆಯ ಹಾದಿಯಲ್ಲಿ ದೂರ ಅಥವಾ ಹತ್ತಿರದ ಪಯಣಕ್ಕೆ ಮಹತ್ವವಿಲ್ಲ. ಒಂದು ಹೆಜ್ಜೆಯಿಟ್ಟು ನಿನ್ನನ್ನು ನಿನ್ನಿಂದ ಪ್ರತ್ಯೇಕಿಸು, ನಿನ್ನ ಗುರಿ ತಲಪುವೆ'

-ಫಕೀರ್ ಅಹ್ಮದ್ ಕಟ್ಪಾಡಿ.

No comments:

Post a Comment