'ಹತ್ತು ಬೆರಳುಗಳನ್ನು ಸವೆಸಿ ಐದು ಬೆರಳುಗಳಿಂದ ಉಣ್ಣು’ ಎಂಬ ಮಾತಿದೆ. ಈ ಭೂಮಿಯನ್ನು ವಾಸಸ್ಥಾನವಾಗಿ ಮನುಷ್ಯನಿಗೆ ನೀಡಿದ ಸೃಷ್ಟಿಕರ್ತ, ‘ಅವನನ್ನು ಯಾವುದರಿಂದ ತೆಗೆದನೋ ಆ ಭೂಮಿಯನ್ನು ವ್ಯವಸಾಯ ಮಾಡುವುದಕ್ಕೆ’ ಕೊಟ್ಟನು. ಈ ಕಾರಣದಿಂದ ಮಣ್ಣಿನಿಂದ ಜೀವ ತಳೆದ ಮನುಷ್ಯ ಅದೇ ಮಣ್ಣಿನೊಂದಿಗೆ ಸಂಬಂಧ ಬೆಳೆಸಿ ತನ್ನ ಜೀವನ ನಿರ್ವಹಣೆ ಮಾಡಲಾರಂಭಿಸಿದ. ಇದು ಸೃಷ್ಟಿಕರ್ತನ ಚಿತ್ತದಂತೆ ನಡೆದಿದ್ದುದರಿಂದ ದುಡಿಮೆ, ಕೆಲಸ ಅಥವಾ ಶ್ರಮವೊಂದು ಶಾಪವಲ್ಲ, ಬದಲಾಗಿ ದೇವರ ವರದಾನ. ತಾನು ಆರಂಭಿಸಿದ ಸೃಷ್ಟಿಯ ಕಾರ್ಯವನ್ನು ಮುಂದುವರಿಸಿಕೊಂಡು ಹೋಗಲು ದೇವರು ಮನುಷ್ಯನಿಗೆ ನೀಡಿದ ಹೊಣೆಗಾರಿಕೆ.
ಈ ಸೃಷ್ಟಿ ಕಾರ್ಯದಲ್ಲಿ ಮಾನವ ಜನಾಂಗವನ್ನೂ ಬೆಳೆಸುವ ಜವಾಬ್ದಾರಿಯೂ ಸೇರಿದೆ. ಮನುಷ್ಯ ಆರಂಭದಿಂದಲೂ ಪರಿಶ್ರಮದ ದುಡಿಮೆಯ ಮೂಲಕ ತನ್ನ ಈ ಜವಾಬ್ದಾರಿಯನ್ನು ಪಾಲಿಸುತ್ತಾ ಬಂದಿದ್ದಾನೆ. ಅದರಂತೆ ಕುಟುಂಬ ಜೀವನದ ಮೂಲಕ ಮಾನವ ಜನಾಂಗವನ್ನು ಬೆಳೆಸುವ ಕಾರ್ಯದಲ್ಲೂ ತೊಡಗಿದ್ದಾನೆ. ಭೂಮಿಯನ್ನು ಉತ್ತು ಬೆಳೆ ತೆಗೆಯುವುದು ಮಾತ್ರವಲ್ಲ, ಇತರ ಕಸುಬುಗಳಲ್ಲೂ ತನ್ನನ್ನೇ ತೊಡಗಿಸಿಕೊಂಡಿದ್ದಾನೆ. ಈ ಮೂಲಕ ಪರಿಶ್ರಮದಿಂದ ತನ್ನ ಜೀವನ ನಿರ್ವಹಣೆ ಮಾಡಿಕೊಂಡಿದ್ದಾನೆ. ಕಸುಬು ಯಾವುದೇ ಇರಲಿ, ಅದರಲ್ಲಿ ಮೇಲು-ಕೀಳೆಂಬ ಭೇದವಿಲ್ಲ. ಹಳ್ಳಿಯ ರೈತನಿಗೂ ದೆಹಲಿ ಆಡಳಿತಗಾರನಿಗೂ ಸಮಾನ ಗೌರವ ಸಲ್ಲಬೇಕು. ತನ್ನ ದುಡಿಮೆಯನ್ನು ಪ್ರಾಮಾಣಿಕವಾಗಿ ಮಾಡದವನೇ ಕೀಳು ಎಂಬುದು ಸತ್ಯ.
ದುಡಿಮೆ ಮಾನವನಿಗೆ ದೇವರ ವರದಾನ, ಆದರೂ ಅನೇಕರು ಇದನ್ನು ದೇವರ ಶಾಪ, ಶಿಕ್ಷೆ ಎಂದುಕೊಂಡು ಪರಿಶ್ರಮಪಡದೆ ಸೋಮಾರಿತನದಿಂದ ಕಾಲ ಕಳೆಯುವುದು ವಿಷಾದಕರ. ದುಡಿಮೆ, ಪರಿಶ್ರಮ ಪಾಪಿ ಮನುಷ್ಯನಿಗೆ ದೇವರು ನೀಡಿದ ಶಿಕ್ಷೆ ಎಂದು ಪ್ರತಿಪಾದಿಸಲು ಧರ್ಮಗ್ರಂಥಗಳ ಆಧಾರವನ್ನು ಪಡೆಯುವವರೂ ಇದ್ದಾರೆ. ಸೋಮಾರಿತನ ದೇವರ ಚಿತ್ತವಲ್ಲ. ದುಡಿಯಲು ಸಾಮರ್ಥ್ಯವಿರುವ ಪ್ರತಿಯೊಬ್ಬನೂ ದುಡಿದು ತನ್ನ ಜೀವನ ಸಾಗಿಸಬೇಕೆಂಬುದು ದೇವರ ಇಚ್ಛೆ. ಸೋಮಾರಿತನದಿಂದ ಜೀವಿಸಿ, ತಾವೂ ಪರಿಶ್ರಮಪಡದೆ, ಇತರರ ಕೆಲಸದಲ್ಲಿ ಮೂಗು ತೂರಿಸುವವರಿಗೆ ಸಂತ ಪಾವ್ಲರು ಕಠಿಣವಾದ ಮಾತುಗಳನ್ನು ಹೇಳುತ್ತಾರೆ. ‘ಕೆಲಸ ಮಾಡಲೊಲ್ಲದವನು ಊಟ ಮಾಡಬಾರದೆಂದು ನಿಮಗೆ ಆಜ್ಞಾಪಿಸಿದೆವಷ್ಟೆ. ಆದರೆ, ನಿಮ್ಮಲ್ಲಿ ಕೆಲವರು ಯಾವ ಕೆಲಸವನ್ನೂ ಮಾಡದೆ ಇತರರ ಕೆಲಸದಲ್ಲಿ ಮಾತ್ರ ತಲೆಹಾಕಿ ಅಕ್ರಮವಾಗಿ ನಡೆಯುತ್ತಾರೆಂದು ಕೇಳಿದ್ದೇವೆ. ಅಂಥವರು ಮೌನವಾಗಿ ತಮ್ಮ ಕೆಲಸವನ್ನು ಮಾಡುತ್ತಾ ತಮ್ಮ ಸ್ವಂತ ಆಹಾರವನ್ನೇ ಊಟಮಾಡಬೇಕೆಂದು ನಾವು ಆಜ್ಞಾಪಿಸಿ ಪ್ರಬೋಧಿಸುತ್ತೇವೆ.’ ‘ಸೋಮಾರಿಯ ಮಿದುಳು ಸೈತಾನ ಕಾರ್ಯಸ್ಥಾನ’ ಎಂಬ ಮಾತಿನಂತೆ ದುಡಿಯದೆ ಇರುವ ಮನುಷ್ಯನು ಕೆಟ್ಟ ಆಲೋಚನೆ ಮತ್ತು ಕಾರ್ಯಗಳಲ್ಲಿ ಭಾಗಿಯಾಗುವ ಸಂದರ್ಭಗಳು ಬಹಳ. ‘ಕಾಯಕವೇ ಕೈಲಾಸ’ ಎಂಬ ಬಸವಣ್ಣನವರ ನುಡಿ ಸರ್ವಕಾಲಕ್ಕೂ ಸತ್ಯ.
No comments:
Post a Comment