Sunday, December 20, 2015

ಆತ್ಮ ಸಮರ್ಪಣ

ಭಾರತೀಯ ದಾರ್ಶನಿಕ ಪರಂಪರೆಯಲ್ಲಿ ಮಾನವನ ಅತ್ಯುನ್ನತ ಗುರಿ ಮೋಕ್ಷವೆಂದು ಹೇಳಲಾಗಿದೆ. ಇದನ್ನು ಪಡೆಯಲು ಅತ್ಯಂತ ಸರಳ ಹಾಗು ಸುಲಭವಾದ ಮಾರ್ಗವೆಂದರೆ ಭಕ್ತಿಯೋಗ ಒಂದೇ ಎಂದೂ ದಾರ್ಶನಿಕ ಗ್ರಂಥಗಳಲ್ಲಿ ವಿವರಿಸಲಾಗಿದೆ. ಇನ್ನಿತರ ಮಾರ್ಗಗಳಾದ ಜ್ಞಾನಯೋಗ, ಕರ್ಮಯೋಗ ಮುಂತಾದವುಗಳಿಗಿಂತಲೂ ಇದು ಅತೀ ಸುಲಭ. ಇದಕ್ಕೆ ಭಕ್ತನು ಪರಿಶುದ್ಧವಾಗುವ ಮಾರ್ಗವೆಂದು ಕರೆಯಲಾಗಿದೆ. ಭಕ್ತಿಯಲ್ಲಿ ಶ್ರವಣ, ಕೀರ್ತನ, ಸ್ಮರಣ ಮುಂತಾದ ನವವಿಧ ಭಕ್ತಿಗಳು ಸುಪ್ರಸಿದ್ಧ. ಇವುಗಳಲ್ಲಿ ಕೊನೆಯದಾದ ಆತ್ಮಸಮರ್ಪಣ ಭಕ್ತಿಯೂ ಇತರ ಭಕ್ತಿಗಳಂತೆ ಫಲಪ್ರದವಾದುದು.

ನ್ನದೇನೂ ಇಲ್ಲ, ಎಲ್ಲವೂ ಭಗವಂತನದು, ಎಲ್ಲವೂ ಅವನಿಚ್ಛೆಯಂತೆ ನಡೆಯುತ್ತದೆ ಎಂಬ ಭಾವದಿಂದ ಭಗವಂತನ ಇಚ್ಛೆಗೆ ಸಂಪೂರ್ಣವಾಗಿ ಶರಣಾಗತವಾಗುವುದಕ್ಕೆ ಆತ್ಮಸಮರ್ಪಣ ಎನ್ನುವರು. ಆತ್ಮಸಮರ್ಪಣೆಯಿಂದಲೇ ಭಗವಂತನ ಕೃಪೆ ಸಾಧ್ಯ. ಈ ಭಕ್ತಿಯಲ್ಲಿ ಸಾಧಕನ ಪ್ರಯತ್ನಗಳಿಗೆ ಯಾವುದೇ ಸ್ಥಾನವಿಲ್ಲವೆಂಬುದು ಗಮನಾರ್ಹವಾದುದು. ಮಾನವನ ಪ್ರಯತ್ನಗಳು ಯಾವಾಗಲೂ ಸೀಮಿತವಾದವುಗಳು. ಆದರೆ ಭಗವಂತನ ಕೃಪೆ ಮಾತ್ರ ಸೀಮಾತೀತವಾದುದು. ಈ ಕಾರಣಕ್ಕಾಗಿಯೇ ಸಾಧಕನ ಪ್ರಯತ್ನಗಳು ಇಲ್ಲಿ ನಗಣ್ಯವಾಗಿವೆ. ಕೆಲವು ಸಂತರು ಆತ್ಮಸಮರ್ಪಣೆಯ ಈ ಭಕ್ತಿಯನ್ನು ಮಾರ್ಜಾಲಭಕ್ತಿ ಎಂದು ತಮ್ಮ ಅನುಭವಾಮೃತದಲ್ಲಿ ಉಲ್ಲೇಖಿಸಿರುವರು. ಬೆಕ್ಕು ತನ್ನ ಮರಿಯ ರಕ್ಷಣೆಗಾಗಿ ಅದನ್ನು ಸ್ಥಳದಿಂದ ಸ್ಥಳಕ್ಕೆ ಸ್ಥಳಾಂತರಿಸುವಾಗ ಅದು ತನ್ನ ಮರಿಯ ಕತ್ತನ್ನು ನೋವಾಗದಂತೆ ಕಚ್ಚಿ ಹಿಡಿಯುವುದು ಮತ್ತು ಮರಿಯು ತನ್ನನ್ನು ಸಂಪೂರ್ಣವಾಗಿ ತನ್ನ ತಾಯಿಗೆ ಸಮರ್ಪಿಸಿಕೊಂಡಿರುವುದು ಅನುಭವವೇದ್ಯವಾದ ಸಂಗತಿಯೇ.

ರ್ವಶಕ್ತನಾದ ಭಗವಂತನ ಶರಣಾಗತಿಯನ್ನು ಹೊಂದಿದರೆ ಜಗತ್ತಿನ ಯಾವ ಶಕ್ತಿಯೂ ನಮ್ಮನ್ನು ತಡೆಯಲಾರದು. ಶರಣಾಗತಿಯ ಮಹತ್ವವೇ ಹಾಗೆ. ಸಂತರೊಬ್ಬರು ಶರಣಾಗತಿಯ ಮಹತ್ವವನ್ನು ಹೀಗೆ ಅರುಹಿದ್ದಾರೆ. ಜೋ ಜಾಕೋ ಶರಣೋ ಗಹೈ, ತಾಕಹ ತಾಕೀ ಲಾಜ| ಉಲಟೇ ಜಲ ಮಛಲೀ ಚಲೈ, ಬಹ್ಯೋ ಜಾತ ಗಜರಾಜ|| ಅಂದರೆ ನದಿಯ ಮಹಾಪ್ರವಾಹದಲ್ಲಿ ಬಲಿಷ್ಠವಾದ ಆನೆಯೂ ಕೊಚ್ಚಿ ಹೋಗುತ್ತದೆ. ಆದರೆ ನೀರಿನ ಶರಣಾಗತಿಯನ್ನು ಹೊಂದಿದ ಸಣ್ಣ ಮೀನು ತನಗೆ ತಿಳಿದತ್ತ ಯಾವುದೇ ಅಡೆತಡೆ ಇಲ್ಲದೆ ಚಲಿಸುತ್ತದೆ. ಹಾಗೆ ಭಗವಂತನಿಗೆ ಶರಣಾಗತನಾದ ಭಕ್ತನು ಭಗವತ್‌ಪ್ರಪಂಚದಲ್ಲಿ ನಿರಾಯಾಸವಾಗಿ ಬದುಕುತ್ತಾನೆಂದರ್ಥ. ನನ್ನಲ್ಲಿ ಬಲ, ಬುದ್ಧಿ, ಸಾಮರ್ಥ್ಯವಿದೆ ಎಂಬ ಭಾವ ಮತ್ತು ನಾನು ಏನೆಲ್ಲವನ್ನೂ ಸಾಧಿಸಬಲ್ಲೆ ಎಂಬ ಅಭಿಮಾನ ಇರುವವರೆಗೆ ಆತ್ಮಸಮರ್ಪಣೆಯ ಅಥವಾ ಶರಣಾಗತಿಯ ಭಾವವೆಂದೂ ಅಳವಡದು.

ಧ್ಯಾತ್ಮ ಸಾಧನೆಯ ಮಾರ್ಗದಲ್ಲಿ ಬರುವ ಆಪತ್ತು- ವಿಪತ್ತು, ಸುಖ- ಸಂತೃಪ್ತಿಗಳೆಲ್ಲವೂ ಭಗವಂತನ ಪ್ರಸಾದವೆಂದು ಗ್ರಹಿಸುವುದು ಆತ್ಮಸಮರ್ಪಣೆಯ ಮುಖ್ಯಭಾವ. ಆದ್ದರಿಂದ ಭಕ್ತನು ಭಗವಂತನನ್ನೇ ತನ್ನ ರಕ್ಷಕ, ಪೋಷಕನೆಂದು ಭಾವಿಸುತ್ತಾನೆ. ಭಕ್ತಿಭಂಡಾರಿ ಬಸವಣ್ಣನವರು ಸರ್ವಸ್ವವೂ ಆಗಿರುವ ಭಗವಂತನನ್ನು ಕುರಿತು- ತಂದೆ ನೀನು, ತಾಯಿ ನೀನು, ಬಂಧು ನೀನು, ಬಳಗ ನೀನು| ಎನಗೆ ನೀನಲ್ಲದೆ ಮತ್ತಾರೂ ಇಲ್ಲವಯ್ಯಾ, ಕೂಡಲಸಂಗಮದೇವ, ಹಾಲಲದ್ದು, ನೀರಲದ್ದು ಎಂದು ಹೇಳುವಲ್ಲಿ ಸಂಪೂರ್ಣವಾಗಿ ಆತ್ಮಸಮರ್ಪಣೆಯ ಭಾವವಿದೆ. ನನ್ನನ್ನು ಉದ್ಧರಿಸು ಅಥವಾ ಕೈಯಾದರೂ ಬಿಡು, ನಾನು ನಿನ್ನನ್ನೇ ನಂಬಿಕೊಂಡಿದ್ದೇನೆ, ನನ್ನನ್ನು ಸಂಪೂರ್ಣವಾಗಿ ನಿನಗೆ ಅರ್ಪಿಸಿಕೊಂಡಿದ್ದೇನೆ. ನನಗೆ ಗತಿ ಮತಿ ಸರ್ವಸ್ವವೂ ನೀನೇ. ಆದ್ದರಿಂದ ನನ್ನನ್ನು ಅನುಗ್ರಹಿಸು ಎಂದು ಅನನ್ಯಗತಿಕರಾಗಿ ಪ್ರಾರ್ಥಿಸುತ್ತಾರೆ. ಬಳ್ಳಿಗೆಂದೂ ಕಾಯಿ ಭಾರವಲ್ಲ. ಹಾಗೆಯೇ ವಿಶ್ವರೂಪವಾಗಿ ಇಡೀ ವಿಶ್ವವನ್ನೇ ಹೊತ್ತ ನಿನಗೆ ನಾನೊಬ್ಬನು ಹೊರೆಯೆ? ಎಂಬ ಅವರ ಮಾತುಗಳಲ್ಲಿ ಉದ್ಧಾರವಾಗಬೇಕೆಂಬ ಉತ್ಕಟ ಅಭೀಪ್ಸೆ ಇದೆ. ಇದುವೇ ಅವರ ಆತ್ಮಸಮರ್ಪಣೆಯ ಪ್ರೇರಕ ಶಕ್ತಿಯಾಗಿದೆ.

-ಡಾ. ಸಿದ್ದರಾಮ ಸ್ವಾಮಿಗಳು.

No comments:

Post a Comment