ಪರೋಪಕಾರ್ಯಕ್ಕಾಗಿಯೇ ಮರಗಳು ಹಣ್ಣು ಕೊಡುತ್ತವೆ, ನದಿಗಳು ಹರಿಯುತ್ತವೆ, ಹಸುಗಳು ಹಾಲು ಕೊಡುತ್ತವೆ. ಹಾಗೆಯೇ ಪರೋಪಕಾರ ಮಾಡುವುದಕ್ಕಾಗಿಯೇ ಮಾನವ ಶರೀರವು ನಮಗೆ ಪ್ರಾಪ್ತವಾಗಿದೆ ಎಂದು ಸುಭಾಷಿತವೊಂದು ಹೇಳುತ್ತದೆ. ಆದ್ದರಿಂದ ಮಾನವ ಮಾತ್ರರೆಲ್ಲರೂ ಪರೋಪಕಾರದ ಕಾರ್ಯಗಳನ್ನು ಮಾಡುತ್ತ ಜೀವನವನ್ನು ಸಾಗಿಸಬೇಕೆಂಬುದು ಈ ಸುಭಾಷಿತದ ಇಂಗಿತಾರ್ಥ. ‘ಅಹಿಂಸಾ ಪರಮೋಧರ್ಮಃ’ ಎನ್ನುವಂತೆ ‘ಉಪಕಾರಃ ಪರೋಧರ್ಮಃ’ ಎಂದು ಹೇಳಿ ಪರೋಪಕಾರದ ಕಾರ್ಯಗಳನ್ನು ಧರ್ಮಾಚರಣೆಗಳೆಂಬಂತೆ ನಡೆಸಿಕೊಂಡು ಹೋಗುವವರು ಸಾಕಷ್ಟು ಜನರಿದ್ದಾರೆ. ಅವರಿಗೆ ಪರೋಪಕಾರವೇ ಶ್ರೇಷ್ಠವಾದ ಧರ್ಮವಾಗಿರುತ್ತದೆ.
ಇತರರಿಗಾಗಿ ಜೀವನ ನಡೆಸಿಕೊಂಡು ಹೋಗುವವರಿಗೆ ಪರೋಪಕಾರಿಗಳೆಂದೂ ಸಂತ-ಶರಣರೆಂದೂ ಕರೆಯುವರು. ಸಂತ-ಶರಣರಾಗಲಿ ಪರೋಪಕಾರದ ಭಾವವಾಗಲಿ ಬೇರೆ ಬೇರೆ ಅಲ್ಲ. ಅವರಲ್ಲಿ ಇತರರ ಏಳ್ಗೆ, ಸೇವೆ ಮತ್ತು ಪರೋಪಕಾರಗಳು ರಕ್ತಗತವಾಗಿರುತ್ತವೆ. ಅಜ್ಞಾನಿಗಳು, ಮೂಢರು ಅಪಕಾರ ಮಾಡಿದರೂ ಕೂಡ ಕ್ಷಮಿಸಿ ಉಪಕಾರ ಮಾಡುವುದು ಸಂತ-ಶರಣರ ಮನೋಧರ್ಮವಾಗಿರುತ್ತದೆ. ಕಷ್ಟವನ್ನು ಸಹಿಸಿಕೊಂಡು ಇತರರಿಗೆ ಒಳ್ಳೆಯದನ್ನು ಮಾಡುವುದು, ಇತರರು ಮಾಡಿದ ಉಪಕಾರವನ್ನು ಜನರ ಮಧ್ಯದಲ್ಲಿ ಕೃತಜ್ಞತೆಯಿಂದ ಸ್ಮರಿಸಿಕೊಳ್ಳುವುದು, ಒಳ್ಳೆಯದನ್ನು ಕೆಟ್ಟದ್ದನ್ನು ಯೋಚಿಸದೆ ಪರೋಪಕಾರ ಮಾಡುವುದು ವಿಭೂತಿ ಪುರುಷರ ಲಕ್ಷಣವಾಗಿದೆ.
ಲೋಕದಲ್ಲಿ ಅನೇಕ ಜನರು ಅಧಿಕಾರ ಹಾಗೂ ಕೀರ್ತಿ ಕಾಮಿನಿಯ ಆಸೆಯಿಂದ ಪರೋಪಕಾರದ ಕಾರ್ಯಗಳನ್ನು ಮಾಡುವುದುಂಟು. ಹೀಗೆ ಮಾಡುವವರು ಸ್ವಾರ್ಥಿಗಳೆನಿಸಿಕೊಳ್ಳುವರು. ಅಹಂಕಾರ-ಮಮಕಾರ, ಆಸೆ-ಆಮಿಷಗಳನ್ನು ತ್ಯಾಗಮಾಡಿ ಪರೋಪಕಾರ ಮಾಡುವುದು ಅತ್ಯಂತ ಶ್ರೇಯಸ್ಕರವಾದುದು. ಮರಗಳು ಹಣ್ಣುಗಳ ಭಾರದಿಂದ ಬಾಗುತ್ತವೆ. ಮಳೆಸುರಿಸುವ ನೀರು ತುಂಬಿದ ಮೋಡಗಳು ಕೆಳಮಟ್ಟದಲ್ಲಿ ಸಾಗುತ್ತವೆ. ಹಾಗೆಯೇ ನಿಜವಾದ ಪರೋಪಕಾರಿಗಳು ಸಿರಿ-ಸಂಪತ್ತು, ಅಧಿಕಾರವಿದ್ದರೂ ಯಾವ ರೀತಿಯಿಂದಲೂ ಅಹಂಕರಿಸದೆ ನಯ-ವಿನಯ ಭಾವದಿಂದ ಪರೋಪಕಾರ ಮಾಡುತ್ತಾರೆ.
ಮನುಷ್ಯರಾದವರು ಕಷ್ಟಪಟ್ಟಾದರೂ ಪರೋಪಕಾರದ ಕಾರ್ಯಗಳನ್ನು ಮಾಡಬೇಕೆಂದು ಅನುಭವಿಗಳು ಹೇಳುತ್ತಾರೆ. ‘ಹತೇಷು ದೇಹೇಷು ಗುಣಾ ಧರಂತೇ’ ಎಂಬ ಮಾತಿನಲ್ಲಿ ಪರೋಪಕಾರಿಗಳ ನಿಧನಾನಂತರವೂ ಅವರು ಮಾಡಿದ ಪರೋಪಕಾರದ ಕಾರ್ಯಗಳು ಉಳಿಯುತ್ತವೆ ಎಂಬುದು ನಮ್ಮನುಭವಕ್ಕೆ ಬಾರದೇ ಇರದು.
ಪರೋಪಕಾರವು ಪ್ರತಿಯೊಬ್ಬರ ಬದುಕಿನ ಧರ್ಮವಾಗಬೇಕು. ‘ಪರೋಪಕಾರ ಮಾಡದ ಮನುಷ್ಯರಿಗೆ ಧಿಕ್ಕಾರ, ಪಶುಗಳು ಜೀವಿಸಲಿ’. ಏಕೆಂದರೆ ಅವು ಸತ್ತ ಮೇಲೂ ಅವುಗಳ ಚರ್ಮ ಉಪಯೋಗಕ್ಕೆ ಬರುತ್ತದೆ ಎಂದು ಹೇಳಿರುವುದನ್ನು ಗಮನಿಸಿದರೆ ಪರೋಪಕಾರ ಮಾಡದ ಮನುಷ್ಯನ ಜೀವನ ಪ್ರಾಣಿಗಳಿಗಿಂತಲೂ ಕಡೆ ಎನಿಸದಿರದು.
‘ಇಟ್ಟರೆ ಸಗಣಿಯಾದೆ,
ತಟ್ಟಿದರೆ ಕುರುಳಾದೆ
ಸುಟ್ಟರೆ ನೊಸಲಿಗೆ ವಿಭೂತಿಯಾದೆ
ನೀನಾರಿಗಾದೆಯೋ ಎಲೆ ಮಾನವಾ’
ತಟ್ಟಿದರೆ ಕುರುಳಾದೆ
ಸುಟ್ಟರೆ ನೊಸಲಿಗೆ ವಿಭೂತಿಯಾದೆ
ನೀನಾರಿಗಾದೆಯೋ ಎಲೆ ಮಾನವಾ’
-ಡಾ.ಸಿದ್ದರಾಮ ಸ್ವಾಮಿಗಳು.
No comments:
Post a Comment