Saturday, August 29, 2015

ಬೆಳಕು

ಬೆಳಕು ಎಂದರೆ ಬರಿಯ ಕತ್ತಲೆಯನ್ನು ಹೊಡೆದೋಡಿಸುವ ದೀಪಮಾತ್ರವಲ್ಲ. ಅದು ಜ್ಞಾನವೂ ಬುದ್ಧಿವಂತಿಕೆಯೂ ಯೋಚನೆಯೂ ಹೌದು. ದಿವ್ಯ ತೇಜೋಪ್ರಭೆ ಅದರೊಳಗೆ ಅಡಗಿದೆ. ಬೆಳಕು ದಿವ್ಯ ಪಥದ ಮಾರ್ಗದರ್ಶಿಯೂ ಆಗಿದೆ. ಅದು ಬೆಂಕಿಯ ಕಿಡಿಯಾಗಿ ಹಸಿರುಮರದ ಕೊಂಬೆಯೊಳಗೂ ಬಂಡೆಯ ಕಲ್ಲಲ್ಲೂ ಅಡಗಿದೆ. ತಣ್ಣಗಿನ ನೀರಿನೊಳಗೆಯೂ ಇದೆ. ಜೀವವಿರುವ ಪ್ರಾಣಿಯಲ್ಲೂ ಪಕ್ಷಿಯಲ್ಲೂ ಅಂತರಾತ್ಮದೊಳಗೆ ಅಡಗಿದೆ. ಜೀವಾತ್ಮವೂ ಪರಮಾತ್ಮವೂ ಹೌದು. ಸತ್ಯವೂ, ನಿತ್ಯವೂ, ಅಧ್ಯಾತ್ಮವೂ, ಅನಂದವೂ, ಪರಮಾನಂದವೂ ಆಗಿದೆ. ಅಂಧಕಾರ ತೊಲಗಲು ಬೆಳಕು ಜ್ಯೋತಿಯಾಗಬೇಕು.
ಪ್ರವಾದಿಯವರು ಮುಂಜಾವಿನ ತಹಜ್ಜುದ್ ಮತ್ತು ಫಜರ್ ನಮಾಜಿಗೆ ಹೊರಡುವಾಗ ಮಾಡುವ ದುವಾ ಪ್ರಾರ್ಥನೆ ಹೀಗಿತ್ತು: ‘ಓ ದೇವರೇ! ನನ್ನ ಹೃದಯದಲಿ ಬೆಳಕ ಮೂಡಿಸು. ನನ್ನ ನಾಲಗೆಗೆ ನೀಡು ಬೆಳಕ. ನನ್ನ ಕಿವಿಗಳಿಗೆ ಬೆಳಕ ಕರುಣಿಸು. ನನ್ನ ಕಣ್ಣುಗಳಲ್ಲಿ ಜ್ಯೋತಿ ಬೆಳಗಿಸು. ನನ್ನ ಮುಂದೆ, ನನ್ನ ಹಿಂದೆ, ನನ್ನ ಮೇಲೆ, ನನ್ನ ಕೆಳಗೆ ಬೆಳಕ ಹರಡು. ಯಾ ಅಲ್ಲಾಹ್! ನನಗೆ ನಿನ್ನ ಬೆಳಕ ಕರುಣಿಸು’.

ಬೆಳಕು ಎಲ್ಲವನ್ನು ತನ್ನ ಪ್ರಕಾಶದಿಂದ ಪ್ರಕಟಿಸುತ್ತದೆ. ಬೆಳಕು ವಿಶ್ವಾಸವಾಗುತ್ತದೆ, ಪ್ರವಾದಿಯವರು ಹೃದಯದಲ್ಲಿ ಬೆಳಕು ಮೂಡುವುದಕ್ಕೆ ಪ್ರಥಮ ಪ್ರಾಶಸ್ತ್ಯವನ್ನು ನೀಡುತ್ತಾರೆ. ‘ಅಲ್ಲಾಹುಮ್ಮ ಅಜ್‌ಅಲ್ ಫೀ ಖಲ್‌ಬಿ ನೂರನ್’ ಎಂದು ಪ್ರಾರ್ಥಿಸಲು ತೊಡಗುತ್ತಾರೆ. ಯಾಕೆಂದರೆ ಹೃದಯವು ವಿಶ್ವಾಸದ ಆವಾಸಸ್ಥಾನ. ಹೃದಯದಿಂದ ಇಡೀ ದೇಹದ ಕಣಕಣಕ್ಕೂ ವಿಶ್ವಾಸವೆಂಬ ದಿವ್ಯ ಬೆಳಕಿನ ಸಂದೇಶ ರವಾನೆಯಾಗುತ್ತದೆ. ಆರೋಗ್ಯಕರ ದೇಹದಲ್ಲಿ ಅಧ್ಯಾತ್ಮದ ಬೆಳಕಿನ ಸಂಚಲನವಾಗುತ್ತದೆ. ಪ್ರವಾದಿಯವರು ತನ್ನ ಪಂಚೇಂದ್ರಿಯಗಳಿಗೂ ಬೆಳಕ ಕರುಣಿಸಿ ಪರಿಶುದ್ಧಗೊಳಿಸು ಎಂದು ಪ್ರಾರ್ಥಿಸುತ್ತಾರೆ. ಅಲ್ಲಾಹನ ಸೃಷ್ಟಿಯಲ್ಲಿ ಪರಮ ಪವಿತ್ರ ಆತ್ಮವೆನಿಸಿದ ಪ್ರವಾದಿ(ಸ.ಅ.ಸ.)ಗೂ ಈ ಪ್ರಾರ್ಥನೆಯ ಅಗತ್ಯವಿದೆಯೇ? ಹೌದು, ಈ ಪ್ರಾರ್ಥನೆಯ ಮೂಲಕ ಅವರು ಮಾನವ ಜನಾಂಗಕ್ಕೆ (ಉಮ್ಮಾ) ಬೆಳಕ ಕರುಣಿಸೆಂದು ಬೇಡುತ್ತಾರೆ.
ಕುರಾನಿನಲ್ಲಿ ಅಲ್ಲಾಹ್ ತನ್ನ ಬಗ್ಗೆ (ಅನ್ನೂರ್-೩೫) ‘ಅಲ್ಲಾಹನು ಭೂಮಿ, ಆಕಾಶದ ದಿವ್ಯಪ್ರಭೆಯಾಗಿರುವನು. ಒಂದು ಗೋಡೆಯ ಗೂಡಿನೊಳಗಿಟ್ಟ ದೀಪದಂತೆ, ದೀಪ ಗಾಜಿನ ಬುರುಡೆಯೊಳಗೆ ಇರುವಂತೆ, ಬುರುಡೆ ಹೊಳೆವ ಮುತ್ತಿನ ತಾರೆಯಂತೆ. ಈ ದೀಪವನ್ನು ಬೆಳಗಲು ಪೌರಾತ್ಯವೂ ಪಾಶ್ಚಿಮಾತ್ಯವೂ ಅಲ್ಲದ ಓಲಿವ್ ಎಣ್ಣೆಯನ್ನು ಉಪಯೋಗಿಸಲಾಗಿದೆ. ಎಣ್ಣೆಗೆ ಬೆಂಕಿ ತಗಲದಂತಿದ್ದೂ ತನ್ನಿಂದತಾನಾಗಿ ಬೆಳಗುತ್ತಿದೆ. ಅಲ್ಲಾಹ ತನ್ನಿಚ್ಛೆಯಂತೆ ಕೆಲವರಿಗೆ ಪ್ರಕಾಶದೆಡೆಗೆ ತೆರಳುವ ಮಾರ್ಗದರ್ಶನವನ್ನು ನೀಡುತ್ತಾನೆ. ತನ್ನ ಉಪಮೆಗಳ ಮೂಲಕ ವಿಶ್ವಾಸ ಮೂಡಿಸುತ್ತಾನೆ. ಅಲ್ಲಾಹನು ಸಕಲವನ್ನೂ ಬಲ್ಲವನು’ ಎಂದು ಹೇಳುತ್ತಾನೆ.
-ಫಕೀರ್ ಅಹ್ಮದ್ ಕಟ್ಪಾಡಿ.

No comments:

Post a Comment