ಸೈತಾನನೊಂದಿಗೆ ನಡೆಸುವ ಸಂಘರ್ಷವು ಮೂಲ ಮಾನವ ಆದಮನೊಂದಿಗೆ ಪ್ರಾರಂಭಗೊಂಡಿದೆ. ಮೂರು ಸೈತಾನರಿಗೆ ದುಷ್ಟ ಶಕ್ತಿಗಳನ್ನು ದೂರವಿಡುವ ಸಾಂಕೇತಿಕ ಆಚರಣೆಯ ಕ್ರಮವಾಗಿ ಏಳು ಕಲ್ಲುಗಳನ್ನು ಗುರಿಯಿಟ್ಟು ಹೊಡೆಯುವಲ್ಲಿಗೆ ಹಜ್ ಯಾತ್ರಿಯ ಪವಿತ್ರ ಹಜ್‍ಯಾತ್ರೆ ಸಂಪನ್ನಗೊಳ್ಳುತ್ತದೆ. ಇದು ದುಷ್ಟ ಶಕ್ತಿಗಳ ವಿರುದ್ಧದ ಧರ್ಮಯುದ್ಧದ ವಿಜಯವೂ ಆಗಿದೆ.
ಅಲ್ಲಾಹನ ಆಜ್ಞೆಯಂತೆ ತನ್ನ ಮುದ್ದು ಮಗ ಇಸ್ಮಾಯಿಲನನ್ನು ಬಲಿದಾನ ನೀಡಲು ಹೊರಟ ಹಜ್ರತ್ ಇಬ್ರಾಹಿಮರ ಸದೃಢವಾದ ನಿಲುವಿನ ಹಂತವಿದು. ಇದರ ನೆನಪಿಗಾಗಿ ನಂತರ ಪವಿತ್ರ ಸ್ಪಷ್ಟ ಇರಾದೆಯೊಂದಿಗೆ ಹಜ್ ಯಾತ್ರಿಯು ತನಗಿಷ್ಟವಾದ ಪ್ರಾಣಿಯ ಖುರ್ಬಾನಿ ಬಲಿದಾನ ನೀಡುತ್ತಾನೆ. ಹಜ್ ಯಾತ್ರೆಯ ಪ್ರತಿಯೊಂದು ಆಚರಣೆಯ ಹಂತದಲ್ಲಿಯೂ ಹಾಜಿಗೆ ಸ್ಪಷ್ಟವಾದ ದೃಢ ಇರಾದೆ (ನಿಯ್ಯತ್) ಅತೀ ಅಗತ್ಯ. ಇದನ್ನು ಮಾಡದೆ ಆಚರಿಸುವಂತಹ ಹಂತಗಳು ವ್ಯರ್ಥವಾಗುತ್ತವೆ. ಇದು ಉಪವಾಸಕ್ಕೂ ಅನ್ವಯಿಸುತ್ತದೆ.
ಅಂತರ್ ಶುದ್ಧಿಗಾಗಿ ಯಾ ದುಷ್ಟ ಶಕ್ತಿಗಳ ವಿರುದ್ಧ ಹೂಡುವ ಧರ್ಮಯುದ್ಧ (ಜಿಹಾದ್) ಕೂಡ ನಿಯತ್ತು ಇಲ್ಲದೆ ಮಾಡಿದರೆ ವ್ಯರ್ಥ. ಹಜ್ ಯಾತ್ರೆಯಲ್ಲಿ ಪ್ರತಿಯೊಂದು ಹಂತವೂ ಸುಳಿವು, ಚಿಹ್ನೆ ಮತ್ತು ಸಂಕೇತಗಳೆಂದು ಪರಿಗಣಿಸಲ್ಪಟ್ಟಿವೆ. ಆದುದರಿಂದ ಇವನ್ನು ಅರ್ಥಮಾಡಿಕೊಳ್ಳದಿದ್ದರೆ ಹಜ್ ಸಂಪನ್ನವಾಗದು. ಸಜ್ದಾ ಅಥವಾ ಹಣೆಯನ್ನು ನೆಲಕ್ಕೆ ತಾಗಿಸುವ ಸಾಷ್ಟಾಂಗ ನಮಸ್ಕಾರದ ಅರ್ಥ ತಿಳಿಯದಿದ್ದರೆ ನಮಾಜ್ ಬರಿಯ ಒಂದು ಯಾಂತ್ರಿಕ ಕ್ರಿಯೆಯಾಗಿಬಿಡುವಂತೆ, ಹಜ್ ಯಾತ್ರೆಯ ಪರಮ ಸತ್ವವನ್ನು ತಿಳಿಯದಿದ್ದರೆ ಬರಿಯ ಸಾಮಾನ್ಯ ಪ್ರವಾಸ ಮಾಡಿಬಂದಂತೆ ನಿಸ್ಸಾರವಾಗಿಬಿಡುತ್ತದೆ.
ಹಜ್ ಯಾತ್ರೆಯ ಉದ್ದಕ್ಕೂ ಕೆಲವು ಹಂತಗಳ ಅರ್ಥಗ್ರಹಣದ ಸಂದರ್ಭಗಳೆಂದರೆ ಕಾಬಾಕ್ಕೆ ಪ್ರದಕ್ಷಿಣೆಯ(ತವಾಫ್)ಲ್ಲಿ ಏಕದೇವೋಪಾಸನೆಯ ದೃಢತೆ, ಬೀಬಿ ಹಾಜಿರಾ ನೀರಿಗಾಗಿ ಪರಿತಪಿಸುತ್ತ ಓಡಿದ ಸಂದರ್ಭವನ್ನು ನೆನೆಯುವ ಸಫಾ ಮತ್ತು ಮರ್‍ವಾ ಬೆಟ್ಟಗಳ ನಡುವೆ ನಡಿಗೆ (ಸಅಯ್ಯ್), ಸ್ವರ್ಗದಿಂದ ಹೊರಹಾಕಲ್ಪಟ್ಟ ಮೂಲಮಾನವ ಆದಮ್ ತನ್ನ ತಪ್ಪಿಗೆ ಪಶ್ಚಾತ್ತಾಪಪಟ್ಟಿದ್ದನ್ನು ನೆನಪಿಸುವ ‘ಅರಾಫಾ’ದಲ್ಲಿನ ಆರಾಧನೆ, ಸೃಷ್ಟಿಯ ಮೂಲತತ್ವ ಮತ್ತು ವಿಜ್ಞಾನದಿಂದ ಪ್ರೇಮದ ತನಕದ ಜ್ಞಾನವಿಕಸನದ ಚಿಂತನೆಗಳ ಜೊತೆಗೆ ಅರಾಫಾತ್ ನಿಂದ ಮಿನಾಕ್ಕೆ ಪ್ರಯಾಣಿಸುವ ಹಂತದಲ್ಲಿ ಮಣ್ಣು ಮತ್ತು ದೇವರ ಮಧ್ಯೆ ನಡೆಯುವ ಅಧ್ಯಾತ್ಮದ ಆರೋಹಣ ಇತ್ಯಾದಿ.
ಹಜ್ ಯಾತ್ರೆಯ ವಿಧಾನಗಳನ್ನು ಸಮರ್ಪಕವಾಗಿ ಪೂರೈಸಿದ ನಂತರ ಎಲ್ಲ ಪಾಪಗಳನ್ನು ತೊರೆದು ನವಜಾತ ಶಿಸುವಿನಂತೆ ಹಜ್ ಯಾತ್ರಿ ಹಿಂತಿರುಗುತ್ತಾನೆ. ಕುರಾನ್ ಸಂದೇಶಗಳ (ಸೂರಃ 112, 113 ಮತ್ತು 114) ಮೂಲಕ ಅಲ್ಲಾಹನೇ ತನ್ನ ಕಟ್ಟಕಡೆಯ ರಕ್ಷಕ, ತನಗಿರುವ ಏಕೈಕ ಆಧಾರ ಎಂದು ತಿಳಿಯುವ ಮೂಲಕ ಇಡೀ ಮಾನವ ಜನಾಂಗಕ್ಕೆ ಅಲ್ಲಾಹ ತನ್ನ ರಕ್ಷಣೆಯ ಭರವಸೆ, ಅಭಯವನ್ನು ನೀಡುತ್ತಾನೆ. ದೇವರು ಯಾರಿಗೂ ಶರಣಾಗತನಲ್ಲ, ಎಲ್ಲರೂ ಅವನಿಗೆ ಶರಣಾಗಿರುವವರು. ಈ ಸಂದರ್ಭದಲ್ಲಿ ಪ್ರವಾದಿಯವರು ‘ನಿಮಗೆ ಸಂಕಷ್ಟಗಳು, ಕೆಡುಕುಗಳು ಎದುರಾದಾಗ ಎದೆಗುಂದದೆ ಅಲ್ಲಾಹನಿಗೆ ಶರಣಾಗಿ ನಿಶ್ಚಿಂತರಾಗಿರಿ. ಯಾವ ದುಷ್ಟ ಶಕ್ತಿಯೂ ನಿಮಗೆ ಹಾನಿಯುಂಟು ಮಾಡದು’ ಎಂದಿದ್ದರು.
-ಫಕೀರ್ ಅಹ್ಮದ್ ಕಟ್ಪಾಡಿ.
No comments:
Post a Comment