ಸೂಫಿಗಳ ಪ್ರಕಾರ ಅಲ್ಲಾಹ್ ಅಂದರೆ ದೇವರು, ಜಾತಿ, ಧರ್ಮ, ದೇಶಗಳ ಚೌಕಟ್ಟನ್ನು ಮೀರಿದವನು. ಅವನು ಮನುಷ್ಯನ ಊಹೆಗೆ ನಿಲುಕದ ಅದ್ಭುತ ಸೌಂದರ್ಯ, ವಿಶೇಷ ಶಕ್ತಿ ಉಳ್ಳವನು, ಸಕಲ ಸೃಷ್ಟಿಯೂ ಅಲ್ಲಾಹನಿಂದ ಮತ್ತು ಅವನ ಪ್ರತೀಕವಾಗಿದೆ.
ಇಡೀ ವಿಶ್ವವೇ ಅವನ ಕಾರ್ಯಸ್ಥಾನ, ಇಡೀ ಮಾನವಜನಾಂಗ, ಸಕಲ ಜೀವಕೋಟಿ ಅವನ ಒಡೆತನಕ್ಕೆ ಸೇರಿದ್ದು, ಅವನು ಎಲ್ಲರನ್ನೂ ಪೊರೆಯುವವನು, ಅವನ ಅನುಗ್ರಹಕ್ಕೆ ಎಲ್ಲರೂ ಅರ್ಹರು, ಜಾತಿ, ಧರ್ಮ, ವರ್ಗ, ವರ್ಣಬೇಧವಿಲ್ಲದ ಮಾನವಜನಾಂಗ ಒಂದು ಎಂಬ ‘ಇತ್ತಿಹಾದ್’ ಸಂದೇಶ ಸೂಫಿಗಳ ಮುಖ್ಯ ಚಿಂತನೆಗಳ ಭಾಗವಾಗಿದೆ. ಇದಕ್ಕೆ ಕುರಾನ್ ಗ್ರಂಥದಲ್ಲಿರುವ ಸಂದೇಶಗಳೇ ಆಧಾರ ಮತ್ತು ಪೈಗಂಬರರು ಮದೀನಾದಲ್ಲಿ ಮೊದಲ ಸರಕಾರ ಸ್ಥಾಪಿಸಿದಾಗ ಮುಸ್ಲಿಮೇತರರ ಜೊತೆಗೆ ಮಾಡಿಕೊಂಡ ಕರಾರು ‘ಇತ್ತಿಹಾದ್-ಎ-ಮದೀನಾ’ ಆಧಾರವಾಗಿದೆ.
ಪೈಗಂಬರರಿಗೆ ಕಿರುಕುಳ ಹೆಚ್ಚಾದಾಗ ಕುರಾನ್ ನೀಡಿದ ಸಂದೇಶ ‘ಲೆಕುಂ ದೀನುಕುಂ ವಲ್ ಎ ದೀನ್ (ಹೇಳಿರಿ- ನಿಮ್ಮ ಧರ್ಮ ನಿಮಗೆ, ನಮ್ಮ ಧರ್ಮ ನಮಗೆ’(ಕುರಾನ್ 109: 6) ಕುರಾನ್‌ನ ಕೊನೆಯಲ್ಲಿ ನೀಡುವ ಅಭಯ ಬರೀ ಮುಸ್ಲಿಮರನ್ನು ಮಾತ್ರ ಉದ್ದೇಶಿಸಿರದೇ ಇಡೀ ಮಾನವ ಜನಾಂಗವನ್ನು ಒಳಗೊಂಡಿದೆ. ‘ಮಲಿಕಿನ್ನಾಸ್, ಇಲಾಹಿನ್ನಾಸ್’(ಕುರಾನ್: ಸೂರಃ ಅನ್ನಾಸ್) ಸಕಲ ಮಾನವರನ್ನು, ಜೀವಿಗಳನ್ನು ಪೊರೆಯುವವನು, ಮಾನವ ಜನಾಂಗದ ಒಡೆಯ ತಾನೆಂದು ಹೇಳುತ್ತಾನೆ. ತನ್ನ ಸಕಲ ಜೀವ ಸೃಷ್ಟಿಯ ಮೇಲೂ ಒಂದೇ ರೀತಿಯಲ್ಲಿ ತನ್ನ ದಯೆ, ಕರುಣೆ, ಪ್ರೇಮವನ್ನು, ಪೊರೆಯುವ ಅಭಯವನ್ನು ಅಲ್ಲಾಹ ನೀಡಿದ್ದಾನೆ, ಅವನು ತನ್ನ ರಹ್‌ಮತ್(ದಯೆ) ಮತ್ತು ಬರ್‌ಕತ್ (ಒಳಿತು)ನ್ನು ನೀಡುವಾಗ ತನ್ನ ಸೃಷ್ಟಿಯಲ್ಲಿ ಯಾವುದೇ ರೀತಿಯ ಭೇದವನ್ನು ಕಲ್ಪಿಸುವುದಿಲ್ಲ. ಈ ಸಂದೇಶಗಳ ಆಶಯವನ್ನು ಮನದಟ್ಟು ಮಾಡಿಕೊಂಡಿರುವ ಸೂಫಿಗಳು ತಮ್ಮನ್ನು ಭೇಟಿಯಾಗಲು, ಆಶೀರ್ವಾದ ಪಡೆಯಲು ಬರುವ ಯಾವುದೇ ಜಾತಿ, ಧರ್ಮಗಳವರೇ ಆಗಿರಲಿ, ಅನುಯಾಯಿಗಳ ಮಧ್ಯೆ ಬೇಧ ಮಾಡುವುದಿಲ್ಲ.
ಭಾರತದಂತಹ ವೈವಿಧ್ಯಮಯ ಸಂಸ್ಕೃತಿಯಲ್ಲಿ ಸೂಫಿಗಳ ಆಪ್ತತೆಯ ಪರಂಪರೆ ಎದ್ದುಕಾಣುತ್ತದೆ. ಇಂದಿಗೂ ಅಳಿದುಳಿದ ಇವರ ‘ಖಾನಖಾ’ ಆಶ್ರಮಗಳಾಗಲೀ, ದರ್ಗಾ, ಮಜಾರ್ ಕ್ಷೇತ್ರಗಳಾಗಲಿ ಎಷ್ಟು ಮುಸ್ಲಿಮರಿಗೆ ಸೇರಿದ್ದೋ ಅಷ್ಟೇ ಮುಸ್ಲಿಮೇತರರಿಗೂ ಸೇರಿದ್ದು. ಸೂಫಿ ಅನುಭಾವ ಪರಂಪರೆಯವರು ಬರಿಯ ಇಸ್ಲಾಮ್ ಧರ್ಮದ ಗ್ರಂಥಗಳ ಅಧ್ಯಯನದಲ್ಲಿ ಮಾತ್ರ ತೃಪ್ತಿಪಟ್ಟುಕೊಂಡವರಲ್ಲ.
ವಿಶ್ವದ ಎಲ್ಲ ಭಾಗದ ಸೂಫಿಗಳ ಸಂದೇಶ ಪ್ರವಚನಗಳಲ್ಲಿ ಸ್ಥಳೀಯ ಧರ್ಮಗಳ ಪ್ರಭಾವ ಕಂಡುಬರುತ್ತದೆ. ಇರಾಕ್, ಇರಾನ್, ಸಿರಿಯಾ, ತುರ್ಕಿ, ಈಜಿಪ್ಟ್ ಮುಂತಾದ ಪ್ರದೇಶಗಳ ಸೂಫಿ ಸಂತರ ಮೇಲೆ ಜೊರಾಷ್ಟ್ರಿಯನ್, ಯಹೂದಿ, ಕ್ರೈಸ್ತ ಮುಂತಾದ ಧರ್ಮಗಳ ಪ್ರಭಾವ ಕಂಡುಬರುತ್ತದೆ. ಹಾಗೆ ನೋಡಿದರೆ ಈ ಧರ್ಮದವರನ್ನು ಕುರಾನ್ ಸಂದೇಶಗಳಲ್ಲಿ ‘ಅಹ್ಲುಲ್ ಕಿತಾಬ್’ ಅಥವಾ ‘ಗ್ರಂಥಗಳನ್ನು ಪಾಲಿಸುವ ಜನರು’ ಎಂದು ಕರೆಯಲ್ಪಟ್ಟು, ಕುರಾನ್ ಸಂದೇಶ ಬರಿಯ ಮುಸ್ಲಿಮರಿಗೆ ಮಾತ್ರವಲ್ಲ, ಇಡಿಯ ಮನುಕುಲಕ್ಕೆ ಎಂದು ಹೇಳಿ.
-ಫಕೀರ್ ಅಹ್ಮದ್ ಕಟ್ಪಾಡಿ.
No comments:
Post a Comment