ಬ್ರಹ್ಮತತ್ತ್ವದ ಚಿಂತನೆ ಭಾರತೀಯರಲ್ಲಿ ಅತ್ಯಂತ ಪ್ರಾಚೀನ ಕಾಲದಿಂದ ಬೆಳೆದು ಬಂದಿದೆ. ಪ್ರಪ್ರಥಮ ಪಾಶ್ಚಾತ್ಯ ದಾರ್ಶನಿಕ ಥೈಲೀಜನಿಂದ ಸಾಕ್ರೆಟಿಸ್‍ನವರೆಗೆ ಆಗಿಹೋದ ದಾರ್ಶನಿಕರು ದೇವರು ಮತ್ತು ಜಗತ್ತಿನ ಸೃಷ್ಟಿ, ಅಸ್ತಿತ್ವಗಳ ಕುರಿತಾದ ಚಿಂತನೆಯನ್ನು ಪ್ರಾರಂಭಿಸುವ ಪೂರ್ವದಲ್ಲಿ ವೇದಕಾಲೀನ ಭಾರತೀಯ ಋಷಿಮುನಿಗಳು ಅವುಗಳ ಬಗ್ಗೆ ಸುಸ್ಪಷ್ಟವಾದ ಪರಿಕಲ್ಪನೆ ಹೊಂದಿದ್ದರೆಂಬುದು ಅಧ್ಯಯನದಿಂದ ತಿಳಿದುಬರುವ ಸಂಗತಿಯಾಗಿದೆ.
ಮ್ಯಾಕ್ಸ ಮುಲ್ಲರ್ ಹೇಳುವಂತೆ-ವೇದಕಾಲದಲ್ಲಿಯೇ ಸರ್ವಶಕ್ತನಾದ ಒಬ್ಬನೇ ದೇವನನ್ನು ಅರಿತುಕೊಳ್ಳುವ ಪ್ರಯತ್ನಗಳು ನಡೆದವು. ಇವು ಉದ್ದೇಶಪೂರ್ವಕವಾಗಿ ನಡೆದ ಪ್ರಯತ್ನಗಳಾಗಿರದೇ ಮನೋವಿಕಾಸದ ಸಾಮಾನ್ಯ ಅವಸ್ಥೆಗಳಾಗಿದ್ದವು. ವಿವಿಧತೆಯಲ್ಲಿ ಏಕತೆಯ ಈ ದಾರ್ಶನಿಕ ಚಿಂತನೆಯು ‘ಏಕಂ ಸದ್ವಿಪ್ರಾ ಬಹುಧಾ ವದಂತಿ’ ಎಂಬ ಋಗ್ವೇದ ಸೂಕ್ತದಲ್ಲಿ ಅಭಿವ್ಯಕ್ತಗೊಂಡಿದೆ. ಇಂದ್ರ, ವರುಣ, ಅಗ್ನಿ ಮುಂತಾದ ದೇವತೆಗಳೇ ಸತ್ಯವಲ್ಲ, ಅವುಗಳ ಹಿಂದೆ ಮೂಲಶಕ್ತಿಯೊಂದು ಕಾರ್ಯಮಾಡುತ್ತಿದ್ದು ಅದು ಬೇರೆ ಬೇರೆ ಹೆಸರುಗಳಿಂದ ಕರೆಯಲ್ಪಟ್ಟಿದೆ ಎಂಬುದು ಈ ಸೂಕ್ತದ ಭಾವವಾಗಿದೆ. ಇದರಿಂದ ವೇದಗಳ ಕಾಲದಲ್ಲಿಯೇ ಏಕೇಶ್ವರವಾದದ ತಾರ್ಕಿಕ ಚಿಂತನೆ ಪ್ರಾರಂಭವಾಗಿರುವುದು ನಮ್ಮರಿವಿಗೆ ಬಾರದೇ ಇರದು.
ವೇದಗಳ ಯುಗ ಮುಕ್ತಾಯಗೊಂಡು ಉಪನಿಷತ್ತುಗಳ ಕಾಲಕ್ಕೆ ಬರುವ ವೇಳೆಗಾಗಲೇ ನಮ್ಮ ಋಷಿ-ಮುನಿಗಳು ಬ್ರಹ್ಮ, ಜಗತ್ತು, ಆತ್ಮ ಇವುಗಳ ಕುರಿತಾದ ಸ್ಪಷ್ಟ ಅಭಿಪ್ರಾಯಕ್ಕೆ ಬಂದಿದ್ದರು. ವೇದಕಾಲದ ಯಜ್ಞಾದಿ ಕರ್ಮಗಳಿಗೆ ಶಕ್ತಿಯನ್ನು ದಯಪಾಲಿಸುವ ತತ್ವದ ರೂಪದಲ್ಲಿ ‘ಬ್ರಹ್ಮತತ್ತ್ವ’ವನ್ನು ಸ್ವೀಕರಿಸಿದ್ದಾರೆ. ವೇದಕಾಲದಲ್ಲಿ ಪೂಜೆ ಯಜ್ಞಯಾಗಾದಿಗಳಿಂದ ಆನಂದವನ್ನು ಪಡೆಯುತ್ತಿದ್ದ ಅವರು ಉಪನಿಷತ್ಕಾಲದಲ್ಲಿ ಆತ್ಮಾನಂದವೇ ಪರಮಾನಂದ, ಆತ್ಮಸ್ವರೂಪವೇ ಈ ಆನಂದಲ್ಲಿ ಪರಿಣತಿ ಹೊಂದಿ ಪೂರ್ಣವಿಕಾಸಗೊಳ್ಳುವುದೆಂದು ಪ್ರತಿಪಾದಿಸಿದರು. ಜಲ, ಅಗ್ನಿ ಮುಂತಾದ ಭೂತಗಳ ಕಾರಣತತ್ವವಾಗಿ ಬ್ರಹ್ಮವನ್ನು ಅಂಗೀಕರಿಸಿದರು. ಉಪನಿಷತ್ತುಗಳಲ್ಲಿ ಈ ವಿಷಯವು ಸುಸ್ಪಷ್ಟಗೊಂಡಿದೆ. ಉಪನಿಷತ್ತುಗಳೆಂದರೆ ಆಧ್ಯಾತ್ಮಿಕ ಮತ್ತು ದಾರ್ಶನಿಕ ಚಿಂತನೆಗಳ ಮಾನಸ ಸರೋವರವಿದ್ದಂತೆ.
ಅಲ್ಲಿದಂಲೇ ಅದ್ವೈತ, ವಿಶಿಷ್ಟಾದ್ವೈತ, ಶುದ್ಧಾದ್ವೈತ, ಶಕ್ತಿವಿಶಿಷ್ಟಾದ್ವೈತ ಮುಂತಾದ ಝರಿಗಳು ಹರಿದು ಬಂದಿವೆ. ಇವೆಲ್ಲವೂ ಬ್ರಹ್ಮತತ್ತ್ವವನ್ನೇ ಪರಮತತ್ವದ ರೂಪದಲ್ಲಿ ಸ್ವೀಕರಿಸಿವೆ. ತೈತ್ತಿರೀಯ ಉಪನಿಷತ್ತಿನಲ್ಲಿ -‘ಯತೋ ವಾ ಇಮಾನಿ ಭೂತಾನಿ ಜಾಯಂತೋ ಯೇನ ಜಾತಾನಿ ಜೀವಂತೀ ಯತ್ ಪ್ರಯಂತ್ಯಭಿಸಂವಿಶಂತಿ| ತದ್ವಿಜಿಜ್ಞಾಸಸ್ವ | ತದ್ ಬ್ರಹ್ಮೇತಿ’ ಎಂದು ಹೇಳಿರುವುದರಿಂದ ಬ್ರಹ್ಮವು ಪರಮತತ್ತ್ವವಷ್ಟೇ ಅಲ್ಲ, ಸಮಸ್ತ ಜಗತ್ತಿನ ಉತ್ಪತ್ತಿ ಸ್ಥಿತಿ ಮತ್ತು ಪ್ರಳಯಕ್ಕೂ ಕಾರಣವೆಂಬುದು ಸುಸ್ಪಷ್ಟವಾಗುತ್ತದೆ. ಸೋ„ನ್ವೇಷ್ಟವ್ಯಃ ಸಃ ವಿಜಿಜ್ಞಾಸಿತವ್ಯಃ (ಛಾಂದೋಗ್ಯ) ಅಂದರೆ ದುಃಖದಿಂದ ಕೂಡಿದ ಮನುಷ್ಯನ ಆಶ್ರಯ ಮತ್ತು ಗಂತವ್ಯ ಸ್ಥಾನವೂ ಬ್ರಹ್ಮವಾಗಿದೆ ಎಂದು ಹೇಳಲಾಗಿದೆ. ಹೀಗೆ ಭಾರತೀಯರಲ್ಲಿ ಬ್ರಹ್ಮತತ್ತ್ವದ ಪರಿಕಲ್ಪನೆಯು ಪಾಶ್ಚಾತ್ಯರಿಗಿಂತ ಅತ್ಯಂತ ಪ್ರಾಚೀನವಾಗಿದ್ದು, ಇದು ಯಾವುದೋ ಒಬ್ಬ ವ್ಯಕ್ತಿಯ ಅಭಿವ್ಯಕ್ತಿಯಲ್ಲ. ಅನೇಕ ಋಷಿಮುನಿಗಳು ದೀರ್ಘಕಾಲದವರೆಗೆ ನಡೆಸಿದ ಚಿಂತನೆಯ ಪರಿಣಾಮವಾಗಿ ರೂಪುಗೊಂಡಿದೆ. ಋಷಿ-ಮುನಿಗಳು ಕಂಡುಕೊಂಡ ಈ ದಾರ್ಶನಿಕ ತತ್ತ್ವವು ವೇದಕಾಲದ ಬ್ರಾಹ್ಮಣ ಆರಣ್ಯಕಗಳ ಮೂಲಕ ಹಾಯ್ದು ಉಪನಿಷತ್ತುಗಳಲ್ಲಿ ಪರಿಪೂರ್ಣ ವಿಕಾಸಹೊಂದಿದೆ ಎನ್ನಬಹುದು.
No comments:
Post a Comment