Sunday, October 16, 2016

ಸೂಫಿ ಆಶ್ರಮ - ಖಾನ್ಖಾ

  
ಸೂಫಿಯೊಬ್ಬ  ತನ್ನ ಆಧ್ಯಾತ್ಮಗುರುವಿನಿಂದ ಅಧ್ಯಾತ್ಮ ಸಾಧನೆಯ ಉನ್ನತಮಟ್ಟಕ್ಕೆ ತಲಪುವಷ್ಟು ವಿದ್ಯೆಯನ್ನು ಪಡೆದ ನಂತರ ಗುರುವಿನಿಂದ ಸ್ವತಂತ್ರನಾಗಿ ತನ್ನದೇ ಆದ ಶಿಷ್ಯರನ್ನು ಮತ್ತು ‘ಖಾನಕಾ’ಆಶ್ರಮವನ್ನು ಕಟ್ಟಿಕೊಳ್ಳಲು ಆಶಿರ್ವಾದವನ್ನು ಪಡೆದುಕೊಳ್ಳುತ್ತಾನೆ.  ಗುರುವಿನಿಂದ ತನ್ನ ನಂತರದ ಅಧ್ಯಾತ್ಮ ವಾರೀಸುದಾರಿಕೆಯ ಧೀಕ್ಷೆಯನ್ನು(ಖುಲಫಾ) ಪಡೆದು ಮುಂದೆ ಗುರುವಿನ  ‘ಖಾನಕಾ’(ಆಶ್ರಮ)ವನ್ನು ನಡೆಸುವ ಜವಾಬ್ದಾರಿಯನ್ನು ಕೂಡ ವಹಿಸುತ್ತಾನೆ. ಆಶ್ರಮದಲ್ಲಿ ಪಾಲಿಸಲಾಗುವ ಸಾಮಾನ್ಯ ನಿಯಮಗಳು ಮಾತ್ರವಲ್ಲದೆ ಇತರ ಸಾಂಸ್ಥಿಕ ನಿಯಮಗಳ ಭಾಗಗಳೆಂದು ಪರಿಗಣಿಸಲಾದ ಬಯ್ಯತ್(ಶಿಸ್ತು), ಖಿಲಾಫತ್(ಆಧ್ಯಾತ್ಮಿಕ ವಾರೀಸುದಾರಿಕೆ), ಸಮಾ(ಆರಾಧನಾ ಕೂಟ), ಪೀರ್-ಮುರೀದ್(ಗುರು-ಶಿಷ್ಯ) ಸಂಬಂಧಗಳು, ಆಳುವವರ ಯಾ ಸುಲ್ತಾನರ ಜೊತೆಗಿನ ಸಂಬಂಧದ ವಿಧಾನ ಮತ್ತು ಅವರಿಂದ ಕಾಣಿಕೆ, ಜಹಗೀರು, ಇನಾಮುಗಳನ್ನು ಸ್ವೀಕರಿಸುವಾಗ ಅನುಸರಿಸುವ ನಿಯಮಗಳನ್ನು ಮುಂದುವರಿಸಿಕೊಂಡು ಹೋಗುತ್ತಾನೆ.

ಖ್ವಾಜಾ ಬಂದೇನವಾಜರು ತಮ್ಮ ಗುಲ್‌ಬರ್ಗಾ ಆಶ್ರಮದಲ್ಲಿ ಪಾಲಿಸುತ್ತಿದ್ದ ನಿಯಮಗಳು   ಚಿಸ್ತಿಯಾ ಪರಂಪರೆಗೆ ಮಾತ್ರವಲ್ಲ, ಸೂಫಿ ಪಂಥಕ್ಕೇ ವಿಶಿಷ್ಟವಾದದ್ದು ಹಾಗೂ ಗಮನಾರ್ಹವಾದದ್ದು ಎಂದೆಣಿಸಲ್ಪಟ್ಟಿವೆ.  ಸಾಮಾನ್ಯವಾಗಿ ಚಿಸ್ತಿಯಾ ಪರಂಪರೆಯಲ್ಲಿ ‘ಖಾನಖಾ’ (ಸೂಫಿ ಆಶ್ರಮ)ಎಂಬುದು ಓರ್ವ ಸೂಫಿ ಸಂತನಿಗೆ ಸಂಬಂಧಪಟ್ಟ ಅನುಯಾಯಿಗಳು, ಶಿಷ್ಯರು, ಅತಿಥಿಗಳು ಬಂದು ಸೇರುವ, ವಿಚಾರವಿನಿಮಯ ಮಾಡಿಕೊಳ್ಳುವ, ಪ್ರವಚನಗಳನ್ನು ನಡೆಸುವ ಸ್ಥಳವಾಗಿದ್ದರೆ ಖ್ವಾಜಾ ಬಂದೇನವಾಜರು ಈ ಆಶ್ರಮಕ್ಕೆ ಇನ್ನಷ್ಟು ವಿಶಾಲವಾದ ಆರ್ಥ ಬರುವಂತೆ ಮತ್ತು ಸಾಮಾನ್ಯ ಜನರು ಕೂಡ ಪ್ರವೇಶಿಸುವುದಕ್ಕೆ ಅನುಕೂಲ ಮಾಡಿಕೊಡುವಂತೆ ಊರ ಹತ್ತು ಸಮಸ್ತರ ಸಮುದಾಯ ಕೇಂದ್ರವನ್ನಾಗಿ ಪರಿವರ್ತಿಸಿಕೊಂಡು ಈ ಸ್ಥಳಕ್ಕೆ ‘ಜಮಾತ್ ಖಾನಾ’ ಎಂಬ ಹೆಸರಿಟ್ಟರು.

ಇದರ ಉದ್ದೇಶ ‘ಸೂಫಿಗಳಿಗೆ ಸಮುದಾಯದ ಪರಿಜ್ಞಾನವನ್ನು ಮೂಡಿಸುವುದು ಮತ್ತು ಜನರಲ್ಲಿ ಪ್ರಕೃತಿದತ್ತವಾಗಿ ಹುಟ್ಟಿ ಬೆಳೆದಿರುವ ನೈತಿಕತೆ, ಸಾಂಸ್ಕೃತಿಕ ಚಟುವಟಿಕೆಗಳು, ವಿಚಾರಗಳನ್ನು ತಿಳಿದು ಕೊಳ್ಳುವ, ಉಳಿಸುವ ಬೆಳೆಸುವ’ ತಾಣವನ್ನಾಗಿ ಮಾರ್ಪಡಿಸುವುದಾಗಿತ್ತು. ಅತಿಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿ, ಸತ್ಕರಿಸುವುದು ಚಿಸ್ತಿಯಾ ಪರಂಪರೆಯಲ್ಲಿ ಬೆಳೆದು ಬಂದ ಸಂಪ್ರದಾಯ.

ಜಮಾತ್ ಖಾನಾದಲ್ಲಿ ಶ್ರೀಮಂತರು, ಬಡವರು, ಪಂಡಿತರು, ವಿದ್ವಾಂಸರು, ಜಾತಿ, ಧರ್ಮ ಎಂಬ ಭೇದವಿಲ್ಲದೆ ಪ್ರವೇಶಕ್ಕೆ ಅನುಮತಿ ಇತ್ತು. ಹಿಂದೂ ಸನ್ಯಾಸಿಗಳು, ಯೋಗಿಗಳೊಂದಿಗೆ ಖ್ವಾಜಾರವರು ಚರ್ಚೆ, ವಿಚಾರವಿನಿಮಯದಲ್ಲಿ ದೀರ್ಘಕಾಲ ಮುಳುಗಿರುತ್ತಿದ್ದರು. ತನ್ನ ‘ಜವಾಮಿ ಅಲ್ ಕಿಲಾಮ್’ ಗ್ರಂಥದಲ್ಲಿ ಈ ಹಿಂದೂ ಯೋಗಿಗಳ ಜೊತೆಗಿನ ಖ್ವಾಜಾರ ಚರ್ಚೆ, ವಿಚಾರವಿನಿಮಯ ಮತ್ತು ಅವರ ಸಂಶಯಗಳ ನಿವಾರಣೆ ಮುಂತಾದ ವಿಚಾರಗಳು ದಾಖಲಾಗಿವೆ. ಖ್ವಾಜಾರ ದಿನಚರಿಯನ್ನು ಗಮನಿಸಿದರೆ, ಮುಂಜಾನೆ ಪಝರ್ ನಮಾಜು ಮುಗಿಸಿ ತನ್ನ ಶಿಷ್ಯಂದಿರಿಗೆ ಬೋಧನೆ, ನಂತರ ಪಂಡಿತರು ಅತಿಥಿಗಳೊಂದಿಗೆ ಮಾತುಕತೆ. ಮಧ್ಯಾಹ್ನದ ‘ಜೊಹರ್ ನಮಾಜಿ’ನ ನಂತರ ಸಂಜೆಯ ‘ಅಸರ್ ನಮಾಜ್’ ತನಕ ಕುರಾನ್ ಪಠಣ, ಅಸರ್  ನಮಾಜಿನ ನಂತರ ತನ್ನ ಶಿಷ್ಯರು, ಅನುಯಾಯಿಗಳೊಂದಿಗೆ ಚಿಂತನೆ, ಹೊತ್ತು ಕಂತುವ ಹೊತ್ತಿನ ‘ಮಗ್ರಿಬ್’ ನಮಾಜು, ರಾತ್ರಿ ‘ಇಷಾ’ ನಮಾಜಿನ ನಂತರ ಮಧ್ಯರಾತ್ರಿಯ ತನಕ ಏಕಾಂತದ ಕೋಣೆಯಲ್ಲಿ ಆರಾಧನೆ. ಇವು ಸಾಮಾನ್ಯವಾಗಿ ಆಶ್ರಮದ ಚಟುವಟಿಕೆಗಳೂ ಆಗಿದ್ದವು.
     
ಸೂಫಿ ಆಶ್ರಮಗಳು ಸಮುದಾಯದ ಅಧ್ಯಾತ್ಮ ಕೇಂದ್ರ ಮಾತ್ರವಲ್ಲ, ಅನಾಥರು, ನಿರ್ಗತಿಕರು, ಹಸಿದವರು, ಪ್ರವಾಸಿಗರಿಗೆ ಆಶ್ರಯಧಾಮವೂ ಆಗಿವೆ. ಇದು ದೈನಂದಿನ ಪ್ರವಚನಗಳು, ಕುರಾನ್ ವ್ಯಾಖ್ಯಾನಗಳನ್ನು ಕೇಳಲು ಬರುವ ಎಲ್ಲ ವರ್ಗದವರು ಸಭೆ ಸೇರುವ ಸ್ಥಳ. 

ಖ್ವಾಜಾ ಬಂದೇನವಾಜರು ತನ್ನ ಆಶ್ರಮದಲ್ಲಿ ನಿಲ್ಲುವ ಶಿಷ್ಯರಿಗೆ, ಅನುಯಾಯಿಗಳಿಗೆ ಧಾರ್ಮಿಕ ಸಂಪ್ರದಾಯ ‘ಷರೀಯತ್’ ನಿಯಮಗಳನ್ನು ಪಾಲಿಸುತ್ತೇನೆಂಬ ಶಪಥವನ್ನೂ ಮಾಡಿಸುತ್ತಿದ್ದರು. ತನ್ನ ನಾಲಿಗೆ ಮತ್ತು ಕಣ್ಣುಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕೆಂದು ಕಟ್ಟುನಿಟ್ಟಾಗಿ ಹೇಳುತ್ತಿದ್ದರು. ನಂತರ ತನ್ನ ಎಡ, ಬಲದ ತಲೆ ಕೂದಲಿನ ಕೆಲವು ಕೂದಲನ್ನು ಕತ್ತರಿಸಿ ತಲೆಗೆ ಟೊಪ್ಪಿಯನ್ನು ಧರಿಸಲು ಆದೇಶಿಸುತ್ತಿದ್ದರು. ಈ ಕ್ರಮಗಳನ್ನು ಪಾಲಿಸಿದನಂತರ ವೈಯಕ್ತಿಕವಾಗಿ ಎಷ್ಟು ಸಾಧ್ಯವಿದೆಯೋ ಅಷ್ಟು ಶಕ್ತ್ಯಾನುಸಾರ ‘ಮುಜಾಹಿದಾ’ ಅಥವಾ ಆತ್ಮ ನಿಗ್ರಹಕ್ಕೆ ಅನುಯಾಯಿಗಳು, ಹಿಂಬಾಲಕರು ಒಳಪಡಬೇಕಾಗು
ತ್ತದೆ. ಖ್ವಾಜಾರವರು ಅಧ್ಯಾತ್ಮ ವಾರಸುದಾರರನ್ನು(ಖುಲಫಾ) ಆರಿಸುವಾಗ ಯಾರಿಗೆ ಅರ್ಹತೆ ಇದೆಯೋ ಅವರನ್ನೇ ಹೆಕ್ಕಿತೆಗೆಯುತ್ತಾರೆ.

ಚಿಸ್ತಿಯಾ ಪರಂಪರೆಯಂತೆ ಈ ಆರಿಸುವ ಕೆಲಸವು ಒಂದು ದೈವಿಕ ಪ್ರೇರಣೆಗೆ ಒಳಗಾಗಿ ಮಾಡಬೇಕೇ ಹೊರತೂ ಯಾರು ಖಲೀಫಾ ಪದವಿಯನ್ನು ಅಪೇಕ್ಷಿಸುತ್ತಾರೋ ಅವರಿಗೆ ಕೊಟ್ಟುಬಿಡುವುದಲ್ಲ ಎನ್ನುವ ನಿಯಮವಿದೆ. ಯಾರು ಆ ಪಟ್ಟಕ್ಕೆ ಅರ್ಹರೋ ಅವರು ಅಪೇಕ್ಷಿಸದಿದ್ದರೂ ದೊರಕುತ್ತದೆ.

ಖ್ವಾಜಾರ ಜಮಾತ್‌ಖಾನಾ(ಸಮುದಾಯದ ಹತ್ತು ಸಮಸ್ತರು ಸೇರುವ ವಿಶಾಲ ಕೊಠಡಿ)ದಲ್ಲಿ ಸಭೆ ಸೇರಿ ಖಲೀಫಾನನ್ನು ಆರಿಸುವಾಗ ಕುಟುಂಬದವರ ಮತ್ತು ಹೊರಗಿನವರ ಉಪಸ್ಥಿತಿಯಲ್ಲಿ ಆರಿಸಲಾಗುತ್ತಿತ್ತು. ಅವರ ಮೊದಲ ಖಲೀಫಾ ನೇಮಕಾತಿ 1398ರಲ್ಲಿ ಮೌಲಾನಾ ಅಲಾವುದ್ದೀನ್ ಗ್ವಾಲಿಯರಿಯವರದ್ದಾಗಿತ್ತು.

ನಂತರ ಕೆಲವು ಕುಟುಂಬ ಸಂಬಂಧಿಕರಲ್ಲದ ಶಿಷ್ಯಂದಿರಿಗೆ ಖಲೀಫಾ ಪದವಿಯನ್ನು(ಅಧ್ಯಾತ್ಮ ದೀಕ್ಷೆ) ನೀಡಿದ್ದರು. ಇವರೆಲ್ಲರೂ ಪ್ರತಿಷ್ಠಿತ ಕುಟುಂಬದವರೂ ವಿದ್ಯಾವಂತರೂ ಆಗಿದ್ದು ನ್ಯಾಯಶಾಸ್ತ್ರ ಪಂಡಿತರಾಗಿದ್ದರೆನ್ನಲಾಗುತ್ತದೆ. ಕುಟುಂಬದ ಸದಸ್ಯರ ಪೈಕಿ ಖ್ವಾಜಾರು ಖಲೀಫಾ ಪದವಿಯನ್ನು ನೀಡಿದ್ದರಲ್ಲಿ ಅವರ ಮಗ ಸಯ್ಯದ್ ಅಕ್ಬರ್ ಹುಸೈನಿ ಮೊದಲಿಗರಾಗಿದ್ದರು. ಇವರಿಗೆ ನೀಡಲು ತನ್ನ ಮಗನೆಂಬ ಕಾರಣಕ್ಕೆ ಮಾತ್ರವಾಗಿರದೆ, ಸಯ್ಯದ್ ಅಕ್ಬರ್ ಹುಸೈನಿ ಸೂಫಿ ಪಂಡಿತರು ಮಾತ್ರವಲ್ಲ ಸೂಫಿ ಅಧ್ಯಾತ್ಮ ರಹಸ್ಯಗಳ ಆಳವಾದ ಜ್ಞಾನವನ್ನು ಹೊಂದಿದ್ದರು ಎಂಬ ಕಾರಣಕ್ಕೂ ಆಗಿತ್ತು.

ತನ್ನ ಸಾವಿನ ಕೆಲವು ತಿಂಗಳ ಮೊದಲು ಹಲವು ಶಿಷ್ಯರಿಗೆ ಖ್ವಾಜಾರವರು ಖಲೀಫಾ ಪದವಿಯನ್ನು ನೀಡಿದ್ದರು. ಅವರಲ್ಲಿ ಮುಖ್ಯವಾಗಿ ಅವರ ಇನ್ನೊಬ್ಬ ಮಗ ಸಯ್ಯದ್ ಅಸ್ಘರ್ ಹುಸೈನಿ ಮತ್ತು ಮೊಮ್ಮಗ ಸಯ್ಯದ್ ಷಾ ಶಫೀರುಲ್ಲಾ ಹುಸೈನಿಯಾಗಿದ್ದರು. ಚಿಸ್ತಿಯಾ ಪರಂಪರೆಯ ಸೂಫಿ ಸಂತರ ಸಂಪ್ರದಾಯಕ್ಕೆ ವಿರುದ್ಧವಾಗಿ ಖ್ವಾಜಾರವರು ತನ್ನ ವಂಶದವರನ್ನು ಖಲೀಫಾರನ್ನಾಗಿ ನೇಮಿಸಿದ್ದರಿಂದ ಸೂಫಿಗಳ ವಲಯದಲ್ಲಿ ಹೆಚ್ಚು ಟೀಕೆಗೂ ಗುರಿಯಾಗಿದ್ದರು.

-ಫಕೀರ್ ಅಹ್ಮದ್ ಕಟ್ಪಾಡಿ

No comments:

Post a Comment