Friday, April 28, 2017

ಸೌಹಾರ್ದದ ಬೀಡು ಬೈಲುಪೇಟೆ.

ಅದೊಂದು ದಿನ ಮಂಗಳೂರಿನ ಬೈಲು ಪೇಟೆ ಸೂಫಿ  ಸಂತರ ದರ್ಗಾ ಉರೂಸ್ ಕಾರ್ಯಕ್ರಮಕ್ಕೆ ಗೆಳೆಯರ ಜೊತೆ ಹೋಗಿದ್ದೆ. ಈ ದರ್ಗಾದಲ್ಲಿ  ಶೈಖ್ ಸೈಯದ್ ಮೆಹಮೂದ್  ಜಲಾಲುದ್ದೀನ್ ಮತ್ತು ಅಶೈಖ್  ಸೈಯದ್ ಹಯಾತ್ ವಲಿವುಲ್ಲಾಹಿ ಸಮಾಧಿ ಇದೆ . ಈ ಸಂತ ಮೂಲತಃ  ಬಾಗ್ದಾದ್ ನಿಂದ ಬಂದು ಇಲ್ಲಿ ನೆಲೆನಿಂತವರಂತೆ. ಸ್ಥಳೀಯರೊಂದಿಗೆ ಪ್ರೀತಿ ವಿಶ್ವಾಸದಿಂದ ಬೆರೆತು ಅವ್ರೆಲ್ಲರ ಮನಗೆದ್ದ ಸೂಫಿ ಸಂತ ಕೊನೆ ಉಸಿರೆಳೆದ ನಂತರ ಬೈಲು ಪೇಟೆಯಲ್ಲೇ ಅವರನ್ನು ಸಮಾಧಿ ಮಾಡಲಾಯಿತು.  ನಂತರ ಗ್ರಾಮಸ್ಥರ ಪಾಲಿಗೆ ಸಂತರ ಈ ಸಮಾಧಿ ಪವಿತ್ರ ಸ್ಥಳವಾಗಿ ಮಾರ್ಪಟ್ಟಿದೆ.

ಮಂಗಳೂರಿನಂತಹಾ ಕೋಮುಸೂಕ್ಮ ಪ್ರದೇಶದಲ್ಲಿ ಈ ದರ್ಗಾಕ್ಕೆ ಮುಸ್ಲಿಮರ ಜೊತೆಗೆ  ಹಿಂದೂಗಳೂ ಭೇಟಿ ನೀಡ್ತಾರೆ.  ಗ್ರಾಮದ  ಹಿಂದೂ ಕೃಷಿಕರು ತಾವು ಬೆಳೆದ ಮೊದಲ  ಬೆಳೆಯನ್ನು ಸಂತರ ದರ್ಗಾಕ್ಕೆ ತಂದು ಭಕ್ತಿಯಿಂದ ಅರ್ಪಿಸುತ್ತಾರೆ. ದರ್ಗಾದಲ್ಲಿ ಪೂಜೆ ಸಲ್ಲಿಸಿ ನಂತ್ರ  ತಾವು  ಬೆಳೆದ ಬೆಳೆಯನ್ನ ಮಾರಾಟ ಮಾಡುತ್ತಾರೆ. ಬೈಲು ಪೇಟೆ ಗ್ರಾಮದ ಹಿಂದೂಗಳು ಇಲ್ಲಿರುವ ಸೂಫಿ ಸಂತರನ್ನು ಶೇಖರ್ ಪಂಡಿತೆರ್ ಎಂದು ಕರೆಯುತ್ತಾರೆ. ಪ್ರತಿ ವಾರ ದರ್ಗಾಕ್ಕೆ ಬೆಲ್ಲ, ಅಕ್ಕಿ ಕೊಡುವ ಪದ್ದತಿಯನ್ನು ಸ್ಥಳೀಯ ಹಿಂದೂಗಳು ಪಾಲಿಸಿಕೊಂಡು ಬರುತ್ತಿದ್ದಾರೆ. 

ಮೂರು  ವರ್ಷಕ್ಕೊಮ್ಮೆ ಈ ದರ್ಗಾದ ಉರೂಸ್ ನಡೆಯುತ್ತೆ. ಈ ಬಾರಿಯ ಉರೂಸ್ ನಲ್ಲೂ ಸಾಕಷ್ಟು ಸಂಖ್ಯೆಯ ಹಿಂದೂ ಧರ್ಮೀಯರು ಇಲ್ಲಿ ನೆರೆದಿದ್ದರು. ಉರೂಸ್ ಸಮಾರಂಭಕ್ಕೆ ಅಗತ್ಯವಿರೋ ಹೊರೆ ಕಾಣಿಕೆಯನ್ನೂ ನೀಡಿದ್ದಾರೆ. ಅವ್ರ ಜಮೀನಿನಲ್ಲೇ ಊಟೋಪಚಾರ ಮಾಡೋದಕ್ಕೂ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಧರ್ಮದ ಹೆಸ್ರಲ್ಲಿ ಕಚ್ಚಾಡೋ ಕರಾವಳಿಯ ವಾತಾವರಣದಲ್ಲಿ ಕಾಣ ಸಿಗೋ ಇಂತಹಾ ಸೌಹಾರ್ದದ ದೃಶ್ಯಗಳು ಖುಷಿಕೊಡುತ್ತೆ. ಈ ಹಿಂದೊಮ್ಮೆ ಈ ದರ್ಗಾಕ್ಕೆ ಭೇಟಿನೀಡಿದ್ದಾಗ ಸ್ಥಳೀಯರಿಂದ ಒಂದು ಸೌಹಾರ್ದದ ಕಥೆ ಕೇಳಿದ್ದೇನೆ.  ಬೈಲು ಪೇಟೆಯ ಜುಮ್ಮಾ ಮಸೀದಿಯಲ್ಲಿ  ಧರ್ಮ ಗುರುವೊಬ್ಬರಿದ್ದರಂತೆ. ದಿನಂಪ್ರತಿ ಐದು  ಹೊತ್ತಿನ ಅಜಾನ್ (ನಮಾಜಿಗೆ ಕರೆಯುವ )  ಕರೆಯನ್ನು ಇವರೇ  ನೀಡುತ್ತಿದ್ದರು. ಮಸೀದಿಯ ಅಲ್ಪ ಸನಿಹದಲ್ಲೇ ಜುಮಾದಿ ದೈವದ ಭಂಡಾರದ  ಮನೆಯಿದೆ. ಪ್ರತಿನಿತ್ಯ ಮಸೀದಿಯಯಲ್ಲಿ ಕೊಡುತ್ತಿರುವ  ಆಜಾನ್  ಕರೆ  ಪಕ್ಕದ  ಜುಮಾದಿ ದೈವದ   ಬಂಡಾರದ  ಮನೆಯ ಪೂಜಾರಿಗೂ  ಕೇಳುತಿತ್ತು. ಆದರೆ, ರಂಜಾನ್ ತಿಂಗಳ ಒಂದು ದಿನ ಮಸೀದಿಯ ಧರ್ಮಗುರು ಕೂಗುತ್ತಿದ್ದ ಆಜಾನ್ ಕರೆ ಎಂದಿನಂತಿರಲಿಲ್ಲ. ಅವರ ಧ್ವನಿ ತುಂಬಾನೇ ಕ್ಷೀಣವಾಗಿತ್ತು. ಇದರಿಂದ  ವಿಚಲಿತರಾದ ಜುಮಾದಿ ದೈವದ ಭಂಡಾರ ಮನೆಯ ಪುಜಾರಿ ಮಸೀದಿಗೆ ಹೋಗಿ ಧರ್ಮಗುರುವನ್ನು ವಿಚಾರಿಸಿದಾಗ, ಧರ್ಮಗುರು ರಂಜಾನ್ ಉಪವಾಸದಲ್ಲಿದ್ದು  ವೃತ ತೊರೆಯಲು ಅವರ ಬಳಿ  ಆಹಾರವಿಲ್ಲ ಎಂಬ ಸಂಗತಿ ತಿಳಿದುಬರುತ್ತದೆ. ಕೂಡಲೇ ಭಂಡಾರದ ಮನೆಗೆ ಬಂದ ಪೂಜಾರಿ ಜುಮಾದಿ ದೈವದ ಚಿನ್ನದ ನಾಲಗೆಯನ್ನು ಕೊಯ್ದು ಧರ್ಮಗುರುವಿಗೆ ನೀಡಿ ಅದನ್ನು ಸ್ಥಳೀಯ ದೋಂದಜ ಗುತ್ತಿನ ಮನೆಗೆ ಮಾರಿ ಉಪವಾಸ ತೊರೆಯಲು ಬೇಕಾದ ಆಹಾರ ಪದಾರ್ಥಗಳನ್ನು ತಂದುಕೊಳ್ಳುವಂತೆ ಸೂಚಿಸಿದರು. ನಂತರ ಊರ ಜನರಿಗೆ ಜುಮಾದಿ ದೈವದ ಚಿನ್ನದ  ನಾಲಗೆ ಕಾಣೆಯಾಗಿರುವ  ಸುದ್ದಿ ತಿಳಿಯಿತು.ಈ ಕುರಿತಾಗಿ ಭಂಡಾರದ ಮನೆಯ ಪೂಜಾರಿಯ  ಬಳಿ ಗ್ರಾಮಸ್ಥರು ವಿಚಾರಿಸಿದಾಗಲೂ ಪೂಜಾರಿಗೆ ಏನೂ  ತಿಳಿದಿರಲಿಲ್ಲ. ಕೆಲ ಹೊತ್ತಿನಲ್ಲೇ ಜುಮಾದಿ ದೈವ ಪೂಜಾರಿಗೆ ದರ್ಶನದಲ್ಲಿ  ಬಂದು ತಾನೇ ಮಸೀದಿಯ ಧರ್ಮಗುರುಗಳಿಗೆ ಚಿನ್ನದ ನಾಲಗೆಯನ್ನ  ನೀಡಿದ್ದೇನೆಂದು ತಿಳಿಸಿತು. ಅಂದು ಧರ್ಮಗುರುಗಳಿಗೆ ಚಿನ್ನದ ನಾಲಗೆಯನ್ನು ಕೊಯ್ದು ಕೊಟ್ಟಿದ್ದು ಪೂಜಾರಿಯಲ್ಲ  ಬದಲಾಗಿ ಪುಜಾರಿಯ ರೂಪವನ್ನು ತಾಳಿದ ಜುಮಾದಿ ದೈವ ಎಂಬುವುದು  ಇಲ್ಲಿನ ಎರಡೂ  ಸಮುದಾಯದ  ಗ್ರಾಮಸ್ಥರ ನಂಬಿಕೆ. ಇಂಥಹಾ ಹತ್ತಾರು ಧರ್ಮಮೀರಿದ ಮನುಷ್ಯ ಪ್ರೀತಿಯ ಕಥೆಗಳು ಸೂಫಿ ದರ್ಗಾಗಳಲ್ಲಿ ಸಾಮಾನ್ಯ.

ಅಪರೂಪವಾಗ್ತಿರೋ ಇಂತಹಾ  ಮತ ಸೌಹಾರ್ದತೆಯನ್ನು ಕಾಪಾಡಿಕೊಂಡು ಬಂದಿರುವ ಈ ಬೇರುಗಳನ್ನು ಬಲಗೊಳಿಸಿ ನಮ್ಮ ಮುಂದಿನ ಪೀಳಿಗೆಗೂ ನಾವು ಉಳಿಸಿಕೊಡಬೇಕಿದೆ.
-ಇರ್ಷಾದ್ ಉಪ್ಪಿನಂಗಡಿ.

No comments:

Post a Comment