ಇವರ ಪೂರ್ಣ ಹೆಸರು ಅಬುಲ್ ಅಬ್ಬಾಸ್ ಅಹ್ಮದ್ ಇಬ್ನ್ ಮುಹಮ್ಮದ್ ಇಬ್ನ್ ಸಹ್ಲ್ ಇಬ್ನ್ ಅತಾ ಅಲ್ ಅದಮಿ. ಇವರು ಖ್ಯಾತ ಸಂತ ಅಲ್ ಜುನೈದ್‌ರವರ ಶಿಷ್ಯ. ಇವರು ಅನುಭಾವಿ ಕವಿಯಾಗಿ ಅನೇಕ ಕವನಗಳ ಕತೃ ಆಗಿ ಬಗ್ದಾದಿನ ಹೆಸರಾಂತ ಅನುಭಾವಿ ಮಂಡಳಿಯ ಮುಖ್ಯ ಸದಸ್ಯನಾಗಿಯೂ ಹೆಸರುವಾಸಿಯಾದವರು.
ಇಬ್ನ್ ಅತಾ ರವರು ಪ್ರವಚನ ಮಾಡುತ್ತಿದ್ದಲ್ಲಿಗೆ ಜನರ ಗುಂಪೊಂದು ಬಂತು. ಅವರು ನೆಲವನ್ನು ನೋಡುವಾಗ ಎಲ್ಲ ಒದ್ದೆಯಾಗಿತ್ತು.
“ಇದ್ಯಾಕೆ ಹೀಗೆ? ಏನಾಯಿತು?”ಎಂದು ಅವರು ಕೇಳಿದರು.
“ಒಂದು ವಿಶೇಷ ಅನುಭಾವಿ ಪ್ರಜ್ಞೆ ನನ್ನಲ್ಲಿ ಉಂಟಾಯಿತು. ಅದೇಕೋ ನನಗೆ ನನ್ನ ಕಳೆದ ಪಾಪದ ಬಗ್ಗೆ ನೆನೆದು ಪಶ್ಚಾತ್ತಾಪ ಪಟ್ಟೆ. ಪ್ರವಚನ ಮಾಡುವಾಗ ನಿಂತಲ್ಲಿ ನಿಲ್ಲದೆ ಅಚೀಚೆ ಸುತ್ತು ಬಂದು ಮಾತಾಡುತ್ತಿದ್ದೆ, ನನ್ನ ಕಣ್ಣಿ ನಿಂದ ಇಳಿದ ಕಣ್ಣೀರು ನೆಲವನ್ನು ಒದ್ದೆ ಮಾಡಿತು.” ಎಂದರು ಇಬ್ನ್ ಅತಾ.
“ಅಂತಹ ಘೋರ ತಪ್ಪನ್ನೇನು ಮಾಡಿದ್ದೀರಿ ?” ಎಂದು ಆಗಂತುಕರು ಕೇಳಿದರು.
” ನಾನು ಬಾಲಕನಾಗಿದ್ದಾಗ ನಾನು ಬೇರೆಯವರ ಬಾತು ಕೋಳಿಯನ್ನು ಹಿಡಿದಿದ್ದೆ. ಈವತ್ತು ಪಶ್ಚಾತ್ತಾಪದ ಬಗ್ಗೆ ಪ್ರವಚನ ಮಾಡುತ್ತಿರುವಾಗ ಅದರ ನೆನಪಾಯಿತು. ನಾನು ಅದರ ಯಜಮಾನನಿಗೆ ಒಂದು ಸಾವಿರ ದಿನಾರುಗಳನ್ನು ಕೊಟ್ಟೆ. ಆದರೂ ನನ್ನ ಅಂತರಾತ್ಮಕ್ಕೆ ಸಮಾಧಾನವಾಗಲಿಲ್ಲ. ಈ ತಪ್ಪಿಗೆ ನನಗೆ ದೇವರು ಎಂತಹ ಶಿಕ್ಷೆ ಕೊಡುತ್ತಾನೋ ಎಂದು ಭಯ ಆವರಿಸಿ ನಾನು ಅಳಲು ಶುರು ಮಾಡಿದೆ.” ಎಂದರು ಇಬ್ನ್ ಅತಾ.
ಇಬ್ನ್ ಅತಾರವರು ಒಮ್ಮೆ ಮಸೀದಿಯಲ್ಲಿ ಕೂತಿದ್ದಾಗ “ನೀವು ದಿನವೂ ಎಷ್ಟು ಕುರಾನ್‌ನ ಭಾಗಗಳನ್ನು ಓದುತ್ತೀರಿ?” ಜನ ಕೇಳಿದರು.
“ಹಿಂದೆ ಇಪ್ಪತ್ತನಾಲ್ಕು ಗಂಟೆಗಳಲ್ಲಿ ಎರಡು ಬಾರಿ ಕುರಾನನ್ನು ಓದಿ ಮುಗಿಸುತ್ತಿದ್ದೆ, ಕಳೆದ ಹದಿನಾಲ್ಕು ವರ್ಷಗಳಿಂದ ಹೀಗೆ ನಾನು ಓದುತ್ತಿದ್ದೆ. ಈಗ ನಾನು ಸೂರಃ ಎಂಟು, ಅಲ್ ಅನ್‌ಫಾಲ್ ಓದಿ ಮುಗಿಸಿದ್ದೇನೆ.” ಎಂದರು,
ತನ್ನ ಸುಂದರರಾದ ಹತ್ತು ಗಂಡು ಮಕ್ಕಳನ್ನು ಕರೆದುಕೊಂಡು ಒಮ್ಮೆ ಇಬ್ನ್ ಅತಾರವರು ಪ್ರಯಾಣದಲ್ಲಿದ್ದರು. ದಾರಿಯಲ್ಲಿ ದರೋಡೆಕೋರರು ಸುತ್ತುವರಿದರು. ಇವರಲ್ಲಿ ಒಂದು ಚಿಕ್ಕಾಸೂ ಇರಲಿಲ್ಲ. ಸುಮ್ಮನೆ ಬಿಟ್ಟು ಬಿಡುವ ಬದಲಿಗೆ, ವಿನಾಕಾರಣ ಒಬ್ಬೊಬ್ಬರದ್ದೇ ತಲೆಯನ್ನು ದರೋಡೆಕೋರರು ಕಡಿಯ ತೊಡಗಿದರು, ಇಬ್ನ್ ಅತಾರವರು ಸುಮ್ಮನಿದ್ದರು. ತನ್ನ ಮಕ್ಕಳ ತಲೆಯನ್ನು ದರೋಡೆಕೋರರು ಕಡಿಯುತ್ತಿರುವಾಗ ಇಬ್ನ್ ಅತಾರವರು ತಿರುಗಿ ನಿಂತು ದೇವರನ್ನು ನೆನೆಯುತ್ತಲೇ ಗಹಗಹಿಸಿ ನಗ ತೊಡಗಿದರು. ಒಂಭತ್ತು ಮಕ್ಕಳ ತಲೆಯನ್ನು ಕಡಿದಿದ್ದರು. ಹತ್ತನೆಯವನನ್ನು ಹಿಡಿದು ಕೊಲ್ಲಲೆಂದು ನಿಂತಿದ್ದರು.
ಅವರ ಹತ್ತನೆಯ ಮಗ ತಂದೆ ನಗುತ್ತಿರುವುದು ಕಂಡು, “ನೀನು ಎಂತಹ ಕಟುಕ ತಂದೆ! ನಿನ್ನ ಒಂಭತ್ತು ಮಕ್ಕಳನ್ನು ಹಿಡಿದು ಈ ಕ್ರೂರಿಗಳು ಕೊಲ್ಲುತ್ತಿರುವಾಗ ಏನೂ ಮಾತಾಡದೆ ನೀನು ನಗುತ್ತಿದ್ದಿಯಲ್ಲಾ?” ಎಂದ.
“ನಗುತ್ತಿರುವುದು ನಿನ್ನ ತಂದೆಯ ಆತ್ಮ. ಅವನು ನೋಡು, ಎಲ್ಲವನ್ನೂ ಮಾಡಿಸುವವನು, ಅವನನ್ನು ವಿರೋಧಿಸಿ ಯಾರೂ ಏನನ್ನೂ ಹೇಳಲಾರರು. ಎಲ್ಲವನ್ನೂ ಅವನು ನೋಡುತ್ತಿದ್ದಾನೆ, ಎಲ್ಲ ಗೊತ್ತಿದೆ ಅವನಿಗೆ, ಅವನಿಗೆ ಅಪಾರವಾದ ಶಕ್ತಿ ಇದೆ, ಅವನು ಮನಸ್ಸು ಮಾಡಿದರೆ ಎಲ್ಲರನ್ನೂ ಬದುಕಿಸಬಲ್ಲ.” ಎಂದರು ಇಬ್ನ್ ಅತಾ.
ಹತ್ತನೆಯ ಮಗನನ್ನು ಕೊಲ್ಲಲು ಹಿಡಿದ ಕೊಲೆಗಡುಕ ಈ ಮಾತುಗಳನ್ನು ಕೇಳಿ ಉದ್ವೇಗಗೊಂಡ. “ಅಯ್ಯೋ ಮುದುಕಾ, ನೀನು ಇದನ್ನು ಮೊದಲು ಹೇಳಿದ್ದರೆ! ನಿನ್ನ ಯಾವ ಮಗನೂ ಕೊಲೆಯಾಗುತ್ತಿಲ್ಲವಲ್ಲೋ….!” ಎಂದು ಪರಿತಪಿಸಿದ.
*****
ಒಮ್ಮೆ ಕ್ರೈಸ್ತ ಧರ್ಮಶಾಸ್ತ್ರ ಪಂಡಿತರು ಇಬ್ನ್ ಅತಾರವರ ಬಳಿಗೆ ಬಂದರು. “ಅದು ಹೇಗೆ ನೀವು ಸೂಫಿಗಳು, ಸರಳವಾದ ಜನರ ಆಡು ಮಾತನ್ನು ಬಿಟ್ಟು, ವಿಚಿತ್ರವಾದ ಶಬ್ಧಗಳನ್ನು ಕಂಡು ಹಿಡಿದು, ಮಾತಿನಲ್ಲಿ ಪ್ರಯೋಗಿಸಿ ಕೇಳುವವರಿಗೆ ಕಸಿವಿಸಿಯಾಗುವಂತೆ ಮಾಡುತ್ತಿದ್ದೀರಿ? ಇದರಿಂದ ಎರಡು ಸಾಧ್ಯತೆಗಳನ್ನು ನೀವು ಪ್ರಯತ್ನಿಸುತ್ತಿದ್ದೀರಿ ಎಂದಾಗುತ್ತದೆ. ಒಂದನೇಯದ್ದು ನೀವು ಏನನ್ನೋ ಮರೆಮಾಚುತ್ತಿರುತ್ತೀರಿ. ಮರೆಮಾಚುವಿಕೆಯು ಸತ್ಯಕ್ಕೆ ತದ್ವಿರುದ್ಧವಾದದ್ದು. ಅಂದರೆ ನಿಮ್ಮ ಬೋಧನೆಗಳೆಲ್ಲವೂ ಸುಳ್ಳು ಎಂಬುದು ಸ್ಪಷ್ಟವಾಯಿತು. ಅಥವಾ ಇನ್ನೊಂದು ನಿಮ್ಮ ಬೋಧನೆಯಲ್ಲಿ ಅದ್ಯಾವುದೋ ನ್ಯೂನತೆ ಇದೆ, ಅದನ್ನು ನೀವು ಸಾರ್ವಜನಿಕವಾಗಿ ಮಾತಾಡುವಾಗ ಬಹಿರಂಗ ಗೊಳಿಸದೆ ರಹಸ್ಯವಾಗಿಟ್ಟುಕೊಳ್ಳುತ್ತಿದ್ದೀರಿ.” ಎಂದು ನೇರವಾಗಿಯೇ ಟೀಕಿಸಿ ಕೇಳಿದರು.
“ನಾವು ಹೀಗೆ ಮಾಡುತ್ತಿರುವುದು ಯಾಕೆಂದರೆ ಆ ರಹಸ್ಯ ನಮಗೆ ಅಮೂಲ್ಯವಾದದ್ದು. ನಾವು ಏನನ್ನು ಬದುಕಿನಲ್ಲಿ ಅಳವಡಿಸಿಕೊಂಡು ಪ್ರತಿಪಾದಿಸುತ್ತೇವೋ ಆ ಮೌಲ್ಯಗಳು ನಮಗೆ ಅತ್ಯಂತ ಅಮೂಲ್ಯವಾದದ್ದು. ಈ ರಹಸ್ಯವು ನಾವು ಸೂಫಿಗಳಿಗಲ್ಲದೆ ಇತರರು ಯಾರಿಗೂ ತಿಳಿಯಲಾರದು. ನಾವು ಸರಳವಾದ ಮಾತುಗಳನ್ನು ಬಳಸುವುದಿಲ್ಲ, ಜನರು ಕೇಳಿದಂತೆ ಯೋಚಿಸಲು ಹಚ್ಚುತ್ತೇವೆ. ಹಾಗಾಗಿ ನಾವು ಹೊಸ ಶಬ್ಧಗಳನ್ನು ಬಳಸುತ್ತೇವೆ.” ಎಂದು ಉತ್ತರಿಸಿದರು ಇಬ್ನ್ ಅತಾ.
*******
ಇಬ್ನ್ ಅತಾರವರು ಪಾಷಂಡಿ ಅಥವಾ ಸಂಪ್ರದಾಯ ವಿರೋಧಿ ಎಂದು ಒಮ್ಮೆ ಬಹಿರಂಗವಾಗಿ ಆರೋಪಿಸಲಾಯಿತು. ಅಲ್ಲಿನ ಖಲೀಫಾರವರ ವಜೀರ್ (ಪ್ರಧಾನ ಮಂತ್ರಿ) ಅಲಿ ಇಬ್ನ್ ಈಸಾ, ಇಬ್ನ್ ಅತಾರವರನ್ನು ಮೂದಲಿಸಿ, ತನ್ನ ಮುಂದೆ ಹಾಜರಾಗುವಂತೆ ಆಜ್ಞಾಪಿಸಿದ. ಅದಕ್ಕೆ ಇಬ್ನ್ ಅತಾರವರು ಅತ್ಯಂತ ಖಾರವಾಗಿಯೇ ಪ್ರತಿಕ್ರಿಯಿಸಿದರು. ಇದು ವಜೀರನನ್ನು ಇನ್ನಷ್ಟು ಕ್ರೋಧಕ್ಕೊಳಗಾಗುವಂತೆ ಮಾಡಿತು. ಅವನು ತನ್ನ ಆಳುಗಳನ್ನು ಕರೆದು ಇಬ್ನ್ ಅತಾರವರ ಕಾಲಿನ ಮೆಟ್ಟುಗಳನ್ನು ಕಳಚಿ ಅವರ ತಲೆಯ ಮೇಲೆ ಸಾಯುವಂತೆ ಹೊಡೆಯಲು ಆಜ್ಞಾಪಿಸಿದ. ಈ ಕ್ರೂರ ಶಿಕ್ಷೆಯನ್ನು ಅನುಭವಿಸುವಾಗ ಮಧ್ಯದಲ್ಲಿ ಇಬ್ನ್ ಅತಾರವರು ‘ದೇವರು ಇವನ ಕೈ ಕಾಲುಗಳನ್ನು ತುಂಡರಿಸಿ ಹಾಕಲಿ!’ ಎಂದು ಮನದಲ್ಲಿ ಹಾರೈಸಿದರು.
ಸ್ವಲ್ಪವೇ ಸಮಯದಲ್ಲಿ ಯಾವುದೋ ಗಹನವಾದ ವಿಷಯಕ್ಕೆ ಸಂಬಂಧಿಸಿದಂತೆ ಖಲೀಫರು ತನ್ನ ವಜೀರ ಅಲಿ ಇಬ್ನ್ ಈಸಾ ರವರ ಮೇಲೆ ಕೋಪಗೊಂಡು ಅವನ ಕೈ ಕಾಲುಗಳನ್ನು ಕಡಿದು ಹಾಕಿದರು.
ಯಾವ ಸಂಕಷ್ಟ ಬಂದರೂ ಕೂಡ ಬದ್ದುವಾ ಅಥವಾ ಶಾಪವನ್ನು ಹಾಕುವುದು ಶೂಫಿ ಸಂತರ ಒಳ್ಳೆಯ ನಡವಳಿಕೆಯೆಂದು ಪರಿಗಣಿಸಲ್ಪಟ್ಟಿಲ್ಲವಾದ್ದರಿಂದ ಮತ್ತು ತನ್ನ ಬದುಕಿನುದ್ದಕ್ಕೂ ಯಾವುದೇ ಸಂದರ್ಭದಲ್ಲಿ ತಾಳ್ಮೆಯನ್ನು ಕಳಕೊಳ್ಳದ, ಸೂಫಿ ಸಂತರಲ್ಲಿ ಶ್ರೇಷ್ಠ ಪಂಡಿತರೆಂದು ಪರಿಗಣಿಸಲ್ಪಟ್ಟ ಈಬ್ನ್ ಅತಾರವರ ಅನಿರೀಕ್ಷಿತ ನಡವಳಿಕೆಯು ಸೂಫಿ ವಲಯದಲ್ಲಿ ದೊಡ್ಡ ಗೊಂದಲವನ್ನುಂಟುಮಾಡಿತು. ಈ ಘಟನೆಯ ಬಗ್ಗೆ ಸೂಫಿಗಳ ಗುಂಪಿನಲ್ಲಿ ಬಹಳಷ್ಟು ಖಾರವಾಗಿಯೇ ಚರ್ಚೆಗಳು ನಡೆದವು. ಇಬ್ನ್ ಅತಾರವರು ಇಂತಹ ಬದ್ದುವಾ ಮಾಡಬಾರದಾಗಿತ್ತೆಂದು ಕೆಲವರು ಅಭಿಪ್ರಾಯ ಪಟ್ಟರು. “ತಮ್ಮ ಪ್ರಾರ್ಥನೆಯ ಮೂಲಕ ಅವನನ್ನು ಸರಿದಾರಿಗೆ ತರಿಸಲು ಶಕ್ತರಾದವರು ಇಂತಹ ಶಾಪವನ್ನು ಹಾಕ ಬಾರದಾಗಿತ್ತು, ನೀವು ಅವನನ್ನು ಆಶೀರ್ವದಿಸ ಬೇಕಾಗಿತ್ತು.” ಎಂದು ಕೆಲವರು ಇಬ್ನ್ ಅತಾರವರಿಗೆ ಖಾರವಾಗಿ ಪ್ರತಿಕ್ರಿಯಿಸಿದರು. ಇನ್ನು ಕೆಲವರು, “ಅವನು ನೀಚನಾಗಿದ್ದ, ಮತ್ತು ಪ್ರಜೆಗಳನ್ನು ರಕ್ಷಿಸುವ ಬದಲು ಶಿಕ್ಷಿಸುತ್ತಿದ್ದ. ಯಾವತ್ತೂ ಪ್ರಶಾಂತರಾಗಿಯೇ ಇರುತ್ತಿದ್ದ ಇಬ್ನ್ ಅತಾರಂತವರು ಇಷ್ಟು ಕಠೋರವಾಗಲು ಅವನು ತೋರಿದ ಕ್ರೌರ್ಯವೇ ಕಾರಣ” ಎಂದು ಅಭಿಪ್ರಾಯಪಟ್ಟರು.
ಇನ್ನು ಕೆಲವು ಸೂಫಿ ಪಂಡಿತರು ಅಭಿಪ್ರಾಯ ಪಡುವಂತೆ, ಇಬ್ನ್ ಅತಾರವರು ಗಂಭೀರವಾದ ಅಂತರ್ ದೃಷ್ಟಿಯುಳ್ಳ ಸಂತ. ಇಂತಹ ಕ್ರೂರಿಯಾದ ವಜೀರನಿಗೆ ಭವಿಷ್ಯದಲ್ಲಿ ಏನಾಗಲಿದೆಯೆನ್ನುವುದು ಅವರಿಗೆ ತಿಳಿದೇ ಇತ್ತು. ದೇವರು ಅವನಿಗೆ ಯಾವ ಶಿಕ್ಷೆಯನ್ನು ಕೊಡಲು ಬಯಸಿದ್ದನೋ ಅದನ್ನು ಇಬ್ನ್ ಅತಾರವರ ಮೂಲಕ ನೀಡಿದ. ದೇವರ ಈ ಅಪೇಕ್ಷೆಯೇ ಅವರ ನಾಲಗೆಯ ಮೂಲಕ ಮೂಡಿ ಬಂದಿರಬೇಕು. ಆದುದರಿಂದ ಇಬ್ನ್ ಅತಾರವರು ಇದಕ್ಕೆ ಕಾರಣರಲ್ಲ.
ಇನ್ನೊಂದು ಅಭಿಪ್ರಾಯದಂತೆ “ಇಬ್ನ್ ಅತಾರವರು ವಜೀರನನ್ನು ಶಪಿಸಿದ್ದಲ್ಲ, ಆಶೀರ್ವದಿಸಿದ್ದು. ಅವರು ದೇವರಲ್ಲಿ ಕೇಳಿದ್ದು ತನ್ನ ಶ್ರೀಮಂತಿಕೆ, ಅಧಿಕಾರವನ್ನು ಕಳೆದುಕೊಂಡು ವಜೀರ ನನ್ನಂತೆಯೇ ಹೀನವಾದ ಅವಮಾನವನ್ನು ಈ ಲೋಕದಲ್ಲಿ ಅನುಭವಿಸಬೇಕು ಎನ್ನುವುದನ್ನು. ಈ ಮೂಲಕ ವಜೀರ್ ಅಲಿ ಇಬ್ನ್ ಈಸಾನಿಗೆ ಇಬ್ನ್ ಅತಾರವರು ಒಳಿತನ್ನೇ ಬಯಸಿದ್ದಾರೆ. ಪರಲೋಕದ ಕಠಿಣ ಶಿಕ್ಷೆಯ ಮುಂದೆ ಈ ಲೋಕದಲ್ಲಿ ಎಂತಹ ಶಿಕ್ಷೆಯಾದರೂ ತುಂಬ ಕಮ್ಮಿ ನೋವಿನದ್ದೇ ಸರಿ! “
-ಫಕೀರ್ ಅಹ್ಮದ್ ಕಟ್ಪಾಡಿ ಯವರ ಬರಹದಿಂದ ಸಂಗ್ರಹ
No comments:
Post a Comment