ಮನುಷ್ಯನನ್ನು ತನ್ನ ದಾಸ್ಯ ಹಾಗೂ ಆರಾಧನೆ ಮಾಡುವುದಕ್ಕಾಗಿ ಸೃಷ್ಟಿಸಿದರಿಂದ ಮನುಷ್ಯ ದೇವರ ಸೇವಕ ಅಥವಾ ಗುಲಾಮ ಎಂದು ಪಾರಂಪರಿಕ ಇಸ್ಲಾಮಿನ ನಂಬಿಕೆಯಾಗಿದೆ. ಆದುದರಿಂದ ದೇವರ ಮುಂದೆ ಮನುಷ್ಯನಿಗೆ ಮಹತ್ವವಿಲ್ಲ, ಅವನು ತೃಣಸಮಾನನು. ಆದರೆ ಸೂಫಿ ಸಂತರು ಈ ಅಭಿಪ್ರಾಯವನ್ನು ವಿನಯದಿಂದ ಸ್ವೀಕರಿಸುತ್ತಲೇ ಪಾರಂಪರಿಕ ನಂಬಿಕೆಯ ತಡೆಗೋಡೆಯನ್ನು ದಾಟಿ ಮನುಷ್ಯ ದೇವರ ಅಂಶ ಎಂಬುದನ್ನು ಗುರುತಿಸುತ್ತಾರೆ.
ಕುರಾನ್‍ನಲ್ಲಿ ದೇವರು ಹೇಳುವಂತೆ ‘ನನ್ನ ಸ್ವಂತ ಕೈಗಳಿಂದ ಮನುಷ್ಯನನ್ನು ಮಾಡಿರುವೆ (38:75). `ಮುಂದೆ ಅದನ್ನು ನಖಶಿಖಾಂತ ಪರಿಪೂರ್ಣಗೊಳಿಸಿ ಅದರಲ್ಲಿ ನನ್ನ ಆತ್ಮವನ್ನು ಊದಿದೆ’(38:72). ಆಮೇಲೆ ದೇವರು ಅದರ ಮುಂದೆ ನೀವು ಸಾಷ್ಟಾಂಗ ನಮಸ್ಕರಿಸಬೇಕು ಎಂದು ಮಲಾಯಿಕ್ ದೇವದೂತರಿಗೆ ಆಜ್ಞಾಪಿಸುತ್ತಾನೆ. ಮೂಲ ಮಾನವ ಆದಮನ ಸೃಷ್ಟಿಯ ಈ ರಹಸ್ಯವು ಮನುಷ್ಯನನ್ನು ಅತ್ಯಂತ ಎತ್ತರದ ಸ್ಥಾನಕ್ಕೇರಿಸುತ್ತದೆ. ಕುರಾನ್‍ನಲ್ಲಿ ತನ್ನ ಸಂದೇಶಗಳ ಮೂಲಕ ದೇವರು ಮನುಷ್ಯನಿಗೆ ತನ್ನ ಸೃಷ್ಟಿಯ ಪೈಕಿ ಅತ್ಯುನ್ನತ ಸ್ಥಾನವನ್ನು ನೀಡಿದ್ದಾನೆ.
‘ಮತ್ತೆ ನಾನು ಬಾಹ್ಯಜಗತ್ತಿನಲ್ಲೂ, ಸ್ವಯಂ ನಿಮ್ಮ ಬದುಕಿನಲ್ಲೂ ಸಂಕೇತಗಳ ಮೂಲಕ ತೋರಿಸಿಕೊಟ್ಟಿದ್ದೇನೆ-ನೀವದನ್ನು ನೋಡಿಲ್ಲವೇ?’ (ಕುರಾನ್ 41:53). ಮೌಲಾನಾ ಜಲಾಲುದ್ದೀನ್ ರೂಮಿಯವರು ಈ ಚರ್ಚೆಯ ಒಟ್ಟು ತಾತ್ಪರ್ಯವನ್ನು ನೀಡುತ್ತ, ‘ಮನುಷ್ಯ ತನ್ನನ್ನು ಸೃಷ್ಟಿಕರ್ತ ಎಷ್ಟೊಂದು ದುರ್ಬಲನನ್ನಾಗಿ ಸೃಷ್ಟಿಸಿದ್ದಾನೆನ್ನುವುದನ್ನು ಮನಗಾಣಬೇಕು, ಆಗ ಮಾತ್ರ ತನಗೆ ಎಲ್ಲವನ್ನೂ ಕರುಣಿಸುವ ದಯಾಮಯನಾದ ದೇವರ ಮುಂದೆ ತಾನೊಂದು ತೃಣಸಮಾನನೆಂಬ ಅರಿವು ಅವನಲ್ಲಿ ಮೂಡುತ್ತದೆ’ ಎನ್ನುತ್ತಾರೆ.
‘ಪ್ರೀತಿಸುವ ಹೃದಯದಲ್ಲಿ ದೇವರು ವಾಸಿಸುತ್ತಾನೆ. ಸ್ವರ್ಗ ಮತ್ತು ಮತ್ರ್ಯದಲ್ಲಿ ದೇವರ ಇರುವಿನ ಬಗ್ಗೆ ಕುರುಹು ಸಿಗದಿರಬಹುದು, ನಿಷ್ಟಾವಂತ ದೇವರ ಸೇವಕನ(ಮನುಷ್ಯನ) ಹೃದಯದಲ್ಲಿ ದೇವರು ಖಂಡಿತವಾಗಿಯೂ ಇರುತ್ತಾನೆ’. ಹೃದಯವು ಒಂದು ಕನ್ನಡಿಯಂತೆ ದೇವರ ಪ್ರತಿಬಿಂಬವನ್ನು ಹೊಂದಿರುತ್ತದೆ. ಆದರೆ ಈ ಕನ್ನಡಿಯಲ್ಲಿ ಮೆತ್ತಿರುವ ಧೂಳು, ಕಲೆಗಳನ್ನು ಆತ್ಮನಿಗ್ರಹ, ನಿಷ್ಠಾವಂತ ಪ್ರೇಮ ಹಾಗೂ ಸಂಯಮದ ಮೂಲಕ ಸದಾಕಾಲ ತಿಕ್ಕಿ ಒರೆಸಿ ಆದಿಸ್ವರೂಪದ ದೈವೀಪ್ರಭೆಯು ಪ್ರತಿಫಲಿಸುವಂತೆ ಇಟ್ಟುಕೊಂಡಿರಬೇಕು.
ಸೂಫಿ ಅನುಭಾವಿಗೆ ತನ್ನ ಹೃದಯದಲ್ಲಿ ಉಳಿದೆಲ್ಲವನ್ನೂ ಖಾಲಿಮಾಡಿ ಮನೆಮಾಡಿಕೊಂಡಿರುವ ಸ್ನೇಹಿತ ಯಾ ಪ್ರೇಮಿಯಾಗಿ ಅಲ್ಲಾಹನನ್ನು ಕಂಡುಕೊಳ್ಳುವುದು ಸಾಧ್ಯವಾಗಬಹುದು. ‘ನಾನು ಕಾಣದಿರುವುದನ್ನು ಮನುಷ್ಯನಲ್ಲಿ ಕಂಡೆ’ ಎನ್ನುವುದು ಅನೇಕ ಸೂಫಿ ಸಂತರ ಅನುಭವದ ಮಾತು. ಇದರ ಮೂಲಕ ಎಲ್ಲ ರೀತಿಯ ಮನುಷ್ಯ ಸಂಬಂಧಗಳ ತಡೆಗೋಡೆಗಳನ್ನು ಪುಡಿಗಟ್ಟಿ ವಿಶ್ವಮನುಜರನ್ನು ಒಂದಾಗಿಸುತ್ತದೆ.
ಅಜ್ಮೀರಿನ ಖ್ವಾಜಾ ಮೊಯೀನುದ್ದೀನ್ ಚಿಸ್ತಿಯವರ ‘ಸುಲ್ಹಿ ಕುಲ್’ ಸಮಸ್ತ ಮಾನವಕುಲಕ್ಕೆ ಶಾಂತಿ ಲಭಿಸಲಿ ಎಂಬ ಸಂದೇಶ ಹುಟ್ಟಿಕೊಳ್ಳುವುದು ಇಲ್ಲೇ. ಇಬ್ನ್ ಅರಬಿ ಹೇಳುವಂತೆ ‘ಮನುಷ್ಯ ಮತ್ತು ದೇವರ ಮಧ್ಯೆ ಇರುವ ಅಂತರವನ್ನು ಇದು ಕಮ್ಮಿ ಮಾಡುತ್ತದೆ’. ಆದರೂ ಒಟ್ಟಾರೆಯಾಗಿ ಸೂಫಿಗಳ ಅಭಿಮತವೆಂದರೆ `‘ಸಕಲ ಸೃಷ್ಟಿಕರ್ತನಾದ ಒಡೆಯನು ಒಡೆಯನೇ ಆಗಿರುತ್ತಾನೆ, ಅವನ ದಾಸನು ದಾಸನೇ ಆಗಿರುತ್ತಾನೆ!’
-ಫಕೀರ್ ಅಹ್ಮದ್ ಕಟ್ಪಾಡಿ.
No comments:
Post a Comment