"ಗುಡಿಗುಂಡಾರದ ಜಗಳವ್ಯಾಕೊ ಯಪ್ಪ ಮಾನವಗೆ ಮಾನವನು ತಾ ತಿಳಿಯಬೇಕು|
ಎಲ್ಲರೊಳಗೆ ಜೀವ ಶಿವನಾಗಿರುವಾಗ ಗುಡಿಕಟ್ಟಿ ಅವನಿಗೆ ಬಂಧನವ್ಯಾಕೊ||
ಶಿವ ಕಾಣಲಿಲ್ಲ ನೀ ಶಿವನು; ನಿನ್ನ ದೇಹದ ಗುಡಿಯೊಳಗೆ ಕುಂತಾನು ಅವನು|
ನೀನೆ ಗುಡಿಯಾಗಿ ಗುಡಿ ಕಟ್ಟುವದ್ಯಾಕೊ ಸಾಕಪ್ಪ ಸಾಕು ನಿನ್ನ ಗುಡಿಜನಗಳ ಸಾಕು||
ನಿರಾಕಾರ ನಿರಾಹಾರ ಶಿವಗ ಯಪ್ಪ ನಿನ್ನಂತೆ ರೂಪ ಮಾಡಿ ಅವಗ|
ಎಲ್ಲ ನಿನ್ನ ಲಾಭಕ್ಕಾಗಿ ಮಾಡಿಟ್ಟು ಅವಗ ಮೋಸ ವಂಚನೆಯ ಮಂತ್ರ ಹೇಳುವುದ್ಯಾಕೊ||
ಎಲ್ಲರಿಗೆ ಗುರು ಒಬ್ಬ ಸಾಕೊ ಭೇದ ಮಾಡುವ ಕೆರಗುರು ನಮಗ್ಯಾಕಬೇಕು|
ಭೇದ ಮಾಡುವ ಜಗದ್ಘಾತಕರುಯಾಕೊ ಮಾನವ ಪ್ರೀತಿಯೆ ಮಾನವ ತಿಳಿಯಬೇಕು||
ಪ್ರೀತಿಯ ರೂಪಧಾರಿ ಅವನು; ನೀವು ಪ್ರೀತಿ ಮಾಡಿರಿ ಸಿಗುವನವನು|
ಪ್ರೀತಿಯಿಂದಲೇ ಭಕುತಿ, ಪ್ರೀತಿಯಿಂದಲೇ ಮುಕುತಿ, ಪ್ರೀತಿ ಇಲ್ಲದ ಬದುಕು ಬಾಳುವುದ್ಯಾಕೊ||
ಜಾತಿಭೇದಗಳಿಲ್ಲ ಶಿವಗ ಯಪ್ಪಾ ಹೆಂಡರಿಲ್ಲ ಮಕ್ಕಳಿಲ್ಲ ಅವಗ|
ನೋಡಿಬಂದವರಿಲ್ಲಿ ಹೇಳಲಿಲ್ಲ ನಮಗ; ಕರುಣಾಳು ಗುರುಪೀರ ಭೇದಬುದ್ಧಿ ನಮಗ್ಯಾಕೊ||
ಸಾಲಗುಂದಿಪುರದೊಳಗೆ ಖಾತ್ರಿ ನೀವು ಮರಿಯದೆ ಮಾಡಬೇಕು ಪ್ರೀತಿ|
ಗುರುಪೀರ ಖಾದರಿಯ ಪ್ರೀತಿಯೇ ಬಲು ಖಾತ್ರಿ; ಪ್ರೀತಿ ಇಲ್ಲದ ಬದುಕು ಬಾಳುವದ್ಯಾಕೊ||"
-ಗುರು ಖಾದರಿ ಫೀರ.
ಭೇದ ಮೂಡಿಸುವ ಯಾವುದನ್ನೂ ಗುರು ಖಾದರಿಪೀರಾ ಅವರು ಸ್ವೀಕರಿಸುತ್ತಿರಲಿಲ್ಲ. ಸೌಹಾರ್ದಕ್ಕಾಗಿ ಅವರು ಏನನ್ನಾದರೂ ತ್ಯಾಗ ಮಾಡಲು ಸಿದ್ಧರಿದ್ದರು. ಪ್ರೀತಿಯಿಂದ ಮಾತ್ರ ಸೌಹಾರ್ದ ಸಾಧ್ಯ ಎಂಬುದನ್ನು ಅವರು ಪದೆ ಪದೆ ಒತ್ತಿ ಹೇಳುತ್ತಿದ್ದರು. ಕುಲ, ಗೋತ್ರ, ಜಾತಿಗಳು ಮಾನವನ ಏಕತೆಗೆ ಬಹುದೊಡ್ಡ ಕಂಟಕಗಳಾಗಿವೆ ಎಂಬುದನ್ನು ಮನಂಬುಗುವಂತೆ ತಿಳಿಸಿದ್ದಾರೆ.
No comments:
Post a Comment