Thursday, August 20, 2015

ಸರ್ವಶ್ರೇಷ್ಠ ಜೀವಿ

ಜಗತ್ತಿನ ಎಲ್ಲ ಜೀವಿಗಳಲ್ಲಿ ಮನುಷ್ಯ ಸರ್ವಶ್ರೇಷ್ಠ ಪ್ರಾಣಿ. ಇತರ ಜೀವಿಗಳಿಗಿಲ್ಲದ ವಿವೇಕ ಮನುಷ್ಯನಿಗಿರುವುದೇ ಅವನ ಶ್ರೇಷ್ಠತ್ವಕ್ಕೆ ಪ್ರಮುಖ ಕಾರಣ. ಈ ವಿವೇಕವನ್ನು ದಾರ್ಶನಿಕರು ಅರಿವು, ಪರಿಜ್ಞಾನ, ಪ್ರಜ್ಞೆ ಮುಂತಾದ ಪಾರಿಭಾಷಿಕ ಪದಗಳಿಂದ ಕರೆದಿದ್ದಾರೆ.
ಯಾವುದನ್ನೂ ಸಾರಾಸಾರವಾಗಿ ಯೋಚಿಸಿ, ಪರಿಶೀಲಿಸಿ ಮಾಡುವ, ಮಾತನಾಡುವ ಪರಿಜ್ಞಾನ ಮನುಷ್ಯನಿಗಿದೆ. ಆಹಾರ, ನಿದ್ರೆ, ಭಯ, ಮೈಥುನಾದಿಗಳು ಇತರ ಜೀವಿಗಳಿಗಿರುವಂತೆ ಮನುಷ್ಯನಿಗಿದ್ದರೂ ಈ ವಿಶೇಷ ಪರಿಜ್ಞಾನ ಕಾರಣವಾಗಿ ಅವುಗಳಿಗಿಂತ ಭಿನ್ನನೆನಿಸಿದ್ದಾನೆ. ಇದೂ ಅಲ್ಲದೆ ಬುದ್ಧಿಶಕ್ತಿ, ಆಲೋಚಿಸುವ ಶಕ್ತಿಯಿಂದಾಗಿ ತನ್ನ ಭಾವನೆಗಳನ್ನು ಅಭಿವ್ಯಕ್ತಗೊಳಿಸುವ ವಿಶೇಷ ಸಾಮರ್ಥ್ಯವನ್ನೂ ಮನುಷ್ಯ ಮಾತ್ರ ಹೊಂದಿದ್ದಾನೆ.

ಪ್ರೀತಿ-ವಾತ್ಸಲ್ಯ, ಸ್ನೇಹ-ಸೌಹಾರ್ದ, ಭ್ರಾತೃತ್ವ-ಬಂಧುತ್ವ, ಸತ್ಯ, ಪ್ರಾಮಾಣಿಕತೆ, ನ್ಯಾಯ, ನೀತಿ, ತ್ಯಾಗ ಮತ್ತು ಔದಾರ್ಯದಂತಹ ವಿಶೇಷ ಗುಣಗಳು ಮಾನವನ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸಿವೆ. ಮಾನವನ ಶರೀರವನ್ನು ಬಸವಣ್ಣನವರು ‘ಪ್ರಸಾದ ಕಾಯ’ವೆಂದಿದ್ದಾರೆ. ಇದು ಭಗವಂತನ ಅನುಗ್ರಹದಿಂದ ಪ್ರಾಪ್ತವಾಗಿದೆ. ಈ ಶರೀರವನ್ನು ಸಾಧನವಾಗಿಸಿಕೊಂಡು ಭಗವತ್ ಸಾಕ್ಷಾತ್ಕಾರ ಹೊಂದಬೇಕೆಂಬುದು ಅವರ ಆಶಯ. ಅದಕ್ಕಾಗಿ ‘ದುವ್ರ್ಯಸನಿ ದುರಾಚಾರಿ ಎಂದೆನಿಸದಿರಯ್ಯ, ಎನ್ನ  ಲಿಂಗವ್ಯಸನಿ ಜಂಗಮ ಪ್ರೇಮಿ ಎಂದೆನಿಸಯ್ಯ’ ಎಂದು ಅವರು ಭಗವಂತನಲ್ಲಿ ಪ್ರಾರ್ಥಿಸುತ್ತಾರೆ.
ಶರೀರವನ್ನು ದುವ್ರ್ಯಸನಗಳಿಗೆ ಬಲಿಯಾಗಿಸದೇ ಧರ್ಮಸಾಧನೆಗೆ ಉಪಯೋಗಿಸಿಕೊಳ್ಳಬೇಕು. ತನಗೆ ಒದಗುವ ದುಃಖಗಳನ್ನು ದೂರೀಕರಿಸಿಕೊಂಡು ಅನಂತವಾದ ಭವಸಾಗರವನ್ನು ದಾಟಲು ಮಾನವಜನ್ಮಕ್ಕಿಂತ ಮಿಗಿಲಾದ ನೌಕೆ ಮತ್ತೊಂದಿಲ್ಲ ಎಂಬುದು ಅನೇಕ ದಾರ್ಶನಿಕರ, ಅನುಭಾವಿಗಳ ಅಭಿಪ್ರಾಯವಾಗಿದೆ.

No comments:

Post a Comment