ನಿಜವಾದ ಪ್ರೇಮ ಸಾಮಾನ್ಯವಲ್ಲ; ನಿರ್ದಿಷ್ಟವಾದದ್ದು ಸರ್ವವ್ಯಾಪಿಯಾದದ್ದು. ಏಕಾಗ್ರತೆಯ ಮೂಲಕ ಅದರ ಆಳವನ್ನು ಅನುಭವಿಸುವುದು ಸಾಧ್ಯ. ಇದು ಕಟ್ಟಕಡೆಯ ಪ್ರೇಮಾನುಭವವೂ ಹೌದು. ಇದರ ಅರಿವಿಲ್ಲದವನ ಪ್ರೇಮ ಬೇರೆಡೆ ಆಕರ್ಷಿಸಲ್ಪಡುವುದು ಸಾಧ್ಯ.
ಒಮ್ಮೆ ಒಬ್ಬ ಓರ್ವ ಸುಂದರಿಯನ್ನು ನೋಡಿದ. ಅವಳ ಮುಂದೆ ತನ್ನ ಪ್ರೇಮವನ್ನು ತೋಡಿಕೊಂಡ. ಅವಳು ಹೇಳಿದಳು ‘ನನ್ನ ಸಹೋದರಿಯೊಬ್ಬಳಿದ್ದಾಳೆ ನನಗಿಂತಲೂ ಅಪ್ರತಿಮ ಸುಂದರಿ’. ಅವನು ಅವಳ ಸಹೋದರಿಯನ್ನು ಕಾಣಲು ತವಕಿಸಿದ. ಆಗ ಸುಂದರಿ ಹೇಳಿದಳು, ‘ಎಂಥಾ ಭಂಡನಯ್ಯಾ ನೀನು! ಮೊದಲು ದೂರದಲ್ಲಿ ಕಂಡಾಗ ನೀನೊಬ್ಬ ಬುದ್ಧಿವಂತನಿರಹುದು ಎಂದುಕೊಂಡೆ, ಹತ್ತಿರಬಂದಾಗ ನೀನೊಬ್ಬ ಪ್ರೇಮಿಯೆಂದುಕೊಂಡೆ. ಈಗ ನನಗನ್ನಿಸುತ್ತಿದೆ ನೀನು ಎರಡೂ ಅಲ್ಲ!".
ಮನುಷ್ಯ ಸಂಬಂಧದ ಏಕತಾನದ ಚೌಕಟ್ಟಿನಿಂದ ಪ್ರೇಮವನ್ನು ಹೊರತಂದು ವಿಶಾಲ ಆಧ್ಯಾತ್ಮಿಕ ಆಯಾಮ ಮತ್ತು ವ್ಯಾಖ್ಯಾನವನ್ನು ನೀಡಿದ ಧಾರ್ಮಿಕ ಪಂಥಗಳಲ್ಲಿ ಸೂಫಿ ಪಂಥ ಬಹುಶಃ ಅತ್ಯಂತ ಪ್ರಮುಖ ಸ್ಥಾನದಲ್ಲಿದೆ. 'ಇಷ್ಕ್ ಅಥವಾ ಪ್ರೇಮವನ್ನು ಅರಿತವನು ದೇವರನ್ನು ತಿಳಿದಿರುತ್ತಾನೆ ಎನ್ನುವ ಮೂಲಕ ಸೂಫಿಗಳು ಪ್ರೇಮವನ್ನು ಸೀಮಿತ ರಾಗಕಾಮನೆಗಳಿಂದ ಮುಕ್ತಗೊಳಿಸಿ ಆಧ್ಯಾತ್ಮಿಕ ವಿಶಾಲ ಅರ್ಥಗಳನ್ನು ನೀಡಿ ಶುದ್ಧ ದೈವಿಕಪ್ರೇಮದ ಪ್ರತಿಷ್ಠಾಪನೆ ಮಾಡಿದರು.
ದೇವರು ಒಂದು ನಿರ್ದಿಷ್ಟ ರೂಪವಿಲ್ಲದೆ ಎಲ್ಲೆಡೆಯಲ್ಲೂ ಇರುವವನು, ಆದಿ ಮತ್ತು ಅಂತ್ಯವನ್ನು ಮೀರಿದವನು. ದೇವರನ್ನು ಅಪ್ರತಿಮ ಸೌಂದರ್ಯದ ಖನಿಯಾಗಿಸಿ, `ನೂರ್ ಅಥವಾ ಅನಂತ ಪ್ರಕಾಶ, ದೈವೀಸ್ವರೂಪ(ನೂರೆ ಇಲಾಹಿ)ವೆನಿಸುತ್ತದೆ. ಸೂಫಿಗಳು ಸನ್ಯಾಸಿಗಳಲ್ಲ. ಕೌಟುಂಬಿಕ ಜೀವನ ಮತ್ತು ಗ್ರಹಸ್ಥ ಜೀವನವನ್ನು ಅನುಭವಿಸಿಕೊಂಡೇ ಆಧ್ಯಾತ್ಮ ಸಾಧನೆ ಮಾಡಿಕೊಂಡವರು. ಹಾಗಂತ ಪ್ರಾಪಂಚಿಕ ಮೋಹ ಅವರಿಗೆ ಮುಖ್ಯವಲ್ಲ. ಪಾರಮಾರ್ಥಿಕ ಸಾಧನೆಗಾಗಿ ಅಲ್ಲಾಹನ ಮೇಲಿನ ಉತ್ಕಟ ಪ್ರೀತಿ, ಅವನನ್ನು ಸೇರುವ ತವಕ, ವಿರಹ ಎಲ್ಲವೂ ಸೂಫಿಗೆ ಪರಮಾನಂದದ ಸೋಪಾನ.
ಪ್ರೇಮವಿಲ್ಲದಿದ್ದರೆ ಜಗತ್ತು ಶೂನ್ಯ, ಜಗತ್ತಿಗೆ ಅಸ್ತಿತ್ವವಿಲ್ಲ. ಪ್ರೇಮ ರಹಿತ ಪ್ರಪಂಚ ದುಃಖದಿಂದ ಆವೃತ್ತವಾಗಿರುತ್ತದೆ. ಪ್ರೇಮರಹಿತ ಬದುಕು ಬರಡು. ಪ್ರೇಮ ಸೃಷ್ಟಿಯಮೂಲ, ಪ್ರೇಮ ಉರಿಯುವ ಜ್ವಾಲೆ. ಬೆಂಕಿ, ನೀರು, ವಾಯುವಿನ ಗುಣಗಳೆಲ್ಲವೂ ಪ್ರೇಮಕ್ಕಿದೆ. ಪ್ರೇಮ ಮನುಷ್ಯನ ಊಹೆಗೂ ನಿಲುಕದ ಅಲ್ಲಾಹನ ವೈಭವ(ಅಲ್-ಜಲಾಲ್), ಅವನ ಔದಾರ್ಯ, ಕ್ಷಮೆ ಮುಂತಾದ ದಯಾಮಯ ಗುಣಗಳು (ಅಲ್-ಜಮಾಲ್) ಅವನು ಅದ್ಭುತ ಶಕ್ತಿಯಯ ಕೇಂದ್ರ (ಅಲ್-ಕಮಾಲ್).
ಅಲ್ಲಾಹನೇ ಆಕರ್ಷಣೆಯ ಕೇಂದ್ರ, ಅವನಿಂದಲೇ ಬೆಳಕು. ನಕ್ಷತ್ರಗಳು ಸೂರ್ಯ, ಚಂದ್ರ ಅವನ ಆಕರ್ಷಣೆಗೆ ಒಳಗಾಗಿವೆ. ಅವನ ಪ್ರೇಮ ಅಮೃತಸ್ವರೂಪಿ `ಆಬೇಹಯಾತ್. ಅವನೊಂದಿಗೆ ಲೀನವಾಗುವುದು ಎಂದರೆ ಅಮರತ್ವವನ್ನು ಪಡೆಯುವುದು.
ಸಂಪ್ರದಾಯಸ್ಥ ಸಂತನೆಂದು ಖ್ಯಾತಿಪಡೆದ ಜುನೈದ್ ಬಗ್ದಾದಿ(ನಿಧನ ಕ್ರಿ.ಶ. 910) ‘ಮನುಷ್ಯ ದೇವರ ಕೈಗೊಂಬೆ, ಅವನ ಅನಂತಶಕ್ತಿಯ ತೀರ್ಮಾನದಿಂದ ಹೊರಡುವ ಆಜ್ಞೆಯಂತೆ ನಡೆಯುವ ನಿಮಿತ್ತ ಮಾತ್ರನಾದವನು ಮತ್ತು ಅವನೊಂದಿಗೆ ಐಕ್ಯವಾಗುವ ಸಾಗರದಲ್ಲಿ ಮುಳುಗಿ ಸೇರಬೇಕಾದವನು’ ಎಂದಿದ್ದಾರೆ.
ಅಲ್ಲಾಹನ ಪ್ರೇಮದ ಸವಿ ಎಲ್ಲ ಪ್ರಾಪಂಚಿಕ ಅನುಭವಕ್ಕಿಂತ ಮಿಗಿಲಾದದ್ದು ಎಂದರು ಪಂಜಾಬಿನ ಸಕ್ಕರೆಯ ಸಂತ ಬಾಬಾ ಫರೀದ್. ಅಂತಿಮವಾಗಿ ನಮ್ಮನ್ನು ದೇವರೊಂದಿಗೆ ಲೀನವಾಗಿಸುವುದು ಪ್ರೇಮ, ಎನ್ನುತ್ತಾರೆ ಸೂಫಿಗಳು.
-ಫಕೀರ್ ಅಹ್ಮದ್ ಕಟ್ಪಾಡಿ.
No comments:
Post a Comment