ಒಮ್ಮೆ ಸಂತ ಜುನೈದ್ ಬಗ್ಚಾದಿಯವರು ಬಗ್ದಾದ್ ಪಟ್ಟಣದಲ್ಲಿ ನಡೆದು ಹೋಗುತ್ತಿರುವಾಗ ಒಂದೆಡೆ ಜನರ ಗುಂಪು ನೋಡಿ ನಿಂತರು. ಒಬ್ಬನನ್ನು `‘ಏನು ವಿಶೇಷ? ಇಷ್ಟೊಂದು ಜನ ಇಲ್ಲಿ ಯಾಕೆ ಸೇರಿದ್ದಾರೆ?’ ಎಂದು ಕೇಳಿದರು. `‘ಇಲ್ಲಿ ಓರ್ವ ಕುಖ್ಯಾತ ಕಳ್ಳನನ್ನು ಹಿಡಿದಿದ್ದಾರೆ’ ಎಂದ ಅವನು. ಜನರನ್ನು ಸರಿಸಿ ಮುಂದೆ ನಡೆದು ಜುನೈದ್ ಬಗ್ದಾದಿಯವರು ನೋಡುವಾಗ ಕಳ್ಳನಿಗೆ ಶಿಕ್ಷೆ ನೀಡುತ್ತಿದ್ದರು.
ಅಲ್ಲಿನ ಕಾನೂನಿನಂತೆ ಕಳ್ಳತನ ಮಾಡಿದವನ ಕೈಯನ್ನು ಕಡಿಯಬೇಕಾಗಿತ್ತು. ಹಿಂದೆ ಮಾಡಿದ ಹಲವು ಕಳ್ಳತನಗಳಿಗೆ ಶಿಕ್ಷೆಯ ರೂಪದಲ್ಲಿ ಎರಡು ಕೈಗಳನ್ನೂ ಒಂದು ಕಾಲನ್ನೂ ಕಡಿಯಲಾಗಿತ್ತು. ಇವನು ಎಂತಹ ಘಾಟಿ ಕಳ್ಳನೆಂದರೆ ಈ ಸಲ ಉಳಿದ ಒಂದು ಕಾಲನ್ನು ಉಪಯೋಗಿಸಿಕೊಂಡು ಕಳ್ಳತನ ಮಾಡಿದ್ದ. ಕಾನೂನಿನ ಪ್ರಕಾರ ಅವನ ಉಳಿದ ಒಂದು ಕಾಲನ್ನು ಕೂಡ ಕಡಿದು ಹಾಕಿ ನೇತು ಹಾಕಲಾಗಿತ್ತು. ಸ್ವಲ್ಪಹೊತ್ತಿನಲ್ಲಿ ಎಲ್ಲರೂ ನೋಡುತ್ತಿರುವಂತೆ ಅವನು ಸತ್ತು ಹೋದ!
ಜುನೈದ್ ಬಗ್ದಾದಿಯವರು ಅದನ್ನು ನೋಡಿ ನೇತುಹಾಕಲಾದ ಕಳ್ಳನ ಕಾಲನ್ನು ಹಿಡಿದುಕೊಂಡು ಗೋಳೆಂದು ಅಳತೊಡಗಿದರು. ಇದನ್ನು ಕಂಡ ಜನರಿಗೆ ತುಂಬ ಆಶ್ಚರ್ಯವಾಯಿತು. ಇಷ್ಟು ಹೆಸರಾಂತ ಇಸ್ಲಾಮೀ ಪಂಡಿತ ಒಬ್ಬ ಯಕಃಶ್ಚಿತ್ ಜನಪೀಡಕ ಕಳ್ಳನ ಕಾಲು ಹಿಡಿದು ಅಳುತ್ತಿದ್ದಾರಲ್ಲ... ಯಾಕಿರಬಹುದು? ಜನರು ಅವರನ್ನು ಕೇಳಿದರು. ಅದಕ್ಕೆ ಜುನೈದ್ ಬಗ್ದಾದಿಯವರು ಹೇಳಿದರು, ‘ಇವನು ಎಂತಹ ದೃಢವಾದ ನಿಲುವಿನವನು ನೋಡಿ!
ಪ್ರತೀ ಸಾರಿ ಕಳ್ಳತನಕ್ಕೆ ಶಿಕ್ಷೆಯ ರೂಪದಲ್ಲಿ ಕೈಗಳನ್ನು, ಕಾಲುಗಳನ್ನು ಕಳೆದುಕೊಂಡರೂ ಕೂಡ ಕಳ್ಳತನದ ಮೇಲೆನೇ ಎಂತಹ ದೃಢವಿಶ್ವಾಸ ಈ ಮನುಷ್ಯನಿಗೆ! ಇಂತಹ ಇಸ್ತಿಖಾಮಾ ನನಗೆ ದೇವರಮೇಲೆ ಇಟ್ಟುಕೊಳ್ಳುವುದು ಸಾಧ್ಯವಾಗುತ್ತಿದ್ದರೆ! ನಾನು ಇನ್ನಷ್ಟು ಮತ್ತಷ್ಟು ದೇವರಸನಿಹಕ್ಕೆ ತಲಪುತ್ತಿದ್ದೆ. ಇವನಲ್ಲಿದ್ದ ಇಸ್ತಿಖಾಮಾ ಅಥವಾ ದೃಢ ನಿಲುವು ವ್ಯರ್ಥವಾಗಿ ಹೋಯಿತಲ್ಲಾ ಅಂತ ನನಗೆ ಅತ್ಯಂತ ದುಃಖವಾಯಿತು’ ಎಂದರು.
ದೃಢಸಂಕಲ್ಪ ಮನುಷ್ಯ ಮಾಡುವ ಕಾರ್ಯಗಳನ್ನು ದೃಢ ಹಾಗೂ ಸಂಪೂರ್ಣಗೊಳಿಸುತ್ತದೆ. ಇದರಿಂದಾಗಿ ಅದರ ಫಲವನ್ನು ಸಾವಧಾನವಾಗಿ ಮತ್ತು ನಿಖರವಾಗಿ ಪಡೆಯುವುದು ಸಾಧ್ಯವಾಗುತ್ತದೆ. ಮೇಲೆ ಹೇಳಿದ ಕಳ್ಳನ ಉದ್ದೇಶ ಕೆಟ್ಟದಾಗಿದ್ದರೂ ಸಂಕಲ್ಪ ಮಾತ್ರ ದೃಢವಾದದ್ದು! ಇದು ವ್ಯರ್ಥವಾದುದು ಆದರೂಜುನೇದ್ ಬಗ್ದಾದಿಯಂತಹ ಸೂಫಿ ಸಂತರೂ ಕೂಡ ಮಾರುಹೋಗುತ್ತಾರೆ.
ಸಂಕಲ್ಪವು ಸ್ಥಿರವಾಗಿರದೆ ಅತ್ತಿತ್ತ ಓಲಾಡುವಂತಿದ್ದರೆ ಅದರ ಫಲವೂ ಅನಿಶ್ಚಿತವಾಗಿ, ಗೌರವಾರ್ಹವಾಗಿರುವುದಿಲ್ಲ. ಒಮ್ಮೆ ಸೂಫಿ ಸಂತ ಶಾಹಿ ಬಾಬಾಅವರು ನಡೆದು ಸುಸ್ತಾಗಿ ದೊಡ್ಡ ಮರವೊಂದರ ಅಡಿಯಲ್ಲಿ ಸ್ವಲ್ಪಹೊತ್ತು ತಂಗುತ್ತಾರೆ. ಅ ಮರವು, ‘`ನಾನು ಮನುಷ್ಯನಿಗೆ ನೆರಳು, ಆಶ್ರಯ ನೀಡುತ್ತೇನೆ, ತಿನ್ನಲು ಹಣ್ಣು ನೀಡುತ್ತೇನೆ. ಆದರೂ ಮನುಷ್ಯನೆಂತಹ ಕೃತಘ್ನ! ನನಗೆ ತೊಂದರೆ ಕೊಡುತ್ತಿರುತ್ತಾನೆ’ ಎನ್ನುತ್ತದೆ. ಬಾಬಾರವರು ಹೇಳುತ್ತಾರೆ, ‘ನೀನು ಹೇಳುತ್ತಿರುವುದು ಸತ್ಯ. ಆದರೆ ಗಾಳಿ ಬಂದ ಕಡೆಯೆಲ್ಲ ನೀನು ಓಲಾಡುತ್ತಿರುತ್ತಿಯಲ್ಲಾ, ನಿನ್ನಲ್ಲಿ ದೃಢ ಸಂಕಲ್ಪದ ಕೊರತೆಯಿಂದ ಬಹುಶಃ ಹೀಗಾಗುತ್ತಿರಬಹುದು’ ಎಂದು ಉತ್ತರಿಸುತ್ತಾರೆ.
-ಫಕೀರ್ ಅಹ್ಮದ್ ಕಟ್ಪಾಡಿ.
No comments:
Post a Comment