ಜಗತ್ತಿನಲ್ಲಿ ಜ್ಞಾನಕ್ಕಿಂತ ಮಿಗಿಲಾದ ಮತ್ತು ಪವಿತ್ರವಾದ ವಸ್ತು ಬೇರೊಂದಿಲ್ಲ. ಜ್ಞಾನವೇ ಮನುಕುಲಕ್ಕೆ ಬೆಳಕನ್ನು ನೀಡುವ ಶಕ್ತಿಯಾಗಿದೆ. ‘ನಿನ್ನೊಡವೆ ಎಂಬುದು ಜ್ಞಾನರತ್ನ, ಅಂತಪ್ಪ ದಿವ್ಯರತ್ನವ ಕೆಡಗುಡದೆ ಆ ರತ್ನವ ನೀನು ಅಲಂಕರಿಸಿದೆಯಾದಡೆ ಗುಹೇಶ್ವರಲಿಂಗದಲ್ಲಿ ನಿನ್ನಿಂದ ಬಿಟ್ಟು ಸಿರಿವಂತರಿಲ್ಲ’ ಎಂಬ ಅಲ್ಲಮ ಪ್ರಭುವಿನ ಮಾತು ಜ್ಞಾನದ ಹಿರಿಮೆಯನ್ನು ಸಾರುತ್ತಿದೆ.
ಅಜ್ಞಾನದ ಕತ್ತಲೆಯನ್ನು ಕಳೆಯುವ ಇಂತಹ ಅಮೂಲ್ಯ ರತ್ನದಿಂದ ಅಲಂಕೃತರಾದವರೇ ಜ್ಞಾನಿಗಳು. ಆತ್ಮಸಂಯಮ, ವಿನಯ, ಸರಳತೆಗಳನ್ನು ಮೈಗೂಡಿಸಿಕೊಂಡ ಈ ಜ್ಞಾನಿಗಳು ಸಮಾಜದಲ್ಲಿ ಪಂಡಿತರೆಂಬ ಅಭಿದಾನಕ್ಕೆ ಅರ್ಹರಾದವರು. ಚಿತ್ತಶುದ್ಧಿ ಎಂಬುದು ಇವರ ಮೂಲಭೂತವಾದ ಗುಣ. ಈ ಗುಣದಿಂದಾಗಿಯೇ ಎಲ್ಲರನ್ನೂ ನೋಡುವ ಅವರ ದೃಷ್ಟಿಕೋನವೂ ಸಾಮಾನ್ಯರಿಗಿಂತ ತೀರ ಭಿನ್ನವಾಗಿರುತ್ತದೆ. ‘ಮಾತೃವತ್ ಪರದಾರೇಷು, ಪರದ್ರವ್ಯೇಷು ಲೋಷ್ಟವತ್| ಆತ್ಮವತ್ ಸರ್ವ ಭೂತೇಷು ಯಃ ಪಶ್ಯತಿ ಸಃ ಪಂಡಿತಃ’ ಎಂಬ ಸುಪರಿಚಿತ ಸುಭಾಷಿತದಲ್ಲಿ ಪರಸ್ತ್ರೀಯರನ್ನು ತಾಯಿಯಂತೆ, ಪರರ ಸಂಪತ್ತನ್ನು ಮಣ್ಣಿನ ಕಣದಂತೆ, ಎಲ್ಲ ಜೀವಿಗಳನ್ನು ತನ್ನಂತೆ ಕಾಣುವವನೇ ಪಂಡಿತನೆಂಬ ಮಾತು ಅರ್ಥಪೂರ್ಣವಾಗಿದೆ.
ಸರ್ವಜೀವಿಗಳಲ್ಲಿ ತನ್ನನ್ನು, ತನ್ನಲ್ಲಿ ಸರ್ವಜೀವಿಗಳನ್ನು ಕಾಣುವ ಪಂಡಿತರು ಅನುಭಾವಿಗಳಾಗಿ, ಸರ್ವಸಮದರ್ಶಿಗಳಾಗಿ, ಲೋಕದ ಸಾಮಾನ್ಯರಿಗೆ ಆದರ್ಶ ವ್ಯಕ್ತಿಗಳಾಗಿ ಬದುಕು ಸಾಗಿಸುತ್ತಾರೆ. ಕೊಲದಿಪ್ಪುದು ಅವರ ಧರ್ಮ, ಅಧರ್ಮದಿಂದ ಬಂದುದನೊಲ್ಲದಿಪ್ಪುದು ಅವರ ನೇಮ. ಆಶೆ ಇಲ್ಲದಿಪ್ಪುದೇ ಅವರ ತಪ, ಹಾಗೆಯೇ ರೋಷವಿಲ್ಲದಿಪ್ಪುದೇ ಅವರ ಜಪ. ಅನೃತ (ಹುಸಿ)ವನ್ನಾಡದಿರುವುದು, ಪರಸ್ತ್ರೀಯರನ್ನು ನೋಡದಿರುವುದು, ಎಲ್ಲರನ್ನೂ ಆತ್ಮೀಯ ಭಾವದಿಂದ ನೋಡುವುದು, ಎಲ್ಲರ ಹಿತೈಷಿಯಾಗಿ ಬಾಳುವುದು ಅವರ ಜೀವನದ ಬಹುದೊಡ್ಡ ಆದರ್ಶ. ಜಾತಿ, ಮತ, ಪಂಥ, ಲಿಂಗ, ವರ್ಣ ಮತ್ತು ವರ್ಗಭೇದವಿಲ್ಲದೆ ಸಕಲ ಜೀವಾತ್ಮರಿಗೆ ಲೇಸ ಬಯಸುವುದು ಜ್ಞಾನಿಗಳ, ಪಂಡಿತರ ಶ್ರೇಷ್ಠ ಗುಣವಾಗಿದೆ. ‘ಬ್ರಾಹ್ಮಣ, ಆನೆ, ನಾಯಿ ಹಾಗೂ ಚಾಂಡಾಲರಲ್ಲಿ ಸಮದರ್ಶಿಗಳಾಗಿರುವುದು ಪಂಡಿತರ ಲಕ್ಷಣ’ ಎಂಬ ಭಗವದ್ಗೀತೆಯ ಮಾತು ಸ್ಮರಣೀಯವಾಗಿದೆ.
ಮಹಾಮಾನವತಾವಾದಿ ಬಸವಣ್ಣನವರು ಇದಕ್ಕೊಂದು ಉಜ್ವಲ ಉದಾಹರಣೆಯಾಗಿ ನಿಲ್ಲುತ್ತಾರೆ. ಅವರ ಗೋಶಾಲೆಯಲ್ಲಿರುವ ಆಕಳುಗಳನ್ನು ಕಳ್ಳರು ಕದ್ದೊಯ್ದಿದ್ದಾರೆ ಎಂಬ ಮಾತು ಅವರ ಕಿವಿಗೆ ಬಿದ್ದಾಗ- ‘ಆಕಳ ಕಳ್ಳರು ಕೊಂಡೊಯ್ದರೆನ್ನದಿರಿಂಭೋ ನಿಮ್ಮ ಧರ್ಮ, ಅಲ್ಲಿ ಉಂಬರೆ ಸಂಗ ಇಲ್ಲಿ ಉಂಬರೆ ಸಂಗ, ಕೂಡಲಸಂಗಮದೇವ ಏಕೋ ಭಾವ’ ಎನ್ನುತ್ತಾರೆ. ಕಳ್ಳನೊಬ್ಬ ಅವರ ಧರ್ಮ ಪತ್ನಿ ನೀಲಮ್ಮನ ಆಭರಣಗಳಿಗೆ ಕೈಹಾಕಿದಾಗ ಕಳ್ಳ, ಕಳ್ಳ ಎಂದು ನೀಲಮ್ಮ ಚೀರಿಕೊಂಡುದನ್ನು ಕೇಳಿ-ಕಳ್ಳನ ಮನೆಗೊಬ್ಬ ಬಲುಗಳ್ಳ ಬಂದಿರುವವನು ಕೂಡಲ ಸಂಗಮನಲ್ಲದೇ ಬೇರಾರೂ ಅಲ್ಲ, ತೆಗೆದುಕೊಡು ಎಂದು ಪತ್ನಿಗೆ ಆದೇಶಿಸುತ್ತಾರೆ. ಹೀಗೆ ಕಳ್ಳತನಕ್ಕೆ ಬಂದ ಕಳ್ಳನಲ್ಲಿಯೂ ಕೂಡಲ ಸಂಗಮನನ್ನು ಕಂಡವರು ಬಸವಣ್ಣನವರು. ‘ಪಂಡಿತಾಃ ಸಮದರ್ಶಿನಃ’ ಎಂಬ ಗೀತೆಯ ಮಾತು ಬಸವಣ್ಣ ನವರ ವ್ಯಕ್ತಿತ್ವದಲ್ಲಿ ಸಾಕಾರಗೊಂಡಿರುವುದು ಗಮನಾರ್ಹವಾಗಿದೆ.
ಡಾ. ಸಿದ್ದರಾಮ ಸ್ವಾಮಿಗಳು.
No comments:
Post a Comment