Monday, November 30, 2015

ವಿಶಾಲ ಮನೋಭಾವ

ವೈಶಾಲ್ಯ ಈ ಕಾಲದ ತುರ್ತು ಅಗತ್ಯವಾಗಿದೆ. ಇದರಿಂದಲೇ ನಾವು ಬೆಳೆಯುತ್ತೇವೆ. ಶ್ರೇಷ್ಠತೆಯತ್ತ ನಡೆಯು ತ್ತೇವೆ. ನಮ್ಮ ಆರೋಗ್ಯ ಸುಧಾರಿಸುತ್ತದೆ. ನಿಮ್ಮ ಮನಸ್ಸು ಹಾಗೂ ಚೈತನ್ಯ ವಿಸ್ತಾರಗೊಂಡಾಗ ನಿಮ್ಮ ಬದುಕು ಸಹ ಬದಲಾಗುತ್ತದೆ. ಅಂತಹ ಬದಲಾವಣೆ ಅಮೂಲ್ಯವಾಗಿರುತ್ತದೆ. ನೀವು  ಪ್ರಜ್ವಲವಾದ ದೀಪವಾಗುತ್ತೀರಿ. ನೀವು ದೀಪದ ದ್ವೀಪವಾಗುತ್ತೀರಿ. ಇಟಲಿಯ ಶ್ರೇಷ್ಠ ಕವಿ ಟಾಸೊನಿಗೆ ವ್ಯಕ್ತಿಯೊಬ್ಬ ಗಂಭೀರವಾಗಿ ಹಾನಿ ಮಾಡಿದ. ಆ ವ್ಯಕ್ತಿಯ ಗೌರವ ಹಾಗೂ ಸಂಪತ್ತು ಪಡೆಯುವ ಮೂಲಕ ಆತನ ಮೇಲೆ ಪ್ರತೀಕಾರ ತೆಗೆದುಕೊಳ್ಳಬಹುದಿತ್ತಲ್ಲ ಎಂಬ ಪ್ರಶ್ನೆಗೆ, ಆತನ ಸಂಪತ್ತು ಹಾಗೂ ಗೌರವ ನನಗೆ ಬೇಕಿಲ್ಲ. ಆತನಿಂದ ಒಂದು ವಸ್ತುವನ್ನು ನಾನು ಕಿತ್ತುಕೊಳ್ಳ ಬೇಕಿದೆ ಎಂದು ಟಾಸೊ ಮೃದುವಾಗಿ ಉತ್ತರಿಸಿದ. ಏನದು ಎಂದು ಜನ ಕವಿಯನ್ನು ಪ್ರಶ್ನಿಸಿದರು. ನಾನು ಆತನ ಕೆಟ್ಟ ಮನಸ್ಸನ್ನು ತೆಗೆದುಕೊಳ್ಳಲು ಇಚ್ಛಿಸುತ್ತೇನೆ ಎಂದರು. ಇದು ವಿಸ್ತರಿಸಿದ ಆಲೋಚನಾ ವಿಧಾನ.

ಇಂತಹ ವಿಶಾಲ ಚಿಂತನೆಯಲ್ಲಿ ಮುಳುಗೇಳುವ ಮನಸ್ಸು ಮತ್ತು ಚೈತನ್ಯ ಮತ್ಸರ, ದ್ವೇಷ, ಜಿಗುಪ್ಸೆ, ಜಿದ್ದು ಹಾಗೂ ಅಸೂಯೆಯಿಂದ ಮುಕ್ತ ವಾಗಿರುತ್ತದೆ. ಮನಸ್ಸು ಮತ್ತು ದೇಹದ ನಡುವೆ ಸಂಪರ್ಕ ಇರುವುದರಿಂದ ಇಂತಹ ದೇಹವೂ ಎಲ್ಲ ಬಗೆಯ ರೋಗ ಮತ್ತು ದೌರ್ಬಲ್ಯದಿಂದ ಮುಕ್ತವಾಗಿರುತ್ತದೆ. ನಿಮ್ಮನ್ನು ನೀವು ಗಮನಿಸಿಕೊಳ್ಳಿ. ನಿಮಗೆ ಇಷ್ಟವಿಲ್ಲದ್ದು ಆದಾಗ ಸಿಟ್ಟು ಮತ್ತು ಹತಾಶೆ ಹೇಗೆ ಭುಗಿಲೇಳುತ್ತದೆ ಎಂಬುದನ್ನು ಗಮನಿಸಿ. ನೀವು ಆಗ ನಿಮ್ಮಲ್ಲೇ ಸಂಕುಚಿತಗೊಳ್ಳುತ್ತೀರಿ. ನಿಮ್ಮ ಮಾಂಸಖಂಡ, ನರಗಳು, ಅಂಗಾಶಗಳಲ್ಲಿ ನೀವು ಸಂಕುಚಿತಗೊಳ್ಳುತ್ತೀರಿ. ಇದು ಏಕೆ ಆಗುತ್ತದೆ ಅಂದರೆ ವರುಷ ಕಳೆದಂತೆ ನಾವು ನಮ್ಮೊಳಗೆ ಸಿಟ್ಟಿನ ಗಂಟುಗಳು, ಹಳಹಳಿಕೆಯ ಗೊಂಚಲು ಹಾಗೂ ಪ್ರತಿರೋಧದ ವಕ್ರತೆಯನ್ನು ಸೃಷ್ಟಿಸಿಕೊಂಡಿರುತ್ತೇವೆ. ಇದು ಹೀಗೆ ಆಗಬೇಕು. ಇದು ಹೀಗಿರಬಾರದು ಎಂಬುದು ನಮ್ಮ ಮನೋಭಾವವಾಗಿರುತ್ತದೆ. ಈ ಗಂಟು, ಗೊಂಚಲು ಹಾಗೂ ವಕ್ರತೆ ನಮ್ಮೊಳಗಿನ ಮನಸ್ಥಿತಿಯಾಗಿರುತ್ತದೆ. ಯಾರಾದರೂ ನಮ್ಮ ಒಳಗಿನ ಈ ಮನಸ್ಥಿತಿಯ ಫೋಟೊ ತೆಗೆದಲ್ಲಿ ಎಂತಹ ಗೋಜಲು, ಗೊಂದಲ ಕಾಣುತ್ತದೆ ಊಹಿಸಿಕೊಳ್ಳಿ. ನಾವು ಎಲ್ಲವನ್ನೂ ಈ ಗೋಜಲು ಹಾಗೂ ಗೊಂದಲದ ಕಣ್ಣಿನಿಂದಲೇ ನೋಡುತ್ತೇವೆ.

ಬೀದಿಯಲ್ಲಿ ಹೋಗುವಾಗ ಕಲ್ಲಿಗೆ ಎಡವಿಬಿದ್ದು ಮಂಡಿ ಒಡೆದುಕೊಂಡ ಬಾಲಕನಂತೆ ನಾವು ಇರುತ್ತೇವೆ. ಆ ನೋವಿನಿಂದ ಆತ ಎಷ್ಟು ಬೇಸರಗೊಂಡಿದ್ದ ಅಂದರೆ ಜೀವಮಾನವಿಡೀ ಆತ ತಲೆಕೆಳಗಾಗಿ ನಡೆಯುತ್ತಿದ್ದ. ಕಣ್ಣು ತೆರೆದುಕೊಂಡು ಮತ್ತೆ ಎಲ್ಲಾದರೂ ಕಲ್ಲು ಸಿಗುತ್ತದೆಯೋ ಎಂದು ಹುಡುಕಾಡುತ್ತಿದ್ದ. ಇಡೀ ಜೀವಮಾನದಲ್ಲಿ ಆತ ಎಲ್ಲ ಆಕಾರ ಮತ್ತು ಗಾತ್ರದ 382 ಕಲ್ಲುಗಳನ್ನು ನೋಡಿದ್ದ. 382 ಸಲ ಸಿಟ್ಟಿನಿಂದ ಒದ್ದಿದ್ದ. ತನ್ನ ಕುಟುಂಬದವರು ಹಾಗೂ ಸ್ನೇಹಿತರಿಗೆ ಈ ಅಸಮಾಧಾನದಿಂದ ಈ ಕಲ್ಲುಗಳ ಬಗ್ಗೆಯೇ ಹೇಳುತ್ತಿದ್ದ. ಈ ಕಲ್ಲುಗಳನ್ನು ಹುಡುಕುವ ಚಟದಿಂದಾಗಿ 32,000 ಸುಂದರ ಸೂರ್ಯಾಸ್ತಗಳು, 160 ಕಾಮನಬಿಲ್ಲುಗಳು ಹಾಗೂ ನಿತ್ಯವೂ ನೀಲಿ ಆಕಾಶದ ವಿಸ್ತಾರವನ್ನು ಸವಿಯುವ ಅವಕಾಶವನ್ನು ಆತ ಕಳೆದುಕೊಂಡಿದ್ದ. ಅಲ್ಲದೇ ಹಾರಾಡುವ ಹಕ್ಕಿಗಳು, ಸುಂದರ ಹೂಗಳು ಹಾಗೂ ಬೀದಿಯಲ್ಲಿ ಜನರ ಸಂತೃಪ್ತ ಮುಖಭಾವವನ್ನು ಸವಿಯುವ ಅವಕಾಶವನ್ನೂ ಆತ ತಪ್ಪಿಸಿಕೊಂಡಿದ್ದ.

ನಾವು ನಮ್ಮೊಳಗಿನ ಗೋಜಲು, ಗೊಂದಲದ ಮನಸ್ಥಿತಿಯಲ್ಲಿ ಬದುಕುತ್ತಿದ್ದಾಗ ಹೀಗಾಗುತ್ತದೆ. ನಮ್ಮೊಳಗಿನ ಸಿಟ್ಟು, ಹತಾಶೆಯ ಗಂಟುಗಳು, ಗೊಂಚಲುಗಳು ಹಾಗೂ ವಕ್ರತೆ ನಮ್ಮ ಜಗತ್ತನ್ನು ಸಂಕುಚಿತಗೊಳಿಸುತ್ತವೆ. ಇದು ನಮ್ಮೊಳಗಿನ ಮತ್ಸರ, ದುಃಖ ಹಾಗೂ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಪದೇ ಪದೇ ನಾವು ಅನಾರೋಗ್ಯಕ್ಕೆ ಒಳಗಾಗುತ್ತೇವೆ. ಮತ್ತೆ, ಮತ್ತೆ ಕಲ್ಲುಗಳಿಗಾಗಿ ಹುಡುಕುತ್ತ ಸೂರ್ಯನ ಆರೋಗ್ಯಕರ ಕಿರಣಗಳಿಂದ ವಂಚಿತರಾಗುತ್ತೇವೆ. ನಮಗೆ ಎದುರಾದ ಕಲ್ಲುಗಳನ್ನು ಮರೆಯಲು ಹಾಗೂ ಕ್ಷಮಿಸಲು ಇದು ಸಕಾಲ. ಹಳೆಯ ಸಂಕಷ್ಟಮಯ ದಿನಗಳನ್ನು ನೆನಪಿಸಿಕೊಳ್ಳಬೇಡಿ. ಅವುಗಳ ಜತೆ ಗುರುತಿಸಿಕೊಳ್ಳಬೇಡಿ. ಸಂತಸಮಯ ಕ್ಷಣಗಳ ಜತೆ ಹಾಗೂ ವೈಶಾಲ್ಯದ ಜತೆ ನಿಮ್ಮನ್ನು ನೀವು ಗುರುತಿಸಿಕೊಳ್ಳಿ. ನಿಮ್ಮ ಮನಸ್ಸು ಹಾಗೂ ದೇಹದ ಕೋಶಗಳನ್ನು ಅರಳಿಸಿಕೊಳ್ಳಿ. ಸಂತರು ಇದನ್ನು ಸುಂದರವಾಗಿ ಹೇಳುತ್ತಾರೆ. ಮತ್ತಷ್ಟು ವಿಸ್ತರಿಸಿಕೊಳ್ಳಿ ಎಂದು ಹೇಳುತ್ತಾರೆ.

ನಿಮ್ಮ ವೈಯಕ್ತಿಕ ವ್ಯಕ್ತಿತ್ವಕ್ಕಿಂತ ಶ್ರೇಷ್ಠ ವಿಚಾರದ ಜತೆ ನಿಮ್ಮನ್ನು ನೀವು ಗುರುತಿಸಿಕೊಳ್ಳಿ. ದೈವಿಕತೆಯ ಜತೆ ಗುರುತಿಸಿಕೊಳ್ಳಿ. ನಿಮ್ಮ ಉಸಿರು ದೈವಿಕತೆಯ ಉಸಿರು ಎಂದುಕೊಳ್ಳಿ. ಎಲ್ಲಕ್ಕಿಂತ ಮುಖ್ಯವಾಗಿ ಇತರರನ್ನು ಅವಗಣನೆಯಿಂದ ನೋಡಬೇಡಿ. ನಿಮ್ಮ ಅಭಿಪ್ರಾಯದಿಂದ ಅವರು ಚಿಕ್ಕವರಾಗುವುದಿಲ್ಲ. ನೀವು ಚಿಕ್ಕವರಾಗುತ್ತೀರಿ. ನಿಮ್ಮ ಮನಸ್ಸಿನೊಳಗೆ ಶಾಂತ ಹಾಗೂ ಸರಳ ಅವಕಾಶಗಳನ್ನು ಹುಡುಕಿಕೊಳ್ಳಿ. ನಿಮಗೆ ಅದು ಸಿಗುತ್ತದೆ. ಪ್ರತಿನಿತ್ಯ 45–60 ನಿಮಿಷ ಸಮಾಧಾನದಿಂದ ಕಣ್ಣುಮುಚ್ಚಿ ಕುಳಿತುಕೊಳ್ಳಿ. ಮೂಗಿನ ಮೂಲಕ ಉಸಿರು ಎಳೆದುಕೊಳ್ಳುತ್ತ ಒಂದರಿಂದ ಎಂಟರವರೆಗೆ ಎಣಿಸಿ. ಬಾಯಿಯ ಮೂಲಕ ಉಸಿರು ಹೊರಹಾಕುತ್ತ ಒಂದರಿಂದ ಎಂಟರವರೆಗೆ ಎಣಿಸಿ. ಉಚ್ಛ್ವಾಸ ಹಾಗೂ ನಿಶ್ವಾಸದ ಸಮಯದಲ್ಲಿ ಪ್ರಶಾಂತ ಹಾಗೂ ಸರಳ, ಸಂತಸ ಎಂದು ಮನಸ್ಸಿನಲ್ಲಿ ಹೇಳಿಕೊಳ್ಳಿ. ಈಗಿನ ಕ್ಷಣ ದೈವಿಕ ಕ್ಷಣ ಎಂದು ಹೇಳಿಕೊಳ್ಳಿ. ಹತ್ತು ಸಲ ಹೀಗೆ ಉಸಿರೆಳೆದುಕೊಳ್ಳುತ್ತ ನಿಶ್ಶಬ್ದದಲ್ಲಿ ಇರಿ. ಆಲೋಚನೆಗಳು ಬರುತ್ತವೆ, ಹೋಗುತ್ತವೆ. ಆದರೆ, ಅವುಗಳ ಹಿಂದಿರುವ ಶಾಂತ ಹಾಗೂ ಸ್ಥಿರ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಿ. ಈ ಉಸಿರಾಟದ ವ್ಯಾಯಾಮ ನಿಮ್ಮ ಬದುಕಿಗೆ ಉನ್ನತ ಹಾಗೂ ದೈವಿಕ ಮೌಲ್ಯ ತಂದುಕೊಡುತ್ತದೆ.

ತ್ತೀಚೆಗೆ ನಾನು ಕೆಲಸಗಳ ಮಧ್ಯೆ ವಿಶ್ರಾಂತಿ ಪಡೆಯುತ್ತಿದ್ದಾಗ ಗಾಳಿಯಲ್ಲಿ ಸಿಹಿ ಭಾವನೆ ತೇಲಿಬಂದಂತೆ ಅನಿಸಿತು. ಅದರ ಹಿಂದೆಯೇ ‘ಆಶಾಭಾವನೆ’ ಎಂಬ ಪದ ನನ್ನ ಮನದಲ್ಲಿ ಮೂಡಿತು. ಆ ಪದವೇ ಗಾಳಿಯಲ್ಲಿ ನರ್ತಿಸುತ್ತಿರುವಂತೆ ಅನ್ನಿಸಿತು. ನಿಮ್ಮ ಮನಸ್ಸು ವಿಸ್ತರಿಸಿಕೊಳ್ಳಲು ಹಲವು ದಾರಿಗಳಿವೆ. ಪರ್ವತ ಶ್ರೇಣಿಗಳ ರಮಣೀಯ ದೃಶ್ಯವನ್ನು ನೋಡಿ ಆನಂದಿಸಿ. ಸೂರ್ಯಾಸ್ತದ ಹೊಂಬಣ್ಣದ ಬೆಳಕಿನಲ್ಲಿ ತೊಯ್ಯಿರಿ. ಆಕಾಶದ ವಿಸ್ತಾರದಲ್ಲಿ ಕಳೆದುಹೋಗಿ. ಮತ್ತಷ್ಟು ವಿಸ್ತರಿಸಿಕೊಳ್ಳಿ. ನಿಮಗಿಂತ ಮೊದಲು ಇವೆಲ್ಲವೂ ಸೃಷ್ಟಿಯಾಗಿದ್ದವು.

-ಭರತ್ ಮತ್ತು ಶಾಲನ್ ಸವೂರ್.

No comments:

Post a Comment