Thursday, January 7, 2016

ಸಂಸಾರದಿಂದಲೂ ಸದ್ಗತಿ

ಗತ್ತಿನಲ್ಲಿರುವವರೆಲ್ಲರೂ ಸದಾ ಸುಖವನ್ನೇ ಬಯಸುತ್ತಾರೆ, ದುಖಃದಲ್ಲಿರುವುದನ್ನು ಮನುಷ್ಯರಷ್ಟೇ ಅಲ್ಲ ಯಾವ ಪ್ರಾಣಿಗಳೂ ಬಯಸುವುದಿಲ್ಲ. ಸುಖವನ್ನು ಅನುಭವಿಸುವುದಕ್ಕಾಗಿಯೇ ಎಲ್ಲ ಜೀವಿಗಳು ನಿರಂತರ ಪ್ರಯತ್ನದಲ್ಲಿರುವುದು ಅನುಭವವೇದ್ಯವಾಗಿದೆ. ಈ ಸುಖವನ್ನು ಸಂಸಾರದ ವಿಷಯ ಭೋಗಗಳಲ್ಲಿ ಕೆಲವರು ಅರಸಿದರೆ ಇನ್ನು ಕೆಲವರು ಅಧ್ಯಾತ್ಮ ಸಾಧನೆಯ ಮೂಲಕ ಪಡೆಯಬೇಕೆನ್ನುತ್ತಾರೆ. ವಿಷಯ ಭೋಗಗಳಿಂದ ಪ್ರಾಪ್ತವಾದ ಸುಖ ಅನಿತ್ಯ ಮತ್ತು ಕ್ಷಣಿಕವೆನಿಸಿದರೆ ಆಧ್ಯಾತ್ಮ ಸಾಧನೆಯ ಮೂಲಕ ದೊರೆವ ಸುಖ ಶಾಶ್ವತವಾದುದೆಂದು ಜ್ಞಾನಿಗಳು ಮತ್ತು ಅನುಭಾವಿಗಳು ತಮ್ಮ ಅನುಭವದಿಂದ ಸ್ಪಷ್ಟಪಡಿಸಿದ್ದಾರೆ.

ಧ್ಯಾತ್ಮ ಸಾಧನೆಗೆ ಮಹಿಳೆ ಪುರುಷರೆಂಬ ಭೇಧವಿಲ್ಲ. ಮಹಿಳೆಯನ್ನು ಅಪವಿತ್ರ, ಅಬಲೆ ಎಂದು, ಆಧ್ಯಾತ್ಮ ಸಾಧನೆಗೆ ಅನರ್ಹಳೆಂದು ಹೇಳುವುದು ಅರ್ಥಹೀನ ಅಷ್ಟೇ ಅಲ್ಲ ಮೂರ್ಖತನವೂ ಹೌದು. ಮಹಿಳೆಯರು ಸಾಧನೆಗೆ ಅರ್ಹರಲ್ಲ ಎಂಬುದಕ್ಕೆ ಯಾವುದೇ ಆಧಾರವಿಲ್ಲ. ‘ಉತ ತ್ವಾ ಸ್ತ್ರೀ ಶಶೀಯಸೀ ಪುಂಸೋ ಭವತಿ ವಸ್ಯಸಿ (ಋಗ್ವೇದ 5.5.61.6) ಅಂದರೆ ಪುರುಷನಿಗಿಂತಲೂ ಮಹಿಳೆ ದೇವತಾರ್ಚನೆ ಮತ್ತು ಧರ್ಮನಿಷ್ಠೆಗೆ ಹೆಚ್ಚು ಪ್ರಶಸ್ತಳು ಎಂದು ವೇದದಲ್ಲಿಯೇ ಹೇಳಿದ್ದರೂ ಪುರೋಹಿತಶಾಹಿ ಪ್ರವೃತ್ತಿಯ ಮನುವಾದಿಗಳು ‘ನ ಸ್ತ್ರೀ ಸ್ವಾತಂತ್ರ್ಯಮರ್ಹತಿ’ ಎಂದು ಹೇಳುವುದು ಕೃತಕವೆನಿಸುತ್ತದೆ. ಸಾಧನೆಗೆ ಪುರುಷ ಮಹಿಳೆ ಎಂಬ ಭೇದವಾಗಲೀ ವಯೋಭೇದವಾಗಲಿ ಇಲ್ಲ. ಅವರು ಯಾರೇ ಇರಲಿ ಅವರಲ್ಲಿರುವ ಪಾವಿತ್ರ್ಯ ಮತ್ತು ಶ್ರದ್ಧೆಗಳು ಬಹಳ ಮುಖ್ಯ. ಮಹಿಳೆಯನ್ನು ಮಾಯೆ ಎಂದು ಹೆಸರಿಸಿ ಮನುಷ್ಯಳನ್ನಾಗಿ ಕಾಣದ ಕುರುಡರನ್ನು ಶರಣರು ಮನದ ಮುಂದಣ ಆಶೆಯೇ ಮಾಯೆ ಎಂದು ಎಚ್ಚರಿಸಿದ್ದಾರೆ. ಹೆಣ್ಣು ಬಿಟ್ಟು ಲಿಂಗವನೊಲಿಸಬೇಕೆಂಬುದು ಶರಣ ಸಮ್ಮತವಲ್ಲ. ಇಲ್ಲದ ಮಾಯೆಯನ್ನುಂಟು ಮಾಡಿಕೊಂಡು ಬಲ್ಲತನಕ್ಕೆ ಬಾಯಿ ಬಿಡುವ ಅಗತ್ಯವಿಲ್ಲ. ಹಾಗಾಗಿ ಮಹಿಳೆ ಮತ್ತು ಪುರುಷ ಇಬ್ಬರೂ ವಿವಾಹ ಬಂಧನದಲ್ಲಿದ್ದರೂ ಆಧ್ಯಾತ್ಮ ಸಾಧನೆಗೆ ಯಾವುದೇ ಕುಂದುಕೊರತೆ ಇಲ್ಲ. ಕೂಟಕ್ಕೆ ಸತಿ ಪತಿ ಎಂಬ ನಾಮವಲ್ಲದೆ ಅರಿವಿಂಗೆ ಬೇರೊಂದೊಡಲುಂಟೆ? ಎಂದು ಆಯ್ದಕ್ಕಿ ಲಕ್ಕಮ್ಮ ಪ್ರಶ್ನಿಸುತ್ತಾಳೆ.

ದಾಂಪತ್ಯ ಜೀವನ ಪರಿಶುದ್ಧವಾಗಿರುವುದು ಮುಖ್ಯ. ದಾಂಪತ್ಯದಿಂದ ಅಧ್ಯಾತ್ಮ ಸಾಧನೆಗೆ ಭಂಗವೇನೂ ಇಲ್ಲ.
ಸತಿ ಪತಿ ರತಿ ಸುಖವ ಬಿಟ್ಟರೆ ಸಿರಿಯಾಳ ಚಂಗಳೆಯರು? ಸತಿ ಪತಿ ರತಿ ? ಭೋಗೋಪಭೋಗವಿಳಾಸವ ಬಿಟ್ಟನೆ ಸಿಂಧು ಬಲ್ಲಾಳ?
ಎಂದು ಹೇಳುವ ಬಸವಣ್ಣನವರು ಸರಳ, ಸಹಜ ಮತ್ತು ಪರಿಶುದ್ಧ ದಾಂಪತ್ಯಜೀವನದಿಂದ ಅಧ್ಯಾತ್ಮದ ಔನ್ನತ್ಯಕ್ಕೇರಬಹುದೆಂಬುದನ್ನು ಉದಾಹರಣೆಯ ಮೂಲಕ ತಿಳಿಸಿದ್ದಾರೆ. ಸತಿಪತಿಗಳೊಂದಾಗಿ ಮಾಡುವ ಭಕ್ತಿ ಭಗವಂತನಿಗೂ ಪ್ರಿಯವೆನ್ನುತ್ತಾರೆ ದಾಸಿಮಯ್ಯನವರು. ಸತಿಪತಿಗಳಿಬ್ಬರೂ ಕೂಡಿ ಅಧ್ಯಾತ್ಮ ಸಾಧನೆಯನ್ನು ಮುಂದುವರಿಸಿದಾಗ ಸತಿಪತಿಗಳೆಂಬ ಭಾವವು ಸಂಪೂರ್ಣವಾಗಿ ತೊಲಗಿ ಶರಣಸತಿ ಲಿಂಗಪತಿ ಎಂಬ ಭಾವ ಮೈದೋರುತ್ತದೆ. ಸತಿ ಪತಿಯೆಂಬ ಅಂಗಸುಖ ಹಿಂಗಿ ಲಿಂಗವೇ ಪತಿಯಾದ ಬಳಿಕ ಸತಿಗೆ ಪತಿಯುಂಟೆ? ಪತಿಗೆ ಸತಿಯುಂಟೆ? ಎನ್ನುತ್ತಾರೆ ಅಲ್ಲಮಪ್ರಭುಗಳು. ಇದಕ್ಕಿಂತ ಉನ್ನತವಾದ ಸಾಧನೆ ಮತ್ತೊಂದಿಲ್ಲ. ಮತ್ತೊಂದು ಸಾಧನೆಯ ಅವಶ್ಯಕತೆಯೂ ಇಲ್ಲ ಎಂಬುದು ಅವರ ‘ಪಾಲುಂಡು ಮತ್ತೆ ಮೇಲುಂಬರೆ ಗುಹೇಶ್ವರಾ?’ ಎಂಬ ಮಾತಿನಿಂದಲೇ ಗುರುತಿಸಬಹುದಾಗಿದೆ. ಆದ್ದರಿಂದ ಅಧ್ಯಾತ್ಮ ಸಾಧನೆಗೆ ದಾಂಪತ್ಯಜೀವನ ಅಥವಾ ಸಂಸಾರ ತಾಜ್ಯವಲ್ಲ. ಸಂಸಾರದಲ್ಲಿದ್ದರೂ ಅದರ ಇತಿಮಿತಿಗಳನ್ನು ಅರಿತು ಸಹಜವಾಗಿ ಬದುಕುತ್ತ ಅಧ್ಯಾತ್ಮ ಸಾಧನೆ ಮಾಡಿದರೆ ಸಂಸಾರದಿಂದಲೂ ಸದ್ಗತಿ ಸಾಧ್ಯವಿದೆ.

-ಡಾ. ಸಿದ್ದರಾಮ ಸ್ವಾಮಿಗಳು.

No comments:

Post a Comment