Thursday, January 7, 2016

ಅಹಿಂಸೆ

ಅಹಿಂಸೆಯೇ ಪರಮ ಧರ್ಮ ಎನ್ನುತ್ತದೆ ಮಾನವನ ತಿಳಿವಳಿಕೆ. ಹೇಳುವುದು ಸುಲಭ; ಹೇಳಿದಂತೆ ಬಾಳುವುದು ಕಡುಕಷ್ಟ. ಹಿಂಸೆ ಕೇವಲ ದೇಹಕ್ಕೆ ಸಂಬಂಧಿಸಿದ್ದಲ್ಲ, ಮನಸ್ಸಿಗೂ ಅನ್ವಯಿಸಿದ್ದು. ದೈಹಿಕ ಹಿಂಸೆ ಕಣ್ಣಿಗೆ ಕಾಣುವುದು. ಮಾನಸಿಕ ಹಿಂಸೆ ಕಣ್ಣಿಗೆ ಕಾಣದ್ದು. ದೈಹಿಕ ಹಿಂಸೆಯ ಕ್ರೌರ್ಯ ಶಾಬ್ದಿಕ ಅಬ್ಬರದ್ದು. ಮಾನಸಿಕ ಹಿಂಸೆಯ ನೋವು ರಣಮೌನದ್ದು. ಜಗತ್ತಿನಲ್ಲಿ ಎಲ್ಲ ಧರ್ಮಗಳು ಹಿಂಸೆಯನ್ನು ವಿರೋಧಿಸಿವೆ; ಜೀವದಯೆಯನ್ನು ಪ್ರತಿಪಾದಿಸಿವೆ.

ಚನ ಧರ್ಮದಲ್ಲಿಯೂ ಬಸವಣ್ಣನವರು ದಯೆಯೇ ಧರ್ಮದ ಮೂಲವಯ್ಯಾ ಎಂದರು. ದಯೆಯನ್ನು ಜೀವನಧರ್ಮವಾಗಿ ಬಾಳಿದ ಶರಣ ದಸರಯ್ಯ. ದಸರಯ್ಯನೂ ಒಬ್ಬ ವಚನಕಾರ. ಅಹಿಂಸೆಯನ್ನು ಅದರ ಪರಾಕಾಷ್ಠೆಯಲ್ಲಿ ಬದುಕಿದ್ದ ಶರಣ; ತರುಲತೆ ಸ್ಥಾವರ ಜೀವಂಗಳೆಲ್ಲ ದೇವರ ಕಾರುಣ್ಯದಿಂದೊಗೆದವು ಎಂದು ಭಾವಿಸಿದ್ದವನು. ಒಮ್ಮೆ ಅವನು ಪೂಜೆಗೆ ಹೂವು ಕೀಳುತ್ತಿದ್ದಾಗ ಒಂದು ಹೂವಿನಗಿಡ ‘ನನ್ನ ಹೂವು ಕೀಳುತ್ತೀಯಲ್ಲ. ನನಗೆ ನೋವಾಗುವುದಿಲ್ಲವೆ’ ಎಂದು ಕೇಳಿದಂತಾಗುತ್ತದೆ. ಅಂದಿನಿಂದ ಅವನು ಗಿಡದಿಂದ ಹೂವು ಕಿತ್ತು ತರುವುದನ್ನು ಬಿಟ್ಟ. ಗಿಡದಿಂದ ಬಿದ್ದ ಹೂವುಗಳನ್ನು ಮಾತ್ರ ಆರಿಸಿ ತಂದು ದೇವರಿಗೆ ಅರ್ಪಿಸುತ್ತಿದ್ದ.
ಉದುರಿ ಬೀಳುವನ್ನಕ್ಕ ನಿನ್ನ ಹಂಗು
ಉದುರಿ ಬಿದ್ದಲ್ಲಿ ಎನ್ನೊಡವೆ
ನಾ ಪೂಜಿಸದನ್ನಕ್ಕ ದೇವ
ಎನ್ನ ಪೂಜೆಗೊಳಗಾದಲ್ಲಿ
ನೀ ಭಕ್ತ ನಾನಿತ್ಯ ಇಂತೀ
ಸರ್ವರ ದಯವಸ್ತು ಬೀಜವಲಾ
ಸರ್ವ ಮಲತ್ರಯದೂರ ಸರ್ವಾಂಗ
ಸಂತೋಷ ನಿಗರ್ವ
ದಸರೇಶ್ವರಲಿಂಗವು ತಥ್ಯಮಿಥ್ಯದವನಲ್ಲ

ಸರಯ್ಯನ ಈ ವಚನ ಅವನ ಜೀವನಧರ್ಮಕ್ಕೆ ಕನ್ನಡಿ ಹಿಡಿದಿದೆ. ಇಲ್ಲಿ ಗಮನಿಸಬೇಕಾದ ಅಂಶ, ಪೂಜಿಸಿಕೊಂಡ ದೈವವೇ ಭಕ್ತನಾಗುವುದು. ಪೂಜೆ ಮಾಡಿದವನು ನಿತ್ಯನಾಗುವುದು. ಈ ಪಲ್ಲಟದ ಹಿಂದೆ ಇರುವ ನೈತಿಕ ಭಾವ ಅಹಮಿಕೆಯಿಂದ ಬೀಗುವುದಲ್ಲ; ಆತ್ಮವಿಶ್ವಾಸದಿಂದ ಬಾಗುವುದು. ಸರ್ವರೊಳಗಿರುವ ಆಣವ ಮಾಯಾ ಕಾರ್ಮಿಕಗಳೆಂಬ ಮಲತ್ರಯಗಳಿಂದ ದೂರವುಳಿದು ಸರ್ವಾಂಗ ಸಂತೋಷ ನಿಗರ್ವಿಯಾಗುವುದು. ದಸರಯ್ಯನು ರಚಿಸಿರುವ ಹತ್ತು ವಚನಗಳನ್ನು ಗಮನಿಸಿದಾಗಲೂ ಅಲ್ಲಿ ಕಾಣಬರುವುದು ಈ ಬಗೆಯ ಮಾನಸಿಕ ಶುದ್ಧತೆಯ ನಡೆಯ ಚಿತ್ರಣ; ಅಹಿಂಸಾ ಧರ್ಮದ ಜೀವನ ದರ್ಶನ. ಗಾಂಧೀಜಿಯವರ ಬದುಕಿನಲ್ಲಿಯೂ ಅಹಿಂಸೆ ಒಂದು ವ್ರತ. ಅದು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಹುದೊಡ್ಡ ಅಸ್ತ್ರವಾಯಿತು. ಜಾಗತಿಕ ಶಾಂತಿಯನ್ನು ಹಂಬಲಿಸಿದ ಗಾಂಧೀಜಿಯವರು ‘ವಿಶ್ವಶಾಂತಿಗಾಗಿ ನಡೆಯುವ ಸಮರದಲ್ಲಿ ಮಹಿಳೆಯೇ ಸೈನಿಕಳು’ ಅಹಿಂಸೆಯೇ ಅವಳ ಆಯುಧ’ ಎಂದು ಹೇಳಿದ್ದಾರೆ.

-ಎಸ್.ಜಿ. ಸಿದ್ದರಾಮಯ್ಯ.

No comments:

Post a Comment