Thursday, January 7, 2016

ನಾನೆಂಬ ಅಹಂಕಾರ

ಭಾರತೀಯ ಷಡ್ದರ್ಶನಗಳ ಮುಖ್ಯ ಶಾಖೆಗಳಾಗಿರುವ ಸಾಂಖ್ಯ ಮತ್ತು ವೇದಾಂತ ದರ್ಶನಗಳಲ್ಲಿ ಅಹಂಕಾರವು ಪ್ರಮುಖವಾಗಿ ಗುರುತಿಸಲ್ಪಡುತ್ತದೆ. ಸಾಂಖ್ಯರ ಸೃಷ್ಟಿ ರಚನೆಯ ಪ್ರಕ್ರಿಯೆಯಲ್ಲಿ ಮಹತ್ ಅಥವಾ ಬುದ್ಧಿಯ ನಂತರದ ಸ್ಥಾನ ಅಹಂಕಾರದ್ದು. ಈ ಅಹಂಕಾರದ ಮೂಲಕವೇ ಸೃಷ್ಟಿಯ ಪರಿಣಾಮಗಳ ಜೊತೆಗೆ ಪುರುಷನು ಗುರುತಿಸಿಕೊಳ್ಳುವನು. ಇದೂ ಅಲ್ಲದೆ ಪಂಚ ಕರ್ಮೇಂದ್ರಿಯಗಳು, ಪಂಚಜ್ಞಾನೇಂದ್ರಿಯಗಳು, ಪಂಚಭೂತಗಳು ಮತ್ತು ಪಂಚ ತನ್ಮಾತ್ರೆಗಳೆಲ್ಲವೂ ಅಹಂಕಾರದಿಂದಲೇ ಹುಟ್ಟಿಕೊಳ್ಳುತ್ತವೆ.

ಅಂತತರಂಗದ ಇಂದ್ರಿಯಗಳಾದ ಅಂತಃಕರಣ ಚತುಷ್ಟಯಗಳಲ್ಲಿ ಅಹಂಕಾರವೂ ಒಂದಾಗಿದ್ದು, ಯಾವುದೇ ವಸ್ತುವನ್ನು ತಿಳಿದುಕೊಳ್ಳುವಲ್ಲಿ ಈ ಅಹಂಕಾರದ ಪಾತ್ರ ಗಮನಾರ್ಹವಾಗಿದೆ. ದರ್ಶನಗಳಲ್ಲಿ ವಿಶಿಷ್ಟ ಸ್ಥಾನ ಪಡೆದ ಅಹಂಕಾರವು ವ್ಯಕ್ತಿಯ ಅಧ್ಯಾತ್ಮ ಸಾಧನೆಯಲ್ಲಿ ಬೇರೆಯದೇ ಆದ ಅರ್ಥದಲ್ಲಿ ಅಂದರೆ ದೇಹಾಭಿಮಾನ ಎಂಬರ್ಥದಲ್ಲಿ ಉಪಯೋಗಿಸಲ್ಪಟ್ಟಿರುವುದನ್ನು ಶರಣರ, ಸಂತರ, ದಾಸರ ವಚನಗಳಲ್ಲಿ ಕಾಣಬಹುದಾಗಿದೆ. ದೇಹವೇ ನಾನೆಂಬ ಭಾವ ಇರುವವರೆಗೆ ಅಹಂಕಾರವು ನಮ್ಮಲ್ಲಿ ಮನೆಮಾಡಿಕೊಂಡಿರುತ್ತದೆ. ನಾನು, ನನ್ನದು ಎಂಬ ಅಭಿಮಾನಕ್ಕೆ ಕಾರಣವಾದುದೇ ಅಹಂಕಾರ. ಈ ಅಹಂಕಾರವು ಮನಸ್ಸಿನಲ್ಲಿ ಇಂಬುಗೊಂಡಾಗ ಅಧ್ಯಾತ್ಮ ಸಾಧನೆಗೆ ಅಡ್ಡಿಯಾಗುವುದಷ್ಟೇ ಅಲ್ಲ, ಅಧಃಪತನಕ್ಕೂ ಕಾರಣವಾಗಬಹುದು. ಅಹಂಕಾರವೆಂಬುದು ‘ಮದವೇರಿದ ಆನೆ ಇದ್ದ ಹಾಗೆ’ ಎಂದು ಹೇಳುವ ಬಸವಣ್ಣನವರು - ‘ಅಹಂಕಾರವೆಂಬ ಸದಮದಗಜವೇರಿ ವಿಧಿಗೆ ಗುರಿಯಾಗಿ ನೀವು ಹೋದಿರಲ್ಲಾ ’ಎನ್ನುತ್ತಾರೆ. ಅಹಂಕಾರವುಳ್ಳವರಿಗೆ ನರಕವೇ ಗತಿಯಾಗುತ್ತದೆ.

ನಾನೆಂಬ ಅಹಂಕಾರ ತಲೆದೋರಿದಲ್ಲಿ ಅಟಮಟ ಕುಟಿಲ ಕುಹಕವೆಂಬ ಬಿರುಗಾಳಿ ಹುಟ್ಟಿತ್ತು. ಆ ಬಿರುಗಾಳಿ ಹುಟ್ಟಲೊಡನೆ ಜ್ಞಾನಜ್ಯೋತಿ ಕೆಟ್ಟಿತ್ತು. ಜ್ಞಾನಜ್ಯೋತಿ ಕೆಡಲೊಡನೆ ನಾ ಬಲ್ಲೆ ಬಲ್ಲಿದರೆಂಬ ಅರುಹಿರಿಯರೆಲ್ಲರೂ ತಾಮಸಕ್ಕೊಳಗಾಗಿ ಸೀಮೆದಪ್ಪಿ ಕೆಟ್ಟರು ಕಾಣಾ ಗುಹೇಶ್ವರಾ’ ಎಂಬ ಅಲ್ಲಮಪ್ರಭುವಿನ ವಚನದಲ್ಲಿ ನಾನೆಂಬ ಅಹಂಕಾರದ ಪರಿಣಾಮವನ್ನು ಪರಿಣಾಮಕಾರಿಯಾಗಿ ಚಿತ್ರಿಸಲಾಗಿದೆ. ಅಹಂಕಾರವುಳ್ಳವರು ಆಸೆ-ಆಮಿಷ, ಕಾಮ-ಕ್ರೋಧ ಮತ್ತು ಮದ-ಮತ್ಸರಗಳಿಗೆ ಬಲಿಯಾಗಿ ತಮ್ಮ ವಿವೇಕವನ್ನೇ ಕಳೆದುಕೊಳ್ಳುತ್ತಾರೆ. ಮಹಾನ್ ಜ್ಞಾನಿಗಳೇ ಅಹಂಕಾರದಿಂದ ಅಧಃಪತನ ಹೊಂದಿರುವಾಗ ಸಾಮಾನ್ಯರ ಪಾಡಂತೂ ಹೇಳತೀರದು. ಅಹಂಕಾರವು ಮನಸ್ಸನ್ನು ಆವರಿಸಿದಾಗ ಭಗವಂತನು ನಮ್ಮ ಮನಸಿನಿಂದ ದೂರ ಸರಿಯುತ್ತಾನೆ. ಅಹಂಕಾರವಳಿದ ಶುದ್ಧ ಮನಸ್ಸು ಲಿಂಗತನುವೆನಿಸಿಕೊಳ್ಳುತ್ತದೆ. ಅಂತಹ ಶುದ್ಧ ಮನಸ್ಸಿನಲ್ಲಿ ಭಗವಂತನು ನೆಲೆಗೊಳ್ಳುತ್ತಾನೆ. ಆದ್ದರಿಂದಲೇ ಬಸವಣ್ಣನವರು- ‘ಅಹಂಕಾರಿಯಾಗದೇ ಶರಣೆನ್ನು ಮನವೆ’ ಎಂದು ಮನಸ್ಸಿಗೆ ತಿಳಿಹೇಳುತ್ತಾರೆ. ಶರಣರು, ಸಂತರು ಅಹಂಕಾರವನ್ನು ತ್ಯಾಗ ಮಾಡಿದವರು. ಅಂಥವರ ಸಂಗದಲ್ಲಿರುವುದರಿಂದ ಸಹಜವಾಗಿಯೆ ನಮ್ಮ ಅಹಂಕಾರವು ನಾಶವಾಗುತ್ತದೆ. ನಾವು ಮುಕ್ತಿಯರಮನೆಯ ಪ್ರವೇಶಕ್ಕೆ ಅರ್ಹರಾಗುತ್ತೇವೆ.

ವೈಕುಂಠಕ್ಕೆ ನಿಮ್ಮಲ್ಲಿ ಯಾರು ಹೋಗುತ್ತೀರಿ ? ಎಂಬ ಗುರುಗಳ ಪ್ರಶ್ನೆಗೆ ಕನಕದಾಸರು - ನಾನು ಹೋದರೆ ಹೋದೇನು ಎಂದುತ್ತರಿಸುವಲ್ಲಿ ನಾನು ಎಂಬ ಅಹಂಕಾರ ಹೋದರೆ ಮೋಕ್ಷ ಸುಲಭವಾಗುತ್ತದೆ’ ಎಂಬರ್ಥವು ಧ್ವನಿತವಾಗುತ್ತದೆ. ಅಹಂಕಾರವನೆ ಮರೆದು, ದೇಹಗುಣಂಗಳನೆ ಜರೆದು ಇಹಪರವು ತಾನೆಂದರಿದ ಕಾರಣ ‘ ಸೋಹಂ ’ ಭಾವ ಸುಸ್ಥಿರವಾಯಿತ್ತು - ಎನ್ನುತ್ತಾರೆ ಅಲ್ಲಮಪ್ರಭುದೇವರು. ನಮ್ಮಲ್ಲಿರುವ ದೇಹ ಗುಣಗಳ ಅಭಿಮಾನ ಮತ್ತು ನಾನೆಂಬ ಅಹಂಭಾವ ಅಳಿಯಬೇಕು. ಪರಾತ್ಪರ ವಸ್ತುವೆ ತಾನೆಂದರಿಯ ಬೇಕು, ತಾನಾಗಿ ನಿಲ್ಲಬೇಕು. ಹಾಗಾದಾಗಲೇ ‘ ಸೋಹಂ’ ಭಾವದ ಸಿದ್ಧಿ.

-ಡಾ.ಸಿದ್ದರಾಮ ಸ್ವಾಮಿಗಳು.

No comments:

Post a Comment