Thursday, January 7, 2016

ಗುರು ಶಿಷ್ಯ

ಲಬುರ್ಗಿಯ (ಗುಲ್‌ಬರ್ಗಾ) ಸಂತ ಖ್ವಾಜಾ ಬಂದೇನವಾಜ್‌ರವರು ಗುರು ಶಿಷ್ಯ (ಪೀರ್-ಮುರೀದ್)ಸಂಬಂಧಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಿದ್ದರು. ಅವರ ಗುರು-ಶಿಷ್ಯ ಸಂಬಂಧದ ವ್ಯಾಖ್ಯಾನ ಸೂಫಿ ಆಧ್ಯಾತ್ಮಿಕ ವಲಯದಲ್ಲಿ ವೈಶಿಷ್ಟ್ಯಪೂರ್ಣವೂ, ಮಹತ್ವದ್ದೂ ಆಗಿದೆ ಎಂದು ಪರಿಗಣಿಸಲ್ಪಟ್ಟಿದೆ.

ಚಿಸ್ತಿಯಾ ಪರಂಪರೆಯ ಸೂಫಿ ಅನುಭಾವಿಗಳ ತತ್ವಗಳ ಪ್ರಕಾರ ಷೇಖ್ ಅಥವಾ ಗುರುಗಳ ಮೇಲಿನ ವೈಯಕ್ತಿಕ ಮತ್ತು ಪೂರ್ಣ ಪ್ರಮಾಣದ ನಿಷ್ಠೆ ಮತ್ತು ಗೌರವಪೂರ್ಣ ದೈನ್ಯತೆಯು ಪೀರ್ ಮತ್ತು ಮುರೀದ್ ಅಥವಾ ಗುರು-ಶಿಷ್ಯರ ನಡುವಿನ ಭಾವನಾತ್ಮಕ ಸಂಬಂಧದಲ್ಲಿ ಮೂಡುವುದು ಅತೀ ಅಗತ್ಯವಾಗುತ್ತದೆ.

  ಈ ಪೀರ್-ಮುರೀದ್ ಸಂಬಂಧದಲ್ಲಿ ಹಿಂದೂ ಆಧ್ಯಾತ್ಮದ ಗುರು-ಶಿಷ್ಯ ಪರಂಪರೆಯ ಸಂಬಂಧದ ಪ್ರಭಾವವಿದೆಯೆಂದು ಪರಿಗಣಿಸಲಾಗಿತ್ತು. ಈ ಸಂಬಂಧವು ತ್ರಿಕೋನಾತ್ಮಕ ಪರಿಕಲ್ಪನೆಯನ್ನು ಕೂಡಿದ್ದು,  ಶಿಷ್ಯನು ದೇವರನ್ನು ಮತ್ತು ತನ್ನನ್ನು ಆಧ್ಯಾತ್ಮಿಕ ಗುರುವಿನ ಹೃದಯದಲ್ಲಿ ಕಾಣುತ್ತಾನೆ. ಆದರೆ ‘ಆಧ್ಯಾತ್ಮಿಕ ಗುರು ತನ್ನನ್ನು ಶಿಷ್ಯನ ಹೃದಯದಲ್ಲಿ ಕಾಣಲು ಬಯಸುತ್ತಾನೆ’ ಎಂದು ಐನ್ ಅಲ್ ಖುದ್ದತ್ ಅಲ್ ಹಮ್ದಾನಿಯವರು ತಮ್ಮ ಕೃತಿ ‘ತಮ್ಹಿದತ್’ನಲ್ಲಿ ಹೇಳಿದ್ದನ್ನು ಖ್ವಾಜಾ ಬಂದೇನವಾಜ್‌ರವರು ಉಲ್ಲೇಖಿಸುತ್ತಾರೆ. ಮುಂದೆ ಇದನ್ನೇ ಖ್ವಾಜಾರವರು ಪ್ರತಿಫಲನದ ಸಂಕೇತದ ಮೂಲಕ ವಿವರಿಸುತ್ತಾರೆ.

ಸೂರ್ಯನ ಬೆಳಕು ಶುದ್ಧನೀರಿನಲ್ಲಿ ಪ್ರಖರವಾಗಿ ಪ್ರತಿಫಲಿಸುತ್ತದೆ ಆದರೆ ಅಪಾರದರ್ಶಕವಾದ ಗೋಡೆಯ ಮೇಲೆ ಬಿದ್ದರೆ ಪ್ರತಿಪಲಿಸುವುದಿಲ್ಲ. ಗುರು(ಪೀರ್) ಅಂದರೆ ಶುದ್ಧ ನೀರಿನಂತೆ ಮತ್ತು ಮುರೀದ್ (ಶಿಷ್ಯ) ಅಪಾರದರ್ಶಕ ಗೋಡೆಯಂತೆ. ನೀರಿನ ಬಳಿಯಲ್ಲಿ ಗೋಡೆಯಿದ್ದರೆ ಸೂರ್ಯನ ಬೆಳಕು ನೀರಿನಲ್ಲಿ ನೀಡುವ ಪ್ರತಿಫಲನದಿಂದಾಗಿ ಗೋಡೆಯಲ್ಲಿ ಕೂಡ ಪ್ರತಿಫಲಿಸುವುದು ಸಾಧ್ಯವಾಗುತ್ತದೆ ಎನ್ನುತ್ತಾರೆ ಖ್ವಾಜಾ ಬಂದೇನವಾಜ಼್.

ಖ್ವಾಜಾ ಬಂದೇನವಾಜ್ ತಮ್ಮ ಗ್ರಂಥ ‘ಖಾತಿಮಾ’ದಲ್ಲಿ ಶಿಷ್ಯರಿಗೆ ತಮ್ಮ ಕರ್ತವ್ಯಗಳು, ನಡತೆಗಳು, ತಮ್ಮ ಗುರುಗಳ ಬಗ್ಗೆ ಇಟ್ಟುಕೊಳ್ಳಬೇಕಾದ ಗೌರವದ ಬಗ್ಗೆ ಬೋಧಿಸುವ ಕ್ರಮವನ್ನು ವಿವರಿಸುತ್ತಾರೆ. ಗುರುಗಳು ಹೇಳುವುದನ್ನು ಧ್ಯಾನದಿಂದ ಕೇಳಬೇಕಾದದ್ದು ಶಿಷ್ಯರ ಮೊದಲ ಕರ್ತವ್ಯ.

ಶಿಷ್ಯನು ಗುರುಗಳನ್ನು ಪ್ರೀತಿಯಿಂದ ಮತ್ತು ವಿಶ್ವಾಸದಿಂದ ಕಾಣಬೇಕು. ಅನಿವಾರ್ಯವೆನಿಸುವ ಸಂದರ್ಭವನ್ನು ಹೊರತುಪಡಿಸಿ ಉಳಿದಂತೆ ಶಿಷ್ಯನಾದವನು ಗುರುವಿಗೆ ಯಾವತ್ತೂ ಬೆನ್ನು ಹಾಕಕೂಡದು. ಗುರುಗಳ ಎದುರಿಗೆ ಶಿಷ್ಯನು ಧ್ವನಿಯೆತ್ತರಿಸಿ ಮಾತಾಡಕೂಡದು. ಗುರುಗಳು ಏನು ಹೇಳುತ್ತಾರೋ ಅದನ್ನು ಪ್ರಶ್ನಿಸದೆ ಶಿಷ್ಯನು ಸ್ವೀಕರಿಸಬೇಕು ಅವನ ಆದೇಶಗಳನ್ನು ಪ್ರಾಮಾಣಿಕವಾಗಿ ಶಿಷ್ಯನು ಪಾಲಿಸಬೇಕು.  ಗುರುಗಳಿಗೆ ಶಿಷ್ಯವೃಂದ ಎಷ್ಟು ಗೌರವವನ್ನು ನೀಡಬೇಕೆಂದರೆ, ಅವರ ಮಿತ್ರರು ಕೂಡ ಅಸೂಯೆ ಪಡುವಷ್ಟು ಪ್ರಾಮಾಣಿಕವಾದ ಗೌರವವನ್ನು ಪ್ರದರ್ಶಿಸಬೇಕು.

ಶಿಷ್ಯ ತನ್ನ ಗುರುಗಳ ಸಮ್ಮುಖದಲ್ಲಿ ನಡೆಯುವಾಗ ಸಪ್ಪಳವಾಗದಂತೆ ಹೆಜ್ಜೆಯಿಡತಕ್ಕದ್ದು. ಗುರುಗಳ ಎದುರಿನಲ್ಲಿ ಶಿಷ್ಯ ವೀಳ್ಯಹಾಕಿ ಜಗಿಯಕೂಡದು. ಬಹಳ ಮೆತ್ತಗೆ ಮಾತಾಡಬೇಕು. ತನ್ನ ಗುರುಗಳು ಇಷ್ಟಪಡದ ವ್ಯಕ್ತಿಗಳೊಂದಿಗಿನ ಸಂಪರ್ಕಕೂಡದು. ಗುರುಗಳು ಇಷ್ಟಪಡುವವರು ಮತ್ತು ಗೆಳೆಯರ ಜೊತೆ ಗೌರವದಿಂದ ನಡೆದುಕೊಳ್ಳತಕ್ಕದ್ದು. ಗುರುಗಳು ಯಾವುದಾದರೂ ವಿವಾದಾತ್ಮಕ ವಿಚಾರಗಳನ್ನು ವ್ಯಕ್ತಪಡಿಸಿದರೆ ಆ ಬಗ್ಗೆ ಗುರುಗಳ ಸಮ್ಮುಖದಲ್ಲೇ ಚರ್ಚಿಸಬೇಕು. ‘ತಸವ್ವುರ್ ಎ ಪೀರ್’ ತನ್ನ ಗುರುಗಳ ವಿಚಾರಗಳನ್ನು ಶಿಷ್ಯ ಮುಂದುವರಿಸುವ ಆಸಕ್ತಿವಹಿಸತಕ್ಕದ್ದು.

ಆಧ್ಯಾತ್ಮಿಕ ಗುರುಗಳು ದೈವೀಕ ಬೆಳಕಿನ ಅಭಿವ್ಯಕ್ತಿಯಾದುದರಿಂದ ಅವರನ್ನು ಆರಾಧಿಸುವ ಗುಣವನ್ನು ಶಿಷ್ಯನು ಹೊಂದಿರಬೇಕು. ತನ್ನ ಗುರುಗಳಲ್ಲಿ ಶಿಷ್ಯನು ಸಂಪೂರ್ಣವಾಗಿ ಲೀನನಾಗಿರಬೇಕು. ಈ ಸಂಬಂಧವನ್ನು ಪ್ರೇಮಿ ಮತ್ತು ಪ್ರಿಯತಮೆಯ ನಡುವಿನ ಗಾಢವಾದ ಸಂಬಂಧದಂತೆ ಎಂದು ಸಾಂಕೇತಿಕವಾಗಿ ಖ್ವಾಜಾರವರು ವಿವರಿಸುತ್ತಾರೆ. ಈ ರೀತಿಯ ಸಂಬಂಧವು ಮೊಲೆಹಾಲ ಉಣಿಸುವ ತಾಯಿ ಮತ್ತು ಮಗುವಿನ ಸಂಬಂಧದಂತಿರಬೇಕು.

ಈ ಸಂಬಂಧವು ಮಗುವಿನಿಂದ ಹುಡುಗನಾಗುವಂತೆ, ಹುಡುಗನಿಂದ ಯುವಕನಾಗುವಂತೆ, ಯುವಾವಸ್ಥೆಯಿಂದ ಮಧ್ಯವಯಸ್ಕನಾಗುವಂತೆ, ಮಧ್ಯವಯಸ್ಸಿನಿಂದ ವಯೋವೃದ್ಧನಾಗುವಂತೆ ಹಲವು ಹಂತಗಳನ್ನು ದಾಟಬೇಕಾಗುತ್ತದೆ. ಈ ರೀತಿಯಲ್ಲಿ ಪ್ರತಿಯೊಂದು ಹಂತದಲ್ಲೂ ಶಿಷ್ಯನು ಬೆಳವಣಿಗೆಯನ್ನು ಪಡೆಯಬೇಕು. ಗುರುವಿನ ಮಾರ್ಗದರ್ಶನದಲ್ಲಿ ಬೆಳವಣಿಗೆಯನ್ನು ಕಾಣುವ ಶಿಷ್ಯ ದುರಾಸೆಯ ಗುಣವನ್ನು ಕಳೆದುಕೊಳ್ಳುತ್ತಾನೆ.

ತನ್ನ ಆಧ್ಯಾತ್ಮಿಕ ಅನುಭವವನ್ನು ಇನ್ನಾರಿಗೂ ಹೇಳದೆ ಶಿಷ್ಯ ಗುರುಗಳಿಗೆ ಮಾತ್ರ ಆಗಾಗ ವರದಿಯೊಪ್ಪಿಸ ತಕ್ಕದ್ದು. ಗುರುವಿನ ಆಧ್ಯಾತ್ಮ ಸಾಧನೆಯ ಹಂತದ ಬಗ್ಗೆ ಶಿಷ್ಯನು ಯೋಚಿಸುವಾಗ ಮನಸ್ಸಿನಲ್ಲಿ ಹದೀಸ್‌ನ ಈ ಸಂದೇಶವನ್ನು ನೆನಪಿನಲ್ಲಿಡತಕ್ಕದ್ದು: ‘ಒಂದು ಸಮುದಾಯದಲ್ಲಿ ಷೇಖ್ ಅಥವಾ ಗುರು ಇರುವುದೆಂದರೆ ಸಮುದಾಯಕ್ಕೆ ಪ್ರವಾದಿ ಇದ್ದಂತೆ’. ಶಿಷ್ಯ ತನ್ನ ಆದಾಯವನ್ನು ಪ್ರಾಮಾಣಿಕ ಹಾದಿಯಲ್ಲಿ ಗಳಿಸಿರಬೇಕು. ಮಹಿಳೆಯರೊಂದಿಗೆ ಎಷ್ಟು ಅಗತ್ಯವೋ ಅಷ್ಟು ಮಾತ್ರ ಸಮಯ ಜೊತೆಗಿರತಕ್ಕದ್ದು.

ಯಾರಿಗಾದರೂ ಉಪಕಾರ, ಸೇವೆ ಮಾಡಿದ್ದರೆ ಅದಕ್ಕೆ ಪ್ರತಿಫಲವನ್ನು ಅಪೇಕ್ಷಿಸಿರಕೂಡದು. ಮನಸ್ಸಿನಲ್ಲಿ ಕಲ್ಮಷರಹಿತನಾಗಿರಬೇಕು, ಧೈರ್ಯವಂತನಾಗಿರಬೇಕು. ತಿಂಡಿಪೋತನಾಗಿರಕೂಡದು, ಆಗಾಗ ಉಪವಾಸ ವ್ರತವನ್ನು ಆಚರಿಸುತ್ತಿರಬೇಕು. ಸಾಕಷ್ಟು ಕಡಿಮೆ ನಿದ್ರಿಸತಕ್ಕದ್ದು ಮತ್ತು ನಿದ್ರಿಸುತ್ತಿರುವಾಗ ಎಚ್ಚರ ಮತ್ತು ನಿದ್ದೆಯ ನಡುವೆ ಇರುವ ಸ್ಥಿತಿಯಲ್ಲಿರಬೇಕು. ಶಿಷ್ಯನು ಕುರಾನ್, ಹದೀಸ್ ಮತ್ತು ಅರೆಬಿಕ್ ಭಾಷೆಯ ಸಾಹಿತ್ಯದಲ್ಲಿ ಸಾಕಷ್ಟು ವಿದ್ಯಾವಂತನಾಗಿರಬೇಕು.

ಅವನು ಹಸಿವು, ದಾಹವನ್ನು ನಿಗ್ರಹಿಸಿಕೊಂಡು ಏಕಾಂತವಾಸದ ಅನುಭವವಿದ್ದು, ರಾತ್ರಿಯಲ್ಲಿ ಎಚ್ಚರಿಕೆ ಇರುವವನಾಗಿರಬೇಕು. ಅವನು ದೇವರ ಮೇಲೆ ಪ್ರೀತಿಯಿಡುವವನಾಗಿ ಮಾತ್ರವಲ್ಲ ದೇವರ ಮೇಲಿನ ಪ್ರೀತಿಯ ಮೂಲಕ ಅವನ ಸನಿಹ ಸೇರುವ ಹಂಬಲ ಹೊಂದಿರುವವನಾಗಿರಬೇಕು. ಯಾರಾದರೂ ತನ್ನ ಪ್ರೀತಿಯ ಬಗ್ಗೆ ಪ್ರಶ್ನಿಸಿದರೆ ತಾನು ಅವನನ್ನು ಪ್ರೀತಿಸದೆ ಇರಲಾರೆನೆನ್ನುವಷ್ಟರ ಮಟ್ಟಿಗಲ್ಲದೆ ಅವನಲ್ಲಿ ಬೇರೆ ಯಾವ ಉತ್ತರವೂ ಇರುವಂತಾಗಕೂಡದು. ಅವನು ಇಸ್ಲಾಂ ಧರ್ಮ ನಿಗದಿಪಡಿಸಿದಂತೆ ‘ಜಕಾತ್’ ಅಥವಾ ದಾನಧರ್ಮ ಮಾಡುವವನಾಗಿರಬೇಕು.

ರಾಜಮನೆತನದ ಯಾರಾದರೂ ಶಿಷ್ಯರಾಗಿ ಅಥವಾ ವಿದ್ಯಾರ್ಜನೆಗಾಗಿ ಆಶ್ರಮಕ್ಕೆ ದಾಖಲಾಗಿದ್ದರೆ ಅವರು ಮೊದಲು ಬಡವರಬಗ್ಗೆ ಯೋಚಿಸುವವರಾಗಿರಬೇಕು. ತನ್ನ ರಾಜ್ಯದ ಖಜಾನೆಯಿಂದ ಬಡವರಿಗೆ, ಅಂಗವಿಕಲರಿಗೆ, ವಿಧವೆಯರಿಗೆ, ಅನಾಥರಿಗೆ ನ್ಯಾಯೋಚಿತ ಪಾಲನ್ನು ಕೊಡುವುದಕ್ಕೆ ಸಮ್ಮತಿಸಿರಬೇಕು. ರಾಜ ತನ್ನ ಮನಸ್ಸು ಮತ್ತು ಕಾಯದ ಮೂಲಕ ‘ಕಲಿಮಾ ಉದ್ದೀನ್’ ಇಸ್ಲಾಂ ಧರ್ಮದ ಮೂಲ ಧ್ಯೇಯವನ್ನು ಧೃಢೀಕರಿಸಿರಬೇಕು.

ತನ್ನ ಅಹಂಕಾರವನ್ನು ಹಿಡಿತದಲ್ಲಿಟ್ಟುಕೊಳ್ಳಲು ಅಲ್ಲಾಹನ ಔದಾರ್ಯ ಮತ್ತು ವೈಭವವನ್ನು ಮನದಟ್ಟುಮಾಡಿಕೊಂಡಿರತಕ್ಕದ್ದು. ಅವನು ವಿನಯದಿಂದ ಇರಲು ಅನುಕೂಲವಾಗುವಂತೆ ದೇವರ ಸನಿಹದಲ್ಲಿ ಇರಬಯಸುವುದಕ್ಕಾಗಿ ಕುರಾನಿನ ಅಧ್ಯಾಯಗಳನ್ನು ಓದುತ್ತಿರಬೇಕು. (ನಮಾಜ್) ಪ್ರಾರ್ಥನೆಯ (ಸಫ್)ಸಾಲಿನಲ್ಲಿ ನಿಂತ ಸಮಯದಲ್ಲಿ ತಾನು ರಾಜನೆಂಬ ಗರ್ವವನ್ನು ತೊರೆದು ತಾನೊಬ್ಬ ಬಡವನಂತೆ, ಸಾಮಾನ್ಯನಂತೆ ಮನಸ್ಸಿನಲ್ಲಿ ಎಣಿಸಿಕೊಂಡಿರುವಂತಹ ವಿನಯವಿರಬೇಕು.

-ಫಕೀರ್ ಮಹಮ್ಮದ್ ಕಟ್ಪಾಡಿ.


No comments:

Post a Comment