ಸೂಫಿ ಎಂಬ ಅನುಭಾವಿ ಅತ್ಮಾನುಭವಿ, ಅತೀಂದ್ರಿಯ ಅನುಭವ ಪಡೆದವನು ಅನುಭಾವಿ ಎಂಬ ಅರ್ಥವಿದೆ. ಇಸ್ಲಾಮಿನ ಆಧ್ಯಾತ್ಮ ಕೇಂದ್ರವೆನ್ನಲಾದ ಸೂಫಿ ಪಂಥದ ಸಂತರು ಪುರಾತನ ಕಾಲದಿಂದಲೇ ಅಲ್ಲಾಹನನ್ನು ಅರಿತುಕೊಂಡಿದ್ದರು. ಈ ಅರಿವಿಗೆ ಒಂದು ಸ್ಥಾಪಿತ ರೂಪವನ್ನು, ಒಂದು ಸಾಂಸ್ಥಿಕ ರೂಪವನ್ನು ನೀಡುವುದು, ತಮ್ಮ ಅನುಭವಗಳನ್ನು ಆಧ್ಯಾತ್ಮಿಕ ರಹಸ್ಯವೆಂದು ತಿಳಿದು ಬೇರೆಯವರೊಂದಿಗೆ ಹಂಚಿಕೊಳ್ಳಲು ಸಾಧ್ಯವಾದದ್ದು ಇಸ್ಲಾಮಿನ ಹಾಗೂ ಪ್ರವಾದಿಯ ಸಂಪರ್ಕದ ಬಳಿಕವೆಂದು ಹೇಳಲಾಗುತ್ತದೆ.
ದೇವರನ್ನು ಸ್ನೇಹಿತ, ಪ್ರಿಯಕರ ಎಂದು ಹೇಳುವ `ಔಲಿಯಾ ಅಲ್ಲಾಹ್` ಅಥವಾ ಸೂಫಿ ಸಂತರು ಲೌಕಿಕ ಜಗತ್ತು, ದೇವರು, ಪಾರಮಾರ್ಥಿಕ ಜಗತ್ತಿನ ನಡುವಿನ ಕೊಂಡಿಯಲ್ಲಿ ಆಧ್ಯಾತ್ಮಿಕ ನೆಲೆಯ ಪ್ರೇಮವು ಬಂಧಿಸಿ ಸಂಬಂಧ ಏರ್ಪಡುವಂತೆ ಮಾಡುತ್ತದೆಂದು ನಂಬುತ್ತಾರೆ. ಅವನ ಕಣ್ಣುತುಂಬ ದಿನವೂ, ಕ್ಷಣಕ್ಷಣವೂ ದೇವರೇ ತುಂಬಿರುತ್ತಾನೆ. ಯಾವ ಮೂಲದಲ್ಲಿ ಏನೇ ದೊರೆಯಲಿ ಅದು ದೇವರಿಂದಲೇ ದೊರೆತದ್ದೆನ್ನುವ ಅಚಲವಾದ ನಂಬಿಕೆಯಿರುತ್ತದೆ.
ಸೂಫಿಗಳ ಆಧ್ಯಾತ್ಮದ ಕೊನೆಯ ಗುರಿ ದೇವರೊಂದಿಗಿನ ಮಿಲನ. ಇದಕ್ಕಾಗಿ ಲೌಕಿಕ ಆಸೆ ಆಕಾಂಕ್ಷೆಗಳನ್ನು ಬಯಸುವ ತನ್ನ ದೇಹವನ್ನು ದಂಡಿಸಿಕೊಳ್ಳುತ್ತಾನೆ. ಉಪವಾಸದ ಮೂಲಕ ಹಸಿವನ್ನು ನಿಗ್ರಹಿಸಿಕೊಳ್ಳುತ್ತಾನೆ. `ಸೌಮ್' ಅಥವಾ ಉಪವಾಸದ ಮೂಲಕ ಪ್ರಿಯತಮ /ಸ್ನೇಹಿತನ ಉಪಾಸನೆ, ಅವನ ಮಿಲನಕ್ಕಾಗಿ ವಿರಹದಿಂದ ಬೇಯುವ ಹಿತವಾದ ಅನುಭವ ದೊರೆಯುವುದನ್ನು ಮತ್ತು ಇದು ತಪಸ್ಸಿನ ಅನುಭವ ನೀಡುತ್ತದೆಂದು ಸೂಫಿಗಳು ಕಂಡುಕೊಂಡರು. ಆಹಾರದ ಸೇವನೆಯಲ್ಲಿ ಹಿಡಿತತಂದುಕೊಳ್ಳುವುದರಿಂದ ಸಂಯಮ ಮತ್ತು ಇಂದ್ರಿಯ ನಿಗ್ರಹ ಸಾಧ್ಯವೆಂದು ತಿಳಿದರು. ಆದರೆ ಇವರು ಹಸಿದಾತನಿಗೆ ಉಣ ಬಡಿಸುತ್ತಾರೆ.
ಬಡತನವೆನ್ನುವುದು ದೇವರು ತನಗಿತ್ತ ಗೌರವವೆಂದು ನಂಬುತ್ತಾರೆ. ರಾಜಾಶ್ರಯವನ್ನು ಧಿಕ್ಕರಿಸುತ್ತಾನೆ. ಜನರು ತನಗೆ ನೀಡಿದ್ದನ್ನೆಲ್ಲವನ್ಮೂ ಸ್ವೀಕರಿಸುವುದಿಲ್ಲ. ಸ್ವೀಕರಿಸುತ್ತಿರುವ ದಾನ ಪ್ರಾಮಾಣಿಕ ಮೂಲದಿಂದ ಬಂದಿದೆಯೇ ಎಂದು ವಿಚಾರಿಸಿ, ತೃಪ್ತಿಯಾದ ನಂತರವೇ ಸ್ವೀಕರಿಸುತ್ತಾನೆ. ಯಾರಾದರೂ ಅಗತ್ಯವಿದ್ದವರು ಯಾಚಿಸಿದಲ್ಲಿ, ಬಲಗೈಯಲ್ಲಿ ಪಡೆದದ್ದನ್ನು ಬಲಗೈಯಲ್ಲೇ ಯಾಚಕರಿಗೆ ನೀಡಿ ಸಂತಸ ಪಡುತ್ತಾನೆ. ಹೀಗೆ ಆಸೆಗಳನ್ನು ತ್ಯಾಗ ಮಾಡಿ ದೇವ ಸನ್ನಿಧಿಯನ್ನು ಸೇರಲು ಬಯಸುತ್ತಾನೆ. ಸೂಫಿ ತನ್ನ ದೈವಿಕ ಆರಾಧನೆ(ಇಬಾದತ್)ಯಿಂದ ಮತ್ತು ತನ್ನ ಗುಣ ನಡವಳಿಕೆಗಳಿಂದ ತನ್ನ ಭೌತಿಕ ದೇಹವನ್ನು ತೊರೆದು ಆಧ್ಯಾತ್ಮಿಕ ದೇಹವನ್ನು ಪ್ರವೇಶಿಸುತ್ತಾನೆ. ಇದು ಸಾಧನೆ ಮಾತ್ರವಲ್ಲ, ಶಬ್ಧಗಳಲ್ಲಿ ಕಟ್ಟಿಹಾಕಲು ಸಾಧ್ಯವಾಗದಂತಹ ಪರಮಾನಂದದ ಸಾಕಾರದ ಹಂತ, ಎಲ್ಲ ಆತ್ಮಗಳೂ ಹಪಹಪಿಸುವ ಪ್ರಶಾಂತ ಸ್ಥಿತಿ.
-ಫಕೀರ್ ಅಹ್ಮದ್ ಕಟ್ಪಾಡಿ.
No comments:
Post a Comment