Friday, March 18, 2016

ಹಸದ್ (ಅಸೂಯೆ)


     
‘ಅವನು ಸೃಷ್ಟಿಸಿದ ಕೆಡುಕುಗಳಿಂದ ರಕ್ಷಿಸಲಿಕ್ಕಾಗಿ ಅವನಿಗೆ ಶರಣಾಗತನಾಗುತ್ತೇನೆಂದು (ಪ್ರವಾದಿಯವರೇ) ಹೇಳಿ!’ ಮತ್ತು ಕೊನೆಯಲ್ಲಿ ‘ಅಸೂಯೆಪಡುವವನ ಅಸೂಯೆಯಿಂದ ಕೂಡ ನನ್ನನ್ನು ರಕ್ಷಿಸು (ಎಂದು ಹೇಳಿ)’ (ಕುರಾನ್ 113:1ಮತ್ತು5). ‘ಎಲ್ಲ ಪಾಪಗಳ ಆಳದಲ್ಲಿ ಮೂರು ಅಂಶಗಳಿವೆ. ನೀವು ನಿಮ್ಮನ್ನು  ಅವುಗಳಿಂದ ರಕ್ಷಿಸಿಕೊಳ್ಳಿ, ಅವುಗಳ ಬಗ್ಗೆ ಎಚ್ಚರದಿಂದಿರಿ! ಅಹಂಕಾರದಿಂದ ಎಚ್ಚರವಿರಿ.

ಯಾಕೆಂದರೆ ಅಹಂಕಾರವು ಸೈತಾನನನ್ನು (ಮೂಲ ಮನುಷ್ಯ) ಆದಮರಿಗೆ ಸಾಷ್ಟಾಂಗ ನಮಸ್ಕಾರ ಮಾಡುವುದರಿಂದ ತಡೆದು ಅಲ್ಲಾಹನ ಆಜ್ಞೆಯ ವಿರೋಧಿಯನ್ನಾಗಿ ಮಾಡಿತು. ಅತಿಯಾಸೆಯಿಂದ ದೂರವಿರಿ. ಇದರಿಂದ ಆದಮರು ಸ್ವರ್ಗದಲ್ಲಿ ಅಲ್ಲಾಹ ನಿಷೇಧಿಸಿದ ಫಲವನ್ನು ತಿನ್ನಬೇಕಾಯಿತು. ಅಸೂಯೆಯಿಂದ ಎಚ್ಚರವಿರಿ. ಇದರಿಂದಾಗಿ ಆದಮರ ಇಬ್ಬರು ಮಕ್ಕಳು ಪರಸ್ಪರ ಹೊಡೆದಾಡಿ ಅವರಲ್ಲಿ ಓರ್ವ ಕೊಲೆಯಾಗಿದ್ದ’ ಎಂದು ಪ್ರವಾದಿಯವರು ಹೇಳಿದ್ದರು.

‘ನಾನು ಓರ್ವ ಬದಾವೂನ್ ಪಂಗಡದ ಶತಾಯುಷಿ ಹಿರಿಯ ವ್ಯಕ್ತಿಯನ್ನು ಭೇಟಿಯಾಗಿದ್ದೆ. ಅವರಿಗೆ 125 ವರ್ಷ ವಯಸ್ಸಾಗಿತ್ತು. ನಿಮಗಿದು ಹೇಗೆ ಸಾಧ್ಯವಾಯಿತೆಂದು ಕೇಳಿದೆ. ಅದಕ್ಕವರು ನನ್ನ ಸಂಪೂರ್ಣ ಆಯುಷ್ಯದಲ್ಲಿ ಎಂದೂ ಇತರರ ಬಗ್ಗೆ ಅಸೂಯೆಪಟ್ಟಿರಲಿಲ್ಲ ಎಂದು ಹೇಳಿದರು’ ಎಂದು ಅಲ್ ಅಸ್ಮಾಯಿಯವರು ಹೇಳಿದ್ದರು.

‘ದೇವರ ಕೃಪೆಯಿಂದ ನನ್ನ ಸೇನಾಧಿಪತಿಯ ಹೃದಯದಲ್ಲಿ, ನನ್ನ ವಿರೋಧಿಗಳ ಮನಸ್ಸುಗಳಲ್ಲಿ ಮನೆಮಾಡಿರುವ ಅಸೂಯೆಯ ಲವಲೇಶವೂ ಇಲ್ಲ’ ಎಂದು ಇಬ್ನ್ ಅಲ್ ಮುಬಾರಕ್(ಪ್ರವಾದಿಯವರನ್ನು ಉದ್ದೇಶಿಸಿ) ಹೇಳಿದ್ದರು. ಸೂಫಿ ಪಂಥದ ವಿಶ್ವಾಸದಲ್ಲಿ ಒಂದು ಮಾತಿದೆ, ‘ಅಸೂಯೆಪಡುವಾತ ಅವಿಶ್ವಾಸಿಯಾಗಿರುತ್ತಾನೆ, ಯಾಕೆಂದರೆ ಅವನು ದೇವರ ಆಜ್ಞೆಯನ್ನು ಪಾಲಿಸುವವನಲ್ಲ. ಅಸೂಯೆಪಡುವಾತ ಶಾಶ್ವತವಾಗಿರುವವನಲ್ಲ’.

ಅಸೂಯೆ ಎಂದರೆ ಕಿಚ್ಚಿನಂತೆ. ಅಸೂಯೆಪಡುವಾತ ಒಡಲಲ್ಲಿ ತನ್ನನ್ನು ತಾನೇ ಸುಟ್ಟುಕೊಳ್ಳುತ್ತಾನೆ. ಕುರಾನ್(7:55)ನಲ್ಲಿ ಅಲ್ಲಾಹ ಹೇಳುತ್ತಾರೆ, ‘ಹೇಳಿ!(ಪ್ರವಾದಿಯವರೇ) ಕರ್ತನು ನಿಷೇಧಿಸಿರುವುದು ಇನ್ನೊಬ್ಬನ ಬಗ್ಗೆ  ಪ್ರತ್ಯಕ್ಷವಾಗಲಿ, ಅಂತರ್ಯದಲ್ಲಾಗಲಿ ಜಿಗುಪ್ಸೆ ಅಥವಾ ಅಸಹ್ಯಪಡುವುದನ್ನು’. ಆಂತರ್ಯದಲ್ಲಿ ಅಸಹ್ಯಪಡುವುದು ಎಂದರೆ ಅಸೂಯೆಪಡುವುದು ಎಂಬ ಅರ್ಥವೂ ಇದೆ. ‘ಹೊಟ್ಟೆಕಿಚ್ಚುಪಡುವವನು ಶೋಷಕನಿಗಿಂತ ಹೆಚ್ಚು ಶೋಷಿತನಂತೆ ಕಾಣುತ್ತಾನೆ.

ಯಾಕೆಂದರೆ ಅವನು ಶೋಷಿತನಿಗಿಂತ ಹೆಚ್ಚು ದುಃಖಿತನೂ, ಅತೃಪ್ತನೂ ಆಗಿರುತ್ತಾನೆ’ ಎನ್ನುತ್ತಿದ್ದರು ಉಮರ್ ಇಬ್ನ್ ಅಬ್ದುಲ್ ಅಜೀಜ್. ಅಂತರ್ಯದಲ್ಲಿ ಅಸೂಯೆಪಡುವವನ ಲಕ್ಷಣವೆಂದರೆ, ಎದುರಲ್ಲಿ ಮುಖಸ್ತುತಿಯನ್ನು ಮಾಡುತ್ತಾನೆ. ಹಿಂದಿನಿಂದ ಹಳಿಯುತ್ತಾನೆ. ಅವರ ದುರಾದೃಷ್ಟವನ್ನು ಹೇಳಿಕೊಂಡು ಅವಹೇಳನ ಮಾಡಿ ಸಂತಸಪಟ್ಟುಕೊಳ್ಳುತ್ತಾನೆ.

ಮೂಸಾನಬಿಯವರು ದೇವರ ಸಾಮ್ರಾಜ್ಯದ ಸಿಂಹಾಸನ ಅರ್ಷ್‌ನ ಸಮೀಪದಲ್ಲಿ ಓರ್ವ ಮನುಷ್ಯನಿದ್ದುದನ್ನು ಕಂಡಿದ್ದರೆಂದು ಹೇಳಲಾಗುತ್ತದೆ. ಅಲ್ಲಿರಲು ಬಯಸಿದ್ದವರಲ್ಲಿ ಮೂಸಾನಬಿಯೂ ಒಬ್ಬರಾಗಿದ್ದರು. ಆದರೆ ಈ ವ್ಯಕ್ತಿಗೆ ಈ ಸ್ಥಾನ ಹೇಗೆ ದೊರೆಯಿತೆಂದು ಯೋಚಿಸಿದರು. ಅದಕ್ಕೆ ‘ದೇವರು ಉದಾರವಾಗಿ ತನ್ನ ಅಪಾರ ಕೃಪೆಯಿಂದ  ಭಾಗ್ಯವಂತರು ಪಡೆದಿರುವ ಉತ್ತಮಸ್ಥಿತಿಯನ್ನು ನೋಡಿ ಅವನು ಯಾವತ್ತೂ ಕರುಬಿರಲಿಲ್ಲ’ ಎಂಬ ಉತ್ತರಬಂತು.

-ಫಕೀರ್ ಅಹ್ಮದ್ ಕಟ್ಪಾಡಿ.

No comments:

Post a Comment