ದೈಹಿಕ ಅಪೇಕ್ಷಗಳ ನಿಯಂತ್ರಣ.
ದುಲ್ ನೂನ್ ಮಿಸ್ರಿ ಎಂಬ ಪ್ರಖ್ಯಾತ ಸೂಫಿ ಸಂತ ತನ್ನ ಆಧ್ಯಾತ್ಮಿಕ ಅನ್ವೇಷಣೆಯ ಹಾದಿಯಲ್ಲಿ ನಡೆಯುತ್ತಿರುವಾಗ ಒಂದು ಆಶ್ರಮ ಸಿಕ್ಕಿತು. ಹೊರಗೆ ಒಬ್ಬ ಯುವಕ ಚಕ್ಲಮಟ್ಟ ಹಾಕಿ ಕೂತಿದ್ದ. ಆತನ ಕಾಲಿನ ಒಂದು ಪಾದ ಕೂತಡಿಯಲ್ಲಿದ್ದರೆ ಇನ್ನೊಂದು ಪಾದ ಕತ್ತರಿಸಲ್ಪಟ್ಟಿದ್ದು ಗಾಯದಿಂದ ರಕ್ತ ಒಸರುತ್ತಿರುವಂತೆ ಎದ್ದು ಕಾಣುತ್ತಿತ್ತು. ಗಾಯದ ಮೇಲೆ ನೊಣಗಳ ಹಿಂಡು ಮುತ್ತಿತ್ತು. ಆತ ಆ ಗಾಯವನ್ನು ಮುಚ್ಚಿಯೂ ಇರಲಿಲ್ಲ, ನೊಣಗಳನ್ನು ಓಡಿಸುತ್ತಲೂ ಇರಲಿಲ್ಲ.
ದುಲ್ ನೂನ್ ಅವನ ಬಳಿಗೆ ಹೋಗಿ ಸಲಾಮ್ ಸಲ್ಲಿಸಿ, ಯಾಕೆ ಹೀಗೆ ಎಂದು ಕೇಳಿದರು. ‘ಒಂದು ದಿನ ಆಶ್ರಮದಲ್ಲಿ ಕೂತಿದ್ದೆ, ನನ್ನ ಮುಂದಿನ ಹಾದಿಯಲ್ಲಿ ಓರ್ವ ಸುಂದರಿ ಹೆಣ್ಣು ನಡೆದು ಹೋಗುತ್ತಿರುವುದನ್ನು ಕಂಡೆ. ನನ್ನ ಮನಸ್ಸು ಅವಳ ಹಿಂದೆ ಹೋಯಿತು. ನನ್ನ ದೇಹ ಅವಳನ್ನು ಪಡೆಯಲು ಬಯಸಿತು. ನಾನು ಆಶ್ರಮದ ಬಾಗಿಲಿನಿಂದ ಹೊರಗೆ ಪಾದವನ್ನಿಟ್ಟಿದ್ದೆ, ನನಗೊಂದು ಮಾತು ಕೇಳಿಸಿತು, `ನಿನಗೆ ನಾಚಿಕೆಯಾಗುವುದಿಲ್ಲವೇ? ಮೂವತ್ತು ವರ್ಷಗಳ ಕಾಲ ದೇವರ ಆಜ್ಞೆಯನ್ನು ಪಾಲಿಸುತ್ತಿದ್ದೆ, ಈಗ ಸೈತಾನನ ಮಾತು ಕೇಳಿ ಹೆಣ್ಣಿನ ಹಿಂದೆ ಬಿದ್ದಿಯಲ್ಲಾ?’ ನಾನು ಥಟ್ಟನೆ ಎಚ್ಚೆತ್ತುಕೊಂಡೆ. ಬಾಗಿಲಿನಿಂದ ಹೊರಗಿಟ್ಟ ನನ್ನ ಕಾಲಿನ ಪಾದವನ್ನು ಕತ್ತರಿಸಿಹಾಕಿದೆ.
ನಾನೀಗ ಇಲ್ಲಿ ಕೂತು ನನ್ನ ಪಾಪಕ್ಕಾಗಿ ಅವನು ನೀಡುವ ಪ್ರಾಯಶ್ಚಿತ್ತಕ್ಕಾಗಿ ಕಾಯುತ್ತಿರುವೆ’ ಎಂದ. ‘ಯಾರು ತನ್ನ ಪ್ರಭುವಿನ ಮುಂದೆ ಒಂದು ದಿನ ನಿಲ್ಲಬೇಕಾಗುವುದೆಂಬ ಭಯವಿಟ್ಟುಕೊಂಡು ತನ್ನ ದೇಹೇಚ್ಛೆಗಳಿಗೆ ನಿಯಂತ್ರಣ ಮಾಡಿಕೊಳ್ಳುತ್ತಾನೋ ಅವನಿಗೆ ಸ್ವರ್ಗದ ಉದ್ಯಾನವು ನೆಲೆಯಾಗಿದೆ’ ಎಂದು ಕುರಾನ್(79:40-41) ಹೇಳುತ್ತದೆ. ದೈಹಿಕ ಅಪೇಕ್ಷೆಯ ನಿಯಂತ್ರಣವು ಸೂಫಿಯಲ್ಲಿರಬೇಕಾದ ಅತ್ಯಂತ ಪ್ರಮುಖ ಗುಣವಾಗಿದೆ.‘ನನ್ನ ಜನರ ಬಗ್ಗೆ ನನಗೆ ಅಧಿಕ ಭಯವಿರುವುದು ಅವರು ಮನೋವಿಕಾರಗಳಿಗೆ ಮತ್ತು ಲೌಕಿಕ ಲೋಭಕ್ಕೆ ಬೇಗನೆ ಬಲಿಯಾಗುವ ಬಗ್ಗೆ. ದೈಹಿಕ ಆಕಾಂಕ್ಷೆಗಳಿಗೆ ಅವರು ಬಲಿಯಾಗುವ ಮೂಲಕ ದೇವರಿಂದ ದೂರವಾಗುತ್ತಾರೆ.
ಲೌಕಿಕ ಆಸೆಗಳಿಗೆ ಕಡಿವಾಣ ಹಾಕಿಕೊಳ್ಳದೆ ಪಾರಮಾರ್ಥವನ್ನು ಮರೆಯುತ್ತಾರೆ’ ಎಂದು ಪ್ರವಾದಿಯವರು ಹೇಳಿದ್ದರೆಂದು ಜಬೀರ್‍ರವರು ಉಲ್ಲೇಖಿಸುತ್ತಾರೆ. ಇಸ್ಲಾಮ್ ಎಂದರೆ ನಿಸ್ವಾರ್ಥವೆಂಬ ಖಡ್ಗದಿಂದ ಸ್ವಾರ್ಥವನ್ನು ಕತ್ತರಿಸಿ ಹಾಕುವುದು. ಹಾಗೆಯೇ ಸ್ವಾರ್ಥದ ಅಪೇಕ್ಷೆಯೆಂಬುದು ಹೆಚ್ಚಾದಂತೆ ಅನ್ಯೋನ್ಯತೆಯ ಸೂರ್ಯನು ಮುಳುಗುತ್ತಾನೆ. ಸಂತ ದುಲ್ ನೂನ್ ಮಿಸ್ರಿ ಹೇಳುತ್ತಾರೆ, ‘ಅಧ್ಯಾತ್ಮ ಸಾಧನೆಯಾಗುವುದರ ಸೂಚನೆಯೆಂದರೆ ಮನೋವಿಕಾರಗಳಿಗೆ ಕಡಿವಾಣ ಹಾಕುವುದರ ಮೂಲಕ ಮತ್ತು ಸ್ವಾರ್ಥವನ್ನು ಹತ್ತಿಕ್ಕಿಕೊಳ್ಳುವ ಮೂಲಕ ಕಂಡುಬರುತ್ತದೆ’.
ಒಬ್ಬಾತ ಬುದ್ಧಿವಂತನೆನಿಸಿಕೊಂಡು ತನ್ನ ಸ್ವಾರ್ಥದ ಬಗ್ಗೆ ಸಂತೋಷಪಟ್ಟುಕೊಳ್ಳುವುದು ಹೇಗೆ ಸಾಧ್ಯ? ಕುರಾನಿನಲ್ಲಿ ಯೂಸೂಫ್ ನಬಿ ಹೇಳುವ ಮಾತು ಹೀಗಿದೆ `ನನ್ನ ಮನಸ್ಸು ಅಪರಾಧಗಳಿಂದ ಮುಕ್ತವಾಗಿದೆಯೆಂದು ನನಗನಿಸುವುದಿಲ್ಲ. ಖಂಡಿತವಾಗಿಯೂ ಮನಸ್ಸು ಕೆಡುಕನ್ನು ಪ್ರಚೋದಿಸುತ್ತದೆ’. ಕುರಾನ್ 12:51. ಸಹ್ಲ್ ಬಿನ್ ಅಬ್ದುಲ್ಲಾ ಹೇಳುತ್ತಾರೆ, ‘ಮನೋವಿಕಾರಗಳನ್ನು ಮತ್ತು ಮನಸ್ಸಿನ ಆಸೆಗಳನ್ನು ಹತ್ತಿಕ್ಕಿಕೊಳ್ಳುವುದನ್ನು ಬಿಟ್ಟು ದೇವರ ಧ್ಯಾನ ಸಾಧ್ಯವಾಗದು’.
-ಫಕೀರ್ ಅಹ್ಮದ್ ಕಟ್ಪಾಡಿ.
No comments:
Post a Comment