ಕುರಾನಿನ 29ನೆಯ ಸೂರಃ (ಅಲ್-ಅನ್‍ಕಬೂತ್)ದ 5ನೆಯ ವಾಕ್ಯದಲ್ಲಿ ‘ಅಲ್ಲಾಹನನ್ನು ಭೇಟಿಯಾಗುವ ನಿರೀಕ್ಷೆಮಾಡುವವನು (ತಿಳಿದಿರಲಿ) ಆ ಸಮಯ ಖಂಡಿತವಾಗಿಯೂ ಬರಲಿದೆ' ಎಂದು ಹೇಳಲಾಗಿದೆ. `‘ನನ್ನ ಬಳಿ ಬರುವ ನಿರೀಕ್ಷೆ ಇಟ್ಟುಕೊಂಡವನು ಇಡೀ ವಿಶ್ವದಷ್ಟು ದೊಡ್ಡ ಪಾಪಗಳ ಹೊರೆಯನ್ನು ಹೊತ್ತುಕೊಂಡವನೇ ಆಗಿರಲಿ ಅಷ್ಟೇ ವಿಶಾಲವಾದ ಕ್ಷಮಾಶೀಲನಾಗಿ ಅವನನ್ನು ಸ್ವೀಕರಿಸುತ್ತೇನೆ’ ಎಂದು ಅಲ್ಲಾಹ ಹೇಳಿದ್ದಾನೆಂದು ದೇವದೂತ ಜಿಬ್ರೀಲ್ ಪೈಗಂಬರರಿಗೆ ಸಂದೇಶ ನೀಡಿದ್ದ.
‘ನಿರೀಕ್ಷೆ ಎಂಬುದು ಹೃದಯದಲ್ಲಿ ಉತ್ಪನ್ನವಾಗುವ ಪ್ರೇಮಕ್ಕೆ ಸಂಬಂಧಪಟ್ಟದ್ದು. ಭವಿಷ್ಯದಲ್ಲಿ ಸಂಭವಿಸುವ ವಿಷಯಕ್ಕೆ ಸಂಬಂಧಿಸಿದ್ದಾಗಿದೆ. ನಿರೀಕ್ಷೆ ಎಂಬುದು ಮುಂದೆ ಬರಬಹುದಾದುದನ್ನು ಕಾಯುವ ಹಂತವಾಗಿದೆ. ಹೃದಯವು ನಿರೀಕ್ಷೆಯ ಹೊರೆಯನ್ನಿಟ್ಟುಕೊಂಡು ಜೀವಂತವಾಗಿರುತ್ತದೆ. ನಿರೀಕ್ಷೆಗೂ ಆಸೆಗೂ ಇರುವ ವ್ಯತ್ಯಾಸವೆಲ್ಲಿರುತ್ತದೆಂದರೆ ಆಸೆಯು ಒಬ್ಬನನ್ನು ಸೋಮಾರಿಯಾಗಿಸುತ್ತದೆ.
ಬರಿಯ ಆಸೆ ಆಕಾಂಕ್ಷೆಯನ್ನು ಇಟ್ಟುಕೊಂಡವನು ಅದಕ್ಕಾಗಿ ಶ್ರಮಪಡುವುದಿಲ್ಲ, ಆತ ನಿರ್ದಿಷ್ಟವಾದ ಗುರಿಯನ್ನೂ ಹೊಂದಿರುವುದಿಲ್ಲ. ನಿರೀಕ್ಷೆ ಎಂಬುದು ಒಂದು ವಿಶಿಷ್ಠ ಶ್ಲಾಘನೀಯ ವಿಶೇಷ ಲಕ್ಷಣವಾದರೆ, ಆಸೆಯೆಂಬುದು ಮನುಷ್ಯನಲ್ಲಿರುವ ಒಂದು ಕೊರತೆಯಂತೆ. ನಿರೀಕ್ಷೆ ಎನ್ನುವುದು ದೇವರ ಮೇಲಿನ ಪವಿತ್ರ ವಿಧೇಯತೆ’ ಎನ್ನುತ್ತಾರೆ ಸೂಫಿ ಷಾ ಅಲ್ ಕಿರ್ಮಾನಿ. ಸೂಫಿಗಳ ಅಭಿಪ್ರಾಯ ಪ್ರಕಾರ ಮೂರು ವಿಧದ ನಿರೀಕ್ಷೆ ಇರುತ್ತದೆ.
ಒಳ್ಳೆಯ ಕೆಲಸಗಳನ್ನು ಮಾಡಿದ ಓರ್ವನ ನಿರೀಕ್ಷೆಯೆಂದರೆ ದೇವರು ಇವನ್ನು ಒಪ್ಪಿಕೊಳ್ಳುವುದು. ಕೆಟ್ಟ ಕಾರ್ಯಗಳನ್ನು ಮಾಡಿದ ಮನುಷ್ಯನ ನಿರೀಕ್ಷೆಯೆಂದರೆ ತಾನು ಪಶ್ಚಾತ್ತಾಪ ಪಡುವುದನ್ನು ದೇವರು ಸ್ವೀಕರಿಸಿ ಕ್ಷಮೆ ನೀಡುವುದಾಗಿದೆ. ಮೂರನೆಯ ರೀತಿಯ ನಿರೀಕ್ಷೆಯಲ್ಲಿ ದುಷ್ಕೃತ್ಯಗಳನ್ನು ಅವಿರತವಾಗಿ ಮಾಡುತ್ತಿರುವ ಮನುಷ್ಯ ನಾನು ಕ್ಷಮೆಯನ್ನು ನಿರೀಕ್ಷಿಸುತ್ತಿದ್ದೇನೆ ಎನ್ನುತ್ತಿರುತ್ತಾನೆ.
ಇಂತಹ ಸಂದರ್ಭದಲ್ಲಿ ಆತನಲ್ಲಿ ನಿರೀಕ್ಷೆಗಿಂತ ಭಯವಿರಬೇಕಾಗಿರುವುದು ಅತಿ ಅಗತ್ಯ. ಹೃದಯದ ನಿರೀಕ್ಷೆಯ ತುಡಿತಗಳು ದೇವರ ದಯಾಮಯ ಗುಣಕ್ಕೆ ಸನಿಹವಾಗಿರುತ್ತವೆ. ದೇವರ ದಯೆಯನ್ನು ಅಪ್ಪಿಕೊಳ್ಳುವುದೇ ನಿರೀಕ್ಷೆಯ ಕಟ್ಟಕಡೆಯ ಉದ್ದೇಶವಾಗಿದೆ. ಭಯ ಮತ್ತು ನಿರೀಕ್ಷೆ ಎಂಬುದು ಒಂದು ಹಕ್ಕಿಯ ಎರಡು ರೆಕ್ಕೆಗಳಿದ್ದಂತೆ. ಇವೆರಡೂ ಸಮತೋಲನದಲ್ಲಿದ್ದಾಗ ಹಕ್ಕಿಗೆ ಹಾರಾಡಲು ಅನುಕೂಲವಾಗಿರುತ್ತದೆ. ಒಂದು ರೆಕ್ಕೆ ಮುರಿದರೆ ಹಕ್ಕಿಗೆ ಹಾರಾಟ ಸಾಧ್ಯವಾಗದು. ಎರಡೂ ಇಲ್ಲವಾದರೆ ಅದಕ್ಕೆ ಪ್ರಾಣಾಪಾಯ ಕಾದಿಟ್ಟದ್ದು’ ಎಂದು ಅಬೂ ಅಲಿ ಅರ್ರುದ್‍ಬಾರಿ ಹೇಳಿದ್ದಾರೆ.
‘ನಾನು ತಪ್ಪುಗಳನ್ನು ಮಾಡಿದಾಗ ದೇವರ ಮೇಲಿಡುವ ನಿರೀಕ್ಷೆಯು, ಪುಣ್ಯದ ಕಾರ್ಯಗಳನ್ನು ಮಾಡಿದಾಗ ಇಡುವ ನಿರೀಕ್ಷೆಗಿಂತಲೂ ಹೆಚ್ಚಿನದು. ನಾನು ಒಳ್ಳೆಯ ಕೆಲಸಗಳನ್ನು ಮಾಡುವಾಗ ದೇವರ ಮೇಲಿನ ನಿಷ್ಠೆಯ ಮೇಲೆ ಅವಲಂಬಿಸಿರುತ್ತೇನೆ. ಆದರೆ, ನನ್ನ ತಪ್ಪು ಕೆಲಸಗಳನ್ನು ರಕ್ಷಿಸುವುದಾದರೂ ಹೇಗೆ? ನಾನು ತಪ್ಪುಗಳನ್ನು ಮಾಡಿದಾಗ ನಿನ್ನ ಕ್ಷಮಾಶೀಲತೆಯ ಮೇಲೆ ಅವಲಂಬಿಸಿರುತ್ತೇನೆ.
ಕ್ಷಮಾಶೀಲತೆಯೇ ನಿನ್ನ ಗುಣವಾದುದರಿಂದ ನನ್ನ ತಪ್ಪುಗಳನ್ನು ನೀನು ಕ್ಷಮಿಸದಿರಲು ಸಾಧ್ಯವೇ?’ ಎಂದು ಯಹ್ಯಾ ಬಿನ್ ಮುಅದ್ ವಿವರಿಸುತ್ತಾರೆ. ಅವರು ತಮ್ಮ ಪ್ರವಚನದಲ್ಲಿ ಮುಂದುವರಿದು, ‘ನನ್ನ ದೇವರು ತನ್ನ ನಿರೀಕ್ಷೆಯ ಅತ್ಯಂತ ಸವಿಯಾದ ಸಿಹಿತಿಂಡಿಯನ್ನು ನನ್ನ ಹೃದಯದಲ್ಲಿ ಇರಿಸಿದ್ದಾನೆ. ಇದರಿಂದಾಗಿ ಸವಿಯಾದ ಹೊಗಳಿಕೆಯ ಮಾತುಗಳನ್ನು ಸದಾ ನನ್ನ ನಾಲಗೆಯು ಅವನಿಗಾಗಿ ಹೇಳುತ್ತಿರುತ್ತದೆ. ನಿನ್ನನ್ನು ಸೇರುವ ಕ್ಷಣವೇ ನನ್ನ ಬದುಕಿನ ಅತ್ಯಂತ ಪ್ರೀತಿಯ ಕ್ಷಣವಾಗಿದೆ’.
-ಫಕೀರ್ ಅಹ್ಮದ್ ಕಟ್ಪಾಡಿ.
No comments:
Post a Comment