ದೇವರ ಮೇಲಿನ ದೃಢ ವಿಶ್ವಾಸದ ತುತ್ತತುದಿಯ ಹಂತ ತೃಪ್ತಿ ಎಂದು ಎಣಿಸಲ್ಪಡುತ್ತದೆಂದು ಸೂಫಿಗಳು ಅಭಿಪ್ರಾಯಪಡುತ್ತಾರೆ. ಇದು ಭಕ್ತನು ತನ್ನ ಸ್ವಂತ ಪರಿಶ್ರಮದಿಂದ ಏರುವ ಅಧ್ಯಾತ್ಮ ಅನುಭವದ ಹಂತ. ತೃಪ್ತಿ ಎಂಬುದು ವೈಯಕ್ತಿಕ ಪರಿಶ್ರಮದಿಂದಲ್ಲ, ಹೃದಯದಲ್ಲಿ ತನ್ನಷ್ಟಕ್ಕೆ ಮೂಡುವ ಪ್ರಕಾಶ ಎಂಬುದು ಇನ್ನೊಂದು ಅಭಿಪ್ರಾಯ. ತೃಪ್ತಿಯೆಂಬ ಅನುಭವದ ಆರಂಭ ಭಕ್ತನಿಗಾಗುವ ಒಂದು ಸ್ಥಿತಿ. ಕೊನೆಗೂ ಅದೊಂದು ಅನುಭವದ ಹಂತವಾಗಿರುತ್ತದೆಯೇ ಹೊರತು ಅಂತಿಮವಲ್ಲವೆಂದು ಕೆಲವು ಸೂಫಿಗಳು ಅಭಿಪ್ರಾಯ ಪಡುತ್ತಾರೆ.
ತೃಪ್ತಿಯ ಬಗ್ಗೆ ವ್ಯಾಖ್ಯಾನಿಸುವಾಗಲೆಲ್ಲ ತಮ್ಮ ಅನುಭವಕ್ಕೆ ಬಂದ ಸ್ವಂತ ಅಭಿಪ್ರಾಯಗಳ ಮೂಲಕವೇ ಅರ್ಥೈಸುವ ಪ್ರಯತ್ನ ಮಾಡುತ್ತಾರೆ.
ಈ ಕಾರಣಗಳಿಂದಾಗಿ ಈ ವಿದ್ವಾಂಸರ ಅಭಿಪ್ರಾಯಗಳು ಭಿನ್ನವಾಗಿವೆ. ದೇವರಮೇಲೆ ವಿಶ್ವಾಸ ಹೊಂದಿದವನು ಅವನು ನೀಡಿದುದರ ಮೇಲೆ ತೃಪ್ತಿಹೊಂದಿ, ತನ್ನ ಪಾಲಿಗೆ ಬಂದ ವಿಧಿಯನ್ನು ವಿರೋಧಿಸದೇ ಸ್ವೀಕರಿಸುತ್ತಾನೆ. ‘ತೃಪ್ತಿ ಎಂಬುದು ಅಂತಿಮ ದಿನದ ವಿಚಾರಣೆಗೆ ಹೊರತಾಗಿಲ್ಲ.
ತೃಪ್ತಿ ಎಂಬುದು ದೇವರ ಅಂತಿಮ ತೀರ್ಮಾನವನ್ನು ಸ್ವೀಕರಿಸುವುದಕ್ಕೆ ಸಂಬಂಧಿಸಿದ್ದಾಗಿದೆ’ ಎಂದು ಸೂಫಿ ಸಂತ ಅಬೂ ಅಲ್ ದಖ್ಖಾಕ್ ಅಭಿಪ್ರಾಯಪಟ್ಟಿದ್ದಾರೆ. ಇದು ದೇವರು ಕರುಣಿಸಿದ ವಿಧಿಯನ್ನು ಒಪ್ಪಿಕೊಳ್ಳುವ ಮತ್ತು ಅದರಲ್ಲಿ ತೃಪ್ತಿ ಹೊಂದುವ ಭಕ್ತನಿಗೆ ಸಂಬಂಧಪಟ್ಟದ್ದಾಗಿದೆ.
‘ತೃಪ್ತಿ ಎಂಬುದು ದೇವರ ಸನಿಹಕ್ಕೆ ಹೋಗುವ ಮಾರ್ಗದ ಹೆಬ್ಬಾಗಿಲಾಗಿದೆ’ ಎಂದು ಸೂಫಿ ವಿದ್ವಾಂಸರ ಅಭಿಪ್ರಾಯವಾಗಿದೆ.
ಅಂದರೆ ಯಾರಿಗೆಲ್ಲ ತೃಪ್ತಿಯ ಹಂತವನ್ನು ಕರುಣಿಸಲಾಗಿದೆಯೋ ಅವರಿಗೆ ಪಾರಮಾರ್ಥಿಕದಲ್ಲಿ ಅಂತಿಮವಾಗಿ ಅತ್ಯಂತ ಪವಿತ್ರ ಸ್ವಾಗತ ಮತ್ತು ಗೌರವಗಳು ಲಭಿಸಲಿದೆ. ‘ತೃಪ್ತಿ ಎಂಬುದು ದೇವರ ಬಳಿಹೋಗುವ ಮಹಾದ್ವಾರವಾಗಿದೆ ಮತ್ತು ವಿಶ್ವದ ಸ್ವರ್ಗವಾಗಿದೆ’ ಎನ್ನುತ್ತಾರೆ ಅಬ್ದ್ ಅಲ್ ವಾಹಿದ್ ಇಬ್ನ್ ಝೈದ್. ದೇವರು ಅವನ ಮೇಲೆ ತೃಪ್ತಿ ಹೊಂದುವವರೆಗೆ ಭಕ್ತ ತನ್ನ ದೇವರಮೇಲೆ ತೃಪ್ತಿ ಹೊಂದಲಾರ. ಯಾಕೆಂದರೆ ‘ಅದರಲ್ಲಿ (ಸ್ವರ್ಗದಲ್ಲಿ) ಅವರು ಅನಂತಕಾಲ ಬಾಳುವರು.
ಅಲ್ಲಾಹನು ಅವರಿಂದ ತೃಪ್ತನೂ, ಅವರು ಅವನಿಂದ ತೃಪ್ತರೂ ಆಗಿರುವರು’ ಎಂದು ಕುರಾನ್‌ನಲ್ಲಿ ಹೇಳಲಾಗಿದೆ(98:8). ಅಬೂ ಅಲ್ ದಖ್ಖಾಕರನ್ನು ಅವರ ಶಿಷ್ಯನೊಬ್ಬ ಕೇಳಿದ್ದ, ‘ಭಕ್ತನಿಗೆ ದೇವರು ತನ್ನ ಮೇಲೆ ಸಂತುಷ್ಟನಾಗಿದ್ದಾನೆಂದು ತಿಳಿಯುತ್ತದೆಯೇ?’ ಅದಕ್ಕೆ ಉತ್ತರಿಸಿದ ದಖ್ಖಾಕ್ ‘ಇಲ್ಲ, ಅವನ ಸಂತೃಪ್ತಿ ಅದೃಷ್ಯವಾಗಿರುವುದರಿಂದ ಅವನಿಗೆ ತಿಳಿಯುವುದು ಹೇಗೆ ಸಾಧ್ಯ?’ ಎಂದಿದ್ದರು. ಈ ಉತ್ತರದಿಂದ ತೃಪ್ತನಾಗದ ಯುವ ಶಿಷ್ಯ ‘ಇಲ್ಲ ಅವನು ತಿಳಿಯುತ್ತಾನೆ’ ಎಂದ.
‘ಹೇಗೆ?’ ಎಂದು ಗುರುಗಳು ಕೇಳಿದಾಗ ‘ನನ್ನ ಹೃದಯ ದೇವರ ಕೃಪೆಯಿಂದ ತೃಪ್ತವಾದಾಗ, ಅವನು ನನ್ನಿಂದ ತೃಪ್ತನಾಗಿದ್ದಾನೆಂದು ತಿಳಿಯುತ್ತದೆ’ ಎಂದು ಶಿಷ್ಯ ಉತ್ತರಿಸಿದ. ‘ಅತ್ಯಂತ ಸರಿಯಾಗಿ ಉತ್ತರ ನೀಡಿದ್ದಿ ಯುವಕಾ’ ಎಂದು ಉದ್ಗರಿಸಿದರು ದಖ್ಖಾಕ್. ಮೂಸಾ(ಮೋಸೆಸ್) ದೇವರನ್ನು ‘ನಿನ್ನನ್ನು ಸಂತೋಷಪಡಿಸುವುದಕ್ಕೆ ಏನು ಕಾರ್ಯ ಮಾಡಬೇಕು?’ ಎಂದು ಕೇಳಿಕೊಂಡಿದ್ದರು. ‘ಅದು ನಿನ್ನಿಂದ ಸಾಧ್ಯವಾಗದು’ ಎಂಬ ವಾಣಿ ಕೇಳಿಬಂತು. ಮೂಸಾ ನಬಿ ಸಾಷ್ಟಾಂಗ ನಮಸ್ಕಾರ ಮಾಡಿ ಹಠಹಿಡಿದಾಗ ‘ಓ ಇಮ್ರಾನನ ಮಗನೇ, ನನ್ನ ಸಂತಸವಿರುವುದೇ ನಿನ್ನ ಸಂತಸದಲ್ಲಿ, ನನ್ನ ವಿಧಿಯ ನಿಯಮದಲ್ಲಿ’ ಎಂಬ ಉತ್ತರ ಬಂತು!.
No comments:
Post a Comment