ಇತರರ ಬಗ್ಗೆ ಕಾಳಜಿವಹಿಸುವುದು, ಗೌರವ ಹೊಂದಿರುವುದು ದೀನರ, ಅನಾಥರ ಸೇವೆಯ ಆದರ್ಶ ಗುಣದ ಮೂಲವಾಗಿದೆ. ‘ಯಾರು ತನ್ನ ಅವಶ್ಯಕತೆಯನ್ನು ಪೂರೈಸುವುದಕ್ಕೆ ಮಾತ್ರ ಆದ್ಯತೆ ನೀಡದೆ ಇತರರ ಸಹಾಯಕ್ಕೆ ಧಾವಿಸುತ್ತಾನೋ ಅವನ ಅಗತ್ಯವನ್ನು ಪೂರೈಸಲು ದೇವರು ನೆರವಾಗುತ್ತಾನೆ’ ಎಂದು ಪ್ರವಾದಿಯವರು ಹೇಳಿದ್ದರು.
‘ದೀನರ ಸೇವೆಯ ಆದರ್ಶ ಪರಿಪೂರ್ಣವಾಗಿರುವುದು ದೇವರ ಪ್ರವಾದಿಯವರಲ್ಲಿ ಮಾತ್ರ. ಪುನರುತ್ಥಾನದ ದಿನ ವಿಚಾರಣೆಯ ಸಭೆಯಲ್ಲಿ ಎಲ್ಲರೂ ‘ನಾನು, ನನ್ನದು’ ಎಂದು ಹೇಳುತ್ತಿರುವಾಗ ಪ್ರವಾದಿಯವರು ‘ನನ್ನ ಜನರು’ ಎಂದು ಹೇಳುತ್ತಾರೆ’ ಎಂದು ಅಬೂ ಅಲಿ ಅದ್ದಖ್ಖಾಕ್ ಹೇಳಿದ್ದಾರೆ. ‘ಎಡವಿದ ತನ್ನ ಅನುಯಾಯಿಗಳ ತಪ್ಪುಗಳನ್ನು ಸರಿಪಡಿಸುವುದಕ್ಕಾಗಿ ಪ್ರಯತ್ನಿಸುವುದು ಸೇವಾದರ್ಶದ ಅಂಗವಾಗಿದೆ’ ಎಂದು ಸಂತ ಅಲ್ ಫಾದಿ ಹೇಳಿದ್ದರು.
‘ತಾನು ಎಲ್ಲರಿಗಿಂತ ಶ್ರೇಷ್ಠನೆಂದು ಪರಿಗಣಿಸಿಕೊಳ್ಳದೆ ಎಲ್ಲರಂತೆಯೇ ಒಬ್ಬ ಎಂಬ ವಿನಯ ಕೂಡ ಸೇವಾದರ್ಶದ ಮೂಲ. ಇಂತಹ ಆದರ್ಶ ಗುಣವನ್ನು ಹೊಂದಿದವನಿಗೆ ವೈರಿಗಳು ಯಾರೂ ಇರುವುದಿಲ್ಲ’ ಎಂದು ಅಬೂಬಕರ್ ಅಲ್ ವರಾಖ್ ಹೇಳುತ್ತಾರೆ. ‘ಇತರರ ಸೇವೆಯ ಆದರ್ಶವಿರುವ ಗುಣವಂತ ದೇವರಸಲುವಾಗಿ ತನ್ನ ಸ್ವಂತ ಆಸೆ ಆಕಾಂಕ್ಷೆಗಳ ವಿರೋಧಿಯಾಗಿರುತ್ತಾನೆ. ಇವನು ಯಾರನ್ನೂ ದ್ವೇಷಿಸಲಾರ’ ಎಂದು ಮುಹಮ್ಮದ್ ಬಿನ್ ಅಲಿ ಅತ್ತಿರ್ಮಿಧಿ ಹೇಳುತ್ತಾರೆ.
ತಮ್ಮ ಸಮುದಾಯದ ಜನರು ಬಹುದೇವಾರಾಧಕರಾಗಿ ಅನೀತಿಯಲ್ಲಿ ಮುಳುಗಿರುವಾಗ ತಮ್ಮನ್ನು ರಕ್ಷಿಸಿಕೊಳ್ಳಲು ಸತ್ಯವಿಶ್ವಾಸಿಗಳಾದ ಯುವಕರ ತಂಡವೊಂದು ಗುಹೆಯಲ್ಲಿ ಅಡಗಿರಬೇಕಾದ ಸಂದರ್ಭವು ಕುರಾನ್(18:13)ನಲ್ಲಿ ಉಲ್ಲೇಖಿಸಿದೆ. ಇವರು ತಮ್ಮ ಮತ್ತು ದೇವರ ಮಧ್ಯೆ ಮಧ್ಯವರ್ತಿಗಳು ಪ್ರವೇಶಿಸಲು ಅವಕಾಶ ಮಾಡಿಕೊಡಲಿಲ್ಲ. ‘ನವಯುವಕನೊಬ್ಬ ಈ ರೀತಿ ಮಾತಾಡುವುದನ್ನು ನಾವು ಕೇಳಿದ್ದೇವೆ. ಅವನು ‘ಇಬ್ರಾಹೀಮ್’ ಎಂದು ಕರೆಯಲ್ಪಟ್ಟಿದ್ದಾನೆ’ (ಕುರಾನ್ 21:60). ಎಲ್ಲ ಜನರ ಅಂತರ್ಯದಲ್ಲೂ ಒಂದೊಂದು ವಿಗ್ರಹಗಳು ಸ್ಥಾಪನೆಯಾಗಿರುವುದನ್ನು ಆತ ಕಂಡುಕೊಂಡಿದ್ದ.
ಅವನು ಮೊದಲು ತನ್ನ ಸ್ವಂತ ಅಂತಃಕರಣವನ್ನು ಶುದ್ಧಿಗೊಳಿಸುವ ಸಂಕೇತವಾಗಿ ವಿಗ್ರಹಗಳನ್ನು ತೊರೆದಿದ್ದ. ಹೀಗೆ ತನ್ನ ಅಂತರ್ಯದ ಶುದ್ಧೀಕರಣದಲ್ಲಿ ತೊಡಗಿದವನು ಇತರರ ಸೇವೆಯಲ್ಲಿ ಆದರ್ಶಪ್ರಾಯನಾಗಿರುತ್ತಾನೆ. ‘ಸೇವಾ ಮನೋಭಾವನೆಯನ್ನು ಹೊಂದಿರುವುದು ಅತ್ಯುತ್ತಮ ನೈತಿಕಗುಣವಾಗಿದೆ’ ಎಂದು ಉಸ್ಮಾನ್ ಅಲ್ ಮಕ್ಕಿಯವರು ವ್ಯಾಖ್ಯಾನಿಸಿದ್ದರು. ಈ ಬಗ್ಗೆ ಸೂಫಿ ಸಂತ ಜುನೈದ್ ಬಗ್ದಾದಿಯವರನ್ನು ಕೇಳಿದಾಗ, ‘ಶ್ರೀಮಂತರನ್ನು ತಿರಸ್ಕರಿಸಿ ನೋಡದೆ, ಬಡವರಬಗ್ಗೆ ಜಿಗುಪ್ಸೆ ಪಡದಿರುವುದು’ ಎಂದು ಉತ್ತರಿಸಿದ್ದರು.
ಸೂಫಿಗಳನ್ನು ಕೇಳಿದಾಗ ‘ಸೇವಾದರ್ಶ ಎಂದರೆ, ಊಟದ ಚಾಪೆಯಲ್ಲಿ ಕೂತಿರುವಾಗ ಆಹಾರ ಸ್ವೀಕರಿಸುತ್ತಿರುವ ಅತಿಥಿಯೊಬ್ಬ ಸಂತನೆಂದೋ, ಅನ್ಯಧರ್ಮೀಯನೆಂದೋ ವಿಂಗಡಿಸಿ ಭೇದಭಾವ ತೋರದಿರುವುದು’ ಎಂದು ಉತ್ತರಿಸಿದ್ದರು. ಒಮ್ಮೆ ಹಜ್ರತ್ ಇಬ್ರಾಹಿಮರನ್ನು ತನ್ನ ಔತಣಕೂಟಕ್ಕೆ ಅತಿಥಿಯಾಗಿ ಆಹ್ವಾನಿಸಲು ಅನ್ಯಧರ್ಮೀಯನೊಬ್ಬ ಬಂದಿದ್ದ. ಅವನಿಗೆ ನೀನು ನನ್ನ ಧರ್ಮವನ್ನು ಸ್ವೀಕರಿಸಿದರೆ ಮಾತ್ರ ನಿನ್ನ ಔತಣಕೂಟಕ್ಕೆ ಹಾಜರಾಗುತ್ತೇನೆ ಎಂದು ಹೇಳಿ ಹಿಂದಕ್ಕೆ ಕಳುಹಿಸಿದ್ದರು.
ಈ ಸಂದರ್ಭದಲ್ಲಿ ಅಶರೀರವಾಣಿಯೊಂದು ಕೇಳಿಬಂತು, ‘ಅನ್ಯಧರ್ಮೀಯನಾಗಿದ್ದರೂ ಅವನಿಗೆ ಐವತ್ತು ವರ್ಷಗಳ ಕಾಲ ನಾನು ಆಹಾರವನ್ನು ನೀಡಿ ಸಲಹಿದ್ದೇನೆ. ಅವನು ಮತಾಂತರವಾಗದೆ ನೀನು ಅವನ ಆತಿಥ್ಯವನ್ನು ಒಂದು ದಿನದ ಮಟ್ಟಿಗೆ ಕೂಡ ಸ್ವೀಕರಿಸಲು ಸಾಧ್ಯವಾಗಲಿಲ್ಲವೇ?’ ಇದನ್ನು ಕೇಳಿದ ಹಜ್ರತ್ ಇಬ್ರಾಹಿಮ್ ಅವನನ್ನು ಹುಡುಕುತ್ತಾ ಹೋಗಿ ಕ್ಷಮೆಯಾಚಿಸಿದರು.
-ಫಕೀರ್ ಮುಹಮ್ಮದ್ ಕಟ್ಪಾಡಿ.
No comments:
Post a Comment