ಕ್ಷಣಕ್ಷಣಕ್ಕೂ ಪರಿವರ್ತನಶೀಲವಾಗಿರುವ ಶರೀರವು ನಶ್ವರ ಮತ್ತು ಅನಿತ್ಯವಾದುದು. ಸಂಪತ್ತು ಕೂಡ ಶಾಶ್ವತವಾದುದಲ್ಲ. ಮೇಲಾಗಿ ಮೃತ್ಯುವು ಸದಾ ಸಮೀಪದಲ್ಲೇ ಸಂಚರಿಸುತ್ತಿರುವುದರಿಂದ ಯಾವಾಗ ತನ್ನ ತೆಕ್ಕೆಗೆ ನಮ್ಮನ್ನು ಬರಸೆಳೆದುಕೊಳ್ಳುವುದೋ ತಿಳಿದಿಲ್ಲ. ಹೀಗಿರುವಾಗ ಧರ್ಮಕಾರ್ಯಗಳನ್ನು ಮಾಡಬೇಕಾದುದು ಅತ್ಯಗತ್ಯವೆಂದು ಸುಭಾಷಿತವೊಂದು ಹೇಳುತ್ತದೆ. ಇದೇ ಮಾತನ್ನು ಜಗತ್ತಿನ ಅನುಭಾವಿಗಳು, ಶರಣರು ಸಂತರು ಹೇಳುವುದಲ್ಲದೆ ಸದಾ ಒಳ್ಳೆಯ ಕಾರ್ಯಗಳನ್ನು ಮಾಡುತ್ತ ಮಾನವ ಜನ್ಮವನ್ನು ಸಾರ್ಥಕ ಪಡಿಸಿಕೊಳ್ಳಲು ಸಂದೇಶ ನೀಡಿರುವುದನ್ನು ಕಾಣುತ್ತೇವೆ.
ಶರೀರವು ನಶ್ವರವಾದುದೆಂಬುದನ್ನು ತಿಳಿದಿದ್ದರೂ ನಾವು ಅದರ ಬಗ್ಗೆ ಅತಿಯಾದ ಮೋಹವನ್ನು ಹೊಂದಿರುತ್ತೇವೆ. ಅದರ ಸೌಂದರ್ಯಕ್ಕೆ ಮರುಳಾಗುವುದಲ್ಲದೇ ಆ ಸೌಂದರ್ಯವನ್ನು ರಕ್ಷಿಸಿಕೊಳ್ಳಲು ಶಕ್ತಿಮೀರಿ ಪ್ರಯತ್ನಿಸುತ್ತೇವೆ. ಸಂಪತ್ತು ಶಾಶ್ವತವಾದುದಲ್ಲ. ಭೌತಿಕ ಸಂಪತ್ತಿನಿಂದ ನಿತ್ಯಸುಖ ದೊರೆಯದೆಂಬುದನ್ನು ಅರಿತಿದ್ದರೂ ಭೌತಿಕ ಸಂಪತ್ತಿನ ಸಂಗ್ರಹಣೆಗಾಗಿ ಎಲ್ಲ ವಾಮಮಾರ್ಗಗಳನ್ನೂ ಅನುಸರಿಸುತ್ತೇವೆ. ‘ಜಾತಸ್ಯ ಮರಣಂ ಧ್ರುವಂ’ ಎಂದು ತಿಳಿದಿದ್ದರೂ, ಮೃತ್ಯುವನ್ನು ಬೆನ್ನಿಗಂಟಿಸಿಕೊಂಡೇ ಎಲ್ಲದಕ್ಕೂ ಆಶಿಸುತ್ತೇವೆ. ಇಂಥ ಸನ್ನಿವೇಶದಲ್ಲಿ ಸರ್ವಕರ್ತೃವಾಗಿರುವ ಭಗವಂತನನ್ನು ಸ್ಮರಿಸಲು, ಸತ್ಕಾರ್ಯಗಳನ್ನು ನೆರವೇರಿಸಲು ತನ್ಮೂಲಕ ಪರಮ ಸುಖವನ್ನು ಪಡೆಯಲು ನಮಗೆ ಯಾವುದೇ ಅವಕಾಶವಿಲ್ಲದಂತಾಗಿದೆ.
‘ಪಡೆವೆ ನೀನೆಂದಿಗೆ ಪರಮುಕ್ತಿ ಸುಖವನು, ಕೆಡುವ ಕಾಯದ ಮೋಹವನು ಮಾಣೆ ಮನುಜ’ ಎನ್ನುವ ಅನುಭಾವಿಗಳು ಶರೀರದ ಮೋಹವನ್ನು ತ್ಯಜಿಸದೆ ನಿತ್ಯಸುಖವನ್ನು ಪಡೆಯಲಾರೆ ಎಂದು ಎಚ್ಚರಿಸುತ್ತಾರೆ. ‘ಅಮೇಧ್ಯದ ಮಡಿಕೆ, ಮೂತ್ರದ ಕುಡಿಕೆ, ಎಲುವಿನ ತಡಿಕೆ, ಕೀವಿನ ಹಡಿಕೆ ಸುಡಲೀ ದೇಹವ; ಒಡಲವಿಡಿದು ಕೆಡದಿರು’ ಎನ್ನುವ ಅಕ್ಕಮಹಾದೇವಿಯು ಶರೀರದ ನೈಜ ಸ್ಥಿತಿಯನ್ನು ನಮ್ಮ ಮುಂದೆ ತೆರೆದಿಟ್ಟಿದ್ದಾಳೆ. ಶರೀರವನ್ನು ನೆಚ್ಚಿ ಕೆಡಬೇಡ. ಇದರರ್ಥ ಶರೀರದ ಬಗ್ಗೆ ವೃಥಾ ವ್ಯಾಮೋಹ ಸಲ್ಲದು ಎಂಬುದೇ ಆಗಿದೆ. ಅದೇ ರೀತಿ ಸಂಪತ್ತು ಕೂಡ ಸ್ಥಿರವಾದುದಲ್ಲ ‘ಕಾಳ ಬೆಳದಿಂಗಳ ಸಿರಿ ಸ್ಥಿರವಲ್ಲ. ಸಿರಿಯಂಬುದು ಸಂತೆಯ ಮಂದಿ ಕಂಡಯ್ಯ’ ಎಂದು ಸಂಪತ್ತಿನ ಕ್ಷಣಿಕತೆಯನ್ನು ಬಸವಣ್ಣನವರು ಮನದುಂಬಿ ವರ್ಣಿಸಿದ್ದಾರೆ. ಆದ್ದರಿಂದ ಈ ಸಿರಿ ಮತ್ತು ಶರೀರಗಳಿಂದ ಧರ್ಮಕಾರ್ಯಗಳನ್ನು ಮಾಡುವುದೊಂದೇ ದಾರಿ.
ಧರ್ಮಕಾರ್ಯಗಳು ಹತ್ತುಹಲವು. ಸತ್ಯವನ್ನೇ ಮಾತನಾಡುವುದು, ಇತರರಿಗೆ ಯಾವ ರೀತಿಯಿಂದಲೂ ಹಿಂಸೆ ಮಾಡದಿರುವುದು, ಇತರರ ವಸ್ತುಗಳನ್ನು ಕದಿಯದಿರುವುದು ಮತ್ತು ಅಗತ್ಯಕ್ಕಿಂತ ಹೆಚ್ಚಿಗೆ ಸಂಗ್ರಹಿಸದಿರುವುದು, ಸಮತೆಯಿಂದ ಕೂಡಿರುವುದು, ಜೀವಿಗಳಲ್ಲಿ ದಯಾಭಾವ ಹೊಂದಿರುವುದು ಮತ್ತು ಅವುಗಳಿಗೆ ಲೇಸನ್ನು ಬಯಸುವುದು, ಕಾಯಕ-ದಾಸೋಹಗಳ ಮೂಲಕ ಬದುಕಿನ ನಿರ್ವಹಣೆ ಮಾಡುತ್ತ ಭಗವಂತನ ಪೂಜೆ, ಧ್ಯಾನಗಳಿಂದ ಪರಮ ಪುರುಷಾರ್ಥವಾದ ಮೋಕ್ಷ ಅಥವಾ ಭಗವಂತನ ಸಾಮರಸ್ಯವನ್ನು ಸಾಧಿಸುವುದೇ ಮುಂತಾದವುಗಳನ್ನು ಧರ್ಮಕಾರ್ಯಗಳೆಂದು ಹೇಳಲಾಗಿದೆ. ಶರೀರ ಹಾಗೂ ಸಂಪತ್ತಿನ ಮೇಲಿನ ಮೋಹವನ್ನು ತೊರೆದು, ಮೃತ್ಯುವಿನ ಬಾಯಿಗೆ ತುತ್ತಾಗುವ ಮುನ್ನ ಈ ಎಲ್ಲ ಧರ್ಮಕಾರ್ಯಗಳನ್ನು ಮಾಡಬೇಕಾದುದು ‘ಕರ್ತವ್ಯೋ ಧರ್ಮ ಸಂಗ್ರಹಃ’ ಎಂಬ ಮಾತಿನ ಮಥಿತಾರ್ಥವಾಗಿದೆ.
-ಡಾ.ಸಿದ್ದರಾಮ ಸ್ವಾಮಿಗಳು.
No comments:
Post a Comment