ಸೂಫಿ ಅನುಭಾವಿಗಳ ಬದುಕಿನಲ್ಲಿ ನಿರೀಕ್ಷೆಯೆಂದರೆ ಪರಮಾತ್ಮನ ಸಾನಿಧ್ಯ ಪಡೆಯುವುದು, ಅವನ ಪ್ರೀತಿಯನ್ನು ಇಡಿಯಾಗಿ ಅನುಭವಿಸುವುದು, ಅಂತಿಮವಾಗಿ ಅವನನ್ನು ಸೇರಿಕೊಳ್ಳುವುದಾಗಿದೆ.
‘ಯಾರು ನನ್ನನ್ನು ಸೇರುವುದಕ್ಕೆ ನಿರೀಕ್ಷೆಯಿಟ್ಟುಕೊಂಡಿದ್ದಾರೋ (ಅವರು ತಿಳಿದಿರಲಿ), ಆ ಸಮಯವು ಖಂಡಿತವಾಗಿಯೂ ಒದಗುವುದು’ ಎಂದು ಅಲ್ಲಾಹ ಕುರಾನ್‍ನಲ್ಲಿ (29:5) ಹೇಳುತ್ತಾನೆ. ಈ ಸಂದರ್ಭದಲ್ಲಿ ಅಲ್ಲಾಹ ಪ್ರವಾದಿಯವರಿಗೆ ದೇವದೂತ ಜಿಬ್ರೀಲ್ ಮೂಲಕ ನೀಡಿದ ಸಂದೇಶದಲ್ಲಿ ‘ನನ್ನ ಭಕ್ತರು ಎಲ್ಲಿಯ ವರೆಗೆ ನನ್ನನ್ನಲ್ಲದೆ ಇನ್ನಾರನ್ನೂ ದೇವರೆಂದು ಪೂಜಿಸದೆ ಇರುತ್ತಾರೋ, ನನ್ನನ್ನು ನಿರೀಕ್ಷಿಸುತ್ತಿರುತ್ತಾರೋ ಅವರನ್ನು ಎಲ್ಲ ಪಾಪಗಳಿಂದ ರಕ್ಷಿಸುತ್ತೇನೆ. ನೀವು ಭೂಮಿಯು ಹೊರಲಾರದಷ್ಟು ಪಾಪಗಳನ್ನು ಮಾಡಿದವರಾಗಿ ನನ್ನ ಬಳಿಗೆ ಬಂದರೂ ನಿಮ್ಮ ಪಶ್ಚಾತ್ತಾಪಕ್ಕೆ ಉತ್ತರವಾಗಿ ಕ್ಷಮಿಸಿ ಸ್ವೀಕರಿಸುತ್ತೇನೆ’ ಎಂದು ಹೇಳಿದ್ದಾನೆ. \
‘ನಿಮ್ಮಲ್ಲಿ ಬಾರ್ಲಿಯ ಕಾಳಿನಷ್ಟಾದರೂ ಏಕದೇವ ವಿಶ್ವಾಸ ಇದ್ದಲ್ಲಿ ನಿರೀಕ್ಷಿಸಿ, ಪುನರುತ್ಥಾನದ ದಿನ ನಿಮ್ಮೆಲ್ಲರನ್ನೂ ನರಕದ ಬೆಂಕಿಯಿಂದ ಹೊರತರುತ್ತೇನೆ’ ಎಂದು ಅಲ್ಲಾಹ ಹೇಳಿದ್ದಾನೆಂದು ಪ್ರವಾದಿಯವರು ಹೇಳಿದ್ದನ್ನು ಅನಸ್ ಬಿನ್ ಮಾಲಿಕ್ ನೆನಪಿಸುತ್ತಾರೆ.
ಮುಂದೇನಾಗಬಹುದು ಎಂಬುದನ್ನು ಭಯವು ಎದುರು ನೋಡುವಂತೆ, ನಿರೀಕ್ಷೆಯು ಹೃದಯ ಪ್ರೀತಿಸುವ, ಭವಿಷ್ಯದಲ್ಲಿ ಬದಲಾವಣೆ ತರುವ ಒಂದು ಕೊಂಡಿಯಾಗಿದೆ. ಆದುದರಿಂದ ನಿರೀಕ್ಷೆಯು ನಾವು ಏನೋ ಮುಂದೆ ಬರುವುದನ್ನು ಎದುರು ನೋಡುತ್ತಿರುವುದಕ್ಕೆ ಸಂಬಂಧಿಸಿದ್ದು.
ಹೃದಯವು ಜೀವಂತವಾಗಿರುವುದು ನಿರೀಕ್ಷೆಯಿಂದ. ಹಾರೈಕೆ ಮತ್ತು ನಿರೀಕ್ಷೆಗೆ ಇರುವ ವ್ಯತ್ಯಾಸವೆಂದರೆ ಹಾರೈಕೆಯು ಒಬ್ಬಾತನನ್ನು ಸೋಮಾರಿಯನ್ನಾಗಿಸಬಹುದು, ಆದರೆ, ನಿರೀಕ್ಷೆ ಅದನ್ನು ಪಡೆದು ಸಾಧಿಸುವುದಕ್ಕಾಗಿ ಪಡುವ ಪರಿಶ್ರಮವಾಗಿದೆ. ನಿರೀಕ್ಷೆಯು ಪ್ರಶಂಸನೀಯ ವಿಶಿಷ್ಟಗುಣವಾದರೆ, ಹಾರೈಕೆಯು ಮನುಷ್ಯನಲ್ಲಿರುವ ಕೊರತೆಯ ಲಕ್ಷಣವೆನಿಸಲ್ಪಡುತ್ತದೆ.
ಸೂಫಿಗಳು ನಿರೀಕ್ಷೆಯ ಬಗ್ಗೆ ಬಹಳಷ್ಟು ವಿವರಗಳನ್ನು ನೀಡುತ್ತಾರೆ. ಷಾ ಅಲ್ ಕಿರ್ಮಾನಿಯವರ ಅಭಿಪ್ರಾಯದಂತೆ ‘ನಿರೀಕ್ಷೆಯ ಪ್ರಮುಖ ಲಕ್ಷಣವೆಂದರೆ ಪ್ರಾಮಾಣಿಕವಾಗಿ ದೇವರಿಗೆ ವಿನೀತನಾಗಿರುವುದು’. ಸೂಫಿ ಸಂತ ಇಬ್ನ್ ಖುಬಾಯಕ್, ‘ನಿರೀಕ್ಷೆಯಲ್ಲಿ ಮೂರು ವಿಧ ಇವೆ. ಒಂದನೆಯದು ಯಾವಾಗಲೂ ಒಳಿತನ್ನೇ ಮಾಡುತ್ತಿರುವ ಸಜ್ಜನನಾದವನ ನಿರೀಕ್ಷೆಯು ತಾನು ಮಾಡಿದ ಒಳ್ಳೆಯ ಕಾರ್ಯವು ಸೃಷ್ಟಿಕರ್ತನಿಂದ ಸ್ವೀಕರಿಸಲ್ಪಡಬೇಕೆಂದಾಗಿರುತ್ತದೆ. ಎರಡನೆಯದು ಪಾಪಕರ್ಮಗಳನ್ನು ಮಾಡಿದವನು ಮುಂದೆ ತನ್ನ ಕೃತ್ಯಗಳಿಗೆ ಪಶ್ಚಾತ್ತಾಪಡುತ್ತ ತನಗೆ ಕ್ಷಮೆ ದೊರೆಯುವ ನಿರೀಕ್ಷೆಯಲ್ಲಿರುತ್ತಾನೆ. ಕೊನೆಯದಾಗಿ ಮೂರನೆಯ ವಿಧದಲ್ಲಿ ವ್ಯಕ್ತಿಯೋರ್ವ ತನ್ನ ಪಾಪ ಕರ್ಮಗಳನ್ನು ಸತತವಾಗಿ ಮಾಡುತ್ತಲೇ ‘ನಾನು ದೇವರಿಂದ ಕ್ಷಮೆಯನ್ನು ನಿರೀಕ್ಷಿಸುತ್ತೇನೆ’ ಎನ್ನುತ್ತಾನೆ.
ಇವುಗಳ ಪೈಕಿ ವ್ಯಕ್ತಿಯೋರ್ವ ತಾನು ಪಾಪ ಕರ್ಮವನ್ನು ಮಾಡುತ್ತೇನೆಂದುಕೊಂಡಾಗ ನಿರೀಕ್ಷೆಗಿಂತ ಭಯವೇ ಮುಖ್ಯವಾಗುತ್ತದೆ’ ಎಂದು ಹೇಳಿದ್ದಾರೆ. ಹೀಗೆ ನಿರೀಕ್ಷೆಯು ಅತ್ಯಂತ ಪ್ರಿಯನಾದ ದೇವರ ಧಾರಾಳತನ, ದಯಾಪರತೆಯ ಮೇಲೆ ನಿರ್ಭರವಾಗಿರುತ್ತದೆ. ನಿರೀಕ್ಷೆ ಎಂಬುದು ದೈವೀವೈಭವವನ್ನು ಸೌಂದರ್ಯದ ಕಣ್ಣಿನ ಮೂಲಕ ನೋಡುವ ಕ್ರಿಯೆ. ನಿರೀಕ್ಷೆಯು ದೇವರ ಕರುಣಾಮಯ ಗುಣದ ಅನುಭವವನ್ನು ಪಡೆಯುವ ಹೃದಯದ ಪರಮಾನಂದದ ಸಾಕಾರವಾಗಿದೆ. ನಿರೀಕ್ಷೆಯು ದೇವರ ಸನಿಹವಾದಾಗ ಹೊಂದುವ ಹೃದಯದ ಹರ್ಷದಾಯಕ ಸ್ಥಿತಿಯಾಗಿದೆ.
-ಫಕೀರ್ ಅಹ್ಮದ್ ಕಟ್ಪಾಡಿ.
No comments:
Post a Comment