Sunday, May 8, 2016

ಧ್ಯಾನಯೋಗ

ಮಾನವ ಬದುಕಿನಲ್ಲಿ ಸ್ಥಿರವಾದ ಮತ್ತು ಏಕಾಗ್ರತೆಯುಳ್ಳ ಮನಸ್ಸಿನ ಪಾತ್ರ ಬಹುದೊಡ್ಡದು. ಲೌಕಿಕ ಬದುಕಿಗೆ ಹೇಗೋ ಹಾಗೆ ಆಧ್ಯಾತ್ಮಿಕ ಬದುಕಿಗೂ ಅದು ಅತ್ಯವಶ್ಯ. ಯೋಗಶಾಸ್ತ್ರದಲ್ಲಿ ಅದರ ಕಲೆ ಮತ್ತು ವಿಜ್ಞಾನವನ್ನು ಕುರಿತು ವಿಸ್ತೃತವಾಗಿ ಚರ್ಚಿಸಲಾಗಿದೆ. ಅನೇಕ ಸಂತರು, ಶರಣರು, ಅನುಭಾವಿಗಳೂ ಕೂಡ ಮನಸ್ಸಿನ ಸ್ವರೂಪ ಸ್ವಭಾವವನ್ನು ತಿಳಿಸುತ್ತ ಧ್ಯಾನದ ಮೂಲಕ ಅದನ್ನು ಸ್ಥಿರೀಕರಿಸಿಕೊಂಡರೆ ಪರಮಾತ್ಮ ಸಾಕ್ಷಾತ್ಕಾರವೂ ಸಾಧ್ಯ ಎನ್ನುತ್ತಾರೆ.

ಆಧ್ಯಾತ್ಮಿಕ ಪರಿಭಾಷೆಯಲ್ಲಿ ಚಂಚಲವಾದ ಮನಸ್ಸನ್ನು ಧ್ಯೇಯ ವಸ್ತುವಿನಲ್ಲಿ ಏಕಾಗ್ರಗೊಳಿಸುವುದಕ್ಕೆ ಧ್ಯಾನವೆನ್ನುವರು. ನೋವಿಜ್ಞಾನಿಗಳ ದೃಷ್ಟಿಯಲ್ಲಿ ಧ್ಯಾನವೊಂದು ಮಾನಸಿಕ ಕ್ರಿಯೆ ಮಾತ್ರ. ಅವರು ಅದನ್ನು ‘Attention’ ಎಂಬರ್ಥದಲ್ಲಿ ಬಳಸುವರು. ಪತಂಜಲಿ ಮಹರ್ಷಿಗಳು ಯೋಗದ ಅಷ್ಟಾಂಗಗಳಲ್ಲಿ ಧಾರಣ, ಧ್ಯಾನ ಮತ್ತು ಸಮಾಧಿಗಳನ್ನು ಹೀಗೆ ವಿವರಿಸಿದ್ದಾರೆ.

ಯಾವುದೇ ಧ್ಯೇಯ ವಸ್ತುವಿನಲ್ಲಿ ಮನಸ್ಸನ್ನು ಸ್ಥಿರೀಕರಿಸುವುದು ಧಾರಣವೆನಿಸಿದರೆ ಮನಸ್ಸಿನ ನಿರಂತರ ಏಕಾಗ್ರತೆ ಧ್ಯಾನವೆನಿಸುವುದು. ಪ್ರತ್ಯಯೈಕತಾನತಾ ಧ್ಯಾನಮ್ (ಯೋಗಸೂತ್ರ ೩.೨). ಧ್ಯಾನದಲ್ಲಿ ನಿರಂತರ ಏಕಾಗ್ರತೆಯು ಧ್ಯೇಯ ವಸ್ತುವಿನೆಡೆಗೆ ನಿರಂತರ ಪ್ರವಹಿಸುತ್ತದೆ. ಧ್ಯಾನವು ದೀರ್ಘ ಅವಧಿಯವರೆಗೆ ಮುಂದುವರಿದರೆ ಅದೇ ಸಮಾಧಿ ಎನಿಸುವುದು.

ಪರಮಾತ್ಮನು ಸರ್ವವ್ಯಾಪಕ, ಸರ್ವಾಂತರ್ಯಾಮಿ ಮತ್ತು ಸರ್ವಜ್ಞನಾಗಿರುವನು. ಅಂತಹ ಪರಮಾತ್ಮನನ್ನೇ ಧ್ಯೇಯವಾಗಿಸಿಕೊಂಡು ಅವನಲ್ಲಿ ಮನಸ್ಸನ್ನು ಏಕಾಗ್ರಗೊಳಿಸುವುದು ಧ್ಯಾನಯೋಗಕ್ಕೆ ಕಾರಣವಾಗುವುದು. ಧ್ಯಾನಯೋಗದಲ್ಲಿ ಆತ್ಮನು ಪರಮಾತ್ಮನೊಡನೆ ಸಾಮರಸ್ಯವನ್ನು ಸಾಧಿಸುವನು. ಇದು ಧ್ಯಾನದ ಪರಿಪಕ್ವ ಸ್ಥಿತಿಯಾಗಿದ್ದು, ಅಲ್ಲಿ ಆತ್ಮನಿಗೆ ಅದ್ವೈತ ಪ್ರಜ್ಞೆಯುಂಟಾಗುತ್ತದೆ ಮತ್ತು ಅವನು ಪರಮಶಾಂತಿಯನ್ನು ಅನುಭವಿಸುವನು.

ಧ್ಯಾನಕ್ಕೆ ಪ್ರಮುಖ ಅಡತಡೆ ಎಂದರೆ ಮನಸ್ಸಿನ ಚಂಚಲತೆ. ಅದನ್ನು ನಿಗ್ರಹಿಸುವುದು, ಧ್ಯೇಯ ವಸ್ತುವಿನಲ್ಲಿ ಸ್ಥಿರೀಕರಿಸುವುದು ಅತ್ಯಂತ ಕಷ್ಟದ ಕೆಲಸ. ಚಂಚಲವಾದ ಪ್ರಕ್ಷೋಭಕಾರಿಯಾದ ಮನಸ್ಸನ್ನು ಅಭ್ಯಾಸ ಮತ್ತು ವಿರಾಗ ಭಾವದಿಂದ ನಿಗ್ರಹಿಸಬಹುದೆಂದು ಭಗವದ್ಗೀತೆಯಲ್ಲಿ ಹೇಳಲಾಗಿದೆ (ಅಭ್ಯಾಸೇನ ತು ಕೌಂತೇಯ ವೈರಾಗ್ಯೇಣ ಚ ಗೃಹ್ಯತೇ).

ಇದರ ಜೊತೆಗೆ ಅಪರಿಮಿತ ಇಚ್ಛಾಶಕ್ತಿ ಇದ್ದರೆ ಯಾವುದೇ ಜಾತಿ, ಮತ, ಪಂಥ, ವರ್ಣ, ವರ್ಗ, ಲಿಂಗ ಮತ್ತು ಆಶ್ರಮಗಳಿಗೆ ಸಂಬಂಧಿಸಿದ ವ್ಯಕ್ತಿ ಇದ್ದರೂ ಅವನಿಗೆ ಧ್ಯಾನದ ಮಾರ್ಗ ಸುಲಭವಾಗುವುದು. ಹಿತಮಿತವಾದ ಆಹಾರ ಸೇವನೆ ಮಾಡುವ, ವಿಷಯಗಳಲ್ಲಿ ನಿರಾಸಕ್ತಿಯುಳ್ಳ, ಮನಸ್ಸು ಮತ್ತು ದೇಹಗಳ ಮೇಲೆ ನಿಯಂತ್ರಣ ಹೊಂದಿರುವ ವ್ಯಕ್ತಿಯು ಧ್ಯಾನದ ಸಿದ್ಧಿಯನ್ನು ಸಾಧಿಸುವನು.

ಧ್ಯಾನದ ಕೊನೆಯಲ್ಲಿ ಅಮಿತಾನಂದವನ್ನು ಹೊಂದಿ ಎಲ್ಲ ಜೀವಿಗಳಲ್ಲಿ ತನ್ನನ್ನು, ತನ್ನಲ್ಲಿ ಎಲ್ಲ ಜೀವಿಗಳನ್ನು ಕಾಣುವ ವಿಶಿಷ್ಟಯೋಗಿ ಎನಿಸುವನು. ಪರಮಾತ್ಮನೊಡನೆ ಸಾಮರಸ್ಯ ಸಾಧಿಸಿದ ಈ ಸ್ಥಿತಿಯನ್ನು ಧ್ಯಾನಯೋಗ, ಸಮಾಧಿ (absolute concetration)  ಎಂದು ಕರೆಯಲಾಗಿದೆ.

ಡಾ. ಸಿದ್ದರಾಮ ಸ್ವಾಮಿಗಳು.

No comments:

Post a Comment