Wednesday, June 22, 2016

ನೈತಿಕ ಮೌಲ್ಯಗಳು

    
ನಾವು ಅನೇಕ ಸಂದರ್ಭಗಳಲ್ಲಿ ಮೌಲ್ಯಗಳನ್ನು ಕುರಿತು ಮಾತನಾಡುತ್ತೇವೆ. ನಮ್ಮ ಜೀವನ, ಸಮಾಜ, ಅರ್ಥವ್ಯವಸ್ಥೆ, ರಾಜಕಾರಣ ಮುಂತಾದವುಗಳೆಲ್ಲವೂ ಮೌಲ್ಯಾಧಾರಿತವಾಗಿರಬೇಕೆಂದು ಬಯಸುತ್ತೇವೆ. ಮೌಲ್ಯಗಳು ಮನುಷ್ಯನ ಬದುಕಿಗೆ, ಅವುಗಳಿಗಿರುವ ವ್ಯವಸ್ಥೆಗೆ ಮೆರಗನ್ನುಂಟುಮಾಡುವುದೇ ಇದಕ್ಕೆಲ್ಲ ಮೂಲಕಾರಣವೆನ್ನಬಹುದು. ಈ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡ ಮನುಷ್ಯನ ವ್ಯಕ್ತಿತ್ವವು ಸಂಪೂರ್ಣವಾಗಿ ವಿಕಾಸಗೊಳ್ಳುತ್ತದೆ.

ಮನುಷ್ಯನು ಉದಾತ್ತ ಗುರಿಯನ್ನು ಸಾಧಿಸುವಲ್ಲಿ ಮೌಲ್ಯಗಳು ಅತ್ಯಂತ ಸಹಾಯಕವಾಗುವುದರಿಂದ ಮಾನವ ಬದುಕಿನಲ್ಲಿ ಮೌಲ್ಯಗಳ ಪಾತ್ರ ಗಮನಾರ್ಹವಾಗಿದೆ. ನಾವೆಲ್ಲರೂ ನಮ್ಮ ಘನತೆಗೆ ತಕ್ಕಂತೆ ಜೀವನದಲ್ಲಿ ಆದರ್ಶಗಳನ್ನು ಅಳವಡಿಸಿಕೊಳ್ಳುತ್ತೇವೆ. ಸತ್ಯ, ಅಹಿಂಸೆ, ಅಸ್ತೇಯ, ಅಪರಿಗ್ರಹ, ಬ್ರಹ್ಮಚರ್ಯ ಮುಂತಾದ  ಆದರ್ಶಗಳಿಗೆ ಮಾನವೀಯ ಮೌಲ್ಯಗಳೆಂದು ಕರೆಯುತ್ತೇವೆ. ಪ್ರಾಮಾಣಿಕತೆ, ಕರ್ತವ್ಯನಿಷ್ಠೆಗಳಿಂದ ಕೂಡಿದ ಈ ಮೌಲ್ಯಗಳಿಂದಾಗಿ ಬದುಕು ಸುಂದರವೆನಿಸಿಕೊಳ್ಳುತ್ತದೆ.

ಮೌಲ್ಯಗಳಲ್ಲಿ ಶಾರೀರಿಕ, ಆರ್ಥಿಕ, ಧಾರ್ಮಿಕ, ಚಾರಿತ್ರಿಕ, ಬೌದ್ಧಿಕ, ಆಧ್ಯಾತ್ಮಿಕ, ನೈತಿಕ ಮುಂತಾದ ಹಲವು ರೀತಿಯ ಮೌಲ್ಯಗಳಿವೆ. ಇವುಗಳಲ್ಲಿ ಆಧ್ಯಾತ್ಮಿಕ ಮತ್ತು ನೈತಿಕ ಮೌಲ್ಯಗಳು ಸರ್ವಶ್ರೇಷ್ಠವೆನಿಸಿಕೊಳ್ಳುತ್ತವೆ. ಮನುಷ್ಯನ ಆತ್ಯಂತಿಕ ಗುರಿಯಾದ ಮೋಕ್ಷವನ್ನು ಸಂಪಾದಿಸುವಲ್ಲಿ ಆಧ್ಯಾತ್ಮಿಕ ಮತ್ತು ನೈತಿಕ ಮೌಲ್ಯಗಳು ಅತ್ಯವಶ್ಯವಾಗಿರುವುದರಿಂದ ಇವು ಸರ್ವಶ್ರೇಷ್ಠ ಮೌಲ್ಯಗಳಾಗಿವೆ.

ನೈತಿಕ ಮೌಲ್ಯಗಳು ನಿರಂತರ ಅಭಿವೃದ್ಧಿಹೊಂದುತ್ತವೆ. ದಾನವು ಒಂದು ನೈತಿಕ ಮೌಲ್ಯ. ನಾವು ದಾನ ಮಾಡುವುದರಿಂದ ನಮ್ಮಲ್ಲಿ ನೈತಿಕ ಮೌಲ್ಯದ ವೃದ್ಧಿಯಾಗುತ್ತದೆ. ಅದೇ ರೀತಿ ಸದಾಚಾರವೂ ಅಭಿವೃದ್ಧಿ ಹೊಂದುವ ಮೌಲ್ಯವಾಗಿದೆ. ನೈತಿಕ ಮೌಲ್ಯಗಳು ಯಾವುದೇ ದೇಶ ಕಾಲಗಳಿಗೆ ಸೀಮಿತವಾಗಿರುವುದಿಲ್ಲ.

ಸತ್ಯವನ್ನು ವ್ರತ ಎಂಬಂತೆ ಸ್ವೀಕರಿಸಿದ್ದ ಮಹಾತ್ಮಾ ಗಾಂಧಿಜೀಯವರು ಇಂದು ನಮ್ಮೊಡನಿರದಿದ್ದರೂ ಸತ್ಯವೆಂಬ ಮೌಲ್ಯ ಇದ್ದೇ ಇದೆ, ಅದು ಎಲ್ಲ ಕಾಲಕ್ಕೂ ಇರುತ್ತದೆ. ಇದೂ ಅಲ್ಲದೆ ಆತ್ಮವನ್ನು ಪ್ರಭಾವಿತಗೊಳಿಸುವ ಶಕ್ತಿಯು ನೈತಿಕ ಮೌಲ್ಯಗಳಿಗಿದ್ದು, ಅವುಗಳಿಂದ ಆನಂದೋತ್ಪತ್ತಿಯಾಗುತ್ತದೆ ಎಂದು ಅನುಭಾವಿಗಳು ಹೇಳುತ್ತಾರೆ.

ಅಧ್ಯಾತ್ಮಕ್ಕೂ ನೈತಿಕ ಮೌಲ್ಯಗಳಿಗೂ ಅನ್ಯೋನ್ಯವಾದ ಸಂಬಂಧವಿದೆ. ಅಧ್ಯಾತ್ಮವೆಂದರೆ ಬರೀ ಆತ್ಮ, ಸೃಷ್ಟಿ ಮತ್ತು ಪರಮಾತ್ಮನನ್ನು ಕುರಿತು ಚಿಂತಿಸುವುದಷ್ಟೇ ಅಲ್ಲ, ಮನುಷ್ಯನು ನೈತಿಕ ಜೀವನ ನಡೆಸುತ್ತ ಪರಮತತ್ವವನ್ನು ಅರಿಯುವುದಾಗಿದೆ. ಪಾಶ್ಚಾತ್ಯ ಅಧ್ಯಾತ್ಮವಾದಿಗಳು ಸದಾಚಾರ ಅಥವಾ ನೈತಿಕತೆಯನ್ನೇ ಅಧ್ಯಾತ್ಮವೆನ್ನುತ್ತಾರೆ.

ಅವರ ದೃಷ್ಟಿಯಲ್ಲಿ ನೈತಿಕ ಮೌಲ್ಯಗಳ ಸರ್ವಶ್ರೇಷ್ಠ ರೂಪವೇ ಅಧ್ಯಾತ್ಮ. ಹಾಗಾಗಿ ಆಧ್ಯಾತ್ಮಿಕ ಜೀವನ ಸಾಗಿಸಬೇಕೆನ್ನುವವರು ನೈತಿಕ ಮೌಲ್ಯಗಳನ್ನು ಅಳವಡಿಸಿ–ಕೊಳ್ಳಬೇಕಾದುದು ಅತ್ಯವಶ್ಯವಾಗಿದೆ. ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳದ ಅಧ್ಯಾತ್ಮ ಅಪೂರ್ಣ. ಹಾಗೆಯೇ ಅಧ್ಯಾತ್ಮವಿಲ್ಲದ ನೈತಿಕ ಮೌಲ್ಯಗಳೂ ವ್ಯರ್ಥವೆನಿಸುತ್ತವೆ. ಅಧ್ಯಾತ್ಮ ಮತ್ತು ನೈತಿಕ ಮೌಲ್ಯಗಳು ಪರಸ್ಪರ ಪೂರಕವಾಗಿದ್ದು, ಆತ್ಮಸಾಕ್ಷಾತ್ಕಾರದ ಮೊದಲ ಮೆಟ್ಟಿಲು ನೈತಿಕತೆಯೇ ಆಗಿದೆ.

ಧರ್ಮ, ದರ್ಶನ, ಅಧ್ಯಾತ್ಮಗಳ ಅವಿಭಾಜ್ಯ ಅಂಗವಾಗಿರುವ ನೀತಿಯು ಸಮಾಜ, ಆರ್ಥಿಕವ್ಯವಸ್ಥೆ ಹಾಗು ರಾಜನೀತಿಗಳಲ್ಲಿಯೂ ವಿಜೃಂಭಿಸಿದರೆ ಜನರು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತದೆ. ರಾಜನೀತಿಯಲ್ಲಿ ನೀತಿ ಎಂಬ ಪದವೂ ವಿರಾಜಮಾನವಾಗಿದೆ. ಆದರೆ ಇಂದು ನಮ್ಮ ಬಹುತೇಕ ರಾಜಕಾರಣಿಗಳಲ್ಲಿ ನೀತಿಯು ಕೇವಲ ಬಾಯಿಮಾತಾಗಿದೆ. ಅವರು ಕೇವಲ ಅರ್ಥ ಮತ್ತು ಅಧಿಕಾರಕ್ಕಾಗಿ ಚಿಂತಿಸುತ್ತಾರೆ ಹೊರತೂ ಭವಿಷ್ಯದ ಪೀಳಿಗೆಯ ಕಲ್ಯಾಣವನ್ನು ಕುರಿತು ಯೋಚಿಸುವುದಿಲ್ಲ.  

A politician is one who looks for next election and a political man is one who looks for the next generation  ಎಂದು   ಡಾ.ಎಸ್.ರಾಧಾಕೃಷ್ಣನ್ ಹೇಳಿದಂತೆ ಇಂದು ನಮಗೆ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡ, ಜನಾಂಗದ ಬಗ್ಗೆ ಚಿಂತಿಸುವ ರಾಜಕಾರಣಿಗಳು (political man) ಧಾರ್ಮಿಕ ನೇತಾರರು, ಅಧ್ಯಾತ್ಮವಾದಿಗಳು ಬೇಕಾಗಿದ್ದಾರೆ ಎಂಬುದಂತೂ ಸತ್ಯ. 

-ಡಾ. ಸಿದ್ದರಾಮ ಸ್ವಾಮಿಗಳು.

No comments:

Post a Comment