Wednesday, June 22, 2016

ಬಯಕೆ-ಇರಾದಾ

ಬಯಕೆ ಎಂಬುದು ಕಾಲ್ನಡಿಗೆಯ ಸತ್ಪಥದ ಪ್ರಯಾಣಿಕನ ಪ್ರಾಥಮಿಕ ಹಂತವೂ ದೇವರ ಹಾದಿಯಲ್ಲಿ ನಡೆಯಲು ತೊಡಗಿದವನ ವಿರಾಮದ ಮೊದಲ ತಂಗುದಾಣವೂ ಆಗಿದೆ ಎನ್ನಲಾಗಿದೆ. ಮೊದಲು ವ್ಯಕ್ತಿಯೊಬ್ಬ ನಿರ್ದಿಷ್ಟ ರೀತಿಯಲ್ಲಿ ಬಯಸದಿದ್ದರೆ ಉದ್ದೇಶ ಕಾರ್ಯಗತವಾಗದು.

‘ಆಲಿಮ್’(ವಿದ್ವಾಂಸ) ಎಂಬ ಶಬ್ದದಲ್ಲಿ ‘ಇಲ್ಮ್’(ಜ್ಞಾನ) ಅಡಗಿರುವಂತೆ, ‘ಮುರೀದ್’(ಶಿಷ್ಯ) ಎಂಬ ಶಬ್ದದ ಒಳಗೆ ‘ಇರಾದಾ’(ಬಯಕೆ) ಅಡಕವಾಗಿದೆ. ಇವೆರಡೂ ಪದಗಳು ಸಕ್ರಿಯ ಕ್ರಿಯಾಪದಗಳಾಗಿ ಬಳಸಲ್ಪಡುತ್ತವೆ. ಆದರೆ ಸೂಫಿಗಳು ಬಯಕೆ ಎಂಬ ಪದವನ್ನು ಬೇರೆಯೇ ಅರ್ಥಕ್ಕಾಗಿ ಬಳಸುತ್ತಾರೆ. ಮುರೀದ್ ಎಂದರೆ ಬಯಕೆಯನ್ನು ಹೊಂದಿದವನು ಎಂಬರ್ಥದಲ್ಲಿ ಬಳಸದೆ, ಬಯಕೆಗಳಿಲ್ಲದವನು ಎಂಬರ್ಥದಲ್ಲಿ ಬಳಸುತ್ತಾರೆ. ಬಯಕೆಗಳ ಹಿಡಿತದಿಂದ ಮುಕ್ತನಾದವನು ಮಾತ್ರ ಮುರೀದ್ ಅಥವಾ ಸೂಫಿ ಪಥದಲ್ಲಿ ಶಿಷ್ಯನಾಗಲು ಅರ್ಹನೆನಿಸಲ್ಪಡುತ್ತಾನೆ. ಶಬ್ದವ್ಯುತ್ಪತ್ತಿಶಾಸ್ತ್ರಕ್ಕೆ ಸಂಬಂಧಿಸಿ ನೋಡಿದರೆ ಬಯಕೆಗಳಿಲ್ಲದವನು ‘ಮುರೀದ್’ ಅನಿಸಲ್ಪಡುವುದು ಸಾಧ್ಯವಿಲ್ಲ.

ಜನರು ‘ಬಯಕೆ’ ಎಂಬ ಪದಕ್ಕೆ ವೈಯಕ್ತಿಕ ಅನುಭವದ ಆಧಾರದ  ಮೇಲೆ ತಮ್ಮದೇ ಆದ ರೀತಿಯಲ್ಲಿ ಅರ್ಥೈಸುವುದನ್ನು ಕಾಣಬಹುದು. ಅನೇಕ ಸೂಫಿ ಪಂಡಿತರು ‘ಬಯಕೆ(ಇರಾದಾ) ಅನ್ನುವುದು ವಾಡಿಕೆಯ ಅಭ್ಯಾಸಗಳನ್ನು ತೊರೆಯುವುದಾಗಿದೆ’ ಎಂದು ಸಾಮಾನ್ಯವಾಗಿ ಅಭಿಪ್ರಾಯಪಡುತ್ತಾರೆ. ಅಂದರೆ ಸೂಫಿ ಮಾರ್ಗದಲ್ಲಿ ಶಿಷ್ಯತ್ವ ಪಡೆದ ಸೂಫಿಯೊಬ್ಬ ಅವನ ಹಿಂದಿನ ಬದುಕಿನ ಸಹಜ ಪ್ರವೃತ್ತಿಗಳು, ಅಭ್ಯಾಸಗಳ ತೆಕ್ಕೆಯಲ್ಲಿರುವ ಬಯಕೆಗಳನ್ನು ಸಂಪೂರ್ಣವಾಗಿ ತೊರೆಯಬೇಕಾಗುತ್ತದೆ. ಈ ರೀತಿಯಲ್ಲಿ ರೂಢಮೂಲ ಅಭ್ಯಾಸಗಳು, ಚಟಗಳನ್ನು ತೊರೆಯುವ ಪ್ರಕ್ರಿಯೆಯು ಸಶಕ್ತ ‘ಇರಾದಾ’ ಅಥವಾ ಅಧ್ಯಾತ್ಮ ಮಾರ್ಗದ ಬಯಕೆಯನ್ನು ಪ್ರತಿನಿಧಿಸುತ್ತದೆ.

ಬಯಕೆಯ ನಿಗೂಢಾರ್ಥದಲ್ಲಿ, ದೇವರನ್ನು ಅರಸುವ ಕ್ರಿಯೆಯಲ್ಲಿ ವ್ಯಸ್ಥವಾಗಿರುವ ಹೃದಯದ ಚಟುವಟಿಕೆಗಳಿಗೆ ಸ್ವಲ್ಪ ವಿರಾಮ ಪಡೆಯುವುದು ಎಂದಾಗಿದೆ. ಈ ಕಾರಣಕ್ಕಾಗಿ ‘ಇರಾದಾ’ ಎಂಬುದು ಎಲ್ಲ ಭಯಗಳೂ ತುಚ್ಛವೆನಿಸಲ್ಪಡುವ, ಅತೀವ ನೋವಿನೊಂದಿಗೆ ಉಂಟಾಗುವ ಭಾವಾವೇಶ ಎಂದಾಗುತ್ತದೆ. 

‘ದರ್ವೇಶಿಗಳ ಸಾಧನೆಯ ಎಲ್ಲ ಹಂತಗಳೂ ಅತ್ಯಂತ ಗಂಭೀರವಾದುದು ಎಂಬುದನ್ನು ತಿಳಿದ ನಂತರ ನಾನು ಅವರೊಂದಿಗೆ ಲಘುವಾಗಿ ಮಾತಾಡುವುದನ್ನು ನಿಲ್ಲಿಸಿದೆ. ಒಮ್ಮೆ ಓರ್ವ ದರ್ವೇಶಿ ನನ್ನ ಬಳಿ ಬಂದು,‘ಓ ವಿದ್ವಾಂಸರೇ, ನನಗೆ ಸ್ವಲ್ಪ ಸಿಹಿ ಗಂಜಿ ತಿನ್ನುವ ಆಸೆಯಾಗಿದೆ’ ಎಂದ. ನಾನು ಅವನು ಹೇಳಿದ ‘ಇರಾದಾ’ ಮತ್ತು ‘ಆಸಿದಾ’(ಸಿಹಿ ಗಂಜಿ) ಎಂಬ ಪದಗಳನ್ನು ಮತ್ತೆ ಮತ್ತೆ ಉರು ಹಾಕುತ್ತ ತಮಾಷೆಮಾಡುವಂತೆ ಗಟ್ಟಿಯಾಗಿ ಹೇಳಿದೆ.

ದರ್ವೇಶಿ ಇದನ್ನು ನೋಡಿ ಅಲ್ಲಿಂದ ಹೊರಟುಹೋದುದನ್ನು ನಾನು ಗಮನಿಸಿರಲಿಲ್ಲ. ನಾನು ಅಡುಗೆಯವರೊಂದಿಗೆ ಸಿಹಿ ಗಂಜಿ ಮಾಡಿ ತರಲು ಹೇಳಿ ವ್ಯವಸ್ಥೆ ಮಾಡಿದೆ. ಸಿಹಿಗಂಜಿ ತಯಾರಾದಾಗ ದರ್ವೇಶಿಯನ್ನು ಹುಡುಕಿದರೆ ಅವನು ಅಲ್ಲೆಲ್ಲೂ ಕಾಣಲಿಲ್ಲ. ಬೇರೆಯವರನ್ನು ವಿಚಾರಿಸಿದಾಗ ಆತ ಅಲ್ಲಿಂದ ‘ಇರಾದಾ... ಆಸಿದಾ...’ ಎಂದು ಗೊಣಗುತ್ತ ಹೋಗಿದ್ದನೆಂದು ತಿಳಿಯಿತು. ಅವನು ಹೀಗೆಯೇ ಗೊಣಗುತ್ತ ಅಲ್ಲಿ ಇಲ್ಲಿ, ಮರುಭೂಮಿಯಲ್ಲಿ ಅಲೆದಾಡುತ್ತ ಇದ್ದು ತನ್ನ ಸಾವಿನ ತನಕವೂ ಅದನ್ನೇ ಹೇಳುತ್ತಿದ್ದ’ ಎಂದು ತನಗಾದ ಒಂದು ಅನುಭವವನ್ನು ಮಮ್ಶದ್ ಅದ್ದಿನಾವರಿ ಎಂಬ ಸೂಫಿ ಷೇಖ್ ಹೇಳಿದ್ದರು.

-ಫಕೀರ್ ಅಹ್ಮದ್ ಕಟ್ಪಾಡಿ.

No comments:

Post a Comment