‘ನೀವು ಮೂರು ವಿಚಾರಗಳಲ್ಲಿ ನಿಷ್ಠೆಯನ್ನು ತೋರಿದಲ್ಲಿ ನಿಮ್ಮ ಬದ್ಧ ದ್ವೇಷಿ(ಸೈತಾನ) ನಿಮ್ಮ ಹೃದಯದ ಮೇಲೆ ಆಕ್ರಮಣವನ್ನು ಮಾಡಲಾರ. ಅವು ಮೂರು ಯಾವುವೆಂದರೆ, ದೇವರ ಭಕ್ತಿಯಲ್ಲಿ ನಿಷ್ಠಾವಂತನಾಗಿರುವುದು, ನಿಮ್ಮ ಅನುಯಾಯಿಗಳಿಗೆ ಪ್ರಾಮಾಣಿಕವಾದ ಉಪದೇಶಗಳನ್ನು ನೀಡುವುದು, ಸಮುದಾಯದಲ್ಲಿ ಒಗ್ಗಟ್ಟನ್ನು ಮೂಡಿಸುವುದು’ ಎಂದು ಪ್ರವಾದಿಯವರು ಹೇಳಿದ್ದರೆಂದು ಅನಸ್ ಬಿನ್ ಮಾಲಿಕ್‌ರವರು ಹೇಳಿದ್ದಾರೆ.
ಸೂಫಿ ಅಧ್ಯಾತ್ಮದಲ್ಲಿ ಸತ್ಯನಿಷ್ಠೆ ಎಂದರೆ ಒಬ್ಬನೇ ದೇವರ ಮೇಲೆ ಏಕಾಗ್ರತೆ, ಅವನ ಸಮಾನರು ಯಾರೂ ಇಲ್ಲ, ಅವನು ಪರಮ ಶಕ್ತಿಶಾಲಿ. ಅವನ ಮುಂದೆ ಎಲ್ಲರೂ ಆಶ್ರಯಕ್ಕಾಗಿ ಮೊರೆಹೋಗುವವರು ಎಂಬ ದೃಢವಿಶ್ವಾಸವನ್ನು ಇಟ್ಟುಕೊಂಡಿರುವುದು. ಇದರ ಅರ್ಥ ತನ್ನ ಭಕ್ತಿಯ ಪ್ರಾಮಾಣಿಕತೆಯ ಮೂಲಕ ದೇವರ ಪವಿತ್ರ ಸಾನಿಧ್ಯವನ್ನು ಪಡೆಯುವುದು. ‘ಪ್ರಾಮಾಣಿಕತೆ’ ಎಂದರೆ ತನ್ನ ವಿಚಾರಗಳಿಂದ ಅರಿವು ನೀಡುವ ಮೂಲಕ ಹಿಂಬಾಲಕರ ಕಾರ್ಯಗಳನ್ನು ಪರಿಶುದ್ಧಗೊಳಿಸುವುದು ಎಂದು ಕೂಡ ಹೇಳಲಾಗುತ್ತದೆ.
ಪ್ರವಾದಿಯವರು ಒಂದು ಸಂದರ್ಭದಲ್ಲಿ ದೇವದೂತ ಜಿಬ್ರೀನ ಮೂಲಕ ಪಡೆದ ದೇವರ ಸಂದೇಶವು ಹೀಗಿತ್ತು: ‘ಇಖ್ಲಾಸ್(ಸತ್ಯನಿಷ್ಠೆ) ಎಂದರೆ ನನ್ನ ಹೃದಯದಿಂದ ಪಡೆದ ರಹಸ್ಯವಾಗಿದೆ. ಅದನ್ನು ನಾನು ನನ್ನ ಪ್ರೀತಿಯ ನಂಬಿಕಸ್ಥ ಸೇವಕನ ಹೃದಯದಲ್ಲಿ ದೃಢವಿಶ್ವಾಸವನ್ನಾಗಿ ಸ್ಥಾಪಿಸಿದ್ದೇನೆ’. ಕುರಾನಿನ 112ನೇ ಭಾಗಕ್ಕೆ ‘ಸೂರಃ ಇಖ್ಲಾಸ್’ ಅಥವಾ ಸತ್ಯನಿಷ್ಠೆ ಎಂಬ ಹೆಸರಿಡಲಾಗಿದೆ. ಇದರಲ್ಲಿ ಅಲ್ಲಾಹನ ಮಹಾನತೆ, ಭವ್ಯತೆಯ ಉಲ್ಲೇಖವಿದೆ.
ಅವನು ಸತ್ಯ. ಅವನು ಅನುಪಮನೂ, ಅನಾದಿಯೂ ಆಗಿದ್ದಾನೆ; ವಿಶ್ವವು ಶೂನ್ಯವಾಗಿದ್ದಾಗಲೂ ಅಂದರೆ ‘ಏನಿಲ್ಲದಾಗಲೂ ಅವನಿದ್ದ’ನೆಂಬ ಮಹತ್ವದ ಅಧ್ಯಾತ್ಮವನ್ನು ಈ ಚಿಕ್ಕ ಅಧ್ಯಾಯವು ಸೂಚ್ಯವಾಗಿ ಹೇಳುತ್ತದೆ. ಕುರಾನಿನ ಈ ಸೂರಃಕ್ಕೆ ಅತ್ಯಂತ ಉನ್ನತ ಸ್ಥಾನವಿದೆ ಎಂದು ಪ್ರವಾದಿಯವರು ಹೇಳಿದ್ದಾರೆ.
‘ಒಬ್ಬನ ಪ್ರಾಮಾಣಿಕತೆ ಎಂಬುದು ಪೂರ್ಣವಾಗಬೇಕಾದರೆ ಆತ ಸತ್ಯವಂತ ನಾಗಿರಬೇಕು ಹಾಗೂ ಅಮಿತ ಸಹನೆ ಉಳ್ಳವನಾಗಬೇಕು. ಸತ್ಯನಿಷ್ಠೆ ಎಂಬುದು ಸಂಪೂರ್ಣವಾಗಬೇಕಾದರೆ ಪ್ರಾಮಾಣಿಕತೆ ಇರಬೇಕು ಮತ್ತು ಅದರಲ್ಲಿ ಸ್ಥಿರತೆ ಇರಬೇಕು’ ಎಂದು ಪ್ರಖ್ಯಾತ ಸೂಫಿ ಸಂತ ದುಲ್ ನೂನ್ ಮಿಸ್ರಿ ಹೇಳಿದ್ದಾರೆ. ಇನ್ನೊಂದು ಸಂದರ್ಭದಲ್ಲಿ ಅವರು ‘ವೈರಿಯ ನೀತಿಭ್ರಷ್ಟತೆಯಿಂದ ರಕ್ಷಿಸಲ್ಪಡುವ ಕ್ರಿಯೆಯೇ ಸತ್ಯನಿಷ್ಠೆ’ ಎಂದು ಹೇಳಿದ್ದರು.
‘ಸತ್ಯನಿಷ್ಠೆ ಎಂದರೆ ಅಂತರ್ಯದಲ್ಲೂ ಬಹಿರಂಗದಲ್ಲೂ ಒಂದೇ ಆಗಿರುವುದು’ ಎಂದು ಹುದೈಫಾ ಅಲ್ ಮಾರ್ಷಿ ಎಂಬ ಸೂಫಿ ವಿದ್ವಾಂಸ ವ್ಯಾಖ್ಯಾನಿಸಿದ್ದರು.
‘ಸಮಸ್ತ ಮಾನವರಿಗೆ ಒಳಿತಾಗುವಂತೆ ಕೆಲಸಮಾಡುವುದನ್ನು ನಿಲ್ಲಿಸುವು ದೆಂದರೆ ಬೂಟಾಟಿಕೆ. ಜನರ ಇಚ್ಛೆಗೆ ಅನುಗುಣವಾಗಿ ಇಷ್ಟವಿಲ್ಲದಿದ್ದರೂ ಮಾಡುವುದೆಂದರೆ ವಿಶ್ವಾಸದಲ್ಲಿ ದೃಢತೆ ಇಲ್ಲದಿರುವುದು. ‘‘ಸತ್ಯನಿಷ್ಠೆ’’ ಎಂಬ ಔಷಧದ ಮೂಲಕ ಇವೆರಡೂ ರೋಗಗಳನ್ನು ದೇವರು ವಾಸಿಮಾಡುತ್ತಾನೆ.’ ಎಂದು ಅಲ್ ಫುಜೈಲ್ ಹೇಳಿದ್ದರು.
‘ಸತ್ಯನಿಷ್ಠೆ’ಯನ್ನು ವ್ಯಾಖ್ಯಾನಿಸುತ್ತ ಪ್ರಸಿದ್ಧ ಸೂಫಿ ಸಂತ ಜುನೈದ್ ಬಗ್ದಾದಿಯವರು ‘ಸತ್ಯನಿಷ್ಠೆ ಎಂಬುದು ದೇವರು ಮತ್ತು ಅವನ ಭಕ್ತರ ಮಧ್ಯೆ ಇರುವ ಒಂದು ರಹಸ್ಯ. ಇದರ ಬಗ್ಗೆ ಪರಲೋಕದಲ್ಲಿ ಒಳಿತು ಕೆಡುಕುಗಳನ್ನು ದಾಖಲೆ ಮಾಡುವ ದೇವದೂತರಿಗೂ ಕೂಡ ತಿಳಿಯಲಾರದು. ಸೈತಾನನಿಗೆ ಅದನ್ನು ಕೆಡಿಸಲು ಸಾಧ್ಯವಾಗದು. ಭಾವೋದ್ರೇಕಗಳಿಗೆ ಕೂಡ ಅದು ನಿಲುಕಲಾರದು’ ಎಂದು ತನ್ನ ಶಿಷ್ಯರಿಗೆ ಹೇಳಿದ್ದರು.
-ಫಕೀರ್ ಅಹ್ಮದ್ ಕಟ್ಪಾಡಿ.
No comments:
Post a Comment