Friday, July 22, 2016

ನಾಮಸ್ಮರಣೆ- ಝಿಕ್ರ್

    
ಸೂಫಿ ಪಂಥದ ಆರಾಧನಾ ಕ್ರಮದಲ್ಲಿ ಅಲ್ಲಾಹನ ನಾಮಸ್ಮರಣೆಗೆ ಅತ್ಯಂತ ಮಹತ್ವದ ಸ್ಥಾನವಿದೆ. ಅನುದಿನವೂ ದೇವರ ನಾಮಸ್ಮರಣೆ ಸೂಫಿ ತತ್ವಗಳ ಅಡಿಪಾಯವೆಂದು ಪರಿಗಣಿಸಲ್ಪಟ್ಟಿದೆ.

‘ಅವಿರತವಾಗಿ ದೇವರನ್ನು ಸ್ಮರಿಸಿ ಧ್ಯಾನಿಸಿರಿ’ ಎಂಬ ಕುರಾನ್ (33:41) ಸಂದೇಶವಿದೆ. ‘ದೇವರಿಗೆ ಅತ್ಯಂತ ಇಷ್ಟವಾಗುವ ಕ್ರಿಯೆ ಎಂದರೆ ಅವನನ್ನು ಪ್ರತಿಕ್ಷಣವೂ ಸ್ಮರಿಸುವುದು’ ಎಂದು ಪ್ರವಾದಿಯವರು ಹೇಳಿದ್ದಾರೆ. ದೇವರ ಮಾರ್ಗದಲ್ಲಿ ಅವನ ಸ್ಮರಣೆಯು ಶಕ್ತಿಯುತವಾದ ಬೆಂಬಲವನ್ನು ನೀಡುತ್ತದೆ.

ಈ ಸ್ಮರಣೆ ಎರಡು ವಿಧದ್ದು, ಒಂದನೆಯದು ನಾಲಗೆಯ ಮೂಲಕ ವ್ಯಕ್ತವಾಗುವುದು, ಇನ್ನೊಂದು ಹೃದಯದಲ್ಲಿ ಮೂಡಿರುವಂತಹದ್ದು. ಅಂತರಂಗದಲ್ಲಿನ ಸ್ಮರಣೆ ಅತ್ಯಂತ ಮುಖ್ಯವಾದುದೆಂದು ಪರಿಗಣಿಸಲ್ಪಟ್ಟಿದೆ. ಆದರೆ ಏಕಕಾಲದಲ್ಲಿ ಅಂತರಂಗದಲ್ಲೂ ಬಹಿರಂಗದಲ್ಲೂ ಮಾಡುವ ಸ್ಮರಣೆ ಹೆಚ್ಚು ಮಹತ್ವಪೂರ್ಣವೆನ್ನಲಾಗುತ್ತದೆ.

ಸೂಫಿ ಸಂತ ಅಬೂ ಅಲಿ ಅದ್ದಖ್ಖಾಕ್‌ರ ಅಭಿಪ್ರಾಯದಂತೆ ‘ಸಂತತ್ವದ ಮಹಾಶಾಸನದ ಮುಖ್ಯ ಭಾಗವೆಂದರೆ ದೇವರ ನಾಮಸ್ಮರಣೆ. ಯಾರು ಈ ಕ್ರಿಯೆಯಲ್ಲಿ ಜಯಗಳಿಸುತ್ತಾರೋ ಅವರಿಗೆ ಮಹಾಸ್ಥಾನ ಲಭಿಸುವುದು. ಯಾರು ಅಪಜಯಗಳಿಸುತ್ತಾರೋ ಅವರು ಅನುತ್ತೀರ್ಣರಾಗುತ್ತಾರೆ’.

ಸೂಫಿ ಪಥದ ಪ್ರಾಥಮಿಕ ಹಂತದಲ್ಲಿ ಅಬೂಬಕರ್ ಅಲ್ ಶಿಬ್ಲಿಯವರು ತಮ್ಮ ಪ್ರಯಾಣದಲ್ಲಿ ಕೋಲುಗಳ ಗಂಟನ್ನು ಬೆನ್ನಮೇಲೆ ಹೊತ್ತು ಸಾಗುತ್ತಿದ್ದರು. ದೇವರ ನಾಮ ಜಪಿಸಲು ಮರೆತಾಗಲೆಲ್ಲ ಕೋಲು ಮುರಿದು ಹೋಗುವಷ್ಟು ತನಗೆ ತಾನೇ ಹೊಡೆದುಕೊಂಡು ಎಚ್ಚರಿಸುತ್ತಿದ್ದರು. ಕೆಲವೊಮ್ಮೆ ಸಂಜೆಯಾಗುವಷ್ಟರಲ್ಲಿ ಕೋಲಿನ ಕಟ್ಟು ಖಾಲಿಯಾಗುತ್ತಿತ್ತು! ಆಗಲೆಲ್ಲ ಎದುರಾದ ಮರಗಳಿಗೆ, ಗೋಡೆಗಳಿಗೆ ತಲೆ ಜಜ್ಜಿಕೊಂಡು ತನ್ನ ಮರೆಗುಳಿತನಕ್ಕೆ ಶಿಕ್ಷೆನೀಡಿಕೊಳ್ಳುತ್ತಿದ್ದರು!

‘ದೇವರ ನಾಮಸ್ಮರಣೆ ಎಂಬುದು ಖಡ್ಗದಂತೆ, ಅದು ವೈರಿಗಳಿಂದ ರಕ್ಷಿಸಬಹುದು, ಕೆಡುಕುಗಳಿಂದಲೂ ರಕ್ಷಿಸಿಕೊಳ್ಳಬಹುದು’ ಎನ್ನುತ್ತಿದ್ದರು. ದೇವರ ನಾಮಸ್ಮರಣೆಯಲ್ಲಿ ಶರಣಾಗತನಾಗಿರುವ ಭಕ್ತನ ಹೃದಯದಲ್ಲಿ ಕೆಟ್ಟ ವಿಚಾರಗಳಿಗೆ ಎಡೆ ಇರಲಾರದು. ಅವನ ನಾಮಸ್ಮರಣೆಯಲ್ಲಿ ಮುಳುಗಿರುವವನಿಗೆ ಇಹಪರದ ಯೋಚನೆಯೇ ಇರಲಾರದು.

ಒಬ್ಬ ಸೂಫಿ ತನಗಾದ ಒಂದು ಅನುಭವವನ್ನು ಹೀಗೆ ಹೇಳುತ್ತಾನೆ, ‘ದೇವರ ಸ್ಮರಣೆಯಲ್ಲಿ ಸಂಪೂರ್ಣ ಮುಳುಗಿರುವ ವ್ಯಕ್ತಿಯೊಬ್ಬನನ್ನು ಕಂಡು ಬರಲು ಗುರುಗಳು ನನಗೊಮ್ಮೆ ಆಜ್ಞಾಪಿಸಿದ್ದರು. ಅವನನ್ನು ಹುಡುಕಿಕೊಂಡು ಹೋದೆ. ಅವನು ಕಾಡಿನಲ್ಲಿ ಒಂದೆಡೆ ಕೂತು ನಾಮವನ್ನು ಜಪಿಸುತ್ತಿದ್ದ. ನಾನು ನೋಡುತ್ತಿದ್ದಂತೆ ಒಂದು ಸಿಂಹವು ಅವನ ಮೇಲೆರಗಿ ತೋಳಿನ ಮಾಂಸವನ್ನು ಕಿತ್ತು ತೆಗೆಯಿತು.

ಅದನ್ನು ಕಂಡ ನಾನು ತಲೆ ಸುತ್ತಿ ಬಂದು ಅಲ್ಲೇ ಒರಗಿದೆ. ಕಣ್ತೆರೆದಾಗ ನನ್ನನ್ನು ಅವನು ಸಂತೈಸುತ್ತಿದ್ದ. ಅವನನ್ನು ನಾನು ನಡೆದ ಸಂಗತಿಯ ಬಗ್ಗೆ ಕೇಳಿದೆ. ಅದಕ್ಕೆ ಅವನು, ‘ನಾನು ದೇವರನ್ನು ಸ್ಮರಿಸಲು ಮರೆತಾಗಲೆಲ್ಲ ಅವನು ಸಿಂಹವನ್ನು ಕಳುಹಿಸಿ ನನ್ನ ದೇಹದ ಮಾಂಸವನ್ನು ಕಿತ್ತು ತಿನ್ನುವಂತೆ ಮಾಡಿ ಎಚ್ಚರಿಸುತ್ತಾನೆ’ ಎಂದು ನೀನು ಕಂಡದ್ದು ಮಾಮೂಲಿ ಸಂಗತಿ ಎಂಬಂತೆ ಹೇಳಿದ!’.

ಸೂಫಿ ಸಂತ ಕವಿ ದುಲ್ ನೂನ್ ಮಿಸ್ರಿ ಹೇಳುತ್ತಾರೆ, ‘ಅದರ ಅರ್ಥವೆಂದರೆ ಅವನ ನಾಮಸ್ಮರಣೆಯ ನೆನಪನ್ನು ಮಾಡಲು ಮರೆಯದಿರುವುದಾಗಿದೆ’. ಅವರ ದ್ವಿಪದಿಯೊಂದು ಹೀಗಿದೆ: ನಾನು ನಿನ್ನನ್ನು ಅವಿರತವಾಗಿ ಸ್ಮರಿಸುತ್ತೇನೆ, ನಿನ್ನ ಮರೆತುದಕ್ಕಾಗಿ ಅಲ್ಲ, ಅದು ಸರಾಗವಾಗಿ ಹರಿಯುತ್ತಿರುತ್ತದೆ, ನನ್ನ ನಾಲಗೆಯ ಮೇಲೆಲ್ಲ.       

-ಫಕೀರ್ ಅಹ್ಮದ್ ಕಟ್ಪಾಡಿ.

No comments:

Post a Comment