ನಾವೆಲ್ಲ ಇತರರ ಬಗ್ಗೆ, ಸನ್ನಿವೇಶಗಳ ಬಗ್ಗೆ ಒಳ್ಳೆಯದನ್ನೇ ಯೋಚಿಸಿದರೆ ಎಷ್ಟು ಚೆನ್ನಾಗಿರುತ್ತದೆ ಅಲ್ಲವೇ? ಅದು ಆರೋಗ್ಯಕರವಾಗಿ, ಸಂತಸಕರವಾಗಿಯೂ ಇರುತ್ತದೆ.
ಮಾನ್‌ಗಾಂವ್‌ನಲ್ಲಿ ಸಂತರಂತೆ ಬದುಕುತ್ತಿದ್ದ ಮಹಿಳೆಯೊಬ್ಬರು ಇದ್ದರು. ಅವರನ್ನು ಜನರೆಲ್ಲ ‘ಮಾ’ ಎಂದು ಕರೆಯುತ್ತಿದ್ದರು.
ಅವರ ದರ್ಶನ ಪಡೆಯಲು ಜನರೆಲ್ಲ ಸಾಲುಗಟ್ಟಿ ಬರುತ್ತಿದ್ದರು. ಆಕೆ ಎಂದಿಗೂ ದೇವರ ಬಗ್ಗೆ ಮಾತನಾಡುತ್ತಿರಲಿಲ್ಲ. ಆದರೆ, ಅವರ ಮಾತುಗಳು ಎಷ್ಟು ಸಿಹಿಯಾಗಿದ್ದವೆಂದರೆ, ಅವರ ಮೂಲಕ ದೇವರು ಮಾತನಾಡುತ್ತಿದ್ದಾನೆ ಎಂದು ಜನರೆಲ್ಲರೂ ಹೇಳುತ್ತಿದ್ದರು.
ಮಾರುತಗಳು ನಾನಾ ದಿಕ್ಕಿನಿಂದ ಬೀಸುತ್ತವೆ ಎಂದು ಅವರೊಮ್ಮೆ ಹೇಳಿದ್ದರು.
‘ನಾವೆಲ್ಲ ಗಾಳಿಯ ಸಂಗೀತವನ್ನು ಆಲಿಸಲು ಅನುವು ಮಾಡಿಕೊಡುವಂತೆ ಕೆಲವು ಸ್ವಚ್ಛವಾಗಿರುತ್ತವೆ. ಹವಾಮಾನದಲ್ಲಿನ ಶುಷ್ಕಾಂಶ ಹಾಗೂ ತೇವಾಂಶವನ್ನು ಸಮತೋಲನಗೊಳಿಸಲು ಕೆಲವು ದೂಳಿನ ಕಣಗಳನ್ನು ಹೊತ್ತು ತರುತ್ತವೆ.
ಕೆಲವು ಮಾರುತಗಳು, ನಮ್ಮ ಮನದಲ್ಲಿನ ಜ್ವರವನ್ನು ಹೊಡೆದೊಡಿಸುವಂತೆ ತಂಪಾಗಿರುತ್ತವೆ. ಮತ್ತೆ ಕೆಲವು ನಮ್ಮ ಹೃದಯವನ್ನು ಬೆಚ್ಚಗಿಡಲು ಬಿಸಿಯಾಗಿರುತ್ತವೆ.
‘ಮತ್ತೆ ಕೆಲವು ಜೋರಾಗಿ ಬೀಸಿ ನಮ್ಮ ತಲೆಯಲ್ಲಿನ ಗೊಂದಲವನ್ನೆಲ್ಲ ನಿವಾರಿಸುತ್ತವೆ. ಇನ್ನು ಕೆಲವು ಮೈಮನದಲ್ಲಿ ತಂಪು ತರುತ್ತ ನಾವು ಒಂಟಿಯಾಗಿದ್ದಾಗ ಸಾಂಗತ್ಯ ನೀಡುತ್ತವೆ’ ಎಂದು ‘ಮಾ’ ಹೇಳುತ್ತಿದ್ದರು.
ಆಕೆಯ ಇಂತಹ ಮಾತುಗಳನ್ನು ಕೆಳಲೆಂದೇ ಜನ ಅವರ ಬಳಿ ಬರುತ್ತಿದ್ದರು. ‘ಮಾ’ ಅವರ ಮಾತುಗಳ ಅವರ ಸಂಕಷ್ಟವನ್ನೆಲ್ಲ ನಿವಾರಿಸುವಂತೆ ಇರುತ್ತಿದ್ದವು. ಅವರಿಗೆ ಶಾಂತಿಯನ್ನೂ ನೀಡುತ್ತಿದ್ದವು.
ಆಹಾರ ನಮ್ಮ ದೇಹಕ್ಕೆ ಪೌಷ್ಟಿಕಾಂಶವನ್ನು ನೀಡಿದಂತೆಯೇ ಸುಂದರವಾದ ವಿಚಾರಗಳು ಮನಸ್ಸು, ದೇಹ, ಆತ್ಮಕ್ಕೆ ಚೈತನ್ಯ ತುಂಬುತ್ತವೆ.
ಸುಂದರವಾದ ವಿಚಾರಗಳಲ್ಲಿ ಏನೋ ವಿಶೇಷವಾದದ್ದು ಇರುತ್ತವೆ. ಘನತೆ ಮತ್ತು ಸಂತಸ ಅವುಗಳ ಮೂಲ. ನಿಮ್ಮೊಳಗೆ ಸಂತಸಕರವಾದ ವಿಚಾರ ಇಲ್ಲದೇ ಹೋದಲ್ಲಿ ನೀವು ಮೌನಕ್ಕೆ ಮರಳಿರಿ.
ಕೆಟ್ಟ ವಿಚಾರಗಳು ಸುಳಿಯದಂತೆ ಯತ್ನಿಸಿ ಎಂದು ‘ಮಾ’ ಹೇಳುತ್ತಿದ್ದರು. ಆಕೆ ಪ್ರವಚನ ನೀಡದೇ ಇದ್ದಾಗಲೆಲ್ಲ ಮೌನವಾಗಿಯೇ ಇರುತ್ತಿದ್ದರು.
‘ಮಾ’ ಅವರ ಮನಸ್ಸು ಎಷ್ಟು ಪರಿಶುಭ್ರವಾಗಿತ್ತು ಅಂದರೆ ಯಾರ ಬಗೆಗೂ ಆಕೆ ನಕಾರಾತ್ಮಕವಾಗಿ ಯೋಚಿಸುತ್ತಿರಲಿಲ್ಲ. ಒಮ್ಮೆ ಉಪವಾಸವ್ರತ ಕೈಗೊಂಡಾಗ ಮಾನ್‌ಗಾಂವ್‌ನಲ್ಲಿರುವ ಸಣ್ಣ ಉಪಾಹಾರ ಗೃಹಕ್ಕೆ ಕಾಫಿ ಕುಡಿಯಲು ತೆರಳಿದ್ದರು.
ಅವರ ಪಕ್ಕದಲ್ಲಿ ಯುವಕನೊಬ್ಬ ಊಟದ ಥಾಲಿಯನ್ನು ಸವಿಯುತ್ತಿದ್ದ. ನನ್ನ ಬಗ್ಗೆ ತಪ್ಪಾಗಿ ತಿಳಿದುಕೊಳ್ಳಬೇಡಿ ಎಂದು ಆತ ಮಾ ಬಳಿ ಹೇಳಿದ. ‘ಮಗು ನೀನು ತುಂಬಾ ಹಸಿದಿರಬೇಕಲ್ಲವೇ?’ ಎಂದು ಮಾ ಪ್ರಶ್ನಿಸಿದರು.
ಇಲ್ಲ ಮಾ, ಅಷ್ಟೇನೂ ಹಸಿವಿರಲಿಲ್ಲ. ಆದರೆ, ನನಗೆ ಈ ಊಟ ಸವಿಯಬೇಕು ಎನಿಸಿತು ಎಂದು ಆತ ಉತ್ತರಿಸಿದ.
ಓ ಎಷ್ಟೊಂದು ಪ್ರಾಮಾಣಿಕತೆ, ಇದು ನಮ್ಮೆಲ್ಲರಿಗೂ ಮಾದರಿಯಾಗಬೇಕು ಎಂದು ‘ಮಾ’ ಹೇಳಿದರು. ಇದು ‘ಮಾ ’ಅವರ ದೈವಿಕ ಮನೋಭಾವ.
ಯಾವುದಕ್ಕೂ ಪ್ರತಿಕ್ರಿಯಿಸಬೇಡಿ.
ಎಲ್ಲದಕ್ಕೂ ಪ್ರತಿಕ್ರಿಯಿಸುವ ಅಗತ್ಯವಿಲ್ಲ ಎಂದು ಮನಗಾಣಿ. ಪ್ರತಿಕ್ರಿಯಿಸುವುದು ಅಂದರೆ ನೀವು ನಿಮ್ಮ ಅಭಿಪ್ರಾಯ ಕೊಟ್ಟಂತೆ, ಇನ್ಬೊಬ್ಬರ ಬಗ್ಗೆ ತೀರ್ಪು ನೀಡಿದಂತೆ.
ಸ್ನೇಹಿತೆಯೊಬ್ಬಳು ಮಾತನಾಡುತ್ತಲೇ ಇದ್ದರೆ, ನೀವು ಇವಳು ಎಷ್ಟೊಂದು ಮಾತನಾಡುತ್ತಾಳೆ ಎನ್ನುತ್ತೀರಿ.
ಆಕೆ ಸುಮ್ಮನೆ ಇದ್ದರೆ, ಇವತ್ಯಾಕೆ ಆಕೆ ಸುಮ್ಮನಿದ್ದಾಳೆ ಎನ್ನುತ್ತೀರಿ. ಎಲ್ಲದಕ್ಕೂ ಪ್ರತಿಕ್ರಿಯಿಸಬೇಡಿ. ಮನಸ್ಸು ತಣ್ಣಗಾಗಿಸಿ. ಎಲ್ಲವೂ ಅದರಷ್ಟಕ್ಕೆ ಅದು ನಡೆಯಲಿ. ನೀವು ಮತ್ತಷ್ಟು ನಿರಾಳರಾಗಿ. ಮನಸ್ಸು ಸುಮ್ಮನೆ ಇದ್ದಾಗ ಎಲ್ಲವೂ ಪರಿಶುದ್ಧವಾಗಿ ಕಾಣುತ್ತದೆ. ಏಕೆಂದರೆ ಅಲ್ಲಿ ಮನಸ್ಸಿನ ಅಭಿಪ್ರಾಯಗಳು ಇರುವುದಿಲ್ಲ.
ಪ್ರತಿಕ್ರಿಯಿಸುವುದರಿಂದಲೇ ಸಂಬಂಧಗಳು ಒಡೆದುಹೋಗುತ್ತವೆ. ನನ್ನ ಗಂಡನಲ್ಲಿ ಇದು ಇಷ್ಟವಾಗುತ್ತದೆ. ಇದು ಇಷ್ಟವಾಗುತ್ತಿಲ್ಲ. ನನ್ನ ಹೆಂಡತಿ ಮಾಡುವ ಅಡುಗೆ ರುಚಿಯಾಗಿರುವುದಿಲ್ಲ. ... ಹೀಗೆಲ್ಲ ನಾವು ಯೋಚಿಸುತ್ತೇವೆ.
ಎಲ್ಲ ವ್ಯಕ್ತಿಗಳೂ ವಿಶಿಷ್ಟವಾಗಿರುತ್ತಾರೆ. ನೀವು ಯಾರನ್ನೂ ಹೋಲಿಸಲು ಸಾಧ್ಯವಿಲ್ಲ. ಕೆಲವರು ಎಲ್ಲವನ್ನೂ ತಕ್ಷಣವೇ ಮಾಡುತ್ತಾರೆ. ಕೆಲವರು ತಣ್ಣಗೆ ಯೋಚಿಸಿ ಕೆಲಸ ಮಾಡುತ್ತಾರೆ. ಕೆಲವರು ಎಲ್ಲದಕ್ಕೂ ಅತಿ ಭಾವನಾತ್ಮಕವಾಗಿ ಪ್ರತಿಕ್ರಿಯಿಸುತ್ತಾರೆ. ಮತ್ತೆ ಕೆಲವರು ಏನೂ ನಡದೇ ಇಲ್ಲ ಎನ್ನುವಂತೆ ಇರುತ್ತಾರೆ. ಈ ಭೂಮಿಯ ಮೇಲೆ ವ್ಯವಹಾರ ನಡೆಯಲು ಎಲ್ಲ ರೀತಿಯ ಜನರೂ ಬೇಕಾಗುತ್ತಾರೆ.
ನಿಮ್ಮ ಬಂಧುಗಳು, ಒಡಹುಟ್ಟಿದವರು, ಜೀವನಸಂಗಾತಿ, ಕಚೇರಿಯ ಸಹೋದ್ಯೋಗಿಗಳು ಎಲ್ಲರನ್ನೂ ಇದ್ದಂತೆಯೇ ಒಪ್ಪಿಕೊಳ್ಳಿ. ಪ್ರತಿಕ್ರಿಯಿಸಲು ಹೋಗಬೇಡಿ. ಎಲ್ಲದಕ್ಕೂ ಪ್ರತಿಕ್ರಿಯಿಸುವ ಚಾಳಿಯನ್ನು ನೀವು ಬಿಡಬೇಕು. ಮನಸ್ಸು ತಣ್ಣಗಿದ್ದಾಗ ಎಲ್ಲೆಡೆ ಸೌಹಾರ್ದ ಕಾಣುತ್ತದೆ.
ಮೃದುತ್ವವನ್ನು ಅಪ್ಪಿಕೊಳ್ಳಿ. ನಿಮ್ಮನ್ನು ನೀವು ಮೃದುವಾಗಿ ನಡೆಸಿಕೊಳ್ಳಿ. ನಿಮ್ಮ ಜೊತೆ ಇರುವುದಕ್ಕೆ ದೇಹಕ್ಕೆ ಕೃತಜ್ಞತೆ ಹೇಳಿ. ಸಮಚಿತ್ತದಿಂದ ಇರುವುದಕ್ಕೆ ನಿಮ್ಮ ಮನಸ್ಸಿಗೆ ಕೃತಜ್ಞತೆ ಹೇಳಿ.
ಆನಂತರ ತಣ್ಣಗೆ ಕುಳಿತುಕೊಳ್ಳಿ. ಪವಾಡಸದೃಶವಾದದ್ದು ಆಗ ಜರಗುತ್ತದೆ. ನಿಮ್ಮೆಲ್ಲ ಆಲೋಚನೆಗಳು ಕೃತಜ್ಞತೆಯಾಗಿ ಪರಿವರ್ತಿತವಾಗುತ್ತವೆ. ಮನಸ್ಸು ಹೊಳೆಯುತ್ತದೆ.
ನೀವು ಭೇಟಿಯಾಗುವ ಜನರೊಂದಿಗೂ ಇದೇ ಅಭ್ಯಾಸ ಬೆಳೆಸಿಕೊಳ್ಳಿ. ಎಲ್ಲರಿಗೂ ನಿಮ್ಮ ಜೊತೆ ಇದ್ದುದಕ್ಕಾಗಿ ಕೃತಜ್ಞತೆ ಸಲ್ಲಿಸಿ. ಕೃತಜ್ಞತೆಯ ಬೆಳಕಿನಲ್ಲಿ ಎಲ್ಲ ಪೂರ್ವಗ್ರಹಗಳೂ ಮರೆಯಾಗುತ್ತವೆ. ನಿಮ್ಮ ಎಲ್ಲ ಚಟುವಟಿಕೆಗಳಿಗೂ ಇದನ್ನು ಅನ್ವಯಿಸಿ. ದಿನಗಳೆದಂತೆ ನಿಮ್ಮಲ್ಲಿ ಶಾಂತಿ ಮೂಡುತ್ತದೆ. ನೀವು ಸ್ಥಿರವಾಗುತ್ತ ಹೋಗುತ್ತೀರಿ.
ಜಗತ್ತಿನ ಎಲ್ಲ ಜನರಿಗೂ ಶಾಂತಿ, ಸ್ಥಿರತೆಯ ಅಗತ್ಯವಿದೆ.
ನೆಲ್ಸನ್ ಮಂಡೇಲಾ ಅವರಿಗೆ ನೀವು ಏನು ಮಾಡಬಯಸುತ್ತೀರಿ ಎಂದು ಪ್ರಶ್ನಿಸಿದಾಗ, ‘ನಾನು ಒಂದು ಕಡೆ ಕುಳಿತುಕೊಳ್ಳಬೇಕು ಅಷ್ಟೇ. ಜೈಲಿನಿಂದ ಬಿಡುಗಡೆಯಾದಾಗಿನಿಂದ ನನಗೆ ಒಂದು ಕ್ಷಣವೂ ಪುರುಸೊತ್ತಿಲ್ಲ’ ಎಂದು ಉತ್ತರಿಸಿದ್ದರು.
ಕೆಲವು ಬೌದ್ಧಮಠಗಳಲ್ಲಿ ಆತಂಕ, ಉದ್ವೇಗ, ದುಃಖದಿಂದ ಬಿಡುಗಡೆ ಪಡೆಯಲು ಆಗಾಗ ಗಂಟೆ ಬಾರಿಸುತ್ತಾರೆ.
ಪಕ್ಕದ ಮನೆಯವರು ಖುರ್ಚಿಯನ್ನು ಎಳೆದಾಗ, ಧಡ್ ಎದ್ದು ಬಾಗಿಲು ಹಾಕಿದಾಗ ಸಿಟ್ಟು, ಆತಂಕ, ಭಯ, ಹತಾಶೆ ಇತ್ಯಾದಿಗಳಿಂದ ಹೊರಬರಲು ಅದನ್ನು ದಾರಿಯಾಗಿಸಿಕೊಳ್ಳಬಹುದು.
ಈ ಶಬ್ದ ನನ್ನನ್ನು ಸರಿ ದಾರಿಗೆ ತರುತ್ತದೆ. ನನ್ನ ಮನಸ್ಸು ತಣ್ಣಗಾಗುತ್ತದೆ, ದೇಹ ವಿಶ್ರಾಂತಸ್ಥಿತಿಗೆ ಬರುತ್ತದೆ, ಆತ್ಮ ನಗುತ್ತದೆ ಎಂದು ಹೇಳಿಕೊಳ್ಳಿ. ಎಲ್ಲರ ಜೊತೆ ಮೃದುವಾದ, ಪ್ರೀತಿಯ ಭಾಷೆ ಬಳಸಿದಾಗ ನಿತ್ಯವೂ ಪವಾಡ ಜರುಗುತ್ತದೆ.
-ಭರತ್ ಮತ್ತು ಶಾಲನ್ ಸವೂರ್
No comments:
Post a Comment