Monday, November 14, 2016

ಪ್ರವಾದಿತ್ವದ ಬೆಳಕು (ನೂರ್-ಎ-ನಬಿ)

ಸ್ವರ್ಗದಲ್ಲಿ ಮೂಲ ಮಾನವ ಆದಂನನ್ನು ಸೃಷ್ಟಿಸುವ ಮೊದಲೇ ಅಲ್ಲಾಹ ಹಲವು ‘ರೂಹ್’ ಆಥವಾ ಮನುಷ್ಯರ ಆತ್ಮಗಳನ್ನು ಸೃಷ್ಟಿಸಿದ್ದ. ಇದನ್ನು ಆದಂ ಸ್ವರ್ಗದಲ್ಲಿ ಕಂಡಿದ್ದರು. ಈ ಆತ್ಮಗಳ ಪೈಕಿ ಒಂದು ಆತ್ಮ ದಿವ್ಯ ಪ್ರಭಾವಲಯದ ಅದ್ಭುತ ತೇಜಸ್ಸಿನೊಂದಿಗೆ ಬೆಳಗುತ್ತಿರುವುದನ್ನು ಕಂಡಿದ್ದರು.

ಅದೇನೆಂದು ತಿಳಿಯುವ ಮೊದಲೇ ಸ್ವರ್ಗದಲ್ಲಿ ಮಾಡಿದ ತಪ್ಪಿಗೆ ಶಿಕ್ಷೆಯ ರೂಪದಲ್ಲಿ ಆದಂ ಮತ್ತು ಪತ್ನಿ ಹವ್ವಾ ಇಬ್ಬರೂ ಹೊರಹಾಕಲ್ಪಟ್ಟು ಭೂಮಿಗೆ ತಲುಪಿದರು.ಬಹಳ ವರ್ಷಗಳ ಕಾಲ ಪಶ್ಚಾತ್ತಾಪ ಪಟ್ಟುಕೊಂಡು ದಂಪತಿಗಳು ಸಿಕ್ಕ ಸಿಕ್ಕಲ್ಲಿ ಸಂಚರಿಸುತ್ತ ಕಟ್ಟಕಡೆಗೆ ಸ್ವರ್ಗದಲ್ಲಿ ತಾನು ಕಂಡ ದಿವ್ಯ ಪ್ರಭಾವಲಯದ ನೆನಪಾಗುತ್ತದೆ.

ಪಶ್ಚಾತ್ತಾಪದಿಂದ ಬೆಂದು ದಂಪತಿಗಳು ದುವಾ ಪ್ರಾರ್ಥನೆ ಮಾಡುವಾಗ ಆ ಪ್ರಭೆಯ ನೆನಪು ಮಾಡಿಕೊಳ್ಳುತ್ತಾರೆ. ಈ ಪ್ರಾರ್ಥನೆಗೆ ಅಲ್ಲಾಹ ಓಗೊಟ್ಟು ಅವರಿಗೆ ಕ್ಷಮಾದಾನ ಮಾಡುತ್ತಾನೆ. ಈ ದಿವ್ಯ ಪ್ರಭೆಯೇ ಪ್ರವಾದಿಯವರ ಆತ್ಮ ಎನ್ನಲಾಗುತ್ತದೆ. ದೇವರು ಮನುಷ್ಯನನ್ನು ಸೃಷ್ಟಿಸುವ ಮುಂಚೆ ಆತ್ಮಗಳನ್ನು ಸೃಷ್ಟಿಸಿದ್ದನೆಂದೂ, ಅವನು ಸರ್ವಪ್ರಥಮವಾಗಿ ಸೃಷ್ಟಿಸಿದ ಆತ್ಮವು ಪ್ರವಾದಿ ಮುಹಮ್ಮದ್(ಸ.ಅ.ಸ.)ರದ್ದಾಗಿದೆ ಎಂದೂ ನಂಬಲಾಗುತ್ತದೆ.

ನಂತರದಲ್ಲಿ ತನ್ನ ಎಲ್ಲ ಸೃಷ್ಟಿಗಳನ್ನು ಸೃಷ್ಟಿಸಿ ರೂಪಿಸಿದನೆಂದು ಹೇಳಲಾಗಿದೆ. ಅಲ್ಲಾಹನ ಅತ್ಯಂತ ಪ್ರೀತಿಪಾತ್ರರಾದ ಪ್ರವಾದಿಯವರ ನೂರ್ ಅಥವಾ ಪ್ರಭೆಯ ಸೃಷ್ಟಿಯು ಅಧ್ಯಾತ್ಮ ಅಭಿವ್ಯಕ್ತಿಯ ಆವಿಷ್ಕಾರದ ಪ್ರತೀಕವೂ ಆಗಿದೆ.

ಪ್ರವಾದಿಯವರನ್ನು ಒಂದು ಸಂದರ್ಭದಲ್ಲಿ ‘ಅಲ್ಲಾಹನ ಸರ್ವಪ್ರಥಮ ಸೃಷ್ಟಿ ಯಾವುದು?’ ಎಂದು ಕೇಳಿದಾಗ ‘ಅಲ್ಲಾಹ ಎಲ್ಲಕ್ಕಿಂತಲೂ ಮೊದಲು ಅವನ ಪ್ರವಾದಿಯ ರೂಹ್ ಅಥವಾ ಆತ್ಮವನ್ನು ಸೃಷ್ಟಿಸಿದ’ ಎಂದು ಪ್ರವಾದಿಯವರು ಉತ್ತರಿಸಿದರೆಂದು ಅವರ ಅನುಯಾಯಿಗಳಲ್ಲೊಬ್ಬರಾದ ಜಬೀರ್  ಬಿನ್ ಅಬ್ದುಲ್ಲಾರವರ ಹೇಳಿಕೆ ಇದೆ.

ಅಲ್ಲಾಹ ಆದಿಯಲ್ಲಿ ತನ್ನ ಸೃಷ್ಟಿಕಾರ್ಯದಲ್ಲಿ ತನ್ನ ‘ನೂರುಲ್ ಅಲಾ’ ದಿವ್ಯಪ್ರಕಾಶವನ್ನು ಬಳಸಿದ್ದ. ಭೂಮಿ ಆಕಾಶಗಳನ್ನು ಈ ದಿವ್ಯಪ್ರಕಾಶದಿಂದಲೇ ಸೃಷ್ಟಿಸಿದ. ಸ್ವರ್ಗ, ನರಕಗಳು, ಮಲಾಯಿಕ್(ದೇವ ದೂತರು), ಜಿನ್ನ್(ಅದೃಷ್ಯ ಕಾಯಗಳು), ಮನುಷ್ಯರು ಸೃಷ್ಟಿಯಾಗುವ ಮುಂಚೆಯೇ ಈ ದಿವ್ಯಪ್ರಕಾಶವು ಇತ್ತು.

ನಂತರ ಸ್ವರ್ಗದಲ್ಲಿ ತನ್ನ ಸೃಷ್ಟಿಗಳ ಪಾಪ ಪುಣ್ಯಗನ್ನು ದಾಖಲಿಸುವ ‘ಲೌಹ್ ಎ ಕಲಮ್’ ದಿವ್ಯಲೇಖನಿಯನ್ನು, ಸರ್ವ ಸೃಷ್ಟಿಗಳ ಪ್ರಾಣಗಳನ್ನು ಹೊಂದಿರುವ ಎಲೆಗಳಿರುವ ‘ಶಜರುಲ್ ಮುನ್ತಹಾ’ ದಿವ್ಯವೃಕ್ಷವನ್ನು ಸೃಷ್ಟಿಸಿದ ಎನ್ನಲಾಗಿದೆ.

ತನ್ನ ಸೃಷ್ಟಿಯ ಅತ್ಯಮೂಲ್ಯ ಆತ್ಮವಾಗಿ ಸೃಷ್ಟಿಸಲ್ಪಟ್ಟ ಪ್ರವಾದಿಯು ತನ್ನ ದಿವ್ಯಪ್ರಕಾಶದ ಭಾಗವಾಗಿ ಭೂಮಿಯಲ್ಲಿ ತನ್ನ ಸಂದೇಶಗಳ ವಾಹಕನಾಗಿ, ಶುದ್ಧ ಹೃದಯಿಯಾಗಿ ಅತ್ಯಂತ ಅದ್ಭುತ ವಿವೇಕವನ್ನು ಹೊಂದಿದವನಾಗಿ, ಸಚ್ಚಾರಿತ್ರ್ಯವಂತನೆನಿಸಲ್ಪಟ್ಟಿದ್ದರು.

ಸೃಷ್ಟಿಕರ್ತನ ಮೊತ್ತಮೊದಲಿನ ಸೃಷ್ಟಿ ‘ನೂರೆ ನಬಿ’ ಅಥವಾ ಪ್ರವಾದಿತ್ವದ ದಿವ್ಯ ಪ್ರಕಾಶವಾದರೂ ಭೂಮಿಯಲ್ಲಿ ಕೊನೆಯ ಪ್ರವಾದಿಯಾಗಿ ಹುಟ್ಟುತ್ತಾರೆ. ಅಂತಿಮ ಪ್ರವಾದಿ ಎಂದೆಣಿಸಲ್ಪಟ್ಟು ಇವರ ನಂತರ ಪ್ರವಾದಿಗಳ ಸೃಷ್ಟಿ ಕೊನೆಗೊಳ್ಳುತ್ತದೆ.

ಪ್ರಖ್ಯಾತ ಸೂಫಿಸಂತ ಮತ್ತು ಕವಿ ಮೌಲಾನಾ ಜಲಾಲುದ್ದೀನ್ ರೂಮಿ ತನ್ನ ವಿಶ್ವಖ್ಯಾತ ಕೃತಿ ‘ಮಸ್ನವಿ’ಯಲ್ಲಿ ಒಂದೆಡೆ ಬಾಲಕ ಪ್ರವಾದಿ ಮುಹಮ್ಮದ್ ಮನೆಗೆ ಹಿಂದಿರುಗುವ ಸಮಯದಲ್ಲಿ ಹಿಂತಿರುಗದಿದ್ದಾಗ ಹಾದಿನೋಡುತ್ತ, ಕಣ್ಣುತುಂಬಿಕೊಂಡು ಕಾತರದಿಂದ ಕಾಯುತ್ತಿರುವ ಸಾಕುತಾಯಿ ಹಲೀಮ ಸಾದಿಯಾರನ್ನು ಸಂತೈಸುವ ಪದ್ಯದ ಭಾಗ ಹೀಗಿದೆ: ಮರುಗದಿರು, ಹೋಗಲಾರನವನು ನಿನ್ನ ತೊರೆದು ಬದಲಿಗೆ, ಹೋಗುವುದು ಅವನೊಳಗೆ ವಿಶ್ವವೇ ಕಳೆದು. ಇಸ್ಲಾಮೀ ಇತಿಹಾಸದ ಆದಿಯಿಂದಲೇ ಪೈಗಂರರನ್ನು ತಮ್ಮ ಬದುಕಿನ ಆದರ್ಶವೆಂದು ವಿಶ್ವದಾದ್ಯಂತ ಎಲ್ಲ ಮುಸ್ಲಿಮರೂ ಭಾವಿಸುತ್ತಾರೆ. ಅವರ ವೈಯಕ್ತಿಕ ನಡೆನುಡಿ, ಅವರ ಹಾವಭಾವ, ಧರ್ಮನಿಷ್ಠೆ ಎಲ್ಲವನ್ನೂ ಮುಸ್ಲಿಮರು ತಮ್ಮ ಆದರ್ಶವೆಂದು ತಿಳಿದುಕೊಂಡು ಹಿಂಬಾಲಿಸುತ್ತಾರೆ.

ಅತ್ಯಂತ ಸಣ್ಣಪುಟ್ಟ ವಿಚಾರಗಳೇ ಬೇಕಾದರೂ ಆಗಿರಲಿ, ಪ್ರವಾದಿಯವರು ತಮ್ಮ ಬದುಕಲ್ಲಿ ನಡೆದುಕೊಂಡ ರೀತಿಯನ್ನು, ಅವರು ಧರಿಸುತ್ತಿದ್ದ ಬಟ್ಟೆಗಳನ್ನಾಗಲಿ, ಮುಖದಲ್ಲಿ ಬಿಡುತ್ತಿದ್ದ ದಾಡಿಯ ಕ್ರಮವನ್ನಾಗಲಿ, ಮುಖ ಕೈಕಾಲುಗಳನ್ನು ತೊಳೆಯುವ ರೀತಿಯನ್ನಾಗಲಿ, ಸ್ನಾನದ ಕ್ರಮವನ್ನಾಗಲಿ, ಆಹಾರ ಸ್ವೀಕರಿಸುವ ಕ್ರಮವೇ ಮುಂತಾದವನ್ನು ತಮ್ಮ ಬದುಕಲ್ಲೂ ಅಳವಡಿಸಿಕೊಳ್ಳುತ್ತಾರೆ. ಇದನ್ನು ಪಾಲಿಸುವುದರಲ್ಲಿ ನಿಷ್ಠೆಯನ್ನು ತೋರುತ್ತಾರೆ. ಮುಸ್ಲಿಮರು ಕುರಾನಂದೇಶಗಳನ್ನು ತಮ್ಮ ಬದುಕಿನ ಆದರ್ಶಗಳ ಕೇಂದ್ರ ಬಿಂದು­ವನ್ನಾಗಿಸಿಕೊಂಡರೂ, ಪ್ರವಾದಿ ಬದುಕಿದ ರೀತಿ, ಧರ್ಮದ ನಿಯಮಗಳನ್ನು ಪಾಲಿಸಿದ ರೀತಿ, ಕ್ಲಿಷ್ಟಕರ ಸಂದರ್ಭಗಳಲ್ಲಿ ನಡೆದುಕೊಂಡ ರೀತಿ ಮುಸ್ಲಿಮರಿಗೆ ಮಹತ್ವದ ಆದರ್ಶವೆನಿಸಿದೆ.  ಹಿರಿಯ ಸೂಫಿಸಂತರಲ್ಲಿ ಕೆಲವರು ತಮ್ಮ ಅಧ್ಯಾತ್ಮಿಕ ಪ್ರೇಮವೆಂದರೆ ಅಲ್ಲಾಹನೊಂದಿಗೆ ಮಾತ್ರವೆಂದು ತೀರ್ಮಾನಿಸಿದ್ದರು. ಇವರ ಆದರ್ಶವೂ ಕೂಡ ಅಲ್ಲಾಹನ ಸಂದೇಶಗಳು ಮತ್ತು ಅಲ್ಲಾಹನ ಮೇಲಿನ ಪ್ರೇಮದ ಸುತ್ತಲೇ ಗಿರಿಕಿಹೊಡೆಯುವಂತಿತ್ತು. ಇವರ ಮಟ್ಟಿಗೆ ಪ್ರವಾದಿಯವರು ತಮಗೆ ಮಾರ್ಗದರ್ಶನ ಮಾಡುವಂತಹ ಕಾರ್ಯಕ್ಕೆ ಮಾತ್ರ ಸೀಮಿತಗೊಂಡಿದ್ದರು.  ಒಮ್ಮೆ ಹಿರಿಯ ಸಂತರೊಬ್ಬರಿಗೆ ಪ್ರವಾದಿಯವರು ಕನಸಿನಲ್ಲಿ ಬಂದು ‘ನೀನು ನನ್ನನ್ನು ಪ್ರೀತಿಸುವುದಿಲ್ಲವೇ?’ ಎಂದು ಕೇಳಿದ್ದರು.

ಅದಕ್ಕೆ ಸಂತ ‘ದಯವಿಟ್ಟು ಕ್ಷಮಿಸಿ, ಅಲ್ಲಾಹನ ಮೇಲಿನ ಪ್ರೀತಿಯಲ್ಲೇ ನಾನು ತನ್ಮಯನಾಗಿರುವುದರಿಂದ ನನಗೆ ನಿಮ್ಮನ್ನು ಪ್ರೀತಿಸಲು ಸಾಧ್ಯವಾಗಿಲ್ಲ’ ಎಂದು ಉತ್ತರಿಸಿದ್ದರು.

ಅದಕ್ಕೆ ಪ್ರವಾದಿಯವರು ‘ಯಾರು ಅಲ್ಲಾಹನನ್ನು ಪ್ರೀತಿಸುತ್ತಾರೋ ಅವರು ನನ್ನನ್ನೂ ಪ್ರೀತಿಸಿದಂತೆಯೇ ಸರಿ’ ಎಂದು ಉತ್ತರಿಸಿದ್ದರು.
ಪ್ರವಾದಿತ್ವದ ಬೆಳಕು(ನೂರ್ ಎ ನಬಿ) ಅಂದರೆ ಅಲ್ಲಾಹನ ದಿವ್ಯ ಪ್ರಕಾಶ(ನೂರುಲ್ ಅಲಾ)ದ ಭಾಗವಾಗಿದೆ. ಈ ಬೆಳಕು ಎಲ್ಲ ಆತ್ಮಗಳನ್ನೂ ಒಳಗೊಂಡಿವೆ ಎನ್ನುವುದು ಸಂತ ಮನ್ಸೂರ್ ಅಲ್ ಹಲ್ಲಾಜರ ಹೇಳಿಕೆಯಾಗಿದೆ. ಹೃದಯದಲ್ಲಿ ಪ್ರವಾದಿತ್ವದ ಬೆಳಕಿನ ಅಂಶ ತುಂಬಿರುವಾಗ ನರಕದ ಬೆಂಕಿಯಿಂದ ನೀನು ಸುರಕ್ಷಿತನೆಂದೇ ತಿಳಿಯಬೇಕು. ಈ ಬೆಳಕಿನ ಅರಿವೇ ಇಲ್ಲದಿದ್ದರೂ ಕೂಡ ಇವು ಸಂತನೊಬ್ಬನ ಅಧ್ಯಾತ್ಮಿಕ ಬೆಳಕಾಗಿಯೇ ಪರಿಣಮಿಸುವುದು. ಪ್ರವಾದಿಯ ಬೆಳಕಿನ ಮೇಲಿನ ಪ್ರೀತಿ, ಅಲ್ಲಾಹನ ಪ್ರೀತಿಗೆ ಹಾದಿ ತೋರಿಸುವುದು.

-ಫಕೀರ್ ಅಹ್ಮದ್ ಕಟ್ಪಾಡಿ.

No comments:

Post a Comment