Friday, November 25, 2016

ಮೌನ

‘ದೇವರು ಮತ್ತು ಅಂತಿಮ ದಿನದ ಮೇಲೆ ನಂಬಿಕೆ ಇಟ್ಟ ಸತ್ಯ ವಿಶ್ವಾಸಿಯು ತನ್ನ ನೆರೆಹೊರೆಯವರನ್ನು ನೋಯಿಸದಿರಲಿ, ತನ್ನ ಅತಿಥಿಯನ್ನು ಗೌರವಿಸಲಿ, ಮಾತಿನಲ್ಲಿ ನಯವಾಗಿರಲಿ ಇಲ್ಲವೇ ಮೌನವಾಗಿರಲಿ’ ಎಂದು ಪೈಗಂಬರರು ಹೇಳಿದ್ದರೆಂದು ಅಬೂ ಹುರೈರಾ ಹೇಳಿದ್ದಾರೆ. ‘ಮೋಕ್ಷ ಸಾಧನೆ ಎನ್ನುವುದು ಏನು?’ ಎಂದು ಕೇಳಿದಾಗ ಪೈಗಂಬರರು, ‘ನಿಮ್ಮ ನಾಲಿಗೆಯನ್ನು ಹಿಡಿತದಲ್ಲಿಟ್ಟುಕೊಳ್ಳಿ. ನಿಮ್ಮ ಮನೆಯಲ್ಲಿ ತೃಪ್ತರಾಗಿರಿ. ಮಾಡಿದ ತಪ್ಪುಗಳ ನೆನೆದು ಪಶ್ಚಾತ್ತಾಪಪಡಿರಿ’ಎಂದಿದ್ದರು.

ಒಮ್ಮೆ ಮೌಲಾನಾ ಜಲಾಲುದ್ದೀನ್ ರೂಮಿಯವರು, ಓರ್ವ ಶ್ರೇಷ್ಠ ಸೂಫಿ ಷೇಖ್‌ನನ್ನು ಭೇಟಿ ಮಾಡಲು ಅವರ ಆಶ್ರಮಕ್ಕೆ ಹೋಗಿದ್ದರು. ಅತ್ಯಂತ ಗೌರವದಿಂದ ಅತಿಥಿಯನ್ನು ಬರಮಾಡಿಕೊಂಡ ಷೇಖ್ ತನ್ನ ಶಿಷ್ಯರ ಮಧ್ಯೆ ಕೂತು ಮಾತಿಗೆ ತೊಡಗಿದರು. ಮಾತು ಅಧ್ಯಾತ್ಮದ ಗಾಢ ಚಿಂತನೆಯತ್ತ ತಿರುಗಿತು. ಅಲ್ಲಿದ್ದ ಓರ್ವ ಮಕ್ಕಾ ಮದೀನಾದ ಯಾತ್ರೆಯನ್ನು ಹಲವುಬಾರಿ ಕೈಗೊಂಡಿದ್ದ ದರ್ವೇಶಿ ಫಕೀರನೊಬ್ಬ ಇವರ ಅಧ್ಯಾತ್ಮ ಮಾತುಕತೆಯ ಮಧ್ಯೆ ಕೇಳಿದ, ‘ಬಡತನ ಅಂದರೆ ಏನು?’ ರೂಮಿಯವರು ಪ್ರಶ್ನೆಗೆ ಉತ್ತರಿಸಲಿಲ್ಲ. ದರ್ವೇಶಿ ಮತ್ತೆ ಕೇಳಿದ. ಹೀಗೆ ಮೂರು ಬಾರಿ ಕೇಳಿದಾಗಲೂ ಅವರು ಮೌನವಾಗಿದ್ದರು.

ಮುಂದೆ ಭೇಟಿ ಮುಗಿದ ನಂತರ ರೂಮಿಯವರನ್ನು ಅಲ್ಲಿಂದ ಗೌರವದಿಂದ ಬೀಳ್ಕೊಟ್ಟರು. ಅವರು ಹೋದ ನಂತರ ತನ್ನ ಶಿಷ್ಯ ದರ್ವೇಶಿಯನ್ನು ತರಾಟೆಗೆ ತೆಗೆದುಕೊಂಡರು. ‘ಮೊದಲನೆಯ ಸಲವೇ ಅವರು ನಿನಗೆ ಉತ್ತರ ನೀಡಿದ್ದರೂ ನೀನು ಮತ್ತೆಮತ್ತೆ ಪ್ರಶ್ನಿಸುತ್ತಾ ಇದ್ದಿಯಲ್ಲಾ?’ ಎಂದು ಷೇಖ್ ಕೇಳಿದಾಗ `ಅದು ಹೇಗೆ?’ ಎಂದ ದರ್ವೇಶಿ. ‘ಅಯ್ಯೋ ಪಾಪ! ದೇವರನ್ನು ತಿಳಿದಾತನ ನಾಲಿಗೆ ಕಟ್ಟಿರುತ್ತದೆ. ನಿಜವಾದ ದರ್ವೇಶಿಯೆಂದರೆ ಸಂತರು ಮುಂದಿರುವಾಗ ಮೌನವಾಗಿರುತ್ತಾರೆ. ತನ್ನ ಮನಸ್ಸಲ್ಲಾಗಲಿ, ನಾಲಿಗೆಯಿಂದಾಗಲಿ ಹೇಳಲಾರ. ಅದನ್ನೇ ಕುರಾನ್‍ನಲ್ಲಿ(ಸೂರಃ 46:29) `ಸುಮ್ಮನಿರಿ, ಆಲಿಸಿರಿ(ಕಿವಿಗೊಟ್ಟು)’ ಎಂದು ಹೇಳಿರುವುದರ ಅರ್ಥ’ ಎಂದರು ಷೇಖ್.

ಮೌನ ರಕ್ಷಣೆಯ ಪ್ರತೀಕವಾಗಿರುತ್ತದೆ, ಅದೊಂದು ಪಾಲಿಸಬೇಕಾದ ನಿಯಮವೂ ಆಗಿದೆ. ಅದನ್ನು ತ್ಯಜಿಸಲು ಒತ್ತಾಯಿಸಿದರೆ ಪರಿತಾಪ ಅದನ್ನು ಹಿಂಬಾಲಿಸುತ್ತದೆ. ನ್ಯಾಯ, ಆಜ್ಞೆ ಮತ್ತು ನಿಷೇಧವನ್ನು ಗೌರವಿಸುವ ಗುಣಗಳು ಅದರಲ್ಲಿ ಅಡಗಿವೆ. ಅಗತ್ಯವಾಗಿರುವಾಗ ಮೌನವಾಗಿರುವುದು ವ್ಯಕ್ತಿಯ ಸರಿಯಾದ ನಡತೆಯಾಗಿರುತ್ತದೆ. ಹಾಗೆಯೇ ಸರಿಯಾದ ಸಂದರ್ಭದಲ್ಲಿ ಮಾತಾಡುವುದು ಉದಾತ್ತ ನಡತೆಯ ಲಕ್ಷಣಗಳಲ್ಲಿ ಒಂದಾಗಿರುತ್ತದೆ. `ಅಗತ್ಯದ ಸಂದರ್ಭದಲ್ಲಿ ಸತ್ಯ ಮಾತಾಡದಿರುವವನು ಮೂಕ ಸೈತಾನನಾಗಿರುತ್ತಾನೆ’ ಎಂದು ಸಂತ ಅಬೂ ಅಲಿ ಅದ್ದಖ್ಖಾಕ್ ಹೇಳಿದ್ದಾರೆ.

ಓರ್ವ ಸೇವಕ ಸುಳ್ಳು, ಕಪಟಗಳಿಂದ ರಕ್ಷಿಸಿಕೊಳ್ಳುವುದಕ್ಕಾಗಿ ಮೌನವಾಗಿರುವವನು ಮತ್ತು ಓರ್ವ ಸೇವಕ ಭಯಭಕ್ತಿ ತುಂಬಿದಾಗ ಮೌನವಾಗಿರುವವನ ಮಧ್ಯೆ ಎಷ್ಟೊಂದು ವ್ಯತ್ಯಾಸವಿದೆ! ಬಿಶರ್ ಇಬ್ನ್ ಹರೀತ್ ಹೇಳುತ್ತಾರೆ, ‘ನಿಮಗೆ ಮಾತಾಡುವುದು ಖುಷಿಯಾಗುತ್ತದೆಂದು ಅನಿಸಿದಾಗ ಮೌನವಾಗಿರಿ! ಮೌನ ಖುಷಿಕೊಡುವಾಗ ಮಾತಾಡಿ!’.
ಮಜನೂ ಲೈಲಾಳಿಗೆ ಹೇಳುತ್ತಾನೆ
– ‘ಎಷ್ಟೊಂದು ರಾಶಿ ಶಬ್ದಗಳಿರುತ್ತಾವೆ, ನಿನಗಾಗಿ, ನೀ ಎದುರಿಲ್ಲದಾಗ…
ಅವನ್ನೆಲ್ಲ ಮರೆತು ಮೂಕನಾಗುತ್ತೇನೆ, ನೀ ಎದುರಾದಾಗ…’

-ಫಕೀರ್ ಅಹ್ಮದ್ ಕಟ್ಪಾಡಿ.


No comments:

Post a Comment