'ಶೇಖ್ ಸಾಅದಿ ಶಿರಾಜಿ' ಎಂದೇ ಜನಪ್ರಿಯರಾದ ಮಹಮ್ಮದ್ ಮಸ್ಲಿಹುದ್ದೀನ್ ಅಬ್ದುಲ್ಲಾ ಈರಾನಿನ ಶಿರಾಜ್ ನಲ್ಲಿ ಕ್ರಿ. ಶ. 1210 ರಲ್ಲಿ ಜನಿಸಿದರು. (ನಿಧನ 1291).ಪರ್ಶಿಯನ್ ಭಾಷೆಯ ಅದ್ಭುತ ರೂಪಕಗಳ 'ಬೂಸ್ತಾನ್' ಹಾಗೂ ನೈತಿಕ ಮತ್ತು ಆಧ್ಯಾತ್ಮಿಕ ಸಂದೇಶಗಳ್ಳುಳ್ಳ 'ಗುಲಿಸ್ತಾನ್' ಮಹಾಕೃತಿಗಳಿಂದ ಅತ್ಯಂತ ಜನಪ್ರಿಯರಾದ ಶೇಖ್ ಸಾಅದಿ ಒಬ್ಬ ಸೂಕ್ಷ್ಮ ಸಂವೇದಿ ದಾರ್ಶನಿಕ ಕವಿಯೂ ಹೌದು. ಸಾಅದಿಯ ಪ್ರೇಮ ಕವನಗಳಲ್ಲಿ ಲೌಕಿಕರಿಗೆ ಲೌಕಿಕ ಪ್ರೇಮವುಂಟು, ದಾರ್ಶನಿಕರಿಗೆ ದೈವೀ ಪ್ರೇಮವುಂಟು. ತನ್ನ ಸರಳ ಕಾವ್ಯ ಶೈಲಿಯಿಂದ ವಿಶಿಷ್ಟವೆನಿಸುವ ಸಾಅದಿ ತಾತ್ವಿಕತೆ ಯಲ್ಲಿ ರೂಮಿಗೆ ಸಮಾನ ಎನ್ನಬಹುದು.
' ಗುಲಿಸ್ತಾನ್ 'ಅನ್ನು ಕನ್ನಡಕ್ಕೆ ಶ್ರೀ ಗುರುನಾಥ ದಿವೇಕರ್ ಎಂ. ಎ. ಇವರು ಅದ್ಭುತವಾಗಿ ಅನುವಾದಿಸಿದ್ದಾರೆ. ಇದು 1969 ರಲ್ಲಿ ಸಮಾಜ ಪುಸ್ತಕಾಲಯ, ಧಾರವಾಡ ದಿಂದ ಪ್ರಕಟಗೊಂಡಿರುತ್ತದೆ.
******
ಸಾಅದಿ ಶಿರಾಜಿ ಕವನ 2
ನಿನ್ನ ಶ್ರದ್ಧೆಯು ನಿನಗೆ, ನನ್ನ ಶ್ರದ್ಧೆಯು ನನಗೆ
(ಲಕಂ ದೀನಕುಂ ವಲಿಯದ್ದೀನ್)
(ಕುರಾನ್ :ಸೂರಾ 109-6)
****
ಚೆಲುವು, ಉರಿದೀಪ, ಮದಿರೆ, ಸಿಹಿತಿನಿಸು ಇವು ಈ ರಾತ್ರಿಯ ವಿಶೇಷ,
ಇಂತಹ ರಾತ್ರಿಯಲಿ ಪ್ರೇಮಿಯ ಸಾಂಗತ್ಯ ಸಂಭ್ರಮವಲ್ಲವೇ?
ಆದರೂ ಒಂದು ನಿಬಂಧನೆ, ನಿನ್ನ ಕಾಯುವೆ ನಾ ದಾಸನಾಗಿ,
ನೀ ವಿರಾಜಿಸು ವಿಜೃಂಭದಿ, ಒಡೆಯನಾಗಿ ಗುರುವಾಗಿ.
ನೆನಪಿದೆಯಾ¡ ಸೃಷ್ಟಿಯ ಆದಿಯಲಿ, ನಮ್ಮ ಮಧ್ಯದ ಒಡಂಬಡಿಕೆ,
ಸಾವಿರ ವರುಷ ಗತಿಸಿದರೂ, ನಾನೇ ನಿನ್ನವನೆಂಬ ವಾಗ್ದಾನವ.
ನಿನ್ನ ವಿಯೋಗವನು ಕಲ್ಪಿಸಲೂ ಅಸಾಧ್ಯ ನನಗೆ,
ಹಾಗಾಗಿ ರೋಷದಲಿ ನಾ ಹೊರಟೆ, ಆದರೆ ಮರಳಿದೆ ವಿನಮ್ರನಾಗಿ.
ನಿನ್ನಂಥ ಪ್ರೇಮಿ ನನಗೆ ಎಲ್ಲೂ ದೊರೆಯನು
ನೀ ಬಯಸಿದರೆ ಸಿಗುವರು ನನ್ನಂಥವರು ಸಾವಿರ ನಿನಗೆ.
ತೋಟ ಕಾವಲುಗಾರ ಹೂ ಹಣ್ಣು ಆರಿಸಲು ನಿರ್ಭಂದಿಸಿದರೆ,
ಈ ಬಡಪಾಯಿಗೆ ವಸಂತದ ವರ್ಣ ಪರಿಮಳದಿಂದಲೇ ತೃಪ್ತಿ.
ನನಗೇನೂ ನಷ್ಟವಿಲ್ಲ ನೀ ಮುನಿಸಿಕೊಂಡರೆ, ಹೇ ನನ್ನ ಪ್ರೇಮಿಯೇ,
ನಿನ್ನ ಬಿರುನುಡಿಯ ಬಾಣವು, ಸವಿ ಸಹ್ಯವು ನನಗೆ.
ಗೊತ್ತು ಪ್ರೇಮ ಬಲದಿಂದ ಸಿಂಹವನೂ ಪಳಗಿಸಬಹುದು,
ಅಧಿ ಭಾರವನೂ ಒಂಟೆಯು ಸಂತಸದಿ ಹೊರೆವಂತೆ.
ನಿನ್ನ ದುಃಖದಲಿ ಪರಿತಪಿಸುವುದು, 'ಸಾಅದಿ' ಗೆ ಸದಾ ಸುಖಕರ,
ಪಾರಿವಾಳವು ಹದ್ದಿನ ಪಂಜದಲಿ ಸಂಭ್ರಮಿಸಿದಂತೆ.
ಚೆಲುವನ್ನು ಕಂಡೂ ಅದರಿಂದ ಮೋಹಿತನಾಗದ ವೈರಾಗ್ಯ ನನಗಿಲ್ಲ ಹೇ ಮುಸ್ಲಿಮನೇ,
ನಿನಗೆ ಆಕ್ಷೇಪವಿದ್ದರೆ, ನಿನ್ನ ಶ್ರದ್ಧೆಯು ನಿನಗೆ, ನನ್ನದು ನನಗೆ.
-Riyaz Ahmed Bode
No comments:
Post a Comment