Tuesday, December 29, 2020

ಶೇಖ್ ಸಾಅದಿ ಶಿರಾಜಿ

   

  'ಶೇಖ್ ಸಾಅದಿ ಶಿರಾಜಿ' ಎಂದೇ ಜನಪ್ರಿಯರಾದ ಮಹಮ್ಮದ್ ಮಸ್ಲಿಹುದ್ದೀನ್ ಅಬ್ದುಲ್ಲಾ ಈರಾನಿನ ಶಿರಾಜ್ ನಲ್ಲಿ ಕ್ರಿ. ಶ. 1210 ರಲ್ಲಿ ಜನಿಸಿದರು. (ನಿಧನ 1291).ಪರ್ಶಿಯನ್ ಭಾಷೆಯ ಅದ್ಭುತ ರೂಪಕಗಳ 'ಬೂಸ್ತಾನ್' ಹಾಗೂ ನೈತಿಕ ಮತ್ತು ಆಧ್ಯಾತ್ಮಿಕ ಸಂದೇಶಗಳ್ಳುಳ್ಳ 'ಗುಲಿಸ್ತಾನ್' ಮಹಾಕೃತಿಗಳಿಂದ ಅತ್ಯಂತ ಜನಪ್ರಿಯರಾದ ಶೇಖ್ ಸಾಅದಿ ಒಬ್ಬ ಸೂಕ್ಷ್ಮ ಸಂವೇದಿ ದಾರ್ಶನಿಕ ಕವಿಯೂ ಹೌದು. ಸಾಅದಿಯ ಪ್ರೇಮ ಕವನಗಳಲ್ಲಿ ಲೌಕಿಕರಿಗೆ ಲೌಕಿಕ ಪ್ರೇಮವುಂಟು, ದಾರ್ಶನಿಕರಿಗೆ ದೈವೀ ಪ್ರೇಮವುಂಟು. ತನ್ನ ಸರಳ ಕಾವ್ಯ ಶೈಲಿಯಿಂದ ವಿಶಿಷ್ಟವೆನಿಸುವ ಸಾಅದಿ ತಾತ್ವಿಕತೆ ಯಲ್ಲಿ ರೂಮಿಗೆ ಸಮಾನ ಎನ್ನಬಹುದು.

' ಗುಲಿಸ್ತಾನ್ 'ಅನ್ನು ಕನ್ನಡಕ್ಕೆ ಶ್ರೀ ಗುರುನಾಥ ದಿವೇಕರ್ ಎಂ. ಎ. ಇವರು ಅದ್ಭುತವಾಗಿ ಅನುವಾದಿಸಿದ್ದಾರೆ. ಇದು 1969 ರಲ್ಲಿ ಸಮಾಜ ಪುಸ್ತಕಾಲಯ, ಧಾರವಾಡ ದಿಂದ ಪ್ರಕಟಗೊಂಡಿರುತ್ತದೆ. 

                   ******

ಸಾಅದಿ ಶಿರಾಜಿ ಕವನ 2

ನಿನ್ನ ಶ್ರದ್ಧೆಯು ನಿನಗೆ, ನನ್ನ ಶ್ರದ್ಧೆಯು ನನಗೆ
     (ಲಕಂ ದೀನಕುಂ ವಲಿಯದ್ದೀನ್) 
        (ಕುರಾನ್ :ಸೂರಾ 109-6)  
                       ****
ಚೆಲುವು, ಉರಿದೀಪ, ಮದಿರೆ, ಸಿಹಿತಿನಿಸು ಇವು ಈ ರಾತ್ರಿಯ ವಿಶೇಷ, 
ಇಂತಹ ರಾತ್ರಿಯಲಿ ಪ್ರೇಮಿಯ ಸಾಂಗತ್ಯ ಸಂಭ್ರಮವಲ್ಲವೇ? 

ಆದರೂ ಒಂದು ನಿಬಂಧನೆ, ನಿನ್ನ ಕಾಯುವೆ ನಾ ದಾಸನಾಗಿ, 
ನೀ ವಿರಾಜಿಸು ವಿಜೃಂಭದಿ, ಒಡೆಯನಾಗಿ ಗುರುವಾಗಿ. 

ನೆನಪಿದೆಯಾ¡ ಸೃಷ್ಟಿಯ ಆದಿಯಲಿ, ನಮ್ಮ ಮಧ್ಯದ ಒಡಂಬಡಿಕೆ, 
ಸಾವಿರ ವರುಷ ಗತಿಸಿದರೂ, ನಾನೇ ನಿನ್ನವನೆಂಬ ವಾಗ್ದಾನವ. 

ನಿನ್ನ ವಿಯೋಗವನು ಕಲ್ಪಿಸಲೂ ಅಸಾಧ್ಯ ನನಗೆ, 
ಹಾಗಾಗಿ ರೋಷದಲಿ ನಾ ಹೊರಟೆ, ಆದರೆ ಮರಳಿದೆ ವಿನಮ್ರನಾಗಿ. 

ನಿನ್ನಂಥ ಪ್ರೇಮಿ ನನಗೆ ಎಲ್ಲೂ ದೊರೆಯನು
ನೀ ಬಯಸಿದರೆ ಸಿಗುವರು ನನ್ನಂಥವರು ಸಾವಿರ ನಿನಗೆ. 

ತೋಟ ಕಾವಲುಗಾರ ಹೂ ಹಣ್ಣು ಆರಿಸಲು ನಿರ್ಭಂದಿಸಿದರೆ, 
ಈ ಬಡಪಾಯಿಗೆ ವಸಂತದ ವರ್ಣ ಪರಿಮಳದಿಂದಲೇ ತೃಪ್ತಿ. 

ನನಗೇನೂ ನಷ್ಟವಿಲ್ಲ ನೀ ಮುನಿಸಿಕೊಂಡರೆ, ಹೇ ನನ್ನ ಪ್ರೇಮಿಯೇ, 
ನಿನ್ನ ಬಿರುನುಡಿಯ ಬಾಣವು, ಸವಿ ಸಹ್ಯವು ನನಗೆ. 

ಗೊತ್ತು ಪ್ರೇಮ ಬಲದಿಂದ ಸಿಂಹವನೂ ಪಳಗಿಸಬಹುದು, 
ಅಧಿ ಭಾರವನೂ ಒಂಟೆಯು ಸಂತಸದಿ ಹೊರೆವಂತೆ. 

ನಿನ್ನ ದುಃಖದಲಿ ಪರಿತಪಿಸುವುದು, 'ಸಾಅದಿ' ಗೆ ಸದಾ ಸುಖಕರ, 
ಪಾರಿವಾಳವು ಹದ್ದಿನ ಪಂಜದಲಿ ಸಂಭ್ರಮಿಸಿದಂತೆ. 

ಚೆಲುವನ್ನು ಕಂಡೂ ಅದರಿಂದ ಮೋಹಿತನಾಗದ ವೈರಾಗ್ಯ ನನಗಿಲ್ಲ ಹೇ ಮುಸ್ಲಿಮನೇ, 
ನಿನಗೆ ಆಕ್ಷೇಪವಿದ್ದರೆ, ನಿನ್ನ ಶ್ರದ್ಧೆಯು ನಿನಗೆ, ನನ್ನದು ನನಗೆ.

-Riyaz Ahmed Bode

Friday, April 24, 2020

ಇಮಾಮ್ ಅಬೂಬಕ್ಕರ್ ಶಿಬಿಲಿ (ರ.ಅ)


   
ಇಮಾಂ ಅಬೂಬಕ್ಕರ್ ಅಬ್ದುಲ್ಲಾಹಿ ಶಿಬಿಲಿ رضي الله عنه ವಿನ ನಿಜವಾದ ಹೆಸರು ಮುಬಾರಕ್ ಜಅಫರ್ ಇಬ್ನು ಯೂನುಸ್ ಅಂತಾಗಿದೆ. ಜುನೈದುಲ್ ಬಗ್ದಾದಿ رضي الله عنه ವಿನ ಪ್ರಧಾನ ಮುರೀದು ಖಾದಿಮರಾಗಿ ಬೆಳೆದ ಶಿಬಿಲಿ رضي الله عنه ವಿನ ಹೆಸರು ಬದಲಾಯಿಸಲು ಕಾರಣ ಕೌತುಕವಾಗಿದೆ. 

ಆ ಕಾಲಘಟ್ಟದಲ್ಲಿ ನಿಯಮ ನಡೆಸುತ್ತಿದ್ದ ರಾಜರು ಜುನೈದ್  رضي الله عنه ವಿನಿಂದ ಕೆಲವು ಮಸ್ಅಲಗಳು ತಿಳಿಯಲು ಬೇಕಾಗಿ ಅರಮನೆಗೆ ಕರೆಸಿದ್ದರು. ತನ್ನ ರಾಜಸನ್ನಿಧಿಗೆ ತಲುಪಿದ ಜುನೈದುಲ್ ಬಗ್ದಾದಿ رضي الله عنه ರಲ್ಲಿ ಪ್ರತ್ಯೇಕ ಬಹುಮಾನ ವಿಶೇಷಣೆಗಳನ್ನು ಪ್ರಕಟಿಸಿದ ರಾಜರು, ಸಂಸಾರದಲ್ಲಿರುವ ವಿಶೇಷತೆಗಳನ್ನು ಮರೆತು ಸ್ವಲ್ಪ ಗೌರವದಿಂದ ಮಾತನಾಡಲು ಆರಂಭಿಸಿದಾಗ, ಜುನೈದ್رضي الله عنه ವಿನ ಖಿದ್ಮತ್ತಿಗಾಗಿ ಒಟ್ಟಿಗೆ ಇದ್ದ ಅಬೂಬಕ್ಕರ್ ಅಬ್ದುಲ್ಲಾಹಿ ವಾಹಿದರಿಗೆ ಸಹಿಸಲಿಲ್ಲ. ಅಲ್ಲಿಂದ ಸ್ವಂತ ಶರೀರಕ್ಕೆ ಒಂದು ಪೆಟ್ಟು ಕೊಟ್ಟರು ತಕ್ಷಣ ಚರ್ಮಗಳಿಗೆ ರೂಪ ಭಾವನೆ ಬಂತು ಅಲ್ಲಿಂದ ಹುಲಿಯ ರೂಪಕ್ಕೆ ಬದಲಾವಣೆ ಕಂಡು ಜುನೈದ್ رضي الله عنه ಒಮ್ಮೆ ಸೂಕ್ಷಮವಾಗಿ ನೋಡಿದಾಗ ಹಳೆಯ ರೂಪಕ್ಕೆ ಹಾಗೆ ಹಿಂತಿರುಗಿದರು. ಹೀಗೆಯೇ ಮತ್ತೊಮ್ಮೆ ರಾಜಾವಿನ ಶೈಲಿಯಲ್ಲಿ ಅಗೌರವವು ಅಹಂಕಾರವು ಪ್ರಕಟವಾದಾಗ, ಅಲ್ಲಿಂದ ಮತ್ತೊಮ್ಮೆ ಕ್ಷಮಗೆಟ್ಟು ತನ್ನಿಂದ ನಿದ್ರೆಮಾಡುತ್ತರುವ ಸಿಂಹವನ್ನು ಮುಟ್ಟಿಎಬ್ಬಿಸುವ ಹಾಗೆ ಸ್ವಂತ ಶರೀರಕ್ಕೆ ಶಕ್ತವಾಗಿ ಹೊಡೆದರು.ಸಿಂಹವು ಮೇಲಕ್ಕೆ ಹಾರಿದಾಗ ಜುನೈದ್ رضي الله عنه ತಡೆದರು. 

ಆದರೆ ಮೂರನೇ ಸಲ ಇದು ರಾಜಾವಿನ ದ್ರಷ್ಟಿಯಲ್ಲಿ ಬಿತ್ತು. ದ್ರಶ್ಯ ಅಪಾಯಕಾರಿಯಾಗುವುದಕ್ಕಿಂತ ಮೊದಲೇ, ಬುದ್ದಿವಂತ ರಾಜರು ತನ್ನ ಕುರ್ಚಿಯಿಂದ ಜಿಗಿದು ಕೆಳಗಿಳಿದು ಜುನೈದ್ رضي الله عنه  ವಿನ ಕಾಲಿಗೆ ಬಿದ್ದು ಕ್ಷಮಾಪಣೆ ಕೇಳಿದರು. ಈ ಕಾರಣದಿಂದ 'ಸಿಂಹ ಮರಿ' ಎಂದರ್ಥ ಬರುವ 'ಶಿಬಿಲಿ' ಅಂತ ವರ್ಣಮಾಲೆಯ ಹೆಸರಿನಲ್ಲಿ ಅಲ್ಲಿಂದ ಪ್ರಸಿದ್ಧರಾದರು. ಬಗ್ದಾದಿನಲ್ಲಿ ಜನಿಸಿದ ಇಮಾಂ ಶಿಬಿಲಿ رضي الله عنه ಹಿಜರ 334 ದುಲ್ಹಜ್ಜ್ 27 ರಂದು ಬಗ್ದಾದಿನಲ್ಲಿಯು ವಫಾತಾದರು.

بہر شبلی شیر حق دنيا كے کتون سے بچا 
ایک کا رکہ عبد واحد بے ریا کے واسطے

ಬಹರೇ ಶಿಬಿಲೀ ಶೇರೇ ಹಖ್ ದುನಿಯಾ ಕೇ ಕುತ್ತೋನ್ ಸೆ ಬಚಾ 

ಏಕ್ ಕಾ ರಕ್ ಅಬ್ದ್ ವಾಹಿದ್ ಬೇ ರಿಯಾ ಕೇ ವಾಸ್ತೇ

 ಸತ್ಯದ ಸಿಂಹವಾದ ಇಮಾಂ ಶಿಬಿಲಿ *رضي الله عنه* ವಿನಿಂದ ಐಹಿಕ ಪ್ರೇಮಿಗಳಾದ ನಾಯಿಗಳಿಂದ ರಕ್ಷಣೆ ನೀಡಬೇಕು....

ಅಬ್ದುಲ್ ವಾಹಿದಿನ ಬರಕತ್ತಿನಿಂದ, ಲೋಕಮಾನ್ಯ ತೆಯಿಂದ ಕಾಯು, ಎಲ್ಲವೂ ಏಕನಾದ ಅಲ್ಲಾಹನಿಗೆ ಮಾತ್ರವಾಗಿ ಮುಗಿಸಬೇಕು ನಾದಾ....

 ದುನಿಯಾ ಶವಕ್ಕೆ ಸಮಾನವಗಿದೆಯೆಂದು ಅದನ್ನು ಹುಡುಕುವವರು 'ನಾಯಿಗಳು' ಆಗಿದೆಯಂತ ಸ್ವಹೀಹಾಯ ಹದೀಸಿನಲ್ಲಿ ಬಂದಿದೆ. ಪ್ರಸ್ತುತ ಹದೀಸಿನಲ್ಲಿ ಬಹುಮಾನ್ಯ ಶಿಬಿಲಿ رضي الله عنه  ವಿನ ಶ್ರೇಷ್ಠತೆಯ ಬೆಳಕಿನಲ್ಲಾಗಿದೆ, ಮಹಾನುಭಾವರ ಬರಕತ್ತಿನಿಂದ ಲೋಕದಲ್ಲಿರುವ ಜಗತ್ತಿನ ದುಷ್ಕರ್ಮಿಗಳ ಅಕ್ರಮದಿಂದ ಈ ಸಾಲಿನಲ್ಲಿ ಇಮಾಂ ಅಹ್ಮದ್ رضي الله عنه  ರಝಾ ಖಾನ್ ರಕ್ಷಣೆ ಪಡೆಯಲು ಸಾಂದರ್ಭಿಕವಾಗಿ  ಮೇಲಿನ ವಾಕ್ಯ   ಉಪಯೋಗಿಸಿದರು. ಖಾದಿರಿಯ್ಯದ ಹನ್ನೆರಡನೇ ಖಲೀಫಯಾಗಿದ್ದಾರೆ ಇಮಾಂ ಶಿಬಿಲಿ  . ಅಬ್ದುಲ್ ವಾಹಿದ್ ಅಬ್ದುಲ್ ಅಸೀಸ್ ತಮೀಮಿ رضي الله عنه  ತಂಗಳರಿಗೆ ಶೈಖ್ ರವರ ಕರಾಮತ್ತುಗಳು, ಶರೀಅತ್ತಲ್ಲೂ ತ್ವರೀಕತ್ತಿನಲ್ಲೂ ಅಗಾಧ ಪಾಂಡಿತ್ಯವಿತ್ತು.
    ಖಾದಿರಿ ಮಶಾಇಕ್ರವರ 'ಮುಹದಿಸ್'  ಅಂತ ಪದವಿಯು ಮಹಾನುಭಾವರಿಗಿತ್ತು. ಹದೀಸ್ ಕ್ರೋಢೀಕರಣ ತೆವಳುವ ಕಾಲಘಟ್ಟದಲ್ಲಿ ಜೀವಿಸಿದ್ದ ಮಹಾನರು, ಒಟ್ಟನೇಕ ಸ್ವಹೀಹಾದ ಹದೀಸುಗಳ ರಚಣೆಗಾರರು ಆಗಿದ್ದಾರೆ.

ಸಮಕಾಲೀನರಲ್ಲಿ ಸಮಾನತೆ ಇಲ್ಲದೆ ಅರಿವು ಆರಾಧನೆಯು ಅಲ್ಲಿಂದ ಮಹತ್ತರವಾದ ಬೆಳವಣಿಗೆಗೆ ಕಾರಣವಾಯಿತು. ಬಗ್ದಾದಿನಲ್ಲಿ ಧಾರ್ಮಿಕ ಬೋಧನೆಯ ದ್ರಶ್ಯದಲ್ಲಿ ಹೆಚ್ಚು ಕಾಲವು ಭವ್ಯವಾಗಿ ನಂತರ ಹಿಜರ 425 ರಲ್ಲಿ ಜಮಾದುಲ್ ಅವ್ವಲ್ 22 ರಂದು ಅಲ್ಲಿಂದ ವಫಾತಾದರು. ಬಗ್ದಾದಲ್ಲಾಗಿದೆ ಅಂತ್ಯ ವಿಶ್ರಮಗೊಲ್ಲುತ್ತಿರುವುದು. ಖಾದಿರಿಯ್ಯದ ಹದಿಮೂರನೇ ಖಲೀಫಯಾಗಿದ್ದಾರೆ ಇಮಾಂ ಅಬ್ದುಲ್ ವಾಹಿದ್ ಅಬ್ದುಲ್ ಅಸೀಸ್ ತಂಗಳರು رضي الله عنه..

- ಉವೈಸ್ ಮನ್ಸರಿ ಅಲ್ ಖಾದಿರಿ ಹುಬ್ಳಿ

Friday, September 20, 2019

ಉರಿವ ದೀಪ ಮತ್ತು ಚಿಟ್ಟೆ : ಅತ್ತಾರನ ಸೂಫಿ ಪದ್ಯ

ಜ್ಞಾನೋದಯವೆಂದರೆ ಬೇರೇನಲ್ಲ, ಎಲ್ಲ ಎಲ್ಲೆಗಳ ದಾಟುವುದು. ~ ಫರೀದುದ್ದೀನ್ ಅತ್ತಾರ್ | ಕನ್ನಡಕ್ಕೆ:ಸುನೈಫ್
ಉರಿವ ದೀಪದ
ಬೆಳಕಿನಾಳದ ಗುಟ್ಟನರಿಯಲು
ಚಿಟಪಟ ರೆಕ್ಕೆ ಬಡಿಯುತ್ತಾ
ಸಭೆ ಸೇರಿದವು ಚಿಟ್ಟೆಗಳು,
ಮುಟ್ಟಲಾಗದ ಉರಿಯ
ಅರಿವನು ಹೊತ್ತು ತರಲು
ಚಿಟ್ಟೆಯೊಂದು ಹೊರಡಬೇಕೆಂದು ನಿರ್ಧರಿಸಲಾಗಿ
ಹಾರಿತೊಂದು ಅರಮನೆಯ ಕಿಟಕಿಯ ತನಕ.
ದೀಪ ಒಳಗಿದೆ, ಬೆಳಕು ಕಣ್ಣ ತುಂಬಿದೆ
ಇನ್ನೇನು ಬೇಕು ತನಗೆ?
ಕಂಡ ಕಾಣ್ಕೆಯ
ವರದಿ ಒಪ್ಪಿಸಲು ಮರಳಿತು ಕಾತರದಿ,
‘ಜ್ವಾಲೆಯ ಗುಟ್ಟನು ಅರಿತಿಲ್ಲ ನೀನು’
ದೂರದಿ ಕಂಡ ನೋಟವ
ಒಪ್ಪಲಿಲ್ಲ ಗುರು ಚಿಟ್ಟೆ.
ಮತ್ತೆ ಚಿಟ್ಟೆಯೊಂದು ಹಾರಿತು
ಕೋಟೆ ಬಾಗಿಲ ದಾಟಿ ಅರಮನೆ ಹೊಕ್ಕಿತು
ದೀಪದ ಪ್ರಭೆಯಲ್ಲಿ ಕುಣಿಯಿತು
ರೆಕ್ಕೆಗೆ ಚೂರೇ ಚೂರು ಬೆಂಕಿ ತಗುಲಿದಾಗ
ಒಳಗಿನಿಂದೆದ್ದ ನಡುಕಕೆ ನಲುಗಿ
ಮಂದವಾಯಿತು ಕಣ್ಣು,
ಹಾರಿದ ದೂರವ, ಕಂಡ ಜ್ವಾಲೆಯ
ವರ್ಣಿಸಿತು ಮರಳಿ ಬಂದು
ಗುರು ಚಿಟ್ಟೆ ಹೇಳಿತು:
‘ದೀಪ ಬೆಳಗಲು ಉರಿಯಬೇಕು,
ಆ ಉರಿಯಾಳವ ಕಂಡಿಲ್ಲ ನೀನು’
ಈಗ ಹೊರಟಿತೊಂದು ಕಟ್ಟಾಳು ಚಿಟ್ಟೆ
ಅಗಲಿದ ಪ್ರೇಮಿಯ ಹುಡುಕುವಂತೆ
ಬೆಳಕ ಹುಡುಕುತ ಹಾರಿತು
ಮುಳುಗಿತು ಬೆಳಕಿನಾಳದಲ್ಲಿ
ಮಿಂದೆದ್ದಿತು ಉರಿವ ಕುಡಿಯಲ್ಲಿ
ಬೆಳಕು ಮತ್ತು ಚಿಟ್ಟೆ ಒಂದಾಯಿತು ನಾಟ್ಯದಲ್ಲಿ
ಈಗ ರೆಕ್ಕೆ ದೇಹ ತಲೆಯಲ್ಲೆಲ್ಲ ಬೆಳಕು
ಚಿಟ್ಟೆಯೀಗ ಬರಿಯ ನಸುಗೆಂಪು
ನಾಮರೂಪಗಳು ಅಳಿದು
ಉಳಿದದ್ದು ಉರಿಯ ಬೆಳಕು
ಗುರು ಚಿಟ್ಟೆ ಹೇಳಿತು:
‘ಅವನರಿತ, ಅವನರಿತ
ನಾವು ಹುಡುಕುವ ಸತ್ಯವ ಅವನರಿತ,
ನುಡಿಯಲಾಗದ ಸತ್ಯವ ಅವನರಿತ’
ಜ್ಞಾನೋದಯವೆಂದರೆ ಬೇರೇನಲ್ಲ
ಎಲ್ಲ ಎಲ್ಲೆಗಳ ದಾಟುವುದು.
ದೇಹಾತ್ಮದೊಳಗಿಂದ ಚಿಮ್ಮಿ ಹೊರಬರದೆ
ಗೆಲ್ಲಲಾಗದು ಯಾವ ಗುರಿಯನ್ನೂ.
ನೆನಪಿರಲಿ, ಕೂದಲೆಳೆಯ ಹಮ್ಮು ಸಾಕು
ಮತ್ತೆ ಹತಾಶೆಯ ಕೂಪಕೆ ಮರಳಲು.
ಗುರುತುಗಳೆಲ್ಲ ಅಳಿಯುವಲ್ಲಿ
ಗುರುತಿಟ್ಟು ಹೋಗ ಬಯಸುವಿರಾದರೆ
ನಿಮಗಿದು ಜಾಗವಲ್ಲ.

©ಅರಳಿಮರ

Wednesday, May 23, 2018

ಅನುಭಾವಿ ಕವಿ ಇಬ್ನ್ ಅತಾ ಅಲ್ ಅದಮಿ

ಇವರ ಪೂರ್ಣ ಹೆಸರು ಅಬುಲ್ ಅಬ್ಬಾಸ್ ಅಹ್ಮದ್ ಇಬ್ನ್ ಮುಹಮ್ಮದ್ ಇಬ್ನ್ ಸಹ್ಲ್ ಇಬ್ನ್ ಅತಾ ಅಲ್ ಅದಮಿ. ಇವರು ಖ್ಯಾತ ಸಂತ ಅಲ್ ಜುನೈದ್‌ರವರ ಶಿಷ್ಯ. ಇವರು ಅನುಭಾವಿ ಕವಿಯಾಗಿ ಅನೇಕ ಕವನಗಳ ಕತೃ ಆಗಿ ಬಗ್ದಾದಿನ ಹೆಸರಾಂತ ಅನುಭಾವಿ ಮಂಡಳಿಯ ಮುಖ್ಯ ಸದಸ್ಯನಾಗಿಯೂ ಹೆಸರುವಾಸಿಯಾದವರು.

ಇಬ್ನ್ ಅತಾ ರವರು ಪ್ರವಚನ ಮಾಡುತ್ತಿದ್ದಲ್ಲಿಗೆ ಜನರ ಗುಂಪೊಂದು ಬಂತು. ಅವರು ನೆಲವನ್ನು ನೋಡುವಾಗ ಎಲ್ಲ ಒದ್ದೆಯಾಗಿತ್ತು.

“ಇದ್ಯಾಕೆ ಹೀಗೆ? ಏನಾಯಿತು?”ಎಂದು ಅವರು ಕೇಳಿದರು.
“ಒಂದು ವಿಶೇಷ ಅನುಭಾವಿ ಪ್ರಜ್ಞೆ ನನ್ನಲ್ಲಿ ಉಂಟಾಯಿತು. ಅದೇಕೋ ನನಗೆ ನನ್ನ ಕಳೆದ ಪಾಪದ ಬಗ್ಗೆ ನೆನೆದು ಪಶ್ಚಾತ್ತಾಪ ಪಟ್ಟೆ. ಪ್ರವಚನ ಮಾಡುವಾಗ ನಿಂತಲ್ಲಿ ನಿಲ್ಲದೆ ಅಚೀಚೆ ಸುತ್ತು ಬಂದು ಮಾತಾಡುತ್ತಿದ್ದೆ, ನನ್ನ ಕಣ್ಣಿ ನಿಂದ ಇಳಿದ ಕಣ್ಣೀರು ನೆಲವನ್ನು ಒದ್ದೆ ಮಾಡಿತು.” ಎಂದರು ಇಬ್ನ್ ಅತಾ.
“ಅಂತಹ ಘೋರ  ತಪ್ಪನ್ನೇನು ಮಾಡಿದ್ದೀರಿ ?” ಎಂದು ಆಗಂತುಕರು ಕೇಳಿದರು.
” ನಾನು ಬಾಲಕನಾಗಿದ್ದಾಗ ನಾನು ಬೇರೆಯವರ ಬಾತು ಕೋಳಿಯನ್ನು ಹಿಡಿದಿದ್ದೆ. ಈವತ್ತು ಪಶ್ಚಾತ್ತಾಪದ ಬಗ್ಗೆ ಪ್ರವಚನ ಮಾಡುತ್ತಿರುವಾಗ ಅದರ ನೆನಪಾಯಿತು. ನಾನು ಅದರ ಯಜಮಾನನಿಗೆ ಒಂದು ಸಾವಿರ ದಿನಾರುಗಳನ್ನು ಕೊಟ್ಟೆ.  ಆದರೂ ನನ್ನ ಅಂತರಾತ್ಮಕ್ಕೆ ಸಮಾಧಾನವಾಗಲಿಲ್ಲ. ಈ ತಪ್ಪಿಗೆ ನನಗೆ ದೇವರು ಎಂತಹ ಶಿಕ್ಷೆ ಕೊಡುತ್ತಾನೋ ಎಂದು ಭಯ ಆವರಿಸಿ ನಾನು ಅಳಲು ಶುರು ಮಾಡಿದೆ.” ಎಂದರು ಇಬ್ನ್ ಅತಾ.

ಇಬ್ನ್ ಅತಾರವರು ಒಮ್ಮೆ ಮಸೀದಿಯಲ್ಲಿ ಕೂತಿದ್ದಾಗ “ನೀವು ದಿನವೂ ಎಷ್ಟು ಕುರಾನ್‌ನ ಭಾಗಗಳನ್ನು ಓದುತ್ತೀರಿ?” ಜನ ಕೇಳಿದರು.
“ಹಿಂದೆ ಇಪ್ಪತ್ತನಾಲ್ಕು ಗಂಟೆಗಳಲ್ಲಿ ಎರಡು ಬಾರಿ ಕುರಾನನ್ನು ಓದಿ ಮುಗಿಸುತ್ತಿದ್ದೆ, ಕಳೆದ ಹದಿನಾಲ್ಕು ವರ್ಷಗಳಿಂದ ಹೀಗೆ ನಾನು ಓದುತ್ತಿದ್ದೆ. ಈಗ ನಾನು ಸೂರಃ ಎಂಟು, ಅಲ್ ಅನ್‌ಫಾಲ್ ಓದಿ ಮುಗಿಸಿದ್ದೇನೆ.” ಎಂದರು,

ತನ್ನ ಸುಂದರರಾದ ಹತ್ತು ಗಂಡು ಮಕ್ಕಳನ್ನು ಕರೆದುಕೊಂಡು ಒಮ್ಮೆ ಇಬ್ನ್ ಅತಾರವರು ಪ್ರಯಾಣದಲ್ಲಿದ್ದರು. ದಾರಿಯಲ್ಲಿ ದರೋಡೆಕೋರರು ಸುತ್ತುವರಿದರು. ಇವರಲ್ಲಿ ಒಂದು ಚಿಕ್ಕಾಸೂ ಇರಲಿಲ್ಲ. ಸುಮ್ಮನೆ ಬಿಟ್ಟು ಬಿಡುವ ಬದಲಿಗೆ, ವಿನಾಕಾರಣ ಒಬ್ಬೊಬ್ಬರದ್ದೇ ತಲೆಯನ್ನು ದರೋಡೆಕೋರರು ಕಡಿಯ ತೊಡಗಿದರು, ಇಬ್ನ್ ಅತಾರವರು ಸುಮ್ಮನಿದ್ದರು. ತನ್ನ ಮಕ್ಕಳ ತಲೆಯನ್ನು ದರೋಡೆಕೋರರು ಕಡಿಯುತ್ತಿರುವಾಗ ಇಬ್ನ್ ಅತಾರವರು ತಿರುಗಿ ನಿಂತು ದೇವರನ್ನು ನೆನೆಯುತ್ತಲೇ ಗಹಗಹಿಸಿ ನಗ ತೊಡಗಿದರು. ಒಂಭತ್ತು ಮಕ್ಕಳ ತಲೆಯನ್ನು ಕಡಿದಿದ್ದರು. ಹತ್ತನೆಯವನನ್ನು ಹಿಡಿದು ಕೊಲ್ಲಲೆಂದು ನಿಂತಿದ್ದರು.

ಅವರ ಹತ್ತನೆಯ ಮಗ ತಂದೆ ನಗುತ್ತಿರುವುದು ಕಂಡು, “ನೀನು ಎಂತಹ ಕಟುಕ ತಂದೆ! ನಿನ್ನ ಒಂಭತ್ತು ಮಕ್ಕಳನ್ನು ಹಿಡಿದು ಈ ಕ್ರೂರಿಗಳು ಕೊಲ್ಲುತ್ತಿರುವಾಗ ಏನೂ ಮಾತಾಡದೆ ನೀನು ನಗುತ್ತಿದ್ದಿಯಲ್ಲಾ?” ಎಂದ.

“ನಗುತ್ತಿರುವುದು ನಿನ್ನ ತಂದೆಯ ಆತ್ಮ. ಅವನು ನೋಡು, ಎಲ್ಲವನ್ನೂ ಮಾಡಿಸುವವನು, ಅವನನ್ನು ವಿರೋಧಿಸಿ ಯಾರೂ ಏನನ್ನೂ ಹೇಳಲಾರರು. ಎಲ್ಲವನ್ನೂ ಅವನು ನೋಡುತ್ತಿದ್ದಾನೆ, ಎಲ್ಲ ಗೊತ್ತಿದೆ ಅವನಿಗೆ, ಅವನಿಗೆ ಅಪಾರವಾದ ಶಕ್ತಿ ಇದೆ, ಅವನು ಮನಸ್ಸು ಮಾಡಿದರೆ ಎಲ್ಲರನ್ನೂ ಬದುಕಿಸಬಲ್ಲ.” ಎಂದರು ಇಬ್ನ್ ಅತಾ.

ಹತ್ತನೆಯ ಮಗನನ್ನು ಕೊಲ್ಲಲು ಹಿಡಿದ ಕೊಲೆಗಡುಕ ಈ ಮಾತುಗಳನ್ನು ಕೇಳಿ ಉದ್ವೇಗಗೊಂಡ. “ಅಯ್ಯೋ ಮುದುಕಾ, ನೀನು ಇದನ್ನು ಮೊದಲು ಹೇಳಿದ್ದರೆ! ನಿನ್ನ ಯಾವ ಮಗನೂ ಕೊಲೆಯಾಗುತ್ತಿಲ್ಲವಲ್ಲೋ….!” ಎಂದು ಪರಿತಪಿಸಿದ.

*****

ಒಮ್ಮೆ ಕ್ರೈಸ್ತ ಧರ್ಮಶಾಸ್ತ್ರ ಪಂಡಿತರು ಇಬ್ನ್ ಅತಾರವರ ಬಳಿಗೆ ಬಂದರು. “ಅದು ಹೇಗೆ ನೀವು ಸೂಫಿಗಳು, ಸರಳವಾದ ಜನರ ಆಡು ಮಾತನ್ನು ಬಿಟ್ಟು, ವಿಚಿತ್ರವಾದ ಶಬ್ಧಗಳನ್ನು ಕಂಡು ಹಿಡಿದು, ಮಾತಿನಲ್ಲಿ ಪ್ರಯೋಗಿಸಿ ಕೇಳುವವರಿಗೆ ಕಸಿವಿಸಿಯಾಗುವಂತೆ ಮಾಡುತ್ತಿದ್ದೀರಿ? ಇದರಿಂದ ಎರಡು ಸಾಧ್ಯತೆಗಳನ್ನು ನೀವು ಪ್ರಯತ್ನಿಸುತ್ತಿದ್ದೀರಿ ಎಂದಾಗುತ್ತದೆ. ಒಂದನೇಯದ್ದು ನೀವು ಏನನ್ನೋ ಮರೆಮಾಚುತ್ತಿರುತ್ತೀರಿ. ಮರೆಮಾಚುವಿಕೆಯು ಸತ್ಯಕ್ಕೆ ತದ್ವಿರುದ್ಧವಾದದ್ದು. ಅಂದರೆ ನಿಮ್ಮ ಬೋಧನೆಗಳೆಲ್ಲವೂ ಸುಳ್ಳು ಎಂಬುದು ಸ್ಪಷ್ಟವಾಯಿತು. ಅಥವಾ ಇನ್ನೊಂದು ನಿಮ್ಮ ಬೋಧನೆಯಲ್ಲಿ ಅದ್ಯಾವುದೋ ನ್ಯೂನತೆ ಇದೆ, ಅದನ್ನು ನೀವು ಸಾರ್ವಜನಿಕವಾಗಿ ಮಾತಾಡುವಾಗ ಬಹಿರಂಗ ಗೊಳಿಸದೆ ರಹಸ್ಯವಾಗಿಟ್ಟುಕೊಳ್ಳುತ್ತಿದ್ದೀರಿ.” ಎಂದು ನೇರವಾಗಿಯೇ ಟೀಕಿಸಿ ಕೇಳಿದರು.

“ನಾವು ಹೀಗೆ ಮಾಡುತ್ತಿರುವುದು ಯಾಕೆಂದರೆ ಆ ರಹಸ್ಯ ನಮಗೆ ಅಮೂಲ್ಯವಾದದ್ದು. ನಾವು ಏನನ್ನು ಬದುಕಿನಲ್ಲಿ ಅಳವಡಿಸಿಕೊಂಡು ಪ್ರತಿಪಾದಿಸುತ್ತೇವೋ ಆ ಮೌಲ್ಯಗಳು ನಮಗೆ ಅತ್ಯಂತ ಅಮೂಲ್ಯವಾದದ್ದು. ಈ ರಹಸ್ಯವು ನಾವು ಸೂಫಿಗಳಿಗಲ್ಲದೆ ಇತರರು ಯಾರಿಗೂ ತಿಳಿಯಲಾರದು. ನಾವು ಸರಳವಾದ ಮಾತುಗಳನ್ನು ಬಳಸುವುದಿಲ್ಲ, ಜನರು ಕೇಳಿದಂತೆ ಯೋಚಿಸಲು ಹಚ್ಚುತ್ತೇವೆ. ಹಾಗಾಗಿ ನಾವು ಹೊಸ ಶಬ್ಧಗಳನ್ನು ಬಳಸುತ್ತೇವೆ.” ಎಂದು ಉತ್ತರಿಸಿದರು ಇಬ್ನ್ ಅತಾ.

*******

ಇಬ್ನ್ ಅತಾರವರು ಪಾಷಂಡಿ ಅಥವಾ ಸಂಪ್ರದಾಯ ವಿರೋಧಿ ಎಂದು ಒಮ್ಮೆ ಬಹಿರಂಗವಾಗಿ ಆರೋಪಿಸಲಾಯಿತು. ಅಲ್ಲಿನ ಖಲೀಫಾರವರ ವಜೀರ್ (ಪ್ರಧಾನ ಮಂತ್ರಿ) ಅಲಿ ಇಬ್ನ್ ಈಸಾ, ಇಬ್ನ್ ಅತಾರವರನ್ನು ಮೂದಲಿಸಿ, ತನ್ನ ಮುಂದೆ ಹಾಜರಾಗುವಂತೆ ಆಜ್ಞಾಪಿಸಿದ. ಅದಕ್ಕೆ ಇಬ್ನ್ ಅತಾರವರು ಅತ್ಯಂತ ಖಾರವಾಗಿಯೇ ಪ್ರತಿಕ್ರಿಯಿಸಿದರು. ಇದು ವಜೀರನನ್ನು ಇನ್ನಷ್ಟು ಕ್ರೋಧಕ್ಕೊಳಗಾಗುವಂತೆ ಮಾಡಿತು. ಅವನು ತನ್ನ ಆಳುಗಳನ್ನು ಕರೆದು ಇಬ್ನ್ ಅತಾರವರ ಕಾಲಿನ ಮೆಟ್ಟುಗಳನ್ನು ಕಳಚಿ ಅವರ ತಲೆಯ ಮೇಲೆ ಸಾಯುವಂತೆ ಹೊಡೆಯಲು ಆಜ್ಞಾಪಿಸಿದ. ಈ ಕ್ರೂರ ಶಿಕ್ಷೆಯನ್ನು ಅನುಭವಿಸುವಾಗ ಮಧ್ಯದಲ್ಲಿ ಇಬ್ನ್ ಅತಾರವರು ‘ದೇವರು ಇವನ ಕೈ ಕಾಲುಗಳನ್ನು ತುಂಡರಿಸಿ ಹಾಕಲಿ!’ ಎಂದು ಮನದಲ್ಲಿ ಹಾರೈಸಿದರು.

ಸ್ವಲ್ಪವೇ ಸಮಯದಲ್ಲಿ ಯಾವುದೋ ಗಹನವಾದ ವಿಷಯಕ್ಕೆ ಸಂಬಂಧಿಸಿದಂತೆ ಖಲೀಫರು ತನ್ನ ವಜೀರ ಅಲಿ ಇಬ್ನ್ ಈಸಾ ರವರ ಮೇಲೆ ಕೋಪಗೊಂಡು ಅವನ ಕೈ ಕಾಲುಗಳನ್ನು ಕಡಿದು ಹಾಕಿದರು.

ಯಾವ ಸಂಕಷ್ಟ ಬಂದರೂ ಕೂಡ ಬದ್ದುವಾ ಅಥವಾ ಶಾಪವನ್ನು ಹಾಕುವುದು ಶೂಫಿ ಸಂತರ ಒಳ್ಳೆಯ ನಡವಳಿಕೆಯೆಂದು ಪರಿಗಣಿಸಲ್ಪಟ್ಟಿಲ್ಲವಾದ್ದರಿಂದ ಮತ್ತು ತನ್ನ ಬದುಕಿನುದ್ದಕ್ಕೂ ಯಾವುದೇ ಸಂದರ್ಭದಲ್ಲಿ ತಾಳ್ಮೆಯನ್ನು ಕಳಕೊಳ್ಳದ, ಸೂಫಿ ಸಂತರಲ್ಲಿ ಶ್ರೇಷ್ಠ ಪಂಡಿತರೆಂದು ಪರಿಗಣಿಸಲ್ಪಟ್ಟ ಈಬ್ನ್ ಅತಾರವರ ಅನಿರೀಕ್ಷಿತ ನಡವಳಿಕೆಯು ಸೂಫಿ ವಲಯದಲ್ಲಿ ದೊಡ್ಡ ಗೊಂದಲವನ್ನುಂಟುಮಾಡಿತು. ಈ ಘಟನೆಯ ಬಗ್ಗೆ ಸೂಫಿಗಳ ಗುಂಪಿನಲ್ಲಿ ಬಹಳಷ್ಟು ಖಾರವಾಗಿಯೇ ಚರ್ಚೆಗಳು ನಡೆದವು. ಇಬ್ನ್ ಅತಾರವರು ಇಂತಹ ಬದ್ದುವಾ ಮಾಡಬಾರದಾಗಿತ್ತೆಂದು ಕೆಲವರು ಅಭಿಪ್ರಾಯ ಪಟ್ಟರು. “ತಮ್ಮ ಪ್ರಾರ್ಥನೆಯ ಮೂಲಕ ಅವನನ್ನು ಸರಿದಾರಿಗೆ ತರಿಸಲು ಶಕ್ತರಾದವರು ಇಂತಹ ಶಾಪವನ್ನು ಹಾಕ ಬಾರದಾಗಿತ್ತು, ನೀವು ಅವನನ್ನು ಆಶೀರ್ವದಿಸ ಬೇಕಾಗಿತ್ತು.” ಎಂದು ಕೆಲವರು ಇಬ್ನ್ ಅತಾರವರಿಗೆ ಖಾರವಾಗಿ ಪ್ರತಿಕ್ರಿಯಿಸಿದರು. ಇನ್ನು ಕೆಲವರು, “ಅವನು ನೀಚನಾಗಿದ್ದ, ಮತ್ತು ಪ್ರಜೆಗಳನ್ನು ರಕ್ಷಿಸುವ ಬದಲು ಶಿಕ್ಷಿಸುತ್ತಿದ್ದ. ಯಾವತ್ತೂ ಪ್ರಶಾಂತರಾಗಿಯೇ ಇರುತ್ತಿದ್ದ ಇಬ್ನ್ ಅತಾರಂತವರು ಇಷ್ಟು ಕಠೋರವಾಗಲು ಅವನು ತೋರಿದ ಕ್ರೌರ್ಯವೇ ಕಾರಣ” ಎಂದು ಅಭಿಪ್ರಾಯಪಟ್ಟರು.

ಇನ್ನು ಕೆಲವು ಸೂಫಿ ಪಂಡಿತರು ಅಭಿಪ್ರಾಯ ಪಡುವಂತೆ, ಇಬ್ನ್ ಅತಾರವರು ಗಂಭೀರವಾದ ಅಂತರ್ ದೃಷ್ಟಿಯುಳ್ಳ ಸಂತ. ಇಂತಹ ಕ್ರೂರಿಯಾದ ವಜೀರನಿಗೆ ಭವಿಷ್ಯದಲ್ಲಿ ಏನಾಗಲಿದೆಯೆನ್ನುವುದು ಅವರಿಗೆ ತಿಳಿದೇ ಇತ್ತು. ದೇವರು ಅವನಿಗೆ ಯಾವ ಶಿಕ್ಷೆಯನ್ನು ಕೊಡಲು ಬಯಸಿದ್ದನೋ ಅದನ್ನು ಇಬ್ನ್ ಅತಾರವರ ಮೂಲಕ ನೀಡಿದ. ದೇವರ ಈ ಅಪೇಕ್ಷೆಯೇ ಅವರ ನಾಲಗೆಯ ಮೂಲಕ ಮೂಡಿ ಬಂದಿರಬೇಕು. ಆದುದರಿಂದ ಇಬ್ನ್ ಅತಾರವರು ಇದಕ್ಕೆ ಕಾರಣರಲ್ಲ.

ಇನ್ನೊಂದು ಅಭಿಪ್ರಾಯದಂತೆ “ಇಬ್ನ್ ಅತಾರವರು ವಜೀರನನ್ನು ಶಪಿಸಿದ್ದಲ್ಲ, ಆಶೀರ್ವದಿಸಿದ್ದು. ಅವರು ದೇವರಲ್ಲಿ ಕೇಳಿದ್ದು ತನ್ನ ಶ್ರೀಮಂತಿಕೆ, ಅಧಿಕಾರವನ್ನು ಕಳೆದುಕೊಂಡು ವಜೀರ ನನ್ನಂತೆಯೇ ಹೀನವಾದ ಅವಮಾನವನ್ನು ಈ ಲೋಕದಲ್ಲಿ ಅನುಭವಿಸಬೇಕು ಎನ್ನುವುದನ್ನು. ಈ ಮೂಲಕ ವಜೀರ್ ಅಲಿ ಇಬ್ನ್ ಈಸಾನಿಗೆ ಇಬ್ನ್ ಅತಾರವರು ಒಳಿತನ್ನೇ ಬಯಸಿದ್ದಾರೆ. ಪರಲೋಕದ ಕಠಿಣ ಶಿಕ್ಷೆಯ ಮುಂದೆ ಈ ಲೋಕದಲ್ಲಿ ಎಂತಹ ಶಿಕ್ಷೆಯಾದರೂ ತುಂಬ ಕಮ್ಮಿ ನೋವಿನದ್ದೇ ಸರಿ! “

-ಫಕೀರ್ ಅಹ್ಮದ್ ಕಟ್ಪಾಡಿ ಯವರ ಬರಹದಿಂದ ಸಂಗ್ರಹ

Friday, May 18, 2018

ಸಂತ ಹಬೀಬ್ ಅಲ್ ಅಜಾಮಿ(ರ.ಅ)

ಪರ್ಷಿಯಾದಲ್ಲಿ ಹುಟ್ಟಿ ಬಸ್ರಾ ನಗರದಲ್ಲಿ ನೆಲಸಿದ ಹಬೀಬ್ ಇಬ್ನ್ ಮುಹಮ್ಮದ್ ಅಲ್ ಅಜಾಮಿ ಅಲ್ ಬಸ್ರಿ ಹೆಸರಾಂತ ಸಂಪ್ರದಾಯವಾದಿಯಾಗಿದ್ದು ಮತ್ತೆ ಸೂಫಿಯಾಗಿ ಪರಿವರ್ತನೆಯಾದದ್ದು ಸಂತ ಅಲ್ ಹಸನ್ ಅಲ್ ಬಸ್ರಿಯವರು ಮತ್ತು ಇಬ್ನ್ ಸಿರಿನ್ ರವರ ಬೋಧನೆಯಿಂದ. ಅವರು ತಮ್ಮ ಸುಖದ ಸುಪ್ಪತ್ತಿನ ಬದುಕಿನಿಂದ ಪರಿವರ್ತನೆಯಾದ ನಂತರ ಒಳ್ಳೆಯ ವಾಗ್ಮಿಯೆಂದು ಹೆಸರು ಗಳಿಸಿದರು, ಇದಕ್ಕೆ ಕಾರಣ ಅವರು ಅಲ್ ಹಾಅನ್ ಎಂಬ ಪ್ರಖ್ಯಾತ ವಾಗ್ಮಿಯ ಉಪನ್ಯಾಸ ಎಲ್ಲಿದ್ದರೂ ಕೂಡ ಬಿಡದೆ ಕೇಳಲು ಹೋಗುತ್ತಿದ್ದರು. ಹೀಗೆ ಅವರ ನಿಕಟ ಅನುಯಾಯಿಯೂ ಆಗಿಬಿಟ್ಟರು. ಹಬೀಬ್‌ರವರಿಗೆ ಅರೆಬಿಕ್ ಭಾಷೆ ಬಾರದೆ ಕುರಾನ್ ಓದಲು ತೊಡಕಾಗುತ್ತಿತ್ತಂತೆ ಅದಕ್ಕೆ ‘ಅಲ್ ಆಜಾಮಿ’ ಅಂತ ಅಡ್ಡ ಹೆಸರಿಟ್ಟು ಇವರನ್ನು ಕರೆದರು; ಈ ಶಬ್ಧದ ಅರ್ಥ ಅನಾಗರಿಕ, ಅರಬಿಕ್ ಭಾಷೆ ಬಾರದವನು ಎಂದಿದೆ.

ಹಬೀಬ್ ಊರಲ್ಲೊಬ್ಬ ದೊಡ್ಡ ಆಸ್ತಿವಂತರಾಗಿ ಮತ್ತು ಬಡ್ಡಿಗೆ ಸಾಲಕೊಡುವ ಮಾರ್ವಾಡಿಯಾಗಿ ಅತ್ಯಂತ ಶ್ರೀಮಂತರಾಗಿದ್ದರು. ದಿನವೂ ಬಸ್ರಾ ನಗರ ಸುತ್ತಾಡಿ ತಮ್ಮಿಂದ ಸಾಲ ಪಡೆದವರಿಂದ ಬಡ್ಡಿ ವಸೂಲಿ ಮಾಡುತ್ತಿದ್ದರು. ಸಾಲ ಪಡೆದವರು ಹಣವಿಲ್ಲವೆಂದರೆ ತನ್ನ ಚಪ್ಪಲಿಗೆ ಚರ್ಮ ಕೊಡಿಸು ಎಂದು ಏನಾದರೂ ಕೇಳುತ್ತಾ ತನ್ನ ದಿನದ ಖರ್ಚನ್ನು ಸಾಲಗಾರರಿಂದ ಹೇಗಾದರೂ ಹೆಚ್ಚುವರಿಯಾಗಿ, ಬಿಟ್ಟಿಯಾಗಿ ಪಡೆದು, ಹೊಂದಿಸಿಕೊಂಡು ತನ್ನಲ್ಲಿರುವ ಶ್ರೀಮಂತಿಕೆ ದಿನವೂ ವೃದ್ಧಿಯಾಗಬೇಕೇ ಹೊರತು ಸ್ವಲ್ಪವೂ ಕರಗದಂತೆ ನೋಡಿಕೊಳ್ಳುತ್ತಿದ್ದರು.

ಒಂದು ದಿನ ಒಬ್ಬ ಸಾಲಗಾರನನ್ನು ಹುಡುಕುತ್ತಾ ಹೋಗಿದ್ದರು. ಅವನು ಮನೆಯಲ್ಲಿರಲಿಲ್ಲ, ಅವನು ಕಾಣದಿರುವುದರಿಂದ ಮನೆಯಲ್ಲಿದ್ದ ಅವನ ಹೆಂಡತಿಯ ಬಳಿ ಎಂದಿನಂತೆ ಚಪ್ಪಲಿಗೆ ಚರ್ಮ ಕೊಡಿಸಬೇಕೆಂದು ಹೇಳಿದರು.

“ನನ್ನ ಗಂಡ ಮನೆಯಲ್ಲಿಲ್ಲ, ನನ್ನಲ್ಲಿ ನಿಮಗೆ ಕೊಡಲು ಏನೂ ಇಲ್ಲ. ನಾವು ಒಂದು ಕುರಿಯನ್ನು ಜುಬಾಂ ಮಾಡಿದ್ದೇವೆ, ಅದರ ತಲೆ ಉಳಿದಿದೆ. ಅದನ್ನು ಬೇಕಿದ್ದರೆ ಕೊಡುತ್ತೇನೆ” ಎಂದಳು ಆ ಸಾಲಗಾರನ ಹೆಂಡತಿ. ಇದಾದರೂ ಸಿಕ್ಕಿದ್ದನ್ನು ಮನೆಗೆ ಕೊಂಡು ಹೋಗುವ ಎಂದು ಹಬೀಬ್ ಲೆಕ್ಕ ಹಾಕಿಕೊಂಡರು.

“ಸರಿ, ಅದನ್ನೇ ಕೊಡು ಮತ್ತೆ. ಈಗ ಒಲೆಯಲ್ಲಿ ಮಡಿಕೆಯಿಟ್ಟು ಬೆಂಕಿ ಮಾಡು ನೋಡುವಾ..” ಎಂದರು.
“ಮನೆಯಲ್ಲಿ ಬ್ರೆಡ್ಡಾಗಲೀ, ಉರುವಲಾಗಲೀ ಏನೂ ಇಲ್ಲ.” ಎಂದಳು ಸಾಲಗಾರನ ಹೆಂಡತಿ.
“ಸರಿ, ನಾನು ಬ್ರೆಡ್ಡು ಮತ್ತು ಉರುವಲು ತರುತ್ತೇನೆ, ಇದರ ಬೆಲೆಯನ್ನು ಚಪ್ಪಲಿ ಚರ್ಮದ ಖರ್ಚಿಗೆ ಹಾಕುತ್ತೇನೆ.” ಎಂದರು.

ಹಬೀಬ್‌ರವರು ಹೇಳಿದ ಸಾಮಾನುಗಳನ್ನೆಲ್ಲ ತಂದರು. ಹೆಂಗಸು ಅಡುಗೆ ಮಾಡತೊಡಗಿದಳು. ಮಾಂಸ ಬೆಂದ ನಂತರ ಇನ್ನೇನು ಪಾತ್ರೆಗೆ ಬಡಿಸಲು ತಯಾರು ಮಾಡುತ್ತಿರುವಾಗ ಒಬ್ಬ ಭಿಕ್ಷುಕ ಬಂದು ಬಾಗಿಲು ಬಡಿದ.

ಇದನ್ನು ಕಂಡ ಹಬೀಬ್, “ನೀನು ಕೇಳಿದ್ದನ್ನು ನಾವು ನಿನಗೆ ಕೊಟ್ಟರೆ ನೀನೇನೂ ಶ್ರೀಮಂತನಾಗುವುದಿಲ್ಲ. ಕೊಟ್ಟ ನಾವು ಮಾತ್ರ ಬಡವರಾಗುತ್ತೇವೆ.” ಎಂದು ಅವನನ್ನು ದೂರ ಹೋಗಲು ಹೇಳಿದರು.

ಹೆಂಗಸಿನೊಂದಿಗೆ ಮತ್ತೆ ಭಿಕ್ಷುಕ ಅಂಗಲಾಚಿ, ತನ್ನ ಕರಟೆಗೆ ಏನಾದರೂ ತಿಂಡಿ ಹಾಕೆಂದು ಬೇಡಿಕೊಂಡ. ಹೆಂಗಸು ಮಡಿಕೆಯ ಬಾಯಿ ತೆರೆದು ನೋಡುವಾಗ ಬೇಯಿಸಿದ ಅಡುಗೆಯೆಲ್ಲ ಸುಟ್ಟು ಕರ್ರಗಾಗಿತ್ತು. ಅವಳು ಇದನ್ನು ನೋಡಿ ದಂಗಾಗಿ ಹಬೀಬರನ್ನು ಕರೆದು ತೋರಿಸಿದಳು.

“ನೋಡು, ನೀನು ಆ ಭಿಕ್ಷುಕನಿಗೆ ಬಯ್ದು, ಓಡಿಸಿದಿಯಲ್ಲಾ ಅದರಿಂದ ಹೀಗಾಯ್ತು. ಇದರಿಂದಾಗಿ ನಮಗಿನ್ನು ಈ ಬದುಕಿನಲ್ಲಿ ಏನೆಲ್ಲಾ ಆಗಲಿದೆಯೋ, ಏನೋ!” ಎಂದು ಅವಳು ಅತ್ತಳು.

ಇದನ್ನು ನೋಡಿದಾಗ ಹಬೀಬರ ಹೊಟ್ಟೆಯಲ್ಲಿ ಒಂಥರಾ ಬೆಂಕಿಯ ಉರಿ ಕಾಣಿಸಿಕೊಂಡಿತು. ಅದು ತಣಿಯವ ಸೂಚನೆ ಕಾಣಲಿಲ್ಲ. “ನೋಡು ಹೆಂಗಸೇ, ನಾನು ಮಾಡಿದ್ದೆಲ್ಲ ತಪ್ಪಾಯಿತು. ನಾನು ಅದಕ್ಕಾಗಿ ಪಶ್ಚಾತ್ತಾಪ ಪಡುತ್ತಿದ್ದೇನೆ.” ಎಂದು ಅಲ್ಲಿಂದ ಹೊರಟರು.

ಮರುದಿನ ಎಂದಿನಂತೆ ಅವರು ಸಾಲ ವಸೂಲಾತಿಗೆ ಹೊರಟಿದ್ದರು. ಆ ದಿನ ಶುಕ್ರವಾರ, ಮಕ್ಕಳೆಲ್ಲ ಆಟವಾಡುತ್ತಿದ್ದರು. ಹಬೀಬರನ್ನು ಕಂಡ ಕೂಡಲೇ ಮಕ್ಕಳೆಲ್ಲರೂ ಜೋರಾಗಿ ಕೂಗ ತೊಡಗಿದರು. “ಏ…ನೋಡ್ರೋ… ಹಬೀಬ್ ಬರುತ್ತಿದ್ದಾನೆ, ಓಡಿ…ಓಡಿ…ಅವನ ಗಾಳಿ ನಮಗೆ ಸೋಕಿದರೂ ಸಾಕು, ನಾವೆಲ್ಲ ಅವನ ಹಾಗೆಯೇ ಶಾಪಗ್ರಸ್ಥರಾಗುತ್ತೇವೆ.”

ಮಕ್ಕಳ ಈ ಮಾತುಗಳು ಹಬೀಬ್‌ರವರಿಗೆ ಬಹಳವಾಗಿ ನಾಟಿತು. ಅವರು ತನ್ನ ದಾರಿ ಬದಲಿಸಿ ಶುಕ್ರವಾರ ಮಸೀದಿಯ ಸಭೆಗೆ ನಡೆಯ ತೊಡಗಿದರು. ಅಲ್ಲಿ ಹಸನ್ ಅಲ್ ಬಸ್ರೀಯವರ ಪ್ರವಚನದ ಕೆಲವು ವಾಕ್ಯಗಳು ಅವರ ಹೃದಯಕ್ಕೆ ನೇರವಾಗಿ ತಾಗಿ ಅವರಿಗೆ ಸ್ಮೃತಿ ತಪ್ಪಿದಂತಾಯಿತು. ಹಬೀಬ್‌ರವರು ಬಹಳ ಪಶ್ಚಾತ್ತಾಪ ಪಟ್ಟರು. ಇದು ಸಂತ ಹಸನ್ ಅಲ್ ಬಸ್ರಿಯವರಿಗೆ ಗೊತ್ತಾಗಿ, ಹಬೀಬ್‌ರವರ ಬಳಿ ಬಂದು ಕೈಹಿಡಿದು ಅವರನ್ನು ಸಮಾಧಾನ ಪಡಿಸಿದರು.

ಮಸೀದಿಯಿಂದ ಹಿಂತಿರುಗುವಾಗ ದಾರಿಯಲ್ಲಿ ಒಬ್ಬ ಅವರಿಂದ ಸಾಲ ಪಡೆದ ವ್ಯಕ್ತಿ ಹಬೀಬ್‌ರವರನ್ನು ಕಂಡು, ಹಾದಿ ಬಿಟ್ಟು ಬೇರೆಕಡೆ ತಿರುಗಿ ಓಡ ತೊಡಗಿದ. ಹಬೀಬ್‌ರವರು ಅವನನ್ನು ಕೂಗಿ ಕರೆದರು, “ಓಡಬೇಡಪ್ಪಾ, ನಿಲ್ಲು. ಇಷ್ಟರವರೆಗೆ ನೀವೆಲ್ಲ ನನ್ನನ್ನು ಕಂಡು ಓಡುತ್ತಿದ್ದೀರಲ್ಲಾ, ಇನ್ನು ನಾನು ನಿಮ್ಮನ್ನು ಕಂಡು ಓಡಲು ಶುರು ಮಾಡ ಬೇಕಾಗಿದೆ” ಎಂದು ಹೇಳಿದರು.

ಅದೇ ಹಾದಿಯಲ್ಲಿ ಮುಂದೆ ನಡೆಯುತ್ತಿದ್ದರು. ಮಕ್ಕಳ ಗುಂಪು ಅದೇ ಸ್ಥಳದಲ್ಲಿ ಆಟವಾಡುತ್ತಿತ್ತು. ಹಬೀಬರನ್ನು ಕಂಡ ಕೂಡಲೇ ಮಕ್ಕಳು ಮತ್ತೆ ಬೊಬ್ಬೆ ಹಾಕಿದರು: “ನೋಡ್ರೋ ಅಲ್ಲಿ ಪ್ರಶಾಂತವಾಗಿರುವ ಹಬೀಬ್ ಬರುತ್ತಿದ್ದಾರೆ. ಓಡ್ರೋ… ನಮ್ಮ ಮೈಮೇಲಿನ ಧೂಳು ಅವರ ಮೈ ಮೇಲೆ ನಿಲ್ಲಕೂಡದು, ನಾವೆಲ್ಲರೂ ತಪ್ಪು ಮಾಡಿರುವ ಪಾಪಿಗಳು”

“ಓ ದೇವರೇ… ನಾನು ನಿನಗೆ ಶರಣಾಗತನಾದ ಈ ಒಂದು ದಿನದಿಂದಾಗಿ, ಮನುಷ್ಯರ ಹೃದಯದಲ್ಲಿ ನನಗಾಗಿ ಶಾಂತಿಯ ನಗಾರಿಯನ್ನು ಬಾರಿಸಿದೆಯಾ, ಒಂದು ದಿನದ ಸಚ್ಚಾರಿತ್ರ್ಯಕ್ಕಾಗಿ ನನ್ನ ಹೆಸರನ್ನು ಎಲ್ಲೆಡೆ ಹರಡಿದೆಯಾ!” ಎಂದು ಹಬೀಬ್ ಕೂಗಿದರು.

ನಂತರ ಒಂದು ಸಂದೇಶವನ್ನು ಹಬೀಬ್ ಸಾರ್ವಜನಿಕರೆದುರು ಬಹಿರಂಗ ಪಡಿಸಿದರು. “ಹಬೀಬ್‌ನಿಂದ ಯಾರಿಗೆ ಏನು ಬೇಕಾದರೂ ಬಂದು ತೆಗೆದುಕೊಳ್ಳಬಹುದು”

ಜನರು ಅವರ ಸುತ್ತ ಬಂದು ಸೇರಿದರು. ಅವರ ತನ್ನದೆಂಬುದನ್ನೆಲ್ಲವನ್ನೂ ಜನರಿಗೆ ದಾನವಾಗಿ ನೀಡಿದರು. ಎಲ್ಲವನ್ನೂ ದಾನಮಾಡಿದ ಶ್ರೀಮಂತ ಹಬೀಬ್ ಈಗ ಚಿಕ್ಕಾಸು ಕೂಡ ಇಲ್ಲದ ದರಿದ್ರರಾದರು. ಯಾರೋ ಒಬ್ಬರು ಬಂದು ದಾನ ನೀಡುವಂತೆ ಕೇಳಿದಾಗ, ತನ್ನಲ್ಲೇನೂ ಇಲ್ಲವೆಂದು ತನ್ನ ಹೆಂಡತಿಯ ಚಾದರವನ್ನು ತೆಗೆದು ಕೊಟ್ಟರು. ಇನ್ನೊಬ್ಬ ಬಂದು ಕೇಳಿದಾಗ ತನ್ನಲ್ಲೇನೂ ಉಳಿದಿಲ್ಲದ ತಾನು ತೊಟ್ಟ ಅಂಗಿಯನ್ನೇ ತೆಗೆದು ಕೊಟ್ಟು ಬರಿಮೈಯಲ್ಲಿ ಉಳಿದರು. ನಂತರ ಯೂಪ್ರೆಟಿಸ್ ನದಿಯ ತೀರದಲ್ಲಿದ್ದ ಒಂದು ಚಿಕ್ಕ ಶಿಥಿಲಗೊಂಡ ಗುಡಿಸಲನ್ನು ದುರಸ್ತಿ ಮಾಡಿ ತನ್ನ ಕುಟುಂಬದೊಂದಿಗೆ ವಾಸ ಮಾಡ ತೊಡಗಿದರು. ಅಲ್ಲೇ ಕೂತು ಸೃಷ್ಟಿಕರ್ತನ ಪ್ರಾರ್ಥನೆಯಲ್ಲಿ ಮಗ್ನರಾದರು. ಸಂತ ಹಸನ್‌ರವರ ಶಿಷ್ಯನಾಗಿ ಹಗಲಿರುಳೂ ಅವರ ಪ್ರಹಸನವನ್ನು ಕೇಳುತ್ತಾ ಇದ್ದರು. ಆದರೆ ಕುರಾನನ್ನು ಓದಲು ಕಲಿಯಲು ಎಷ್ಟು ಪ್ರಯತ್ನಪಟ್ಟರೂ ಅವರಿಗೆ ಸಾಧ್ಯವಾಗಲಿಲ್ಲ. ಇದರಿಂದಾಗಿ ಜನ ಅವರಿಗೆ ‘ಅಲ್ ಆಜಾಮಿ’ ಎಂದು ಕರೆಯತೊಡಗಿದರು.

ಹಲವು ವರ್ಷಗಳು ಸಂದವು, ಹಬೀಬ್‌ರವರು ದಟ್ಟದರಿದ್ರರಾಗಿಯೇ ಉಳಿದರು. ಮನೆವಾರ್ತೆಯ ವೆಚ್ಚಕ್ಕಾಗಿ ಅವರ ಪತ್ನಿ ಹಣ ಕೇಳುತ್ತಲೇ ಇದ್ದರು. ಇದರಿಂದಾಗಿ ಹಬೀಬ್‌ರವರು ಮುಂಜಾನೆ ತನ್ನ ಗುಡಿಸಲಿನಿಂದ ಹೊರಟು ದೂರದಲ್ಲಿ ಒಂದು ಪಾಳುಬಿದ್ದ ಮುರುಕು ಗುಡಿಸಲಲ್ಲಿ ಹಗಲು ಹೊತ್ತು ಇಡೀ ದಿನ ಏಕಾಂತದಲ್ಲಿ ಪ್ರಾರ್ಥನೆಯನ್ನು ಮಾಡುತ್ತಿದ್ದರು. ರಾತ್ರಿ ತನ್ನ ಗುಡಿಸಲಿಗೆ ಹಿಂತಿರುಗಿ ಬರುತ್ತಿದ್ದರು.

“ನೀವು ಎಲ್ಲಿ ಕೆಲಸ ಮಾಡುತ್ತಿದ್ದೀರಿ, ಮನೆಗೆ ಏನೂ ತಾರದೆ ಬರಿಗೈಯಲ್ಲೇ ಬರುತ್ತಿದ್ದೀರಲ್ಲಾ?” ಎಂದು ಪತ್ನಿ ಕೇಳಿದರು.
“ನಾನು ಯಾರ ಕೈಕೆಳಗೆ ಕೆಲಸ ಮಾಡುತ್ತಿರುವೆನೋ ಆ ಯಜಮಾನ ತುಂಬ ಧಾರಾಳವಾದ ಹೃದಯವಂತ. ಅವನು ಎಷ್ಟೊಂದು ಧಾರಾಳಿಯೆಂದರೆ ಅವನೊಂದಿಗೆ ನನಗಾಗಿ ಏನಾದರೂ ಬೇಡಿಕೊಳ್ಳಲು ಕೂಡ ಮುಜುಗರವಾಗುತ್ತದೆ. ಸರಿಯಾದ ಸಮಯದಲ್ಲಿ ಅವನು ಕೂಲಿಯನ್ನು ಕೊಟ್ಟೇ ಕೊಡುತ್ತಾನೆ. ಹತ್ತು ದಿನಕ್ಕೊಮ್ಮೆ ನಿನ್ನ ಕೂಲಿಯನ್ನು ಕೊಡುತ್ತೇನೆಂದು ಹೇಳುತ್ತಾನೆ.” ಎಂದು ಹಬೀಬ್‌ರವರು ತನ್ನ ಪತ್ನಿಯನ್ನು ಸಮಾಧಾನ ಪಡಿಸಿದರು.

ತನ್ನ ಏಕಾಂತದ ಪ್ರಾರ್ಥನೆಗಾಗಿ ಆರಿಸಿದ ಮುರುಕು ಗುಡಿಸಲಲ್ಲಿ ಸ್ವಲ್ಪ ದುರಸ್ತಿಯ ಕೆಲಸವನ್ನೂ ಹಬೀಬ್‌ರವರು ಮಾಡುತ್ತಿದ್ದರು. ಹೀಗೆ ಹತ್ತು ದಿನಗಳು ಕಳೆಯುವಾಗ ಒಂದು ಮಧ್ಯಾಹ್ನದ ನಮಾಜು ಮಾಡುವಾಗ ಅವರ ತಲೆಯಲ್ಲಿ ಒಂದು ಯೋಚನೆ ಮೂಡಿತು. “ನಾನು ಏನನ್ನು ಮನೆಗೆ ಕೊಂಡುಹೋಗಲಿ, ನಾನು ಪತ್ನಿಗೆ ಏನೆಂದು ಹೇಳಲಿ?”

ಹಬೀಬ್‌ರವರು ಇದನ್ನೇ ಮತ್ತೆ ಮತ್ತೆ ಯೋಚಿಸುತ್ತಾ ಕೂತಿರುವಾಗ ದೇವರು ಅವರ ಮನೆ ಬಾಗಿಲಿಗೆ ಒಬ್ಬ ಕೂಲಿಯ ಮೂಲಕ ಅವನ ಹೇಸರ ಕತ್ತೆ ಹೊರುವಷ್ಟು ಹಿಟ್ಟು, ಇನ್ನೊಂದು ಕತ್ತೆಯ ಬೆನ್ನ ಮೇಲೆ ಧರ್ಮ ಸುಲಿದ ಕುರಿ ಮಾಂಸ, ಮತ್ತೊಂದರ ಮೇಲೆ ಎಣ್ಣೆ, ದಿನಸಿ ಸಾಮಾನುಗಳು, ಜೇನು ತುಪ್ಪ ಇತ್ಯಾದಿಗಳನ್ನು ಕಳುಹಿಸಿಕೊಟ್ಟ. ಮನೆಯ ಮುಂದೆ ಒಬ್ಬ ಸುಂದರ ಯುವಕ ಬಂದು ಐನೂರು ದಿರ್‌ಹಾಮ್ ಬೆಳ್ಳಿನಾಣ್ಯಗಳ ಥೈಲಿಯನ್ನು ಹಿಡಿದುಕೊಂಡು ಹಬೀಬರ ಗುಡಿಸಲಿನ ಬಾಗಿಲನ್ನು ಬಡಿದ.

“ಏನಾಗ ಬೇಕಿತ್ತು?” ಎನ್ನುತ್ತಾ ಹಬೀಬರ ಪತ್ನಿ ಬಾಗಿಲು ತೆರೆದು ಹೊರ ಬಂದಳು.
“ಯಜಮಾನ್ರು ಇದನ್ನೆಲ್ಲ ಕಳುಹಿಸಿ ಕೊಟ್ಟಿದ್ದಾರೆ. ಇದನ್ನೆಲ್ಲ ಒಳಗಿಡಿ. ಹಬೀಬ್ ಅವರಿಗೆ ಹೇಳಿ, ನಿಮ್ಮ ಕೆಲಸವನ್ನು ಇನ್ನಷ್ಟು ಉತ್ತಮಗೊಳಿಸಿದರೆ ಇನ್ನಷ್ಟು ಕೂಲಿ ಸಿಗುತ್ತದೆ ಎಂದು ಯಜಮಾನರು ಹೇಳಿದ್ದಾರೆ ಅಂತ.” ಎಂದು ಸುಂದರ ಯುವಕನೂ ಹೊರಟ. ಕೂಲಿಯವನೂ ಸಾಮಾನುಗಳನ್ನು ಮನೆಯೊಳಗಿಟ್ಟು ತನ್ನ ಕತ್ತೆಗಳೊಂದಿಗೆ ಹೊರಟು ಹೋದ. ಇತ್ತ ರಾತ್ರಿ ಹಬೀಬ್‌ರವರು ತುಂಬ ಯೋಚಿಸುತ್ತಾ, ದುಃಖದಿಂದ ಮನೆ ಕಡೆ ಹೊರಟರು. ಮನೆ ಹತ್ತಿರ ವಾಗುತ್ತಿದ್ದಂತೆ ಮಾಂಸದಡುಗೆ, ರೊಟ್ಟಿ ಕರಿಯುವ ಸುಗಂಧ ಮೂಗಿಗೆ ಬಡಿಯಿತು. ಅವರ ಪತ್ನಿ ಇವರನ್ನು ಕಂಡು ಹೊರಗೆ ಬಂದವಳೇ ಕೈಕಾಲು ತೊಳೆಯಲು ನೀರು ಕೊಟ್ಟಳು, ಒಳಗೆ ಬಂದಾಗ ಮುಖವೊರೆಸಿ, ಎಂದಿಗಿಂತ ಹೆಚ್ಚಿನ ಪ್ರೀತಿತೋರಿದಳು.

” ರೀ…ನಿಮ್ಮ ಯಜಮಾನರು ನಿಜಕ್ಕೂ ತುಂಬ ಉದಾರಿ, ತುಂಬ ಕರುಣಾಳು. ಒಬ್ಬ ಸುಂದರ ಯುವಕನ ಮೂಲಕ ಏನೆಲ್ಲ ಕಳುಹಿಸಿದ್ದಾನೆ ನೋಡಿ, ನಿಮ್ಮ ಯಜಮಾನರು ಅವನ ಮೂಲಕ ಹೇಳಿಕಳಿಸಿದ್ದಾರೆ, ‘ನಿಮ್ಮ ಕೆಲಸವನ್ನು ಇನ್ನಷ್ಟು ಉತ್ತಮಗೊಳಿಸಿದರೆ ಇನ್ನಷ್ಟು ಕೂಲಿ ಸಿಗುತ್ತದೆ’ ಅಂತ” ಎಂದು ಉತ್ಸಾಹದಿಂದ ಹೇಳಿದಳು.

ಪತ್ನಿಯ ಮಾತುಗಳನ್ನು ಕೇಳುತ್ತಾ ಹಬೀಬ್‌ರವರು ಮೂಕವಿಸ್ಮಿತರಾದರು!

“ನಾನು ಬರೇ ಹತ್ತು ದಿನಗಳು ಕೆಲಸ ಮಾಡಿದ್ದಕ್ಕೆ ಇಷ್ಟೆಲ್ಲಾ ಕೂಲಿ ನೀಡಿದ. ಇನ್ನೂ ಶ್ರಮಪಟ್ಟು ಕೆಲಸ ಮಾಡಿದರೆ ಇನ್ನೇನೆಲ್ಲಾ ಕೊಡುತ್ತಾನೋ ಏನೋ,” ಎಂದರು ಹಬೀಬ್.

ನಂತರದಲ್ಲಿ ತನ್ನ ಗಮನವನ್ನೆಲ್ಲ ಅವನತ್ತ ತಿರುಗಿಸಿ ಲೌಕಿಕ ಸುಖವನ್ನೆಲ್ಲವನ್ನೂ ತೊರೆದು ದೇವರ ಸೇವೆಗಾಗಿ ತನ್ನ ಉಳಿದ ಜೀವಮಾನವನ್ನು ಸಂಪೂರ್ಣವಾಗಿ ತೊಡಗಿಸಿಕೊಂಡರು.

******

ಒಂದು ದಿನ ಒಬ್ಬಳು ಮುದುಕಿ ಬಂದು ಹಬೀಬ್‌ರವರ ಮುಂದೆ ಕೂತು ಗೋಳೆಂದು ಅತ್ತಳು. “ನನ್ನ ಮಗನೊಬ್ಬ ನನ್ನನ್ನು ಅಗಲಿ ಬಹಳ ಕಾಲವಾಯಿತು. ನನಗೆ ಇನ್ನು ಅವನನ್ನು ಅಗಲಿರಲು ಸಾಧ್ಯವಾಗದು. ನನ್ನ ಪರವಾಗಿ ದೇವರೊಂದಿಗೆ ಪ್ರಾರ್ಥಿಸಿ. ನಿಮ್ಮ ಪ್ರಾರ್ಥನೆಯ ಫಲವಾಗಿಯಾದರೂ ನನ್ನ ಮಗ ಮನೆಗೆ ಹಿಂತಿರುಗಿ ಬರಲಿ” ಎಂದು ಹಬೀಬರನ್ನು ಕೇಳಿಕೊಂಡಳು.

“ನಿನ್ನ ಬಳಿ ಹಣ ಇದೆಯೇ?” ಎಂದು ಹಬೀಬರು ಅವಳನ್ನು ಕೇಳಿದರು.
“ಹೌದು, ಎರಡು ದಿರ್‍ಹಾಮುಗಳಿವೆ” ಎಂದಳವಳು.
“ಅದನ್ನು ಬಡವರಿಗೆ ದಾನ ಮಾಡು.” ಎಂದರು ಹಬೀಬ್.

ಹಬೀಬ್‌ರವರು ದುವಾ ಮಾಡಿದರು. ಮತ್ತೆ ಮುದುಕಿಗೆ ಹೇಳಿದರು, “ಹೋಗು, ನಿನ್ನ ಮಗ ಹಿಂತಿರುಗಿ ಬಂದಿದ್ದಾನೆ.”

ಮುದುಕಿ ಹಿಂತಿರುಗಿ ಮನೆಯನ್ನು ತಲಪುವಾಗ ಮಗ ಬಂದು ನಿಂತಿದ್ದ. “ನನ್ನ ಮಗ ಬಂದ…” ಎಂದು ಸಂತೋಷದಿಂದ ಮುದುಕಿ ಕೂಗಿದಳು. ಅವನನ್ನು ಕರೆದುಕೊಂಡು ಬಂದು ಹಬೀಬರ ಮುಂದೆ ನಿಂತಳು.

“ಏನಾಯಿತು ನಿನಗೆ?” ಎಂದು ಹಬೀಬ್‌ರವರು ಕೇಳಿದರು.
“ನಾನು ಕಿರ್‌ಮಾನ್ ಎಂಬ ಊರಲ್ಲಿದ್ದೆ. ನನ್ನ ಗುರುಗಳು ನನ್ನನ್ನು ಮಾಂಸ ತರಲು ಕಳುಹಿಸಿದ್ದರು. ನಾನು ಮಾಂಸವನ್ನು ತಂದು ಅವರ ಕೈಗೆ ಕೊಡುತ್ತಿದ್ದೆನಷ್ಟೇ, ಒಂದು ಸುಳಿಗಾಳಿ ರಭಸದಿಂದ ಬೀಸಿಬಂದು, ನನಗೊಂದು ಅಶರೀರವಾಣಿ ಕೇಳಿಸಿತು ‘ಓ ಗಾಳಿಯೇ, ಹಬೀಬರ ದುವಾ ನಿನ್ನ ಬೆಂಬಲಕ್ಕಿದೆ, ಇವನ ತಾಯಿಯ ಎರಡು ದಿರ್‍ಹಾಮ್ ದಾನದ ಪುಣ್ಯವೂ ಇದೆ. ಇವನನ್ನು ಮನೆಗೆ ತಲಪಿಸು’ ಮರುಕ್ಷಣದಲ್ಲಿ ನಾನು ಮನೆಯ ಮುಂದಿದ್ದೆ” ಎಂದ ಮಗ.

ಒಂದು ವರ್ಷ ಹಜ್ ಯಾತ್ರೆಯ ತಿಂಗಳು ದುಲ್‌ಹಜ್‌ನ ದಿನಾಂಕ ಎಂಟರಂದು ಹಬೀಬ್‌ರವರು ಬಸ್ರಾದಲ್ಲಿದ್ದರು. ಒಂಭತ್ತನೆಯ ದಿನಾಂಕದಂದು ಹಜ್‌ಯಾತ್ರೆಯ ಅರಫಾದ ಪ್ರಾರ್ಥನೆಯಲ್ಲಿ ಶಾಮೀಲಾಗಿದ್ದರು.

ಒಮ್ಮೆ ಬಸ್ರಾ ನಗರಕ್ಕೆ ಬರಗಾಲ ಬಂತು. ಕಡು ಬಡ ಜನರು ಆಹಾರಕ್ಕಾಗಿ ಹಾಹಾಕಾರ ಮಾಡುತ್ತಿದ್ದರು. ಹಬೀಬ್‌ರವರು ವರ್ತಕರ ಬಳಿ ಹೋಗಿ ಸಾಲ ಪಡೆದು ಅವಶ್ಯಕ ಆಹಾರ ಸಾಮಗ್ರಿಗಳನ್ನು ಖರೀದಿಸಿ ಬಡ ಜನರಿಗೆ ಹಂಚುತ್ತಿದ್ದರು. ತನ್ನ ಖಾಲಿ ಹಣದ ಥೈಲಿಯನ್ನು ಮಲಗುವಾಗ ತಲೆದಿಂಬಿನಡಿಯಲ್ಲಿಟ್ಟು ಮಲಗುತ್ತಿದ್ದರು. ಮರುದಿನ ವರ್ತಕರು ಬಂದು ತಾವು ನೀಡಿದ ಸಾಮಾನಿನ ಹಣದ ಲೆಕ್ಕಾಚಾರವನ್ನು ನೀಡಿದಾಗ ತಲೆದಿಂಬಿನಡಿಯಿಂದ ಹಣದ ಥೈಲಿಯನ್ನು ತೆಗೆದು ದಿರ್‍ಹಾಮ್‌ಗಳನ್ನು ಲೆಕ್ಕ ಮಾಡಿ ಕೊಡುತ್ತಿದ್ದರು. ಅವರು ಹಿಂದೆ ಕೊಟ್ಟ ಸಾಲಗಳೆಲ್ಲ ವಾಪಾಸು ಬಂದು ತಲೆದಿಂಬಿನಡಿಯಲ್ಲಟ್ಟ ಥೈಲಿಯಲ್ಲಿ ಜಮಾ ಆಗುತ್ತಿದ್ದವು.

ಹಬೀಬರಿಗೊಂದು ಮನೆಯಿತ್ತು. ಅವರ ಮೈಮುಚ್ಚಲು ಒಂದು ಉಣ್ಣೆಯ ತುಪ್ಪಳದ ಕೋಟಿತ್ತು. ಇದನ್ನು ಸೆಖೆಗಾಲದಲ್ಲೂ ಮತ್ತು ಚಳಿಗಾಲದಲ್ಲೂ ಧರಿಸುತ್ತಿದ್ದರು. ಒಮ್ಮೆ ನಮಾಜಿನ ಮೊದಲು ವಜೂ ಅಥವಾ ವಿಧಿವತ್ತಾಗಿ ಕೈಕಾಲು ತೊಳೆಯುತ್ತಿದ್ದಾಗ ಕೋಟನ್ನು ನೆಲದ ಮೇಲೆ ಬಿಟ್ಟು ಹೋಗಿದ್ದರು. ಆ ಕಡೆ ಬಂದ ಹಬೀಬ್‌ರವರ ಗುರು ಸಂತ ಹಸನ್ ಅಲ್ ಬಸ್ರೀ ದಾರಿಯಲ್ಲಿ ಬಿದ್ದಿದ್ದ ಕೋಟನ್ನು ಹೆಕ್ಕಿಕೊಂಡರು.

“ಈ ಅಲ್ ಅಜಾಮಿಗೆ (ಅನಾಗರಿಕ) ಇದರ ಬೆಲೆ ತಿಳಿದಿಲ್ಲ. ಈ ತುಪ್ಪಳದ ಕೋಟನ್ನು ಹೀಗೆ ಬಿಟ್ಟು ಹೋಗಬಾರದಾಗಿತ್ತು, ಇದು ಖಂಡಿತಾ ಕಳೆದು ಹೋಗುತ್ತಿತ್ತು.” ಎಂದರು ಹಸನ್. ಹಬೀಬ್‌ರವರು ಆಗಲೇ ಹಿಂತಿರುಗಿ ಬಂದು ಇದನ್ನು ನೋಡುತ್ತಿದ್ದರು.

“ನಮ್ಮೆಲ್ಲರ ಗುರುಗಳೇ, ಇಮಾಮರೇ, ತಾವು ಯಾಕೆ ಇಲ್ಲಿ ನಿಂತಿರುವಿರಿ?” ಎಂದು ತಮ್ಮ ಗುರುಗಳಿಗೆ ಸಲಾಮ್ ಹೇಳುತ್ತಲೇ ಹಬೀಬ್‌ರವರು ಗೌರವ ಸೂಚಿಸಿದರು.

“ನಿನಗೆ ಗೊತ್ತಿಲ್ಲವೇ ಈ ಕೋಟನ್ನು ಈ ಥರ ಎಸೆದು ಹೋಗಬಾರದಂತ? ಇದು ಕಳೆದು ಹೋಗುತ್ತಿತ್ತು, ಹೇಳು, ಯಾರ ಸುಪರ್ದಿನಲ್ಲಿ ಇದನ್ನು ಬಿಟ್ಟು ಹೋಗಿದ್ದಿಯಾ?” ಎಂದು ಹಸನ್ ಕೇಳಿದರು.
“ಅವನ ಸುಪರ್ದಿನಲ್ಲಿ, ಅದನ್ನು ನೋಡಿಕೊಳ್ಳಲು ನಿಮ್ಮನ್ನು ರಕ್ಷಕನನ್ನಾಗಿ ನೇಮಿಸಿದವನು.” ಎಂದು ಹಬೀಬ್ ವಿನಯದಿಂದ ಹೇಳಿದರು.

ಒಂದು ದಿನ ಹಸನ್‌ರವರು ಹಬೀಬ್‌ರವರನ್ನು ಆಹ್ವಾನಿಸಲು ಬಂದಿದ್ದರು. ಹಬೀಬ್‌ರವರು ಹಸನ್‌ರವರ ಮುಂದೆ ಎರಡು ಬಾರ್ಲಿ ರೊಟ್ಟಿ ಮತ್ತು ಸ್ವಲ್ಪ ಉಪ್ಪು ಇಟ್ಟರು. ಹಸನ್‌ರವರು ತಿನ್ನಲು ಶುರು ಮಾಡಿದರು. ಒಬ್ಬ ಭಿಕ್ಷುಕ ಬಾಗಿಲ ಬಳಿ ಬಂದು ತಿನ್ನಲು ಏನಾದರೂ ಕೊಡಿ ಎಂದು ಕೇಳಿದ. ಹಬೀಬ್‌ರವರು ಹಸನ್‌ರವರ ಮುಂದಿದ್ದ ರೊಟ್ಟಿ ಮತ್ತು ಉಪ್ಪನ್ನು ಎತ್ತಿ ಅವನಿಗೆ ನೀಡಿದರು.

ಇದನ್ನು ಕಂಡ ಹಸನ್‌ರವರಿಗೆ ಬಹಳ ಆಶ್ಚರ್ಯವಾಯಿತು.

“ಹಬೀಬ್…ನೀನು ತುಂಬ ಯೋಗ್ಯ ಮನುಷ್ಯ. ನಿನಗೆ ಸ್ವಲ್ಪ ಜ್ಞಾನ ಕೂಡ ಇರಬೇಕು. ಅದು ಒಳ್ಳೆಯದು. ನಿನ್ನ ಅತಿಥಿ ತಿನ್ನುತ್ತಿರುವಾಗ ರೊಟ್ಟಿಯನ್ನು…. ಎಲ್ಲವನ್ನೂ ತೆಗೆದು ಭಿಕ್ಷುಕನಿಗೆ ನೀಡಿದೆ, ನೀನು ಒಂದು ಭಾಗವನ್ನು ಭಿಕ್ಷುಕನಿಗೂ, ಇನ್ನೊಂದು ಭಾಗವನ್ನು ಅತಿಥಿಗೂ ನೀಡ ಬಹುದಾಗಿತ್ತು.” ಎಂದರು ಹಬೀಬ್‌ರವರ ಗುರು ಮತ್ತು ಸಂತ ಹಸನ್‌ರವರು.

ಹಬೀಬ್‌ರವರು ಏನನ್ನೂ ಹೇಳದೆ ಸುಮ್ಮನಿದ್ದರು. ಓರ್ವ ಕೆಲಸದವ ತಲೆಯ ಮೇಲೆ ದೊಡ್ಡ ಟ್ರೇಯನ್ನು ಇಟ್ಟುಕೊಂಡು ಅಲ್ಲಿಗೆ ಪ್ರವೇಶಿಸಿದ. ಅವನು ಟ್ರೇಯನ್ನು ಕೆಳಗಿಟ್ಟಾಗ ಅದರಲ್ಲಿ ಒಂದು ಕುರಿಯ ತಂದೂರಿ, ಕಬಾಬ್ ಇತ್ತು. ಒಳ್ಳೆಯ ಬಿಸಿಬಿಸಿಯಾದ ಬ್ರೆಡ್ಡುಗಳಿದ್ದವು. ಒಂದು ಹಣದ ಚೀಲದಲ್ಲಿ ಐನೂರು ಬೆಳ್ಳಿಯ ದಿರ್‍ಹಾಮ್ ನಾಣ್ಯಗಳಿದ್ದವು. ಟ್ರೇಯನ್ನು ಕೆಲಸದವನು ಹಬೀಬರ ಮುಂದಿಟ್ಟ. ಹಬೀಬ್‌ರವರು ಅದರಲ್ಲಿನ ಹಣದ ಥೈಲಿಯನ್ನು ಭಿಕ್ಷುಕನಿಗೆ ನೀಡಿದರು. ತಿಂಡಿ ತುಂಬಿದ ಟ್ರೇಯನ್ನು ತೆಗೆದು ಹಸನ್‌ರವರ ಮುಂದಿಟ್ಟರು. ಹಸನ್ ತಗೆದು ಕಬಾಬ್ ಮತ್ತು ರೊಟ್ಟಿ ತಿನ್ನ ತೊಡಗಿದರು. ಹಸನ್‌ರವರು ಸಾಕಷ್ಟು ತಿಂದ ನಂತರ ಹಬೀಬ್ ಹೀಗೆ ಹೇಳಿದರು:

“ಗುರುಗಳೇ, ನೀವು ತುಂಬ ಒಳ್ಳೆಯವರು. ನಿಮಗೆ ಸ್ವಲ್ಪ ನಂಬಿಕೆ ಇರುತ್ತಿದ್ದರೆ ತುಂಬ ಒಳ್ಳೆಯದಿತ್ತು. ಜ್ಞಾನದ ಜೊತೆಗೆ ನಂಬಿಕೆಯೂ ಇದ್ದರೆ ಇನ್ನೂ ಒಳ್ಳೆಯದು.”

ಒಮ್ಮೆಹಸನ್‌ರವರು ಎಲ್ಲಿಗೋ ಹೊರಟಿದ್ದರು. ಅವರು ಟೈಗ್ರಿಸ್ ನದಿಯ ದಡಕ್ಕೆ ಬಂದಾಗ ಅಲ್ಲಿಗೆ ಹಬೀಬ್‌ರವರು ಬಂದಿದ್ದರು. “ಗುರುಗಳೇ, ನೀವಿಲ್ಲಿ ಯಾಕೆ ನಿಂತಿದ್ದೀರಿ ?” ಎಂದು ಹಬೀಬ್‌ರವರು ಕೇಳಿದರು.
” ನಾನು ಆಚೆ ದಡಕ್ಕೆ ಹೋಗಬೇಕು. ದೋಣಿ ಕಾಣ್ತಾ ಇಲ್ಲ.” ಎಂದರು ಹಸನ್.
” ಗುರುಗಳೇ ಏನಾಗಿದೆ ನಿಮಗೆ? ನನಗೆ ಏನೆಲ್ಲ ಗೊತ್ತಿದೆಯೋ ಅದೆಲ್ಲ ನಿಮ್ಮಿಂದಲೇ ನಾನು ಕಲಿತಿರೋದು. ಇತರರ ಮೇಲಿರುವ ದ್ವೇಷವನ್ನು ಹೃದಯದಿಂದ ಕಿತ್ತೆಸೆಯಿರಿ. ಮನಸ್ಸನ್ನು ಇಹದ ಸುಖದಿಂದ ಮುಕ್ತಗೊಳಿಸಿರಿ. ಎದುರಾಗುವ ಸಂಕಷ್ಟಗಳೆಲ್ಲವೂ ದೇವರ ಉಡುಗೊರೆಯೆಂದು ತಿಳಿಯಿರಿ. ಎಲ್ಲವೂ ದೇವರ ಕೊಡುಗೆ ಎಂದು ದೃಢವಿಶ್ವಾಸ ವಿರಿಸಿಕೊಳ್ಳಿ. ನೀರ ಮೇಲೆ ಕಾಲಿಟ್ಟು ಸರ ಸರನೆ ನಡೆದು ದಾಟಿಬಿಡಿ.” ಎನ್ನುತ್ತಾ ಹಬೀಬ್ ನೀರ ಮೇಲೆ ನಡೆಯ ತೊಡಗಿದರು.

ಅದನ್ನು ಕಂಡ ಹಸನ್ ಮೂರ್ಛೆತಪ್ಪಿ ಬಿದ್ದುಬಿಟ್ಟರು. ಅವರಿಗೆ ಪ್ರಜ್ಞೆ ಬಂದಾಗ ಸುತ್ತಲಿದ್ದ ಜನರು ಕೇಳಿದರು, “ಸಮಸ್ತ ಜನರ ಗುರುಗಳೇ, ನಿಮಗೇನಾಯಿತು?”
“ನನ್ನ ಶಿಷ್ಯ ಹಬೀಬ್ ಇಂದು ನನ್ನನ್ನು ಮೀರಿಸಿ ಬಿಟ್ಟ. ಅವನು ನೀರಿನ ಮೇಲೆ ನಡೆದು ಬಿಟ್ಟ. ನಾನು ಅವನೆದುರಿಗೆ ಷಂಡನಂತಾದೆ. ನಾಳೆ ಮಾಶರಾದಲ್ಲಿ (ಪುನರುತ್ಥಾನದ ದಿನ) ಸೇತುವೆಯನ್ನು ದಾಟು ಎಂಬ ಆಜ್ಞೆ ಬಂದಾಗ ನಾನು ಹೀಗೆಯೇ ಧೈರ್ಯವಿಲ್ಲದ ಷಂಡನಾದರೆ ಹೇಗೆ ?” ಎಂದರು ಹಸನ್.

ನಂತರ ಒಂದು ದಿನ ” ಹಬೀಬ್, ನೀನು ಈ ವಿದ್ಯೆಯನ್ನು ಹೇಗೆ ಕಂಡುಕೊಂಡೆ?” ಹಸನ್ ಕೇಳಿದರು.
“ಹೇಗೆಂದರೆ, ನಾನು ಹೃದಯವನ್ನು ಶುದ್ಧ ಬಿಳಿಯಾಗಿಸುತ್ತೇನೆ. ನೀವು ಕಾಗದವನ್ನು ಕರ್ರಗೆ ಮಾಡುತ್ತೀರಿ.” ಎಂದರು ಹಬೀಬ್.
“ನನ್ನ ಜ್ಞಾನದಿಂದ ಇನ್ನೊಬ್ಬರಿಗೆ ಲಾಭವಾಯಿತು. ಆದರೆ ನನಗೆ ಲಾಭ ತರಲಿಲ್ಲ.” ಎಂದು ಸಂತ ಹಸನ್‌ರವರು ಗೊಣಗಿದರು.

-ಫಕೀರ್ ಮುಹಮ್ಮದ್ ಕಟ್ಪಾಡಿ




Friday, September 22, 2017

ಶಾಂತನಾಗಿರಬೇಕು


ತನ್ನ ಕುರಿತು ಬಂದ ಠಾವಿನಲ್ಲಿ ಸತ್ಯನಾಗಿರಬೇಕು;
ಭೂತಹಿತವಹ ವಚನವ ನುಡಿಯಬೇಕು;
ಗುರುಲಿಂಗಜಂಗಮದಲ್ಲಿ ನಿಂದೆ ಇಲ್ಲದಿರಬೇಕು;
ಸಕಲಪ್ರಾಣಿಗಳ ತನ್ನಂತೆ ಭಾವಿಸೂದು ಮಾಡಬೇಕು.
ತನುಮನಧನವ ಗುರುಲಿಂಗಜಂಗಮಕ್ಕೆ ಸವೆಸಲೇಬೇಕು;
ಅಪಾತ್ರದಾನವ ಮಾಡಲಾಗದು;
ಸಕಲೇಂದ್ರಿಯಗಳ ತನ್ನ ವಶವ ಮಾಡಬೇಕು;
ಇದೇ ಮೊದಲಲ್ಲಿ ಬೇಹ ಶೌಚ ನೋಡಾ.
ಲಿಂಗವ ಪೂಜಿಸಿ ಪ್ರಸಾದವ ಪಡೆವಡೆ ಎನಗಿದೇ ಸಾಧನ
ಕೂಡಲಚೆನ್ನಸಂಗಮದೇವಾ.
                                          - ಚೆನ್ನಬಸವಣ್ಣ.

ಬಸವಣ್ಣನವರ ಸೋದರಳಿಯ ಚೆನ್ನಬಸವಣ್ಣನವರು ಕಿರಿಯ ವಯಸ್ಸಿನ ವಚನಕಾರರು. ವಚನ ಚಳವಳಿಯಲ್ಲಿಯೇ ಬೆಳೆದವರು. ಅಲ್ಲಮ ಮೊದಲಾದ ಹಿರಿಯ ವಚನಕಾರರಿಂದ ‘ಮಹಾಜ್ಞಾನಿ’ ಎನಿಸಿಕೊಂಡವರು. ಚೆನ್ನಬಸವಣ್ಣನವರು ಈ ವಚನದಲ್ಲಿ ಭಕ್ತನ ವ್ಯಕ್ತಿತ್ವ ದರ್ಶನ ಮಾಡಿಸಿದ್ದಾರೆ. ಆ ಮೂಲಕ ನಿಜ ಮಾನವ ಹೇಗಿರಬೇಕು ಎಂಬುದನ್ನು ತಿಳಿಹೇಳಿದ್ದಾರೆ.
ಭಕ್ತನೆನಿಸಿಕೊಳ್ಳುವವನು ಶಾಂತ ಗುಣವನ್ನು ಹೊಂದಿರಬೇಕು. ಯಾರು ಶಾಂತ ಗುಣವನ್ನು ಹೊಂದಿರುವುದಿಲ್ಲವೋ ಅವರ ಮನಸ್ಸಿನಲ್ಲಿ ಜಾತಿವಾದ, ಕೋಮುವಾದ, ಉಗ್ರವಾದ ಮುಂತಾದ ಅವಗುಣಗಳು ಹುಟ್ಟಿಕೊಳ್ಳುತ್ತವೆ. ಕೋಮುವಾದಿಗಳು ಧರ್ಮ ಧರ್ಮಗಳ ಮಧ್ಯೆ ಭೇದಭಾವವನ್ನು ಸೃಷ್ಟಿಸುತ್ತಾರೆ. ಧರ್ಮಗಳ ಹೆಸರಿನಲ್ಲಿ ಜನರು ಕೋಮುಗಲಭೆಗಳಲ್ಲಿ ತೊಡಗುವಂತೆ ಮಾಡುತ್ತಾರೆ. ಇಂಥ ಕೋಮುಗಲಭೆಗಳಿಂದಾಗಿ ಕೋಟ್ಯಂತರ ರೂಪಾಯಿಗಳ ಹಾನಿಯಾಗುವುದು. ಸಹಸ್ರಾರು ಅಮಾಯಕ ಜನ ಸಾಯುವರು. ಮೂಲಭೂತವಾದಿಗಳು ಅಂದರೆ ಧರ್ಮಗ್ರಂಥಗಳನ್ನು ಯಾಂತ್ರಿಕವಾಗಿ ಅರ್ಥ ಮಾಡಿಕೊಳ್ಳುವವರು. ಧರ್ಮದ ಮೂಲ ಆಧಾರಗಳಾದ ಆತ್ಮಸಾಕ್ಷಾತ್ಕಾರ, ಅಹಿಂಸೆ ಮತ್ತು ವಿಶ್ವಶಾಂತಿಯ ಮಹತ್ವವನ್ನು ಅರಿಯದವರು. ಆತ್ಮಸಾಕ್ಷಾತ್ಕಾರವಾಗದೆ ಅಹಿಂಸೆಯ ಅರಿವು ಮೂಡದು. ಅಹಿಂಸೆಯ ಅರಿವು ಮೂಡದೆ ವಿಶ್ವಶಾಂತಿ ಲಭಿಸದು. ಹೀಗೆ ಧರ್ಮದ ಈ ಮೂಲವನ್ನೇ ಅರಿಯದ ಮೂಲಭೂತವಾದಿಗಳು ತಮ್ಮ ಜನಾಂಗದ ಯುವಕರಿಗೆ ದಾರಿ ತಪ್ಪಿಸಿ ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿಸುತ್ತಾರೆ. ಧರ್ಮಕ್ಕಾಗಿ ಬದುಕುವುದನ್ನು ಕಲಿಸದೆ ಸಾಯುವುದನ್ನು ಕಲಿಸುತ್ತಾರೆ. ನಾವೆಲ್ಲ ಧರ್ಮವಂತರಾಗಿ ಅಂದರೆ ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುತ್ತ ದಾಸೋಹಂ ಭಾವದಿಂದ ಬದುಕಬೇಕಾಗಿದೆ. ನಾವು ಶಾಂತ ಮನಸ್ಥಿತಿಯನ್ನು ಹೊಂದಿದಾಗ ಮಾತ್ರ ಪ್ರಚೋದನೆಗೆ ಒಳಗಾಗದೆ ನಿಜದ ನಿಲುವನ್ನು ಅರಿಯಲು ಸಾಧ್ಯವಾಗುತ್ತದೆ.

ಇಂತಹ ಶಾಂತ ಸ್ವಭಾವದ ಭಕ್ತ ಸತ್ಯವಂತನಾಗಿರಬೇಕು. ಸತ್ಯವಂತರಾದ ವರಿಗೆ ಸ್ವವಿಮರ್ಶೆ ಮಾಡಿಕೊಳ್ಳುವ ಸಾಮರ್ಥ್ಯವಿರುತ್ತದೆ. ತಮ್ಮನ್ನು ತಾವು ತಿದ್ದಿಕೊಳ್ಳುವವರು ಸಮಾಜಕ್ಕೆ ತಮ್ಮಿಂದ ಯಾವುದೇ ರೀತಿಯಲ್ಲಿ ಹಾನಿಯಾಗ ಬಾರದು ಎಂಬ ಎಚ್ಚರಿಕೆ ವಹಿಸುವರು. ಇಂಥ ಸಂವೇದನಾಶೀಲ ಭಕ್ತರು ಜನಸಮುದಾಯಕ್ಕೆ ಒಳ್ಳೆಯದಾಗುವಂಥ ಮಾತುಗಳನ್ನಾಡಬೇಕು ಎಂದು ಚೆನ್ನಬಸವಣ್ಣನವರು ತಿಳಿಸುತ್ತಾರೆ.

ಸನ್ಮಾರ್ಗವನ್ನು ತೋರಿಸುವ ಗುರುವಿಗೆ, ಸರ್ವಸಮತ್ವವನ್ನು ಸಾರುವ ಲಿಂಗತತ್ತ್ವಕ್ಕೆ ಮತ್ತು ಲೋಕವೇ ತಾವಾಗಿ ಲಿಂಗತತ್ತ್ವವನ್ನು ಸಾರುವ ಜಂಗಮಾತ್ಮರಿಗೆ ನಿಂದಿಸಬಾರದು. ಸಕಲಜೀವಾತ್ಮರಲ್ಲಿ ತನ್ನನ್ನೇ ಕಾಣಬೇಕು. ಯಾರು ಸಕಲ ಜೀವಾತ್ಮರಲ್ಲಿ ತಮ್ಮನ್ನೇ ಕಾಣುವರೋ ಅವರು ಸಹಜವಾಗಿಯೇ ವಿಶ್ವಮಾನವರಾಗುತ್ತಾರೆ. ಒಬ್ಬ ವ್ಯಕ್ತಿಯ ಜಾತಿ, ಧರ್ಮ, ದೇಶ ಮತ್ತು ಭಾಷೆಗಳು ಅವರಿಗೆ ಮುಖ್ಯವಾಗುವುದಿಲ್ಲ. ‘ಆತನೊಳಗೆ ನಾನಿದ್ದೇನೆ’ ಎಂಬ ಭಾವ ಮಾತ್ರ ಅವರಿಗೆ ಮುಖ್ಯವಾಗುತ್ತದೆ. ಬೇರೆಯವರನ್ನು ಗೌರವಿಸುವುದೆಂದರೆ ತಮ್ಮನ್ನು ತಾವೇ ಗೌರವಿಸಿಕೊಂಡಂತೆ ಎಂಬ ಭಾವ ಭಕ್ತನಲ್ಲಿ ಮೂಡಿಬರಬೇಕು. ಅಷ್ಟೇ ಅಲ್ಲದೆ ಸಕಲ ಪಶು ಪಕ್ಷಿಗಳು ಮತ್ತು ಕ್ರಿಮಿ ಕೀಟಗಳು ಕೂಡ ಜೀವಾತ್ಮರೆಂದೇ ಭಾವಿಸಿ ಅವುಗಳಿಗೆ ಲೇಸನ್ನು ಬಯಸಬೇಕು. ಇಂಥ ಉದಾತ್ತ ಮಾನವರು ಯಾರಿಗೂ ತೊಂದರೆಯಾಗದಂತೆ ಬದುಕುತ್ತಾರೆ. ಇಂಥವರಿಂದ ಸಮಾಜ ತುಂಬಿದಾಗ ಕೊಲೆ ಸುಲಿಗೆಗಳಾಗುವುದಿಲ್ಲ. ಜನಾಂಗ ಜನಾಂಗಗಳ ಮಧ್ಯೆ ಗಲಭೆಗಳಾಗುವುದಿಲ್ಲ ಮತ್ತು ದೇಶ ದೇಶಗಳ ಮಧ್ಯೆ ಯುದ್ಧಗಳಾಗುವುದಿಲ್ಲ.

ತ್ರಿವಿಧ ದಾಸೋಹಂ ಭಾವದಿಂದ ಗುರುವಿಗೆ ತನುವನ್ನು, ಲಿಂಗಕ್ಕೆ ಮನವನ್ನು ಮತ್ತು ಸಮಾಜಕ್ಕೆ ಧನವನ್ನು ಅರ್ಪಿಸಬೇಕು. ಅಂದರೆ ಜ್ಞಾನ, ನೈತಿಕತೆ ಮತ್ತು ಸುಖಿ ಸಮಾಜಕ್ಕಾಗಿ ಭಕ್ತನಾದವನು ಸದಾ ಪ್ರಯತ್ನಿಸುತ್ತಿರಬೇಕು. ಇಷ್ಟೆಲ್ಲ ಸಾಧನೆ ಮಾಡಬೇಕಾದರೆ ಭಕ್ತನು ಮೊದಲು ಪಂಚೇಂದ್ರಿಯಗಳನ್ನು ಹಿಡಿತದಲ್ಲಿಟ್ಟುಕೊಳ್ಳುವಂಥ ಆತ್ಮಶಕ್ತಿಯನ್ನು ಹೊಂದಬೇಕು. ತನ್ನ ಐಹಿಕ ಆಸೆಗಳ ಮೇಲೆ ವಿಜಯ ಸಾಧಿಸಿದ ಭಕ್ತ ಮಾತ್ರ ಚೆನ್ನಬಸವಣ್ಣನವರು ಬಯಸಿದಂಥ ಸಾಧನೆಗಳನ್ನು ಮಾಡಲು ಸಾಧ್ಯ. ಈ ಎಲ್ಲ ಸಾಧನೆಗಳ ಬಗ್ಗೆ ತಿಳಿಸುತ್ತಲೇ ಚೆನ್ನಬಸವಣ್ಣನವರು ಒಂದು ಎಚ್ಚರಿಕೆಯನ್ನೂ ಕೊಡುತ್ತಾರೆ. ಅದೇನೆಂದರೆ ಅಯೋಗ್ಯರಿಗೆ ದಾನವ ಮಾಡಬಾರದು ಎಂಬ ಕಟ್ಟುಪಾಡು ಹಾಕುತ್ತಾರೆ. ಏಕೆಂದರೆ ಅಯೋಗ್ಯರು ಆ ದಾನದ ದುರುಪಯೋಗ ಮಾಡುವ ಸಾಧ್ಯತೆಗಳೇ ಹೆಚ್ಚಾಗಿರುತ್ತವೆ. ಅಂಥವರು ಆ ದಾನವನ್ನು ನೀಚ ಕೃತ್ಯಗಳಿಗೆ ಬಳಸುವುದರ ಮೂಲಕ ಮಾನವಕುಲಕ್ಕೆ ಕಂಟಕಪ್ರಾಯ ಆಗಬಹುದು. ಧರ್ಮದ ಹೆಸರಿನಲ್ಲಿ ಹಣ ಸಂಗ್ರಹಿಸಿ ಕೋಮುಗಲಭೆಗಳಿಗೆ ಮತ್ತು ಭಯೋತ್ಪಾದನೆಗೆ ಬಳಸಿಕೊಳ್ಳುವಂಥ ಇಂದಿನ ದಿನಗಳಲ್ಲಿ ಚೆನ್ನಬಸವಣ್ಣನವರ ಈ ಎಚ್ಚರಿಕೆ ಇಡೀ ವಿಶ್ವಕ್ಕೆ ಮಾರ್ಗದರ್ಶಿಯಾಗಿದೆ ಎಂಬುದನ್ನು ನಾವಿಲ್ಲಿ ಗಮನಿಸಬೇಕು.

ಹೀಗೆ ನಾವು ಪವಿತ್ರಾತ್ಮರಾಗಲು ಮೊದಲಿಗೆ ಮಾಡಬೇಕಾದ ಸ್ವಚ್ಛತೆಯ ಕ್ರಮಗಳಿವು ಎಂದು ಚೆನ್ನಬಸವಣ್ಣನವರು ತಿಳಿಸಿದ್ದಾರೆ. ಈ ರೀತಿ ಪವಿತ್ರವಾದ ನಂತರ ಇಷ್ಟಲಿಂಗವನ್ನು ಪೂಜಿಸುವುದರ ಮೂಲಕ ಸರಳ ಸಹಜ ಬದುಕಿಗೆ ಬೇಕಾದ ವಸ್ತುಗಳನ್ನು ಪ್ರಸಾದವೆಂದು ಪಡೆಯುವಲ್ಲಿ ತಮಗಿರುವ ಮಾರ್ಗ ಇದೇ ಎಂದು ಹೇಳಿದ್ದಾರೆ. ನಾವು ಕಾಯಕದ ಮೂಲಕ ಪಡೆಯುವ ವಸ್ತು ಮುಂತಾದ ಸಂಪತ್ತೆಲ್ಲ ಗಳಿಕೆ ಅಲ್ಲ. ದೇವರು ಕರುಣಿಸಿದ ಪ್ರಸಾದ. ಸೂರ್ಯ, ಚಂದ್ರ, ತಾರೆ, ಸಮುದ್ರ, ನದಿ, ಸಸ್ಯಲೋಕ ಮತ್ತು ಪಶುಪಕ್ಷಿಲೋಕ ಹೀಗೆ ಎಲ್ಲವೂ ದೇವರ ಪ್ರಸಾದ. ನಮ್ಮ ಕಾಯ ಕೂಡ ದೇವರ ಪ್ರಸಾದವೇ ಆಗಿದೆ. ಅಂತೆಯೇ ನಮ್ಮ ಕಾಯವನ್ನು ಪ್ರಸಾದ ಕಾಯವನ್ನಾಗಿಸಬೇಕು ಎಂಬುದು ಶರಣರೆಲ್ಲರ ಬಯಕೆಯಾಗಿದೆ. ಲಿಂಗವ ಪೂಜಿಸಿ ಪ್ರಸಾದ ಪಡೆಯುವುದರ ಮೂಲಕ ಕಾಯವನ್ನು ಪ್ರಸಾದ ಕಾಯವನ್ನಾಗಿಸಬೇಕಾದರೆ ಚೆನ್ನಬಸವಣ್ಣನವರು ಮೇಲೆ ತಿಳಿಸಿದ ಎಂಟು ಅಂಶಗಳನ್ನು ಮಾನವರು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾಗುತ್ತದೆ.

-ರಂಝಾನ್ ದರ್ಗಾ

ಮೂಲ: ವಾರ್ತಾಭಾರತಿ