Sunday, October 25, 2015

ದೇಹವೇ ದೇವಾಲಯ

ಮನುಷ್ಯ ದೇಹಾತ್ಮಗಳ ಸಂಗಮ.  ಆದರೆ, ದೇಹ ಮತ್ತು ಆತ್ಮಗಳ ಈ ಸಮ್ಮಿಳಿತದಲ್ಲಿ ಸಕಲ ಗೌರವ, ಮರ್ಯಾದೆಗಳು ದೊರಕುವುದು ಆತ್ಮಕ್ಕೆ ಮಾತ್ರ. ದೇಹವು ಆರಂಭದಿಂದಲೂ ನಿರ್ಲಕ್ಷ, ಉಪೇಕ್ಷೆಗಳಿಗೆ ಒಳಗಾಗಿದೆ. ಆತ್ಮ ಮೇಲು, ದೇಹ ಕೀಳೆಂಬ ತಿಳುವಳಿಕೆ ಶತಶತಮಾನಗಳಿಂದಲೂ ಇಳಿದು ಬಂದಿದೆ. ಈ ಕಾರಣದಿಂದಲೇ ‘ಆತ್ಮದ ಒಳಿತಿಗಾಗಿ ದೇಹವನ್ನು ದಂಡಿಸಬೇಕು’ ಎಂಬ ಸಲಹೆಯನ್ನು ನೀಡುವುದನ್ನು ನಾವು ಕೇಳಿದ್ದೇವೆ.

ಈ ತಿಳುವಳಿಕೆಗೆ ವ್ಯತಿರಿಕ್ತವಾಗಿ, ‘ದೇಹವು ದೇವಾಲಯ’ ಎಂಬುದು ಸತ್ಯ. ಭಗವಂತನ ಪ್ರಸನ್ನತೆಯಿಂದ ದೇವಾಲಯ ಪವಿತ್ರವಾಗುತ್ತದೆ. ದೇವಾಲಯವೊಂದು ಪವಿತ್ರ ತಾಣವೆಂಬುದನ್ನು  ನಾವೆಲ್ಲರೂ ಒಪ್ಪಿಕೊಳ್ಳುತ್ತೇವೆ. ಈ ಪಾವನತೆ ಭಗವಂತನ ಇರುವಿಕೆಯಿಂದ ಸಾಧ್ಯವಾಗುತ್ತದೆ. ಇದೇ ರೀತಿ ಪ್ರತಿಯೊಬ್ಬರ ಹೃನ್ಮನಗಳಲ್ಲಿ ಭಗವಂತ ನೆಲೆಸುವುದರಿಂದ ದೇಹವೂ ಪಾವನಗೊಂಡು ಭಗವಂತನ ವಾಸಸ್ಥಾನವಾಗಿ ದೇವಾಲಯವಾಗುತ್ತದೆ. ಪ್ರೇಷಿತ ಪಾವ್ಲರು, ‘ನಿಮ್ಮ ದೇಹವು ಭಗವಂತನ ವಾಸಸ್ಥಾನವೆಂದು ನಿಮಗೆ ತಿಳಿದಿಲ್ಲವೇ?’ ಎಂದು ಮಾನವ ದೇಹದ ಮಹತ್ವದ ಬಗ್ಗೆ ಎಚ್ಚರಿಸುತ್ತಾರೆ.

ಬಹುತೇಕ ಎಲ್ಲಾ ಧರ್ಮಗಳಲ್ಲೂ ನವಜಾತ ಶಿಶುವನ್ನು ಭಗವಂತನ ಸನ್ನಿಧಿಗೆ ತಂದು ಸಮರ್ಪಿಸುವ ಪರಿಪಾಠವಿದೆ. ಅಂತೆಯೇ, ವ್ಯಕ್ತಿಯೊಬ್ಬರ ಅವಸಾನವಾದಾಗ ಮತ್ತೆ ಆ ಮೃತ ದೇಹವನ್ನು ಭಕ್ತಿಯಿಂದ ಭಗವಂತನಿಗೆ ಮರು ಸಮರ್ಪಣೆ ಮಾಡಿ ಸಮಾಧಿ ಮಾಡುತ್ತಾರೆ. ಜೀವವು ದೇಹವನ್ನು ಬಿಟ್ಟು ತೆರಳಿದ ಮೇಲೂ ಪಾರ್ಥಿವ ಶರೀರ ಪವಿತ್ರ. ದೇಹದ ಪಾವಿತ್ರ್ಯತೆಯು ಕೇವಲ ಬಲಿಷ್ಠ, ಸಮರ್ಥ, ಆರೋಗ್ಯವಂತ ದೇಹಗಳಿಗೆ ಮಾತ್ರ ಸೀಮಿತವಲ್ಲ. ಅಸ್ವಸ್ಥ, ಅಂಗವೈಕಲ್ಯ, ಮಾನಸಿಕ ವೈಕಲ್ಯ ವ್ಯಕ್ತಿಗಳಿಗೂ ಅನ್ವಯ. ಒಟ್ಟಿನಲ್ಲಿ ಮಾನವ ದೇಹದ ಪಾವಿತ್ರ್ಯತೆ ಪ್ರಶ್ನಾತೀತ.

‘ದೇಹವೇ ದೇವಾಲಯ’ ಎಂಬ ಸತ್ಯ ಮಾನವನ ಹೆಗಲ ಮೇಲೆ ಗುರುತರವಾದ ಜವಾಬ್ದಾರಿಯನ್ನು ಹೊರಿಸುತ್ತದೆ. ಭಗವಂತನ ಆಲಯವಾದ ದೇಹವನ್ನು ಎಲ್ಲಾ ರೀತಿಯ ಕಲ್ಮಷಗಳಿಂದ ಮುಕ್ತವಾಗಿರಿಸುವುದು ನಮ್ಮ ಕರ್ತವ್ಯ. ಯೋಚನೆ, ಮಾತು ಮತ್ತು ಕ್ರಿಯೆಗಳಲ್ಲಿ ನಿರ್ಮಲತೆಯನ್ನು ಕಾಪಾಡಿಕೊಳ್ಳಬೇಕು. ವ್ಯಭಿಚಾರ, ಹೊಟ್ಟೆಬಾಕತನ, ಇನ್ನಿತರ ದುಷ್ಚಟಗಳಿಂದ ದೂರವಿದ್ದು ದೇಹವನ್ನು ದೇವಾಲಯವಾಗಿ ಕಾಪಾಡಿಕೊಳ್ಳಬೇಕು. ‘ನನ್ನ ಆಲಯವನ್ನು ಕಳ್ಳಕಾಕರ ಗುಹೆಯನ್ನಾಗಿಸಬೇಡಿ’ ಎಂಬ ಮಾತುಗಳು ನಮ್ಮನ್ನು ಸದಾ ಎಚ್ಚರಿಸುತ್ತಿರಲಿ. 

-ಫಾ.ಚೇತನ್

No comments:

Post a Comment