ನಮ್ಮ ಶರೀರದಲ್ಲಿಯೇ ಇರುವ ಮತ್ತು ನಮ್ಮೆಲ್ಲರ ಪ್ರಗತಿಗೆ ಮಾರಕವಾಗಿರುವ ಮಹಾವೈರಿ ಯಾವುದು? ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳಿಗೆ ಅರಿಷಡ್ವರ್ಗ ಎಂದು ಕರೆಯುವರು. ಈ ಆರೂ ವೈರಿಗಳು ನಮ್ಮಲ್ಲಿಯೇ ಇದ್ದು, ಅನೇಕ ಅನರ್ಥಗಳಿಗೆ ಕಾರಣವಾಗುವುದುಂಟು ಆದಾಗ್ಯೂ ಈ ಆರೂ ವೈರಿಗಳಿಗಿಂತ ಭಿನ್ನವಾಗಿರುವ ಮತ್ತು ಭಯಾನಕವಾಗಿರುವ ಮಹಾವೈರಿ ಎಂದರೆ ಅದು ಆಲಸ್ಯ ಅಥವಾ ಸೋಮಾರಿತನ.
ನಮ್ಮ ಪ್ರಗತಿಗೆ ಮಾರಕವಾಗಿರುವ ಮತ್ತು ಕ್ರಿಯಾಶೀಲತೆಯನ್ನು ನಾಶಗೊಳಿಸುವ ಈ ಆಲಸ್ಯವನ್ನು ಕುರಿತು ಭರ್ತೃಹರಿಯು ತನ್ನ ನೀತಿ ಶತಕದಲ್ಲಿ ‘ಆಲಸ್ಯಂ ಹಿ ಮನುಷ್ಯಾಣಾಂ ಶರೀರಸ್ಥೋ ಮಹಾನ್ ರಿಪುಃ’ ಎಂದು ಹೇಳಿರುವುದು ನಮ್ಮೆಲ್ಲರ ಅನುಭವಕ್ಕೆ ಬಂದ ಮಾತಾಗಿದೆ. ಹೌದು, ಆಲಸ್ಯವೆಂಬುದು ಮಹಾವೈರಿಯೇನೋ ಸರಿ. ಏನಿದು ಆಲಸ್ಯ? ಇಂದು ಮಾಡಬೇಕಾದುದನ್ನು ನಾಳೆ ಮಾಡೋಣ, ಈ ಕ್ಷಣ ಮಾಡಬೇಕಾದುದನ್ನು ಮತ್ತೆ ಯಾವಾಗಲಾದರೂ ಮಾಡೋಣ ಎಂಬ ಪ್ರವೃತ್ತಿಯೇ ಆಲಸ್ಯ. ಇಂಥ ಮನೋಭಾವವುಳ್ಳ ಮನುಷ್ಯನು ಬದುಕಿನಲ್ಲಿ ಯಾವ ಸುಖ ಶಾಂತಿಗಳನ್ನು ಕಾಣಲಾರ. ಆಲಸ್ಯವು ಮನುಷ್ಯನ ಕ್ರಿಯಾಶೀಲತೆಯನ್ನೇ ಹಾಳು ಮಾಡಿ ಅವನ ಎಲ್ಲ ರೀತಿಯ ದಾರಿದ್ರ್ಯಕ್ಕೆ ಕಾರಣವಾಗುತ್ತದೆ. ಇದರಿಂದಾಗಿ ಮನುಷ್ಯನು ತನ್ನ ನೆಮ್ಮದಿಯನ್ನು ಕಳೆದುಕೊಂಡು ವಿನಾಶದ ಅಂಚಿಗೆ ತಲುಪುತ್ತಾನೆ. ಆದ್ದರಿಂದ ವಿನಾಶದ ಮತ್ತೊಂದು ಹೆಸರೇ ಆಲಸ್ಯ ಎಂದು ಹೇಳಬಹುದು.
ಮನುಷ್ಯನು ತಾನು ವಿದ್ಯಾವಂತನಾಗಬೇಕು, ಶ್ರೀಮಂತನಾಗಬೇಕು, ಸಮಾಜದಲ್ಲಿ ಮಾನ-ಸಮ್ಮಾನಗಳನ್ನು ಪಡೆಯಬೇಕು ಎಂದು ಸಹಜವಾಗಿಯೇ ಬಯಸುತ್ತಾನೆ. ಅವನ ಈ ಬಯಕೆಯನ್ನು ಈಡೇರಿಸಿಕೊಳ್ಳಲು ಆಲಸ್ಯವನ್ನು ತೊರೆಯಬೇಕಾದುದು ಅತ್ಯವಶ್ಯವಾಗಿದೆ. ಏಕೆಂದರೆ ಆಲಸ್ಯವುಳ್ಳವನೆಂದೂ ವಿದ್ಯಾವಂತನಾಗಲಾರ. ಆಲಸ್ಯದಿಂದಾಗಿ ಮನುಷ್ಯನ ಬುದ್ಧಿಯು ಮಂದವಾಗುತ್ತದೆ. ಅವನ ಉದ್ದೇಶಿತ ಯಾವ ಕಾರ್ಯಗಳೂ ಕೈಗೂಡುವುದಿಲ್ಲ. ದಾರಿದ್ರ್ಯವು ಆಲಸಿಯನ್ನು ಆವರಿಸಿಕೊಳ್ಳುತ್ತದೆ. ಇದರಿಂದ ಅವನು ಮಾನ-ಸಮ್ಮಾನಗಳಿಂದ ವಂಚಿತನಾಗಿ ಕೊನೆಯಲ್ಲಿ ಅವನತಿಯನ್ನು ಹೊಂದುತ್ತಾನೆ. ಆದ್ದರಿಂದ ಒಳ್ಳೆಯ ಕಾರ್ಯಗಳನ್ನು ಕಾರ್ಯಗತಗೊಳಿಸುವಾಗ ಆಲಸ್ಯವನ್ನು ದೂರ ತಳ್ಳಬೇಕು. ಅದೇನಿದ್ದರೂ ‘ಆಲಸ್ಯಂ ಕುರು ಪಾಪಕರ್ಮಣಿ’ ಎಂಬಂತೆ ಪಾಪಕರ್ಮಗಳಿಗೆ ಮಾತ್ರ ನಮ್ಮ ಆಲಸ್ಯ ಸೀಮಿತವಾಗಿರಲಿ. ಭಾಗ್ಯವಿದ್ದರೆ ಮಾತ್ರ ಕಾರ್ಯಸಿದ್ಧಿ ಎಂಬುದು ಅರ್ಥಹೀನ. ಆಲಸ್ಯವನ್ನು ತೊರೆದು ಕಾರ್ಯ ಮಾಡುವ ಕ್ರಿಯಾಶೀಲನಿಗೆ ಎಲ್ಲ ಭಾಗ್ಯಗಳೂ ತಾವಾಗಿಯೇ ಒಲಿದು ಬರುತ್ತವೆ. ಕ್ರಿಯಾಶೀಲನು ಸದಾ ಜಯಶಾಲಿಯಾಗಿರುತ್ತಾನೆ. ಆದ್ದರಿಂದ ಆಲಸ್ಯವನ್ನು ಪ್ರಯತ್ನಪೂರ್ವಕವಾಗಿ ದೂರ ತಳ್ಳಿ ಒಳ್ಳೆಯ ಕಾರ್ಯಗಳನ್ನು ಮಾಡುವುದೇ ಅತ್ಯಂತ ಶ್ರೇಯಸ್ಕರವಾದುದು.
-ಡಾ. ಸಿದ್ದರಾಮ ಸ್ವಾಮಿಗಳು
No comments:
Post a Comment