‘ಮುಸ್ಲಿಮನೊಬ್ಬನಲ್ಲಿ ಇರಬೇಕಾದ ಒಳ್ಳೆಯತನಗಳಲ್ಲಿ ಒಂದು, ತನಗೆ ಸಂಬಂಧಿಸದ ವಿಷಯಗಳಿಂದ ದೂರವಿರುವುದು’ ಎಂದು ಪೈಗಂಬರರು ಹೇಳಿದ್ದಾರೆ. `‘ವಿಮುಖತೆ (ವರಾ) ಎಂದರೆ ಸಂಶಯಾಸ್ಪದ ಸಂಗತಿಗಳಿಂದ ದೂರವಿರುವುದು, ಒಬ್ಬನಿಗೆ ಅಗತ್ಯವಿಲ್ಲದ ಸಂಗತಿಯಿಂದ ದೂರವಿರುವುದು ಅಂದರೆ ಅನಾವಶ್ಯಕವೆನಿಸಿದ್ದನ್ನು ದೂರವಿರಿಸುವುದು’ ಎಂದು ಸೂಫಿ ಸಂತ ಇಬ್ರಾಹಿಂ ಇಬ್ನ್ ಅದ್ಹಮ್ ಹೇಳಿದ್ದಾರೆ.
ಸೂಫಿ ಸರೀ ಅಲ್ ಸಖತಿ ಹೇಳುವಂತೆ, ‘ನಮ್ಮ ಕಾಲದಲ್ಲಿ `‘ವರಾ’ವನ್ನು ಕಟ್ಟು ನಿಟ್ಟಾಗಿ ಪಾಲಿಸುವವರು ನಾಲ್ಕು ಮಂದಿ ಇದ್ದರು. ಹುದೈಫಾ ಅಲ್ ಮುರ್ತಾಶ್, ಯೂಸುಫ್ ಬಿನ ಅಸ್ಬತ್, ಇಬ್ರಾಹಿಂ ಇಬ್ನ್ ಅದ್ಹಮ್ ಮತ್ತು ಸುಲೇಮಾನ್ ಅಲ್ ಖವ್ವಾಸ್. ತಮಗೆ ಅನುಜ್ಞಾರ್ಹ ವಿಷಯಗಳನ್ನು ಪಾಲಿಸುವುದಕ್ಕೆ ಅತ್ಯಂತ ಕಷ್ಟಕರವೆಂದು ಪರಿಗಣಿಸಲ್ಪಟ್ಟಾಗ ಅತ್ಯಂತ ಕನಿಷ್ಠ ಮಾತ್ರದಲ್ಲಿ ಇದರ ಆಶ್ರಯಪಡೆದಿದ್ದರು’.
ಸಂತ ಅಬೂಬಕ್ಕರ್ ಶಿಬ್ಲಿ ಅವರ ಪ್ರಕಾರ, ‘ವರಾ’ ಎಂದರೆ ಅಲ್ಲಾಹನ ಸ್ಮರಣೆಯೊಂದನ್ನು ಹೊರತುಪಡಿಸಿ ಉಳಿದೆಲ್ಲವುಗಳಿಂದ ದೂರವಾಗಿರುವುದು’ ಎಂದು ಸರಳವಾದರೂ ಕಠಿಣವಾದ ಉತ್ತರವನ್ನು ನೀಡಿದ್ದಾರೆ. ಯಹ್ಯಾ ಬಿನ್ ಮುಅಧ್ ಇದನ್ನು ಇನ್ನೊಂದು ರೀತಿಯಲ್ಲಿ ವಿವರಿಸುತ್ತಾರೆ, ‘ಎರಡು ರೀತಿಯ ವಿಮುಖತೆ ಇದೆ. ಒಂದನೆಯದು ಬಾಹ್ಯ ವಿಮುಖತೆ. ಇದರಲ್ಲಿ ಹೊರ ಚಲನೆಯ ಚಟುವಟಿಕೆಗಳು ದೇವರನ್ನು ಹೊರತುಪಡಿಸಿ ಉಳಿದೆಲ್ಲವೂ ಇರುತ್ತದೆ. ಎರಡನೆಯದು ಅಂತರ್ಯದ ವಿಮುಖತೆ, ಇದರಲ್ಲಿ ದೇವರನ್ನು ಹೊರತುಪಡಿಸಿ ಇನ್ನೇನನ್ನೂ ಮನಸ್ಸಿನೊಳಗೆ ಪ್ರವೇಶಿಸಲು ಬಿಡದು’.
ಸೂಫಿ ಅಲಿ ಅತ್ತಾರ್ ಒಮ್ಮೆ ಬಸ್ರಾನಗರದ ಗಲ್ಲಿಯ ಹಾದಿಯಲ್ಲಿ ನಡೆಯುತ್ತಿರುವಾಗ ಕೆಲವು ಸೂಫಿ ಷೇಖರು ಕೂತು ಯಾವುದೋ ಅಧ್ಯಾತ್ಮ ವಿಷಯದ ಚರ್ಚೆಯಲ್ಲಿ ಮಗ್ನರಾಗಿರುವುದನ್ನು ಕಂಡರು. ಅವರು ಕೂತಲ್ಲೇ ಹತ್ತಿರದಲ್ಲಿ ಕೆಲವು ಹುಡುಗರು ಆಟ ಆಡುತ್ತ ಗುಲ್ಲೆಬ್ಬಿಸುತ್ತಿದ್ದರು.
ಅಲಿ ಅತ್ತಾರ್ ಇದನ್ನು ಕಂಡು ಹುಡುಗರ ಬಳಿ ಹೋಗಿ, ‘ಷೇಖರು ಗಂಭೀರವಾದ ವಿಚಾರವಿನಿಮಯ ಮಾಡುತ್ತಿರುವಾಗ ನೀವಿಲ್ಲಿ ಗುಲ್ಲೆಬ್ಬಿಸುತ್ತಿರುವುದಕ್ಕೆ ನಿಮಗೆ ನಾಚಿಕೆಯಾಗುವುದಿಲ್ಲವೇ?’ ಎಂದು ಕೇಳಿದರು. ಆ ಗುಂಪಿನಲ್ಲಿದ್ದ ಹುಡುಗನೊಬ್ಬ ಹೇಳಿದ, ‘ಈ ಷೇಖರ ವಿಮುಖತೆ ಅತ್ಯಂತ ಚಿಕ್ಕ ಪ್ರಮಾಣದಲ್ಲಿತ್ತು, ಅದಕ್ಕೆ ಅವರ ಮೇಲಿನ ನಮ್ಮ ಭಯಭಕ್ತಿ ಕೂಡ ಅಷ್ಟೇ ಚಿಕ್ಕ ಪ್ರಮಾಣದಲ್ಲಿದೆ’.
ಪ್ರಖ್ಯಾತ ಸೂಫಿ ಸಂತ ಹಸನ್ ಅಲ್ ಬಸ್ರಿ ಮಕ್ಕಾ ಹರಮ್ ಪ್ರದೇಶದಲ್ಲಿ ದಾಖಲಾದಾಗ ಹಜ್ರತ್ ಅಲಿ ಇಬ್ನ್ ಅಬೀತಾಲಿಬರ ಮಗಂದಿರಲ್ಲೊಬ್ಬ ಕಾಬಾಕ್ಕೆ ಬೆನ್ನುಹಾಕಿ ಜನರಿಗೆ ಯಾವುದೋ ವಿಷಯದ ಪ್ರವಚನವನ್ನು ಮಾಡುತ್ತಿದ್ದದನ್ನು ಕಂಡು ಆತಂಕಿತರಾದರು. ಹಸನ್ ಬಸ್ರಿ ಲಗುಬಗನೆ ಅವರ ಕಡೆ ನುಗ್ಗಿ ‘ಧರ್ಮದ ತಳಪಾಯ ಯಾವುದು?’ ಎಂಬ ಪ್ರಶ್ನೆಯನ್ನು ಕೇಳಿದರು. ಥಟ್ಟನೆ ಉತ್ತರ ಬಂತು `‘ವಿಮುಖತೆ'. `‘ಧರ್ಮದ ಅವನತಿ ಯಾವುದರಿಂದ?’ ಎಂದು ಮರುಪ್ರಶ್ನೆ ಹಾಕಿದಾಗ ‘ದುರಾಸೆಯಿಂದ’ ಎಂಬ ಉತ್ತರ ಬಂತು. ಹಸನ್ ಬಸ್ರಿ ವಿಸ್ಮಯಕ್ಕೊಳಗಾದರು.
-ಫಕೀರ್ ಅಹ್ಮದ್ ಕಟ್ಪಾಡಿ.
No comments:
Post a Comment