Friday, June 10, 2016

ಜಾಗರೂಕ ಪ್ರಜ್ಞೆ(ಮುರಾಖಬಾ)

'ಸೃಷ್ಟಿಕರ್ತ ಅಲ್ಲಾಹನು ಎಲ್ಲವನ್ನೂ ಎಚ್ಚರದಿಂದ ಗಮನಿಸುತ್ತಿರುತ್ತಾನೆ’ (ಕುರಾನ್ 33:52). ಮನುಷ್ಯನ ಪ್ರತಿಯೊಂದು ಚಲನವಲನ, ಕಾರ್ಯ, ನಡತೆ ಎಲ್ಲವನ್ನೂ ಅವನು ಗಮನಿಸುತ್ತಿರುತ್ತಾನೆಂಬ ಜಾಗರೂಕ ಪ್ರಜ್ಞೆ ಮನುಷ್ಯನ ವ್ಯಕ್ತಿತ್ವವನ್ನು ರೂಪಿಸುತ್ತದೆ. ಪ್ರವಾದಿಯವರು ‘ನೀವು ಕಾಣದಿದ್ದರೂ ಅವನು ನಿಮ್ಮನ್ನು ಕಾಣುತ್ತಿರುತ್ತಾನೆ’ ಎಂದು ಹೇಳಿದ್ದರು.
ಇದೇ ಜಾಗರೂಕ ಪ್ರಜ್ಞೆ. ಇದು ತನ್ನ ಒಡೆಯ ತನ್ನ ಕಾರ್ಯವನ್ನು ಗಮನಿಸುತ್ತಿರುತ್ತಾನೆಂಬ ಸೇವಕನ ಅಂತರ್ಯದಲ್ಲಿ ಜಾಗರೂಕವಾಗಿರುವ ಪ್ರಜ್ಞೆಯಾಗಿದೆ. ಈ ಎಚ್ಚರವು ಸದಾಜಾಗೃತವಾಗಿರುವುದರಿಂದ ಅವನು ಮಾಡುವ ಎಲ್ಲ ಕೆಲಸವೂ ಉತ್ತಮವಾಗಿರುತ್ತವೆ. ಕೆಟ್ಟಕಾರ್ಯಗಳನ್ನು ಮಾಡುವುದನ್ನು ನಿಯಂತ್ರಿಸುತ್ತದೆ. ದೇವರು ತನ್ನನ್ನು ಗಮನಿಸುತ್ತಿದ್ದಾನೆಂಬ ಪ್ರಜ್ಞೆ ಅವನನ್ನು ಅತ್ಯಂತ ಸಮೀಪವಾಗಿ, ಹೃದಯದಲ್ಲಿ ಸ್ಥಾಪಿಸಿದಂತೆ ಆಗುತ್ತದೆ. ಅವನ ಇರವನ್ನು ಅರಿತಿರುತ್ತಾನೆ. ಅವನ ಕಾರ್ಯಗಳನ್ನು ಗಮನಿಸುತ್ತಿರುತ್ತಾನೆ. ಅವನ ಪ್ರತಿಯೊಂದು ಮಾತುಗಳನ್ನೂ ಕೇಳುತ್ತಿರುತ್ತಾನೆ. ಇವೆಲ್ಲದರ ಬಗ್ಗೆ ಅರಿತಿರದವನು ಇದು ಅವನ ಸಾನ್ನಿಧ್ಯದ ನಿಜ ಅನುಭವದ ಪ್ರಾರಂಭವೆನ್ನುವುದನ್ನು ತಿಳಿಯಲಾರ.
‘ದೇವರ ಭಯವನ್ನು ದೃಢಗೊಳಿಸದವನು ಮತ್ತು ದೇವರು ಹಾಗೂ ತನ್ನ ಮಧ್ಯೆ ಜಾಗರೂಕ ಪ್ರಜ್ಞೆಯನ್ನು ಸ್ಥಾಪಿಸಿಕೊಳ್ಳದಿರುವವನು ಪ್ರತ್ಯಕ್ಷ, ಸಾಕ್ಷಾತ್ಕಾರವನ್ನು ಅನುಭವಿಸಲಾರ’ ಎಂದು ಸೂಫಿ ಅಲ್ ಜುರೈರಿಯವರು ಅಭಿಪ್ರಾಯಪಟ್ಟಿರುತ್ತಾರೆ.
ಈ ವಿಚಾರದಲ್ಲಿ ದರ್ವೇಶಿ ಕತೆಯೊಂದು ಹೀಗಿದೆ: ಒಬ್ಬ ರಾಜ ತನ್ನ ಅನೇಕ ಸೇವಕರ ಪೈಕಿ ಎಲ್ಲರಿಗಿಂತ ಹೆಚ್ಚು ಒಬ್ಬ ಸೇವಕನನ್ನು ಮೆಚ್ಚಿಕೊಂಡಿದ್ದ. ಇದು ಯಾಕೆ ಎಂದು ಕೆಲವರು ಆಪ್ತರು ಆಸ್ಥಾನದಲ್ಲಿ ಕೇಳಿದ್ದರು. ಇದನ್ನು ಸಾಬೀತುಪಡಿಸಲು ಅವಕಾಶವನ್ನು ರಾಜ ಕಾಯುತ್ತಿದ್ದ. ಒಮ್ಮೆ ಒಂದು ಮಹತ್ವದ ಪ್ರಯಾಣದಲ್ಲಿ ಸಾಗುತ್ತಿದ್ದಾಗ ಹಾದಿಯಲ್ಲಿ ದೂರದಲ್ಲಿ ಹಿಮಾವೃತವಾದ ಪರ್ವತದ ಸುಂದರ ದೃಶ್ಯವೊಂದು ಕಂಡುಬಂತು. ಅವನಿಗೆ ಮನದಲ್ಲಿ ಹಿಮವನ್ನು ಮುಟ್ಟುವ ಆಸೆಯಾಗಿ ಕ್ಷಣ ಎವೆಯಿಕ್ಕದಂತೆ ನೋಡಿ ಅದು ಸಾಧ್ಯವಾಗದು ಎಂದುಕೊಂಡು ತಲೆ ತಗ್ಗಿಸಿದ.
ಹತ್ತಿರದಲ್ಲಿ ಸವಾರಿಯಾಗಿ ಜೊತೆಗೆ ಸಾಗುತ್ತಿದ್ದ ಸೇವಕ ಇದನ್ನು ಕಂಡವನೇ ತನ್ನ ಸವಾರಿಯನ್ನು ನಾಗಾಲೋಟದಿಂದ ದೌಡಾಯಿಸಿ ಮುಂದೆ ಹೋದ. ಅಲ್ಲಿ ಪ್ರಯಾಣದಲ್ಲಿದ್ದವರಿಗೆ ಇವನು ತನ್ನ ಕುದುರೆಯನ್ನು ವೇಗವಾಗಿ ಓಡಿಸಿಕೊಂಡು ಮುಂದೆ ಹೋದದ್ದು ಯಾಕೆಂದು ತಿಳಿಯದೆ ಚಕಿತರಾಗಿದ್ದರು. ಸ್ವಲ್ಪ ಹೊತ್ತಿನ ಬಳಿಕ ಆ ಸೇವಕ ವೇಗವಾಗಿ ಹಿಂತಿರುಗಿ ಬಂದ.
ತನ್ನ ಸವಾರಿಯಿಂದ ಇಳಿದು ಬಂದು ತಾನು ತಂದ ಹಿಮದ ಚೂರುಗಳನ್ನು ರಾಜನಿಗೆ ನೀಡಿದ. ಹಿಮವನ್ನು ಕೈಯಲ್ಲಿ ಹಿಡಿದು ಪ್ರಫುಲ್ಲನಾದ ರಾಜನಿಗೆ ಆಶ್ಚರ್ಯವಾಗಿ ‘ನನಗೆ ಹಿಮವನ್ನು ಸೋಕಿಸುವ ಆಸೆಯಾಗಿತ್ತೆಂಬುದನ್ನು ನೀನು ಹೇಗೆ ಅರಿತೆ?’ ಎಂದು ಸೇವಕನನ್ನು ಕೇಳಿದ. ‘ನೀವು ಕ್ಷಣಕಾಲ ಆ ಹಿಮಚ್ಛಾದಿತ ಪರ್ವತವನ್ನು ತದೇಕಚಿತ್ತದಿಂದ ನೋಡಿದಿರಿ ಮತ್ತು ತಲೆ ತಗ್ಗಿಸಿದಿರಿ.
ಇದರಿಂದ ನಿಮ್ಮ ಅಂತರ್ಯವನ್ನು ತಿಳಿದುಕೊಂಡೆ’ ಎಂದ ಸೇವಕ. ಈ ಉತ್ತರದಿಂದ ಪ್ರಸನ್ನಗೊಂಡ ರಾಜ ಅವನಿಗೆ ಬಹುಮಾನಗಳನ್ನಿತ್ತು ಸಂತಸಪಡಿಸಿದ. ಎಲ್ಲರೂ ತಮ್ಮ ಕೆಲಸ ಕಾರ್ಯಗಳನ್ನು ತಮ್ಮ ಕರ್ತವ್ಯವನ್ನು ಪಾಲಿಸುತ್ತಾರೆ. ಆದರೆ ನಿಷ್ಠೆಯಿಂದ ಗಮನಿಸುವ ಮೂಲಕ ಈ ರೀತಿ ಸೇವೆ ಮಾಡುವವರು ಕಮ್ಮಿ ಎಂದು ತನ್ನ ಆಪ್ತರಿಗೆ ತಿಳಿಸಿದ.
-ಫಕೀರ್ ಮುಹಮ್ಮದ್ ಕಟ್ಪಾಡಿ.

No comments:

Post a Comment