Monday, June 13, 2016

ಪರಿಶ್ರಮ (ಮುಜಾಹದ)


ನನ್ನ ಮಾರ್ಗದಲ್ಲಿ ಶ್ರಮ ಪಡುವವರಿಗೆ ನಾನು ಖಂಡಿತವಾಗಿಯೂ  ಸತ್ಯಮಾರ್ಗವನ್ನು ತೋರುತ್ತೇನೆ. ಸರಿಯಾದ ಮಾರ್ಗದಲ್ಲಿರುವವರ ಜೊತೆಗೆ ದೇವರು ಸದಾ ಇರುತ್ತಾನೆ'. (ಕುರಾನ್ 29:69). ಪರಿಶ್ರಮವೆಂದರೆ ದೇವರ ಹಾದಿಯಲ್ಲಿ ಸರ್ವವನ್ನು ಸಮರ್ಪಿಸಲು ದೃಢನಿಶ್ಚಯ ಮಾಡಿಕೊಂಡು ತಯಾರಾಗುವುದು, ಅಂತರ್ಯದ ಶುದ್ಧಿಮಾಡಿಕೊಳ್ಳುವುದು, ಬಹಿರಂಗ ಶುದ್ಧಿಮಾಡಿಕೊಳ್ಳುವ ಮೂಲಕ ತೊಡಗಿಕೊಳ್ಳುವುದು.

ಖ್ಯಾತ ಸೂಫಿ ಸಂತ ಅಬೂ ಯಜೀದ್ ಬಸ್ತಾಮಿ ಹೇಳುತ್ತಾರೆ, ‘ನಾನು ಹನ್ನೆರಡು ವರ್ಷಗಳ ಕಾಲ ಕಬ್ಬಿಣವನ್ನು ಕಾಯಿಸಿ ಹೊಡೆದು ಕಮ್ಮಾರ ತಯಾರು ಮಾಡುವಂತೆ ನನ್ನ ಆತ್ಮವನ್ನು ಹದಗೊಳಿಸಿ ತಯಾರು ಮಾಡಿದೆ. ಐದು ವರ್ಷ ನಾನು ನನ್ನ ಹೃದಯದ ಕನ್ನಡಿಯಾಗಿದ್ದೆ. ನಂತರ ಒಂದು ವರ್ಷ ಕಾಲ ಇವೆರಡರ ಮಧ್ಯೆ ಯಾವ ಸಂಬಂಧವಿದೆ ಎಂಬುದನ್ನು ಅರಸಿದೆ’.

ಅಲ್ಲಾಹನ ಹಾದಿಯಲ್ಲಿ ಶ್ರಮಿಸುವುದೆಂದರೆ ಆತ್ಮವನ್ನು ತನ್ನ ರೂಢಿಗತ ಅಭ್ಯಾಸ ಕ್ರಮಗಳಿಂದ ಬಿಡಿಸುವುದು, ಎಂದಿನ ರಾಗ ಕಾಮನೆಗಳನ್ನು ಸದಾ ವಿರೋಧಿಸುವಂತೆ ಒತ್ತಾಯಿಸುವುದು. ದೇವರಿಗಾಗಿ ಪರಿಶ್ರಮದ ಮಾರ್ಗದಲ್ಲಿ ತೊಡಗಿದ ಸೂಫಿ `ಪಾಲಿಸಬೇಕಾದ ಮೂರು ಪ್ರಮುಖ ನಿಯಮಗಳಿವೆ– ‘ಅಗತ್ಯವೆಂದುಕೊಂಡಾಗ ಮಾತ್ರ ಊಟಮಾಡುವುದು, ನಿದ್ದೆ ಆವರಿಸಿದಾಗ ಅನಿವಾರ್ಯ ಸಂದರ್ಭದಲ್ಲಿ ಮಾತ್ರ ನಿದ್ರಿಸುವುದು, ಅತಿ ಅಗತ್ಯವೆಂದು ಪರಿಗಣಿಸಲ್ಪಟ್ಟಾಗ ಮಾತ್ರ ಮಾತಾಡುವುದು' ಎನ್ನುತ್ತಾರೆ ಸೂಪಿ ಉಲೇಮಾ ಅಲ್ ಹಸನ್ ಅಲ್ ಖಝ್ಝಾಝ್.

ಖ್ಯಾತ ಸೂಫಿ ಸಂತ ಇಬ್ರಾಹಿಂ ಇಬ್ನ್ ಅದ್ಹಮ್ `ಅಲ್ಲಾಹನ ಮಾರ್ಗದಲ್ಲಿ ಸೇವೆಗೆ ಹೊರಟ ಪ್ರಾಮಾಣಿಕ ಪರಿತ್ಯಾಗಿ ಈ ಆರು ಮೆಟ್ಟಲುಗಳನ್ನು ಹಾದು ಹೋಗಬೇಕು. ಒಂದನೆಯದು ಅವನು ಸುಖ ಸಮೃದ್ಧಿಯ ಬಾಗಿಲನ್ನು ತೊರೆದು ಸಂಕಷ್ಟಗಳ ಬಾಗಿಲನ್ನು ತೆರೆಯಬೇಕು. ಎರಡನೆಯದು ಪ್ರತಿಷ್ಠೆಯ ಬಾಗಿಲನ್ನು ಮುಚ್ಚಿ ದೈನ್ಯತೆಯ ಬಾಗಿಲನ್ನು ತೆರೆದಿರಬೇಕು. ಮೂರನೆಯದು ತನ್ನಲ್ಲಿರುವ ನಿಧಿಯ ಸುರಕ್ಷೆಯ ಬಾಗಿಲನ್ನು ಬಿಟ್ಟು ಪರಿಶ್ರಮದ ಬಾಗಿಲನ್ನು ತೆರೆಯಬೇಕು. ನಾಲ್ಕನೆಯದಾಗಿ ನಿದ್ದೆಯ ಬಾಗಿಲನ್ನು ಮುಚ್ಚಿ ಎಚ್ಚರದ ಬಾಗಿಲನ್ನು ತೆರೆದಿಡಬೇಕು. ಐದನೆಯದಾಗಿ ಸಂಪತ್ತಿನ ಬಾಗಿಲನ್ನು ತೊರೆದು ದಾರಿದ್ರ್ಯದ ಬಾಗಿಲನ್ನು ತೆರೆಯಬೇಕು. ಆರನೆಯದಾಗಿ ಲೌಕಿಕ ಆಕಾಂಕ್ಷೆಗಳ ಬಾಗಿಲನ್ನು ಮುಚ್ಚಿ ಸಾವನ್ನು ಎದುರಿಸಲು ಮಾಡುವ ತಯಾರಿಯ ಬಾಗಿಲನ್ನು ತೆರೆದಿಡಬೇಕು' ಎಂದು ಹೇಳುತ್ತಾರೆ.

ಸೂಫಿಯೊಬ್ಬ ಪರೀಕ್ಷಾ ಹಾದಿಯ ಸಂಕಷ್ಟಗಳ ಐದು ದಿನಗಳಲ್ಲಿ `‘ನನಗೆ ಹಸಿವಾಗುತ್ತಿದೆ' ಎಂದು ಹೇಳಿದಲ್ಲಿ, ‘ಅವನನ್ನು ಮಾರುಕಟ್ಟೆಗೆ ಕಳುಹಿಸಿ, ಕೂಲಿ ಸಂಪಾದನೆಗಳಿಸಿ ತರಲು ಹೇಳಿ' ಎನ್ನುತ್ತಾರೆ ಸೂಫಿ ಸಂತ ಅಬೂ ಅಲಿ ಅರ್ರುಧ್‍ಬಾರಿ. ಅಲ್ಲಾಹನ ಹಾದಿಯಲ್ಲಿ ಸಮರ್ಪಣಾ ದೀಕ್ಷೆ ತೊಟ್ಟು ಪರಿಶ್ರಮದ (ಮುಜಾಹದಾ) ಹಾದಿ ತುಳಿಯುವವನು ತನ್ನ ಆತ್ಮದ ಅಭ್ಯಾಸಬಲದ, ವಾಡಿಕೆಯ ಚಟುವಟಿಕೆಗಳಿಂದ  ಬಿಡಿಸುವುದು ಹಾಗೂ ಭಾವೋದ್ರೇಕಕ್ಕೆ ಕಡಿವಾಣ ಹಾಕಲು ಒತ್ತಾಯಿಸುವುದು ಅತಿ ಅಗತ್ಯ. ಧರ್ಮಯುದ್ಧದ ದೀಕ್ಷೆಯ (ಜಿಹಾದ್)  ಅಂತರಂಗ, ಬಹಿರಂಗ ಶುದ್ಧಿಯ ಪ್ರಮುಖ ಹಂತದ ಪರಿಶ್ರಮವೂ ಇದೇ ಆಗಿದೆ.

-ಫಕೀರ್ ಅಹ್ಮದ್ ಕಟ್ಪಾಡಿ

No comments:

Post a Comment