ಮಾಡಿದ ಪಾಪ ಕರ್ಮಗಳ ಬಗ್ಗೆ ನೆನಪಿಗೆ ತಂದುಕೊಂಡು ಪಶ್ಚಾತ್ತಾಪ ಪಡುವುದರಿಂದ ಮನುಷ್ಯ ಮರುಜನ್ಮ ಪಡೆಯುತ್ತಾನೆ. ದೇವರು ತನ್ನ ಭಕ್ತನ ಈ ಕ್ರಮವನ್ನು ಮೆಚ್ಚುತ್ತಾನೆಂದು ಎಲ್ಲ ಧರ್ಮಗ್ರಂಥಗಳೂ ಹೇಳುತ್ತವೆ.
‘ದೇವರು ಪಶ್ಚಾತ್ತಾಪ ಪಡುವ ಮೂಲಕ ಪರಿಶುದ್ಧಗೊಳ್ಳುವವರನ್ನು ಪ್ರೀತಿಸುತ್ತಾನೆ. ಬಾಹ್ಯ ಶುದ್ಧಿಯನ್ನು ಕೂಡ ಮೆಚ್ಚುತ್ತಾನೆ' (ಕುರಾನ್ 2:222). ತನ್ನ ಪಾಪಕರ್ಮಗಳಿಗೆ ಖೇದಪಡುವವನ ಅಂತರಂಗ ಶುದ್ಧಿಯಾಗುತ್ತದೆ. ಮತ್ತೆ ಮರುಕಳಿಸದಂತೆ ಜಾಗ್ರತೆ ವಹಿಸುವವನು ಬಾಹ್ಯಶುದ್ಧಿ ಕೂಡ ಮಾಡಿಕೊಳ್ಳುತ್ತಾನೆ. ಈ ಎರಡೂ ಕಾರ್ಯಗಳು ದೇವರಿಗೆ ಇಷ್ಟವಾದುದು.
ಪಶ್ಚಾತ್ತಾಪದಲ್ಲಿ ಮೂರು ಹಂತಗಳಿವೆ: ಒಂದನೆಯದು ಮಾಡಿದ ತಪ್ಪಿಗಾಗಿ ಪರಿತಪಿಸಿ ಖೇದಿಸುವುದು, ಎರಡನೆಯದಾಗಿ ಈ ತಪ್ಪಿನಿಂದ ಸಂಪೂರ್ಣ ದೂರವಿರುವುದು, ಮೂರನೆಯದಾಗಿ ಮುಂದೆಂದೂ ಈ ತಪ್ಪು ಘಟಿಸದಂತೆ ಎಚ್ಚರವಹಿಸುವುದು.
ಬಾಗ್ದಾದಿನ ಪ್ರಖ್ಯಾತ ಸೂಫಿ ಸಂತರಾದ ಜುನೈದ್ ಬಗ್ದಾದಿ ಮತ್ತು ಸರೀ ಅಲ್ ಸಖತಿ ಭೇಟಿಯಾದಾಗ ತಮ್ಮ ಅನುಭವವನ್ನು ಹೇಳಿಕೊಳ್ಳುತ್ತಾರೆ. ಸಖತಿಯವರು ತನ್ನನ್ನು ಓರ್ವ ಯುವಕ ಭೇಟಿಯಾಗಿ ಪಶ್ಚಾತ್ತಾಪದ ಬಗ್ಗೆ ಅಭಿಪ್ರಾಯ ಕೇಳಿದ. ತಾನು ಮಾಡಿದ ಪಾಪಕರ್ಮಗಳನ್ನು ಮರೆಯದಿರಬೇಕು ಎಂದೆ. ಅವನು ಒಪ್ಪಲಿಲ್ಲ. ಪಶ್ಚಾತ್ತಾಪ ಪಡುವುದೆಂದರೆ ತಪ್ಪುಗಳನ್ನು ಮರೆತುಬಿಡುವುದು ಎಂದ. ಇದನ್ನು ಕೇಳಿದ ಜುನೈದ್ ಬಗ್ದಾದಿ ಯುವಕ ಹೇಳಿದ್ದು ಸರಿಯೆಂದು ಅಭಿಪ್ರಾಯಪಟ್ಟರು. ಅದೇಕೆಂದು ಕೇಳಿದಾಗ, `ನಾನು ದ್ರೋಹಿಯಾಗಿದ್ದಾಗ ನಿಷ್ಠಾವಂತಿಕೆಯನ್ನು ಅವನು ಬಯಸುತ್ತಾನೆ. ನಿಷ್ಠಾವಂತಿಕೆಯಲ್ಲಿರುವಾಗ ದ್ರೋಹವನ್ನು ನೆನೆಯುವುದೆಂದರೆ ದ್ರೋಹಿ ಎಂದು ಪರಿಗಣಿತನಾಗುತ್ತೇನೆ' ಎಂದು ಜುನೈದ್ ಬಗ್ದಾದಿ ಉತ್ತರಿಸುತ್ತಾರೆ.
ಮಾಡಿದ ಪಾಪಗಳನ್ನು ತ್ಯಜಿಸುವ ದೃಢಸಂಕಲ್ಪದ ಮೂಲಕ ತನ್ನ ಹೃದಯದಲ್ಲಿ ಮತ್ತೆ ಮೊಳಕೆಯೊಡೆಯುವ ಪಾಪದಿಂದ ಮುಕ್ತನಾಗುತ್ತಾನೆ ಹಾಗೂ ಮತ್ತೆ ಅದರತ್ತ ಹಿಂತಿರುಗದಿರುವ ದೃಢತೆ ಹೊಂದುತ್ತಾನೆ. ಇಲ್ಲಿಗೆ ಅವನ ಪಶ್ಚಾತ್ತಾಪ ಪೂರ್ಣಗೊಳ್ಳುತ್ತದೆ. ಪ್ರಾಮಾಣಿಕ ಪಶ್ಚಾತ್ತಾಪದ ಶೋಕದಿಂದ ಹರಿಯುವ ಕಣ್ಣೀರು ಎಲ್ಲ ಪಾಪಗಳನ್ನು ತೊಡೆದುಹಾಕುತ್ತದೆ, ಆದ ಗಾಯಗಳನ್ನು ವಾಸಿಪಡಿಸುತ್ತದೆ. ಖೇದದಿಂದ ಅವನ ಸೊರಗಿದ ಸ್ಥಿತಿಯು ಆತ್ಮದ ಆರೋಗ್ಯವನ್ನು ಸೂಚಿಸುತ್ತದೆ.
ಪವಿತ್ರಾತ್ಮರೆನಿಸಿದ ಪ್ರವಾದಿಯವರು ಕೂಡ ಪಶ್ಚಾತ್ತಾಪ ಪಡುವುದಿದೆಯೇ? ಈ ಪ್ರಶ್ನೆಗೆ ಪ್ರವಾದಿಯವರು ‘ನಾನು ಸತತವಾಗಿ ಕ್ಷಮೆಯನ್ನು ಯಾಚಿಸುತ್ತಿರುತ್ತೇನೆ. ನನ್ನ ಹೃದಯದಲ್ಲಿ ಮೋಡಕವಿದಂತಿರುತ್ತದೆ. ನಾನು ದೇವರಿಂದ ಕಮ್ಮಿಯೆಂದರೆ ದಿನಕ್ಕೆ ಎಪ್ಪತ್ತು ಬಾರಿ ಕ್ಷಮೆಯನ್ನು ಯಾಚಿಸುತ್ತಿರುತ್ತೇನೆ' ಎಂದು ಉತ್ತರಿಸುತ್ತಾರೆ.
No comments:
Post a Comment